- ಕೊಲಂಬಿಯದ ಇತಿಹಾಸದಲ್ಲಿ ಮೊದಲ ಎಡ ಅಧ್ಯಕ್ಷ
- ಆಫ್ರೋ-ಕೊಲಂಬಿಯನ್ ಒಂಟಿ ತಾಯಿ ಉಪಾಧ್ಯಕ್ಷೆ
- ಲ್ಯಾಟಿನ್ ಅಮೆರಿಕದ 15ರಲ್ಲಿ 9 ದೇಶಗಳಲ್ಲಿ ಎಡ, ನಡು-ಎಡ ಅಧ್ಯಕ್ಷರು
-ವಸಂತರಾಜ ಎನ್.ಕೆ.
ಲ್ಯಾಟಿನ್ ಅಮೆರಿಕದ ಕೊಲಂಬಿಯದಲ್ಲಿ ಜೂನ್ 19ರಂದು ಎರಡನೆಯ ಸುತ್ತಿನ ಅಧ್ಯಕ್ಷೀಯ ಚುನಾವಣೆ ನಡೆದಿದ್ದು ಎಡ ಪಂಥೀಯ ಒಕ್ಕೂಟ ‘ಹಿಸ್ಟಾರಿಕ್ ಪ್ಯಾಕ್ಟ್ ‘ (ಚಾರಿತ್ರಿಕ ಒಪ್ಪಂದ) ನ ಅಭ್ಯರ್ಥಿ ಗುಸ್ತಾವೊ ಪೆತ್ರೊ ಜಯ ಗಳಿಸಿದ್ದಾರೆ. ಆ ಮೂಲಕ ಪೆತ್ರೊ 200 ವರ್ಷಗಳಲ್ಲಿ ಮೊದಲ ಚುನಾಯಿತ ಎಡ ಅಧ್ಯಕ್ಷ ರಾಗುವ ಮೂಲಕ ಕೊಲಂಬಿಯಾದ ಇತಿಹಾಸ ಸೃಷ್ಟಿಸಿದ್ದಾರೆ. ಉಪಾಧ್ಯಕ್ಷರಾಗಿ ಆಫ್ರೋ-ಕೊಲಂಬಿಯನ್ ಮೂಲದ ಮಹಿಳೆ ಫ್ರಾನ್ಸಿಯ ಮಾರ್ಕ್ವೇಝ್ ಚುನಾಯಿತರಾಗುವ ಮೂಲಕ ಮತ್ತೊಂದು ಇತಿಹಾಸ ಸೃ಼ಷ್ಟಿಸಿದ್ದಾರೆ. ಅವರು ಹಿಂದೆ ಮನೆಗೆಲಸದವರಾಗಿ ದುಡಿದಿದ್ದ ಒಂಟಿ ತಾಯಿ ಎಂಬುದು ಇನ್ನೂ ವಿಶೇ಼ಷವಾಗಿದೆ. ಇವರಿಬ್ಬರೂ ಎರಡನೆಯ ಸುತ್ತಿನಲ್ಲಿ ಮೊದಲ ಸುತ್ತಿಗಿಂತ ಶೇ.10ಹೆಚ್ಚು ಅಂದರೆ ಶೇ.50.5 ಮತಗಳಿಸಿದ್ದಾರೆ. ಪ್ರತಿಸ್ಪರ್ಧಿ ರೀಯಲ್ ಎಸ್ಟೇಟ್ ಕುಳ ಮತ್ತು ಮೆಗಾ ಮನೆಮಾಲಿಕ. ಹೆರ್ನಾಂಡೀಸ್ ಎರಡನೆಯ ಸುತ್ತಿನಲ್ಲಿ 2.26 ಕೋಟಿ (ಮೊದಲ ಸುತ್ತಿಗಿಂತ 12 ಲಕ್ಷ ಹೆಚ್ಚು) ಮತದಾರರು ಮತ ಚಲಾಯಿಸಿದ್ದರು.
