ಬೆಂಗಳೂರು : ಅವಿಭಜಿತ ಬಿಜಾಪುರ ಜಿಲ್ಲೆಯ ಜನ ಮಾನಸದಲ್ಲಿ ಬರಿಗಾಲ ಭೀಮಸಿ, ಬಿಜಾಪುರದ ಗಾಂಧಿ ಎಂದು ದಂತಕಥೆಯಾಗಿದ್ದ ಹಿರಿಯ ರೈತ ನಾಯಕ,ಕರ್ನಾಟಕ ಪ್ರಾಂತ ರೈತ ಸಂಘ(KPRS)ದ ರಾಜ್ಯ ಉಪಾಧ್ಯಕ್ಷರಾಗಿ ಬಹಳ ದೀರ್ಘಕಾಲ ರಾಜ್ಯದ ರೈತ ಚಳವಳಿಗೆ ನೇತೃತ್ವ ನೀಡಿದ್ದ ಭೀಮಶಿ ಕಲಾದಗಿ ರವರ ನಿಧನದಿಂದ ಒಬ್ಬ ಅಪೂರ್ವ ಹಾಗೂ ಅನನ್ಯ ವ್ಯಕ್ತಿತ್ವದ ಹೋರಾಟಗಾರನನ್ನು ನಾಡು ಕಳೆದುಕೊಂಡಂತಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಕಂಬನಿ ಮಿಡಿದಿದ್ದು , ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತದೆ ಎಂದು ಕೆಪಿಆರ್‌ಎಸ್ ರಾಜ್ಯಾಧ್ಯಕ್ಷ ಜಿಸಿ ಬಯ್ಯಾರೆಡ್ಡಿ, ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ ತಿಳಿಸಿದರು.
ಐವತ್ತು ವರ್ಷಗಳಿಗೂ ಹೆಚ್ಚು ಕಾಲದ ಸುದೀರ್ಘ ಹೋರಾಟ -ಚಳವಳಿ ಜೀವನಕ್ಕೆ ತನ್ನನ್ನು ಸಮರ್ಪಿಸಿಕೊಂಡು ಬಿಜಾಪುರ ಜಿಲ್ಲೆಯ ಕಮ್ಯುನಿಸ್ಟ್ ಚಳವಳಿ ಹಾಗೂ ರೈತ ಚಳುವಳಿಗೆ ಅಪಾರ ಕೊಡುಗೆ ನೀಡಿದ್ದ ಭೀಮಶಿ ಕಲಾದಗಿರವರು ಸರಿಸಾಟಿಯಿಲ್ಲದ ಸರಳತೆ ಮೈಗೂಡಿಸಿಕೊಂಡಿದ್ದರು. ಕಮ್ಯುನಿಸ್ಟ್ ಪೂರ್ಣಾವಧಿ ಕಾರ್ಯಕರ್ತ ಒಬ್ಬ ಎಷ್ಟು ಸರಳವಾಗಿ ಬದುಕಬಹುದು ಎಂಬ ಜೀವಂತ ಮಾದರಿಯನ್ನು ಸೃಷ್ಟಿಸಿದ್ದರು. ಕೋಟ್ಯಾಂತರ ಸಂಖ್ಯೆಯಲ್ಲಿ ಬಡತನದ ಜೀವನಕ್ಕೆ ನೂಕಲ್ಪಟ್ಟ ಜನರಿರುವ ಸಮಾಜದಲ್ಲಿ ಸರಳವಾಗಿ ಬದುಕುವುದು ಒಂದು ನೈತಿಕ ಜವಾಬ್ದಾರಿ ಎಂದು ತಿಳಿದು ಅದರಂತೆ ಕೊನೆಗಾಲದ ತನಕ ಬದುಕಿ ತೋರಿದ್ದರು. ಕಾಲಿಗೆ ಚಪ್ಪಲಿ ಕೂಡ ಧರಿಸದೇ ಬರಿಗಾಲಿನಲ್ಲೇ ಒಡಾಡುತ್ತಿದ್ದರೂ ಮಾತ್ರವಲ್ಲ 80 ರ ದಶಕದ ಐತಿಹಾಸಿಕ ನವಲಗುಂದ ನರಗುಂದ ರೈತ ಜಾಥಾಕ್ಕೂ ಬರಿಗಾಲಿನ ನಡಿಗೆ ಮೂಲಕ ಬಂದಿದ್ದನ್ನು ಅಂದಿನ ಸುದ್ದಿ ಮಾಧ್ಯಮಗಳಲ್ಲಿ ಚರ್ಚೆಗೆ ಒಳಗಾಗಿತ್ತು .
