ನವದೆಹಲಿ: ಇಂದಿನಿಂದ ಅಂದರೆ, ಅಕ್ಟೋಬರ್ 01ರಿಂದ ವಾಣಿಜ್ಯ ಬಳಕೆಯ ಅಡುಗೆ ಅನಿಲ ಪ್ರತಿ ಸಿಲಿಂಡರ್ ಮೇಲೆ ಹೆಚ್ಚುವರಿ 43 ರೂ.ರಷ್ಟು ದರವನ್ನು ಏರಿಕೆ ಮಾಡಲಾಗಿದ್ದು, ಪರಿಷ್ಕೃತ ದರ ಪಟ್ಟಿಯಂತೆ ರಾಜಧಾನಿ ದೆಹಲಿಯಲ್ಲಿ ಪ್ರತಿ ಸಿಲಿಂಡರ್ ಬೆಲೆ 1,736 ರೂ. ಆಗಿದೆ.
ಪರಿಷ್ಕೃತ ದರ ಪಟ್ಟಿ ಶುಕ್ರವಾರದಿಂದಲೇ ಜಾರಿಗೆ ಬರಲಿದೆ ಎಂದು ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳು ಹೇಳಿವೆ. ಬೆಲೆ ಏರಿಕೆಯಿಂದಾಗಿ ರೆಸ್ಟೋರೆಂಟ್, ದಾಬಾ, ಹೋಟೆಲುಗಳಲ್ಲಿನ ತಿಂಡಿ, ಊಟದ ಬೆಲೆ ಏರಿಕೆಯಾಗುವ ಸಾಧ್ಯತೆಯೂ ಇದೆ.
ಇದನ್ನು ಓದಿ: ಮತ್ತೆ ಏರಿಕೆ ಕಂಡ ಎಲ್‌ಪಿಜಿ ದರ: ರೂ.25 ಹೆಚ್ಚಳ
ಕೊರೊನಾ ಸಾಂಕ್ರಾಮಿಕದ ನಡುವೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಮತ್ತೆ ಬೆಲೆ ಏರಿಕೆಯ ಕಷ್ಟ ಎದುರಾಗಿದೆ. ಸಬ್ಸಿಡಿ ರಹಿತ ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸಿಲ್ಲದಿದ್ದರೂ ಸಹ ವಾಣಿಜ್ಯ ಬಳಕೆ ಸಿಲಿಂಡರ್ ದರ ಏರಿಕೆಯಿಂದ ವ್ಯಾಪಾರಸ್ಥರು ಮತ್ತು ಗ್ರಾಹಕರಿಗೆ ಹೆಚ್ಚಿನ ಹೊರೆಯಾಗಲಿದೆ.
ಕಳೆದ ತಿಂಗಳು ಸಬ್ಸಿಡಿ ರಹಿತ ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು 25 ರೂ. ಏರಿಕೆ ಮಾಡಿದ್ದಲ್ಲದೆ, ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ 75 ರೂ. ಏರಿಕೆ ಮಾಡಲಾಗಿತ್ತು. ಈಗ ಮತ್ತೆ ವಾಣಿಜ್ಯ ಬಳಕೆ ಸಿಲಿಂಡರ್ ದರವನ್ನು ಹೆಚ್ಚಿಸಲಾಗಿದೆ.
19 ಕೆ.ಜಿ. ಸಿಲಿಂಡರ್ ದರ ಪಟ್ಟಿ
ಪ್ರಮುಖ ಮಹಾನಗರ | ಹೊಸ ದರ | ಸೆಪ್ಟೆಂಬರ್ 2021 | ಆಗಸ್ಟ್ 2021 |
ದೆಹಲಿ | ₹ 1,741.00 | ₹ 1,698.00 | ₹ 1,623.00 |
ಮುಂಬೈ | ₹ 1,697.50 | ₹ 1,654.50 | ₹ 1,579.50 |
ಕೋಲ್ಕತಾ | ₹ 1,819.50 | ₹ 1,776.50 | ₹ 1,701.50 |
ಚೆನ್ನೈ | ₹ 1,879.00 | ₹ 1,836.00 | ₹ 1,761.00 |
ಮಾಹಿತಿಕೃಪೆ: ಗುಡ್ ರಿಟರ್ನ್ಸ್.ಇನ್/ ಐಒಸಿಎಲ್)
14.2 ಕೆ.ಜಿ. ತೂಕದ ಗೃಹ ಬಳಕೆ ಸಿಲಿಂಡರ್ ಬೆಲೆ ಬದಲಾವಣೆ ಮಾಡಲಾಗಿಲ್ಲ. ಮೇ 1, 2014ರಲ್ಲಿ 410.50 ರೂ. ದರ ಇದ್ದ ಸಿಲಿಂಡರ್ ಬೆಲೆ ಈಗ ದ್ವಿಗುಣವಾಗಿದೆ. ಸರಾಸರಿ 859.50 ರೂ. ಆಗಿದೆ. ಪೆಟ್ರೋಲ್, ಡೀಸೆಲ್ ದರ ಸೇರಿದಂತೆ ಎಲ್‌ಪಿಜಿ ಸಿಲಿಂಡರ್ ದರದಲ್ಲಿಯೂ ಏರಿಕೆ ಮಾಡಲಾಗಿತ್ತು. ಒಟ್ಟಾರೆ ಜನವರಿ 1, 2021ರಿಂದ ಸೆಪ್ಟೆಂಬರ್ 1, 2021 ಅವಧಿಯಲ್ಲಿ 190 ರೂ.ನಷ್ಟು ಬೆಲೆ ಏರಿಕೆಯಾಗಿದೆ.
ಇದನ್ನು ಓದಿ: ಅಡುಗೆ ಅನಿಲ ದರ ರೂ.25 ಮತ್ತೆ ಹೆಚ್ಚಳ: ಗ್ರಾಹಕರಿಗೆ ಮತ್ತೆ ಹೊರೆ
ನೆನ್ನೆ ನೈಸರ್ಗಿಕ ಅನಿಲ ದರವನ್ನು ಶೇ 62ರಷ್ಟು ಏರಿಕೆ ಮಾಡಲಾಗಿತ್ತು. ಸಿಎನ್‌ಜಿ ಉತ್ಪಾದನೆ, ರಸಗೊಬ್ಬರ, ವಿದ್ಯುತ್ ಸ್ಥಾವರಗಳಲ್ಲಿ ನೈಸರ್ಗಿಕ ಅನಿಲ ಬಳಕೆ ಮಾಡಲಾಗುತ್ತದೆ.
ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಪ್ರತಿ ತಿಂಗಳ ಮೊದಲ ದಿನದಂದು ಇಂಧನ ದರ, ಸಬ್ಸಿಡಿ ರಹಿತ ಎಲ್‌ಪಿಜಿ, ಜೆಟ್ ಇಂಧನ, ಸೀಮೆಎಣ್ಣೆ ಬೆಲೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ. ಬೆಲೆ ಏರಿಕೆ ಹಾಗೂ ಇಳಿಕೆ ಎಲ್ಲವೂ ಜಾಗತಿಕ ಮಾರುಕಟ್ಟೆ ದರದ ಮೇಲೆ ಅವಲಂಬಿತವಾಗಿರುತ್ತದೆ. ಇದಲ್ಲದೆ ಆರು ತಿಂಗಳಿಗೊಮ್ಮೆ ನೈಸರ್ಗಿಕ ಅನಿಲದ ಸರಾಸರಿ ದರ ನಿಗದಿಪಡಿಸಲಾಗುತ್ತದೆ.