ಪೆತ್ರೊ ಕೊಲಂಬಿಯ ಅಧ್ಯಕ್ಷರಾಗುವ ಮೂಲಕ ಲ್ಯಾಟಿನ್ ಅಮೆರಿಕದಲ್ಲಿ ಕಳೆದ ಕೆಲವು ವರ್ಷಗಳಿಂದ ಆರಂಭವಾಗಿರುವ ‘ಎಳೆಗೆಂಪು ಅಲೆ’ ರಭಸದಿಂದ ಮುನ್ನಡೆದಿದೆ. ಲ್ಯಾಟಿನ್ ಅಮೆರಿಕದ (ದಕ್ಷಿಣ ಮತ್ತು ಮೆಕ್ಸಿಕೊ ಸೇರಿದಂತೆ ಮಧ್ಯ ಅಮೆರಿಕಾ) 15 ದೇಶಗಳು 9 ದೇಶಗಳಲ್ಲಿ ಎಡ ಎಥವಾ ನಡು-ಎಡ ಪಂಥೀಯ ಸರಕಾರಗಳನ್ನು ಹೊಂದಿದೆ. ಬ್ರೆಜಿಲ್ ನಲ್ಲಿ ಸದ್ಯದಲ್ಲೇ ಚುನಾವಣೆ ನಡೆಯಲಿದ್ದು ಲುಲಾ ಮತ್ತೆ ಎಡ ಅಧ್ಯಕ್ಷರಾಗಿ ಚುನಾಯಿತರಾಗುವ ಎಲ್ಲ ಸಾಧ‍್ಯತೆಗಳು ಇವೆ. ಆಗ ಹೆಚ್ಚು ಕಡಿಮೆ ಪ್ರಮುಖ ದೇಶಗಳೆಲ್ಲಾ ಎಡಕ್ಕೆ ವಾಲಿದಂತಾಗುತ್ತದೆ. ದಕ್ಷಿಣ ಅಮೆರಿಕದ ಪರಾಗುವೆ, ಉರುಗುವೆ, ಇಕ್ವಡೋರ್ ಹಾಗು ಮಧ್ಯ ಅಮೆರಿಕದ ಎಲ್ ಸಾಲ್ವಡೋರ್, ಗ್ವಾಟೆಮಾಲಾ ನಂತಹ ಸಣ್ಣ ದೇಶಗಳು ಮಾತ್ರ ಬಲಪಂಥಿಯ ಸರಕಾರದಡಿಯಲ್ಲಿ ಇರುತ್ತವೆ. 21ನೆಯ ಶತಮಾನದ ಮೊದಲ ದಶಕದಲ್ಲಿ ಹೊಡೆದಿದ್ದ ‘ಎಳೆಗೆಂಪು ಅಲೆ’ಯನ್ನು, ಯು.ಎಸ್ ರಾಜಕೀಯ-ಮಿಲಿಟರಿ ಬುಡಮೇಲು ಚಟುವಟಿಕೆಗಳಿಂದ ಹಿಮ್ಮೆಟ್ಟಿಸಿದ್ದು ಮತ್ತೆ ಈ ದಶಕದಲ್ಲಿ ಅದು ರಭಸದಿಂದ ಮುನ್ನುಗ್ಗುತ್ತಿದೆ ಎಂಬುದು ಗಮನಾರ್ಹ ಜಾಗತಿಕ ಬೆಳವಣಿಗೆ.

ಇತರ ಲ್ಯಾಟಿನ್ ಅಮೆರಿಕದ ದೇಶಗಳಂತಲ್ಲದೆ, ಕೊಲಂಬಿಯ ಅದರ 200ಕ್ಕೂ ಹೆಚ್ಚು ವರ್ಷಗಳ ಸ್ವತಂತ್ರ ಇತಿಹಾಸದಲ್ಲಿ ಎಂದೂ ಪ್ರಗತಿಪರ ಎಡಪಂಥೀಯ ಸರಕಾರಗಳನ್ನು ಕಂಡದ್ದಿಲ್ಲ. ಯಾವತ್ತೂ ಯು.ಎಸ್ ನ ಕೈಗೊಂಬೆಗಳಾದ ಬಲಪಂಥೀಯ ಅಥವಾ ಮಿಲಿಟರಿ ಸರ್ವಾಧಿಕಾರಿಗಳೇ ಇಲ್ಲಿ ಆಡಳಿತ ನಡೆಸಿದ್ದಾರೆ. ಭ್ರಷ್ಟಾಚಾರ ಮತ್ತು ಪಾರಾ ಮಿಲಿಟರಿ ದಬ್ಬಾಳಿಕೆ ತಾಂಡವವಾಡುತ್ತಿತ್ತು. ಅದರ ವಿರುದ್ಧ ಎಡ ಗೆರಿಲ್ಲಾ ಯುದ್ಧ ಅನಿವಾರ್ಯವಾಗಿತ್ತು. ಆದರೆ ದೇಶ ಯು.ಎಸ್ ಬೇಂಬಲಿತ ಸರಕಾರಿ ಸೈನ್ಯ, ಪಾರಾ ಮಿಲಿಟರಿ ಪಡೆ ಮತ್ತು ಎಡ ಗೆರಿಲ್ಲಾ ಗಳ ನಡುವಿನ ರಣರಂಗವಾಗಿತ್ತು. ಕೆಲವು ವರ್ಷಗಳ ಹಿಂದೆ ಶಾಂತಿ ಒಪ್ಪಂದವಾಗಿದ್ದರೂ ಸರಕಾರ ತಾನು ಒಪ್ಪಿದ ಷರತ್ತುಗಳನ್ನು ಪೂರೈಸದೆ ಶಾಂತಿಸ್ಥಾಪನೆ ಪೂರ್ಣ ಸಫಲವಾಗಿರಲಿಲ್ಲ. ಹಾಗಾಗಿ ಆ ದೇಶದ ಇತಿಹಾಸದಲ್ಲೇ ಮೊದಲ ಎಡಪಂಥೀಯ ಸರಕಾರವನ್ನು ಎದುರು ನೋಡುತ್ತಿದ್ದು, ಅದು ಸಾಧ್ಯವಾಗಿದೆ.