ಕಡು ಬಡತನದ ಕುಟುಂಬದಲ್ಲಿ 27-12-1942 ರಂದು ಹಣಮಂತಪ್ಪ ಹಾಗೂ ಹನುಮವ್ವ ದಂಪತಿಗಳಿಗೆ ನಾಲ್ಕನೇ ಮಗನಾಗಿ ಜನಿಸಿದ ಭೀಮಸಿ ಕಲಾದಗಿ ರವರು ಬಾಲ್ಯದಿಂದಲೇ ಬಡತನದ ವಿರುದ್ಧ ಆಲೋಚಿಸಿದವರು. ಪ್ರತಿ ವರ್ಷವೂ ಬಿಡದಂತೆ ಕಾಡುತ್ತಿದ್ದ ತೀವ್ರ ಸ್ವರೂಪದ ಬರಗಾಲವು ಅವರನ್ನು ಎಡ ಚಳುವಳಿಗೆ ಆಕರ್ಷಣೆ ಯಾಗುವಂತೆ ಪ್ರೇರೆಪಿಸಿತು.ಹಿರಿಯ ಕಮ್ಯುನಿಸ್ಟ್ ನಾಯಕರಾಗಿದ್ದ ಕಾಂ. ಎನ್ ಕೆ ಉಪಾಧ್ಯಾಯ, ಕಾಂ.ಬಾಲಸಿಂಗ್ ಮಾಸ್ತರ್ , ಕಾಂ.ಲಾಯಲಗುಂದಿ ಮುಂತಾದವರ ನೇತೃತ್ವದಲ್ಲಿ ನಡೆಯುತ್ತಿದ್ದ ,1960 ರ ದಶಕದ ಬಿಜಾಪುರ ಜಿಲ್ಲೆಯ ಕಮ್ಯುನಿಸ್ಟ್ ಚಳವಳಿ ಯಿಂದ ಪ್ರೇರಣೆ ಪಡೆದು ,1971 ರಲ್ಲಿ ಹೋರಾಟದ ಜೀವನಕ್ಕೆ ತನ್ನನ್ನು ಸಮರ್ಪಿಸಿಕೊಂಡರು.
ಇದನ್ನು ಓದಿ : ವಿಜಯಪುರ : ಹಿರಿಯ ರೈತ ನಾಯಕ ಭೀಮಶಿ ಕಲಾದಗಿ ನಿಧನ
1972 ರಲ್ಲಿ ಸಿಪಿಐಎಂ ಪಕ್ಷದ ಸದಸ್ಯರಾದರು. ವಯಸ್ಸಿನ ಆನಾರಾಗ್ಯದ ಕಾರಣದಿಂದ ಓಡಾಟ ಅಸಾಧ್ಯ ವಾದಂತಹ ಪರಿಸ್ಥಿತಿ ಉಂಟಾಗುವ ತನಕ ಈ ಐವತ್ತಕ್ಕೂ ಹೆಚ್ಚು ವರ್ಷಗಳಲ್ಲಿ ಎಂದೂ ವಿರಾಮವನ್ನು ಪಡೆದವರಲ್ಲ. ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ (AIAWU) ಪ್ರಥಮ ರಾಜ್ಯಾಧ್ಯಕ್ಷರಾಗಿ, ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯ ಉಪಾಧ್ಯಕ್ಷ ರಾಗಿ,ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಯಾಗಿ,ರಾಜ್ಯ ಸಮಿತಿ ಸದಸ್ಯರಾಗಿ, ಅವಿಭಜಿತ ಜಿಲ್ಲೆಯ ರೈತ-ಕೂಲಿಕಾರರ ಧ್ವನಿಯಾಗಿ ಸಾವಿರಾರು ಪ್ರತಿಭಟನೆಗಳಲ್ಲಿ ಭಾಗವಹಿಸಿ ನೂರಾರು ಹೋರಾಟಗಳನ್ನು ಮುನ್ನೆಡೆಸಿದ್ದಾರೆ ಎಂದರು.
ಜಿಲ್ಲೆಯ ಸಮಗ್ರ ನೀರಾವರಿ ಅಭಿವೃದ್ದಿಗಾಗಿ, ಕೃಷ್ಣಾ,ಭೀಮಾ ನದಿ ನೀರಿನ ಹಕ್ಕಿಗಾಗಿ, ರೈಲ್ವೆ ಬ್ರಾಡ್ ಗೇಜ್ ಪರಿವರ್ತನೆಗಾಗಿ,ಮನೆ,ನಿವೇಶನ, ಕುಡಿಯುವ ನೀರಿಗಾಗಿ ಹೋರಾಟ, ಮುಳವಾಡ ಏತ ನೀರಾವರಿ ಸೇರಿದಂತೆ ಹತ್ತಾರು ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಒತ್ತಾಯಿಸಿ ನಡೆಸಿದ ಹೋರಾಟ, ಬಗರ್ ಹುಕಂ ಸಾಗುವಳಿದಾರರ ಭೂಮಿ ಹಕ್ಕಿಗಾಗಿ, ಬೆಂಬಲ ಬೆಲೆ ,ಸಾಲ ಮನ್ನಾ, ಆಹಾರ ಮತ್ತು ಉದ್ಯೋಗದ ಹಕ್ಕಿಗಾಗಿ ಹೀಗೆ ಹಲವಾರು ಹೋರಾಟಗಳನ್ನು ಮುನ್ನೆಡೆಸಿದ್ದರು.
