ಕಾಫಿ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಮನವಿ

ಬೆಂಗಳೂರು :  ಕಾಫಿ ಬೆಳೆಗಾರರ ಬೇಡಿಕೆಗಳಿಗಾಗಿ ಕೊಡುಗು ಜಿಲ್ಲೆಯ ಮಡಿಕೇರಿ ಮತ್ತು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಇಂದು, (ಡಿಸೆಂಬರ್‌ 05) ಕಾಫಿ ಬೆಳೆಗಾರರು ‘ಕರ್ನಾಟಕ ಕಾಫಿ ಬೆಳೆಗಾರರ ಸಂಘ’ ದಿಂದ ತಹಸಿಲ್ದಾರ್ ಕಛೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.

ಕಾಫಿ ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಭಾರತದಲ್ಲಿ ಒಟ್ಟು ಕಾಫಿ ಉತ್ಪಾದನೆಯಲ್ಲಿ ಶೇಖಡ 60 ಕ್ಕೂ ಹೆಚ್ಚು ಕರ್ನಾಟಕದಲ್ಲೇ ನಡೆಯುತ್ತದೆ. ಇದರಲ್ಲಿ ಶೇಖಡ 90 ಕ್ಕಿಂತ ಹೆಚ್ಚು ಸಣ್ಣಬೆಳೆಗಾರರು ಕಾಫಿ ಕೃಷಿಯ ಮೂಲಕ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ದೊಡ್ಡ ಸಂಖ್ಯೆಯಲ್ಲಿರುವ ಸಣ್ಣ ಬೆಳೆಗಾರರರು ಕಾಫಿ ಕೃಷಿಯಲ್ಲಿ ಅತಿ ಹೆಚ್ಚು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನೆಕಾರರು ದೂರಿದರು.

ಒಂದೆಡೆ ಪ್ರಕೃತಿಯ ವೈಪರಿತ್ಯದಿಂದಾಗಿ ಬೆಳೆ ಸರಿಯಾಗಿ ಕೈಗೆ ಸೇರದಿರುವುದು. ಬಂದ ಬೆಳೆಗೂ ನ್ಯಾಯಯುತವಾದ ಬೆಲೆ ಸಿಗದಿರುವುದು, ಮತ್ತೊಂದೆಡೆ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಬೆಳೆ ನಾಶದ ಜೊತೆಗೆ ಪ್ರಾಣಹಾನಿಗಳು ಸಂಬವಿಸುತ್ತಿವೆ. ಆನೆಗಳ ದಾಳಿಗಳಿಂದಾಗಿ ರೈತರು ಮತ್ತು ಕಾರ್ಮಿಕರು ಪ್ರತೀ ದಿನ ತೋಟಗಳಲ್ಲಿ ಭಯದಿಂದ ಕೆಲಸ ಮಾಡುವ ಮತ್ತು ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಆನೆಗಳ ದಾಳಿಯನ್ನು ನಿಯಂತ್ರಿಸಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವ ರಾಜಕೀಯ ಇಚ್ಚಾಶಕ್ತಿಯನ್ನು ತೋರಿಸುತ್ತಿಲ್ಲ. ಇದರಿಂದಾಗಿ ಈ ಭಾಗದ ರೈತರು ಅತ್ಯಂತ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ನಷ್ಟಕ್ಕೊಳಗಾದ ಬೆಳೆಗಳಿಗೆ ಸೂಕ್ತ ರೀತಿಯಲ್ಲಿ ಪರಿಹಾರ ಸಿಗುತ್ತಿಲ್ಲ. ಮಾತ್ರವಲ್ಲದೆ ಆನೆ ದಾಳಿಯಿಂದ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ಸೂಕ್ತ ನೆರವು ಮತ್ತು ಪರಿಹಾರ ದೊರೆಯದೆ ಆ ಕುಟುಂಬಗಳು ಅನಾಥವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆನೆಗಳ ಹಾವಳಿಯನ್ನು ತಡೆಗಟ್ಟಲು ರೈತರು ಮತ್ತು ಕಾರ್ಮಿಕರ ಪ್ರಾಣಗಳನ್ನು ಉಳಿಸಿ, ಬೆಳೆ ನಾಶವನ್ನು ತಡೆಗಟ್ಟಿ ಎಲ್ಲರೂ ನೆಮ್ಮದಿಯಿಂದ ಬದುಕುವ ವಾತಾವರಣವನ್ನು ನಿರ್ಮಾಣಮಾಡಲು ಕೂಡಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶಾಶ್ವತ ಪರಿಹಾರವನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

ಕಾಫಿ ಉತ್ಪಾದನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿರುವ ಸಣ್ಣಬೆಳೆಗಾರರು ಭೂಮಿಗೆ ಸಂಭದಿಸಿದ ಹಲವು ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಹತ್ತಾರು ವರ್ಷಗಳಿಂದ ಉಳುಮೆ ಮಾಡಿ ಕೃಷಿ ಚಟುವಟಿಕೆ ನಡೆಸುತ್ತಿರುವ ಸರ್ಕಾರಿ ಭೂಮಿ, ಅರಣ್ಯ ಭೂಮಿಯ ಮಂಜೂರಾತಿಗಾಗಿ ಸರ್ಕಾರದ ಮುಂದೆ ಅರ್ಜಿಗಳನ್ನು ಸಲ್ಲಿಸಿ ಬಗರ್ ಹುಕುಂ ಸಾಗುವಳಿ ಮಂಜೂರಾತಿಗಾಗಿ ಕಾಯುತ್ತಿದ್ದಾರೆ. ಹಾಗಾಗಿ, ಕಾಫಿ ಬೆಳೆಗಾರರ  ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಎಂದು ಪ್ರತಿಭಟನೆಕಾರರು ಆಗ್ರಹಿಸಿದರು.