ಚುನಾವಣೆಯ ಮೊದಲು ಮತ್ತು ದಿನ ಸಾಕಷ್ಟು ಅಪಪ್ರಚಾರ, ಚುನಾವಣಾ ಅಕ್ರಮಗಳು, ಹಿಂಸಾಚಾರಗಳು ನಡೆದರೂ ಎಡ ಅಧ್ಯಕ್ಷ ಚುನಾಯಿತರಾಗುವುದನ್ನು ತಡೆಯುವುದು ಸಾಧ್ಯವಾಗಲಿಲ್ಲ. ಈ ವರೆಗಿನ ಸೂಚನೆಗಳ ಪ್ರಕಾರ ಅಗಸ್ಟ್ 7ರಂದು ಕಾನೂನು ಪ್ರಕಾರ ಪೆತ್ರೊ ಗೆ ಅಧಿಕಾರ ಹಸ್ತಾಂತರ ಸುಸೂತ್ರವಾಗಿ ನಡೆಯಬಹುದು. ಯು.ಎಸ್ ಸಹ ಚುನಾವಣಾ ಕ್ರಮಬದ್ಧತೆಯ ಕುರಿತು ಯಾವ ಗದ್ದಲವನ್ನೂ ಮಾಡಿಲ್ಲ. ಆದರೆ ಅಧಿಕಾರ ವಹಿಸಿಕೊಂಡ ಮೇಲೆ ಪೆತ್ರೊ ಮುಂದೆ ಗಂಭೀರ ಸವಾಲುಗಳಿವೆ. ಅಧ್ಯಕ್ಷೀಯ ಚುನಾವಣೆಗಳ ಜತೆಗೆ ನಡೆದ ಪಾರ್ಲಿಮೆಂಟರಿ ಚುನಾವಣೆಯಲ್ಲಿ ಪೆತ್ರೊ ಅವರ ಎಡ ಒಕ್ಕೂಟ ‘ಹಿಸ್ಟಾರಿಕ್ ಪ್ಯಾಕ್ಟ್ ಗೆ ಬಹುಮತವಿಲ್ಲ. ಕೆಳಮನೆಯಲ್ಲಿ 168ರಲ್ಲಿ 27 ಸೀಟುಗಳು ಮತ್ತು ಮೇಲ್ಮನೆಯಲ್ಲಿ 106ರಲ್ಲಿ 16 ಸೀಟು ಮಾತ್ರ ಗಳಿಸಿದೆ.
