ಸಕಲೇಶಪುರ: ಮಲೆನಾಡು ಭಾಗದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಜಡಿ ಮಳೆಗೆ ಕಾಫಿ ಬೆಳೆಗಾರರು ಸೇರಿದಂತೆ ಹಲವು ರೈತರು ಹೈರಾಣಗಿದ್ದಾರೆ. ತಾಲೂಕಿನಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ವಾಡಿಕೆಗಿಂತ ಶೇ. 70ರಷ್ಟು ಅಧಿಕ ಮಳೆಯಾಗಿದೆ. ಇದರಿಂದ ವಾತಾವರಣ ಹಾಗೂ ಭೂಮಿಯಲ್ಲಿ ಶೀತ ಪ್ರಮಾಣ ಹೆಚ್ಚಾಗಿದ್ದು ಇದು ಈ ಭಾಗದ ರೈತರ ನಿದ್ದೆಗೆಡಿಸಿದೆ.
ತಾಲೂಕಿನ ಪ್ರಮುಖ ಬೆಳೆಗಳಾದ ಕಾಫಿ, ಮೆಣಸು, ಅಡಿಕೆ, ಏಲಕ್ಕಿ, ಭತ್ತ ಮುಂತಾದ ಬೆಳೆಗಳಿಗೆ ಅಕಾಲಿಕ ಮಳೆ ಹಾಗೂ ಅತಿಯಾದ ತೇವಾಂಶದಿಂದಾಗಿ ಹಲವು ರೀತಿಯ ರೋಗ ಹರಡುವ ಭೀತಿ ಅಧಿಕವಾಗಿದೆ. ಇದರಿಂದ ಪಾರಾಗುವುದು ಹೇಗೆ ಎಂಬುದೇ ರೈತರಿಗೆ ಎದುರಾಗಿರುವ ಸಂಕಷ್ಟವಾಗಿದೆ.
ಔಷಧ ನೀರು ಪಾಲು:
ಈಗಾಗಲೇ ಅರೆಬೀಕಾ ಕಾಫಿ, ರೊಬೊಸ್ಟಾ ಕಾಫಿ, ಮೆಣಸು ಹಾಗೂ ಅಡಿಕೆ ಗಿಡಗಳಿಗೆ ರೋಗ ಹರಡದಂತೆ ಔಷಧಿ ಸಿಂಪಡಣೆ ಮಾಡಲಾಗಿದೆ. ಆದರೆ ಜಡಿ ಮಳೆಗೆ ರೋಗನಾಶಕ ನೀರು ಪಾಲಾಗಿದೆ.
ಈ ಸಾಲಿನ ಮಳೆಗಾಲದಲ್ಲಿ ಒಟ್ಟಾರೆಯಾಗಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರೂ, ಕಳೆದ ಸಾಲಿನಲ್ಲಿ ಸುರಿದ ಅಧಿಕ ಮಳೆ ಹಾಗೂ ಸೈಕ್ಲೋನ್ ಹಾಗೂ ವಾಯುಭಾರ ಕುಸಿತದಿಂದ ಸುರಿದ ಅಕಾಲಿಕ ಅಧಿಕ ಮಳೆಯಿಂದಾಗಿ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಮಲೆನಾಡಿನ ಪ್ರಮುಖ ಬೆಳೆಗಳಿಗೆಲ್ಲಾ ಕಂಟಕ ಎದುರಾಗಿದೆ.
ಮುಂದೆಯೂ ಅದೇ ಭೀತಿ:
ಹಾಲಿ ಮಳೆ ಜೋರಾಗಿರುವುದರಿಂದ ಮುಂದೆಯೂ ನಷ್ಟದ ಭೀತಿ ಕಾಡಲಾರಂಭಿಸಿದೆ. ಈ ಸಲವೂ ಭಾರೀ ಆರ್ಥಿಕ ನಷ್ಟ ಎದುರಾಗಲಿದೆ ಎಂಬುದು ಈ ಭಾಗದ ಬಹುತೇಕ ರೈತರ ಆತಂಕವಾಗಿದೆ. ಈ ಬಾರಿ ಅರೇಬಿಕಾ ಕಾಫಿಗೆ ಉತ್ತಮ ಬೆಲೆ ಇರುವುದರಿಂದ ಬೆಳೆಗಾರರು ಆದಾಯದ ಆಶಾ ಭಾವದಲ್ಲಿದ್ದರು.
ಆದರೆ ಮುಂದಿನ ಎರಡು ತಿಂಗಳಲ್ಲಿ ಕೈ ಸೇರಬೆಕಿದ್ದ ಅರೇಬಿಕಾ ಕಾಫಿ ಫಸಲು ಅತಿ ಮಳೆಯಿಂದಾಗಿ ಈಗಲೇ ಹಣ್ಣಾಗಿ ಕಾಫಿ ಗಿಡಗಳಿಂದ ಉದುರಲು ಆರಂಭಿಸಿದೆ. ಮುಂದೆ ಕೊಳೆ ರೋಗ ಹೆಚ್ಚಾಗುವ ಭೀತಿ ಉಂಟಾಗಿದೆ. ಮಳೆ ಇದೇ ರೀತಿ ಮುಂದುವರಿದರೆ ರೊಬೊಸ್ಟಾ ಕಾಫಿಗೂ ಕುತ್ತು ಬರುವ ಆತಂಕ ನಿರ್ಮಾಣವಾಗಿದೆ. ಕಾಯಿಗಟ್ಟುತ್ತಿರುವ ಗಿಡಕ್ಕೆ ರೋಗ ಆವರಿಸಿಕೊಂಡರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಲಿದೆ.