ಪಾಳೇಗಾರಿ ಭೂ ಮಾಲೀಕರ ದೌರ್ಜನ್ಯ, ಪೊಲೀಸ್ ದೌರ್ಜನ್ಯ, ಗೊಂಡಾ ದೌರ್ಜನ್ಯ ಸೇರಿದಂತೆ ಸ್ಥಳೀಯವಾಗಿ ವಿವಿಧ ರೀತಿಯ ಶೋಷಣೆ ಹಾಗೂ ದೌರ್ಜನ್ಯ ದ ವಿರುದ್ಧ ಪರಿಹಾರ ಆಗುವ ತನಕ ಹೋರಾಟ ನಡೆಸಿ ಸಾವಿರಾರು ಜನರಿಗೆ ನ್ಯಾಯ ಸಿಗುವಂತೆ ಶ್ರಮಿಸಿದ್ದರು. ಇವರ ಹೋರಾಟಕ್ಕೆ ಮನ್ನಣೆಯಾಗಿ ಮುಳವಾಡ ಏತ ನೀರಾವರಿ ಉದ್ಘಾಟನೆಯನ್ನು ನೇರವೇರಿಸುವಂತೆ ಜಿಲ್ಲಾಢಳಿದಿಂದ ಆಹ್ವಾನಿಸಲ್ಪಟ್ಟಿದ್ದರು. ರೈತ ,ಕೃಷಿ ಕೂಲಿಕಾರರು ಮಾತ್ರವೇ ಅಲ್ಲದೆ, ಅವಿಭಜಿತ ಜಿಲ್ಲೆಯ ಪೌರ ಕಾರ್ಮಿಕರು, ಅಂಗನವಾಡಿ ನೌಕರರು, ಗ್ರಾಮ ಪಂಚಾಯತಿ ನೌಕರರು ,ಹಮಾಲರು, ಬಿಸಿಯೂಟ ನೌಕರರು ಹೀಗೆ ಪ್ರತಿಯೊಂದು ಕಾರ್ಮಿಕರ ವಿಭಾಗವನ್ನು ಸಂಘಟಿಸಲು ನೆರವಾಗಿದ್ದರು. ತನ್ನ ಜೀವನದುದ್ದಕ್ಕೂ ಬಡವರು,ದೀನ ದಲಿತರ ಹಾಗೂ ಅಸಹಾಯಕರ ಕಲ್ಯಾಣಕ್ಕಾಗಿ ದಣಿವರೆಯದೇ ಶ್ರಮಿಸಿದ್ದಾರೆ.
ಇವರ ನಿಧನದಿಂದ ಒಬ್ಬ ಅನುಭವಿ ಹಾಗೂ ಅಪ್ರತಿಮ ಬದ್ದತೆಯ ನಾಯಕನನ್ನು ಕಳೆದುಕೊಂಡಂತಾಗಿದ್ದು, ಅವರ ಕ್ರಾಂತಿಕಾರಿ ಹೋರಾಟವನ್ನು ಮುನ್ನೆಡಿಸುವುದು ಹಾಗೂ ಸಮ ಸಮಾಜದ ಗುರಿಗಾಗಿ ದುಡಿಯುವುದು ಕಾಂ.ಭೀಮಸಿ ಕಲಾದಗಿ ರವರಿಗೆ ಸಲ್ಲಿಸುವ ಶ್ರದ್ಧಾಂಜಲಿ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ತಿಳಿಸುತ್ತದೆ ಎಂದು ಜಿಸಿ ಬಯ್ಯಾರೆಡ್ಡಿ ತಿಳಿಸಿದ್ದಾರೆ.
ಇದನ್ನು ನೋಡಿ : ಕಟ್ಟಡ ಕಟ್ಟೋವಾಗ ಬಿದ್ದರೂ ಕೇಳೋರಿಲ್ಲ | ಕಟ್ಟಡ ಕಾರ್ಮಿಕರ ಪ್ರತಿಭಟನೆ |CITU AITUC INTU AICCTU