ಇದನ್ನೂ ಓದಿ : ಕೊಲಂಬಿಯ: ಎಡ ಅಭ್ಯರ್ಥಿ ಪೆತ್ರೊ ಗೆ ಮೊದಲ ಸುತ್ತಿನ ಜಯ

ಪೆತ್ರೊ ತಮ್ಮ ಚುನಾವಣಾ ಆಶ್ವಾಸನೆಗಳಾದ ಸಾಮಾಜಿಕ ನ್ಯಾಯ, ಪರಿಸರ ನ್ಯಾಯ, ಕಾನೂನುಬದ್ಧ ಪ್ರಜಾಪ್ರಭುತ್ವ ಆಡಳಿತ, ತೈಲ ಮತ್ತು ಪ್ರಾಕೃತಿಕ ಅನಿಲ ನೀತಿಗಳ ಮರುಪರಿಶೀಲನೆ ಮುಂತಾದವುಗಳನ್ನು ಜಾರಿ ಮಾಡಲು ಪ್ರಮುಖ ನೀತಿ ಮತ್ತು ಕಾನೂನುಗಳ ಬದಲಾವಣೆಗಳ ಅಗತ್ಯವಿದೆ. ಆದರೆ ಪಾರ್ಲಿಮೆಂಟರಿ ಬಹುಮತ ಇಲ್ಲದಿರುವುದು ತೀವ್ರ ತೊಡಕುಗಳಿವೆ. 2016ರಲ್ಲಿ ಗೆರಿಲ್ಲಾ ಪಡೆಗಳ ಜತೆ ಆದ ಶಾಂತಿ ಒಪ್ಪಂದಗಳನ್ನು ಜಾರಿ ಮಾಡದ ಹಿಂದಿನ ಸರಕಾರಗಳು ಮತ್ತು ಸೈನ್ಯ ಸೃಷ್ಟಿಸಿರುವ ಅವಿಶ್ವಾಸವನ್ನು ಹೋಗಲಾಡಿಸಿ ಅದನ್ನು ಜಾರಿ ಮಾಡುವುದು ಸಹ ಅತ್ಯಂತ ಸವಾಲಿನ ಕೆಲಸವಾಗಿದೆ.
ಆದರೂ ಪೆತ್ರೊ ಸರಕಾರಕ್ಕೆ ದೇಶದೊಳಗೂ ಲ್ಯಾಟಿನ್ ಅಮೆರಿಕದ ಎಡ ಸರಕಾರಗಳು ಹಾಗೂ ಜನತೆಯಿಂದಲೂ ತುಂಬಾ ಭಾರೀ ಬೆಂಬಲ ವ್ಯಕ್ತವಾಗಿದ್ದು, ಈ ಸವಾಲುಗಳನ್ನು ಎದುರಿಸಲು ಸ್ಫೂರ್ತಿ ತುಂಬಿದೆ. ಚುನಾವಣಾ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಕೊಲಂಬಿಯಾದ ತುಂಬಾ ಬೀದಿ ಬೀದಿಗಳಲ್ಲಿ ಪಟಾಕಿ ಸಿಡಿಸಲಾಯಿತು. ಜನ ಸ್ವಯಂ-ಸ್ಫೂರ್ತವಾಗಿ ಹಾಡಿ ಕುಣಿಯುತ್ತಿದ್ದದ್ದು ಕಂಡು ಬಂದಿದೆ ಎಂದು ವರದಿಯಾಗಿದೆ. ಲ್ಯಾಟಿನ್ ಅಮೆರಿಕದ ನಾಯಕರು ಪೆತ್ರೊ ಚುನಾವಣೆಯನ್ನು ಸಂಭ್ರಮದಿಂದ ಸ್ವಾಗತಿಸಿದ್ದಾರೆ. “ಇಡೀ ಲ್ಯಾಟಿನ್ ಅಮೆರಿಕಕ್ಕೆ ಸಂಭ್ರಮದ ವಿಷಯ” ಎಂದು ಟ್ವೀಟ್ ಮಾಡಿದ ಚಿಲಿಯ ಅಧ್ಯಕ್ಷ ಗೇಬ್ರಿಯಲ್ ಬೊರಿಕ್ “ತ್ವರಿತವಾಗಿ ಬದಲಾಗುತ್ತಿರುವ ಜಗತ್ತಿನ ಸವಾಲುಗಳನ್ನು ಎದುರಿಸಲು ನಮ್ಮ ಖಂಡದ ಐಕ್ಯತೆಗಾಗಿ ಕೂಡಿ ದುಡಿಯೋಣ” ಎಂದಿದ್ದಾರೆ. ವೆನೆಜುವೇಲಾದ ಅಧ್ಯಕ್ಷ ಮದುರೊ “ಶಾಂತಿ ಮತ್ತು ಪ್ರಗತಿಯ ಹಾದಿ ಆಯ್ದುಕೊಂಡಿರುವ ಕೊಲಂಬಿಯಾದ ಜನತೆಯ ದನಿ ಗಟ್ಟಿಯಾಗಿ ಕೇಳಿಬಂದಿದೆ” ಎಂದು ಉದ್ಗರಿಸಿದ್ದಾರೆ.