ಕೊಳೆಯುತ್ತಿವೆ ಮೆಣಸಿನ ಬಳ್ಳಿ:
ಮಲೆನಾಡಿನ ಕರಿಚಿನ್ನವೆಂದೇ ಖ್ಯಾತಿ ಪಡೆದಿರುವ ಮೆಣಸಿಗೂ ಅತಿಯಾದ ಮಳೆ ಮಾರಕವಾಗಿ ಪರಿಣಮಿಸಿದೆ. ಮೆಣಸಿನ ಬಳ್ಳಿಗಳು ಜಡಿ ಮಳೆಯಿಂದಾಗಿ ಕೊಳೆತು ಹೋಗುತಿದ್ದು ಬೆಳೆಗಾರರನ್ನು ಮತ್ತಷ್ಟು ಆತಂಕಕ್ಕೀಡುಮಾಡಿದೆ. ಇತ್ತೀಚೆಗೆ ಅಡಿಕೆಗೆ ಉತ್ತಮ ಧಾರಣೆಯಿಂದಾಗಿ ತಾಲೂಕಿನ ಬಹುತೇಕ ಕಡೆ ಗದ್ದೆ ಹಾಗೂ ತಗ್ಗು ಪ್ರದೇಶದಲ್ಲಿ ಅಡಿಕೆ ಬೆಳೆಗೆ ಹೆಚ್ಚು ರೈತರು ಮುಂದಾಗಿದ್ದಾರೆ.
ಆದರೆ ಅಕಾಲಿಕ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ಅಂತರ್ಜಲ ಹೆಚ್ಚಾಗಿದ್ದು ಅಡಿಕೆ ಬೆಳೆಗೂ ಆಪತ್ತು ಎದುರಾಗಿದೆ. ಉತ್ತಮ ಫಸಲು ನಿರೀಕ್ಷೆಯಲ್ಲಿದ್ದ ಬೆಳೆಗಾರರು ಆರಂಭದಲ್ಲೇ ಚಿಂತೆಗೀಡಾಗಿದ್ದಾರೆ.
ಕಾಫಿ, ಮೆಣಸು ಮಾತ್ರವಲ್ಲ, ಏಲಕ್ಕಿ, ಶುಂಠಿ ಹಾಗೂ ಭತ್ತದ ಬೆಳೆಯನ್ನು ಮಳೆ ಮುಳುಗಿಸುತ್ತಿದೆ.
ಮೊದಲೇ ಮಲೆನಾಡಿನಲ್ಲಿ ಅತಿಯಾಗಿರುವ ಕಾಡಾನೆ ಹಾವಳಿಯಿಂದ ರೈತರು ಬೆಳೆದ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಇದರ ನಡುವೆಯೇ ಅತಿಯಾದ ಮಳೆ ಮತ್ತೊಂದು ರೀತಿಯ ಪೆಟ್ಟು ನೀಡುತ್ತಿರುವುದು ಮಲೆನಾಡಿನ ರೈತರನ್ನು ಅಕ್ಷರಶಃ ಕಂಗಾಲಾಗಿಸಿದೆ.
ಸರ್ಕಾರ ಸಕಲೇಶಪುರ ತಾಲೂಕನ್ನು ಅತಿವೃಷ್ಟಿ ಪೀಡಿತ ಪ್ರದೇಶವೆಂದು ಘೋಷಿಸಿದೆ. ಆದರೆ ಕಾಫಿ ಮಂಡಳಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಾಲೂಕಿನಲ್ಲಿ ಸ್ಥಳ ಪರಿಶೀಲನೆ ಹಾಗೂ ಬೆಳೆನಷ್ಟದ ಸರ್ವೆ ಮಾಡದೆ ಯಾವುದೇ ಹಾನಿಯಾಗಿಲ್ಲ ಎಂದು ಸುಳ್ಳು ವರದಿ ನೀಡಿದ್ದಾರೆ. ಇದರಿಂದ ಬೆಳೆಗಾರರಿಗೆ ಪರಿಹಾರ ಎಂಬುದು ಮರೀಚಿಕೆಯಾಗಿದೆ. ಸರ್ಕಾರ ವಾಸ್ತವಾಂಶ ಮನಗಂಡು ಕೂಡಲೇ ಮಲೆನಾಡು ಭಾಗದ ರೈತರಿಗೆ ವಿಶೇಷ ಪ್ಯಾಕೆಜ್ ಘೋಷಣೆ ಮಾಡುವ ಮೂಲಕ ನಷ್ಟಕ್ಕೀಡಾಗಿರುವ ರೈತರ ಪರ ನಿಲ್ಲಬೇಕು.
ಕೌಡಹಳ್ಳಿ ಲೋಹಿತ್, ಬೆಳೆಗಾರರ ಸಂಘದ ಅಧ್ಯಕ್ಷ