-ಡಾ. ನೆಲ್ಲುಕುಂಟೆ ವೆಂಕಟೇಶ್
ಹೊದಿಕೆ ಹೊಲಿಯುವ ನೇಕಾರನಿನ್ನೂ ಹುಟ್ಟಿಲ್ಲ
ಹಳಬರೊಲೆದ ಕೌದಿಗಳು ಸವೆದು ಹೋಗಿವೆ
ಕಿಟಕಿಯಾಚೆ ದೂರದಲ್ಲಿ ಉರಿಯುತ್ತಿದೆ ಸ್ಮಶಾನ
ಕೆಂಡ ಆರಲು ಬಿಡುತ್ತಿಲ್ಲ ಗಳಿಗೆಯಷ್ಟೂ
ಚಳಿ ಹುಟ್ಟಿಸಿದವರು ಬೆಂಕಿ ಕಾಯಿಸುತ್ತಿದ್ದಾರೆ
ಕಿಟಕಿ ಮತ್ತು ಸ್ಮಶಾನದ ನಡುವೆ ತೆಂಗಿನ ತೋಪೊಂದಿದೆ
ನಡು ಹಗಲು ಫಳಫಳನೆ ಹೊಳೆವ ಕತ್ತಿಗಳ ಮಸೆ ಮಸೆದು
ಎಳೆ ತರುಣಿಯ ನೆತ್ತಿ ಮೇಲಿಟ್ಟಂತೆ
ಗರಿಗಳು ನಡುಗುತ್ತವೆ
ಗುಬ್ಬಿಯೆದೆಗೆ ಮಾತ್ರ ಕೇಳುತ್ತದೆ ಸಾವಿನ ಚೀತ್ಕಾರ
ಹುಣ್ಣಿಮೆಯ ನಡುರಾತ್ರಿ
ತಬ್ಬಲಿ ಮಗಳ ನೆತ್ತಿ ನೇವರಿಸಿ ಇಳಿಯುತ್ತದೆ ಬೆಳಕು
ಪಾದದವರೆಗೆ
ನಿಶ್ಚಲ ಚಳುಕು
ಇದನ್ನೂ ಓದಿ: ಪೇಜಾವರ ಮಠದ ಸಂವಿಧಾನ ವಿರೋಧಿ, ಜಾತಿ ತಾರತಮ್ಯ ಹೇಳಿಕೆ ವಿರುದ್ಧ : ಸಮಾನ ಮನಸ್ಕರ ಆಕ್ರೋಶ
ಈ ವರ್ಷ ಮುತ್ತುಗ ಅಷ್ಟೆ ಅಲ್ಲ
ಉಗುಣಿ ಅಂಬಿಗೂ ನೆತ್ತರ ಬಣ್ಣ
ಕಡಲು ಬಾನಿಗೂ ಬಳಿಯ ಹೊರಟಿವೆ
ರಾಶಿ ರಾಶಿ ದೆವ್ವಗಳು
ತರುಣಿಯ ತಬ್ಬಿ ಮಲಗಿದ್ದಾಗಲೂ
ಕೊಲೆಯ ಕನವರಿಕೆ ಕಟ್ಟಿ ಮಾಲೆ ಬೀಳುವ
ನಾಡು ಎಂಥ ಶಾಪಗ್ರಸ್ತ
ಯಾಕಿಷ್ಟು ನಡುಕ ನೆಲದವ್ವನೆ
ಹಕ್ಕಿ ಹಾಡೊಳಗ್ಯಾಕೆ ಇಷ್ಟೊಂದು
ನೋವು ನನ್ನ ಹಡೆದವ್ವನೆ
ಮುಟ್ಟಿನ ನೆತ್ತರೊರೆಸಿದ ಬಟ್ಟೆಗೆ ಎದೆ ಬಗೆವ ನೆತ್ತರ
ದಾಹ ಬಂದ ಗಳಿಗೆ
ಕುಲುಮೆಗಳ ತಿದಿ ಆರುತ್ತಿಲ್ಲ
ಸಾಣೆಕಲ್ಲಿನ ಗಿರ್ರೊ ಶಬ್ಧ ನಿಲ್ಲುತ್ತಿಲ್ಲ
ತುಕ್ಕಿಡಿದ ಕತ್ತಿ ಬಾಕು ಚಾಕು ಕೈಗೊಡಲಿ
ತಲೆಕಡಿವ ಗಂಡುಗೊಡಲಿ ಎದ್ದು ಕೂತಿವೆ ನಿದ್ದೆ ಮರೆತು
ಎಲ್ಲವ್ವ ಮಾತ್ರ ಹುಡ್ಹುಕ್ಹುಡುಕಿ ಮಲ್ಲಿಗೆ ಮಾಲೆ ಕಟ್ಟುತ್ತಿದ್ದಾಳೆ
ಧರ್ಮಕ್ಕೆ ಕೇಡು ಬಂದಿದೆ ಎಂದವರ ಮಾತು ಕೇಳಿ
ಎಲೆ ಅಡಿಕೆ ಜಗಿದು ನಕ್ಕು ಕಟವಾಯಿ ಒರೆಸುತ್ತಾಳೆ
ಕಟ್ಟುವ ಮಾಲೆ
ಯಾರಿಗೆಂದು ಕೇಳಲಿ?
ಲೋಕಕ್ಕೆ ಲೋಕವೆಲ್ಲ
ಹಬ್ಬದ ಹರಕೆ ಕುರಿಯಂತೆ ಗರಿಕೆ ಮೇಯುತ್ತಿದೆ
ಮುಂಗಾರಿಲ್ಲದೆ ಕಾಲ ನಡೆಯಲಾರದೆಂದು
ಹಾಡುವ ಕವಿಗಳೆಲ್ಲಿ ಕಳೆದು ಹೋದರು?
ಒಂದೇ
ಸಮಾಧಾನ
ಬುದ್ಧನೆಂಬ ನೇಕಾರನ ಕನಸು ಬೀಳುತ್ತಿದೆ
ನಾಡಿಗೆ
ನಿನ್ನೆಯಿಂದ
ಇದನ್ನೂ ನೋಡಿ: ಮರಕುಂಬಿ ಪ್ರಕರಣ : ಗ್ರೌಂಡ್ ರಿಪೋರ್ಟ್ – ” ಉಳುಮೆಗೆ ಭೂಮಿ ಕೇಳಿದ್ದಕ್ಕೆ ಮನೆಗೆ ಬೆಂಕಿ ಹಚ್ಚಿದರು”