ಮಡಿಕೇರಿಯಲ್ಲಿ CFFI ನ ರಾಷ್ಟ್ರ ಅಧ್ಯಕ್ಷರಾದ ಅಬ್ದುಲ್ ಲತೀಫ್, ಜಿಲ್ಲಾ ಸಂಚಾಲಕರಾದ ಹನೀಫ್, ಮುಖಂಡರುಗಳಾದ ಡಾ.ದುರ್ಗಾಪ್ರಸಾದ್ ಮುಂತಾದವರು ಭಾಗವಹಿಸಿದ್ದರು.

ಹಾಸನದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಎಚ್.ಆರ್.ನವೀನ್ ಕುಮಾರ್, ತಾಲ್ಲೂಕು ಕಾರ್ಯದರ್ಶಿ ಗಿಡ್ಡೇಗೌಡ, ಸಿಐಟಿಯುನ ಸೌಮ್ಯ ಬಿಎಂ, ವಡೂರು ಸುಮಾ, ರುದ್ರೇಗೌಡ, ದೇವಲಗೆರೆ ಮಂಜು, ಕುಣಿಗನಹಳ್ಳಿ ಶಂಕರಣ್ಣ, ಚಂಗಡಿಹಳ್ಳಿ ವಿರೇಶ್‌ ಮುಂತಾದವರು ಇದ್ದರು.

ಕಾಫಿ ಬೆಳೆಗಾರರ ಬೇಡಿಕೆಗಳು ಈ ರೀತಿ ಇವೆ

  1. ಆನೆ ಮತ್ತು ಕಾಡು ಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಾಶ್ವತ ಪರಿಹಾರ ಒದಗಿಸಬೇಕು.
  2. ಆನೆ ದಾಳಿಯಿಂದ ನಷ್ಟಕ್ಕೊಳಗಾದ ರೈತರಿಗೆ ವೈಜ್ಞಾನಿಕ ರೀತಿಯಲ್ಲಿ ಬೆಳೆ ಪರಿಹಾರವನ್ನು ಕೂಡಲೇ ಒದಗಿಸಬೇಕು. ಪ್ರಾಣ ಕಳೆದುಕೊಂಡ ಕುಟುಂಬಕ್ಕೆ ಕನಿಷ್ಟ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಮತ್ತು ಪ್ರಾಣ ಕಳೆದುಕೊಂಡ ಕುಟುಂಬ ಸದಸ್ಯರಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗವನ್ನು ನೀಡಬೇಕು.
  3. 1942 ರ ಭಾರತ ಕಾಫಿ ಕಾಯ್ದೆಗೆ ತಿದ್ದುಪಡಿ ತಂದು ಡಾ.ಎಂ.ಎಸ್‌ ಸ್ವಾಮಿನಾಥನ್ ಶಿಫಾರಸ್ಸಿನಂತೆ ಕಾಫಿ, ಏಲಕ್ಕಿ, ಕರಿಮೆಣಸಿಗೂ ಬೆಂಬಲ ಬೆಲೆ ಕಾನೂನಿನ ಮಾನ್ಯತೆ ನೀಡಬೇಕು.
  4. ಕೃಷಿ ಉತ್ಪಾದನಾ ವೆಚ್ಚದ ಹೆಚ್ಚಳಕ್ಕೆ ಕಾರಣವಾಗಿರುವ ರಸಗೊಬ್ಬರ, ಕೀಟನಾಶಕ ಡೀಸೆಲ್, ಕೃಷಿ ಯಂತ್ರೋಪಕರಣಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ಇವುಗಳ ಮೇಲಿನ ಸಬ್ಸಿಡಿಯನ್ನು ಹೆಚ್ಚಿಸಬೇಕು.
  5. ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರ ಸಾಲವನ್ನು ಸಂಪೂರ್ಣ ಮನ್ನ ಮಾಡಬೇಕು.
  6. ಬಗರ್ ಹುಕುಂ ಮತ್ತು ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು.
  7. ಈ ವಿದೇಶದಿಂದ ಭಾರತಕ್ಕೆ ಬರುತ್ತಿರುವ ಕಾಫಿ, ಮೆಣಸು ಮತ್ತಿತರೆ ಕೃಷಿ ಉತ್ಪನ್ನಗಳನ್ನು ನಿಯಂತ್ರಿಸಲು ಹೆಚ್ಚಿನ ತೆರಿಗೆಯನ್ನು ವಿಧಿಸಬೇಕು ಮತ್ತು ರೈತರಿಗೆ ಸ್ಥಳಿಯವಾಗಿ ಸರಿಯಾದ ಮಾರುಕಟ್ಟೆಯನ್ನು ಒದಗಿಸಿ ಸೂಕ್ತ ಬೆಂಬಲ ಬೆಲೆಯನ್ನು ಘೋಷಿಸಬೇಕು.
  8. ರೈತ ವಿರೋಧಿ ಉದಾರೀಕರಣ ನೀತಿಗಳನ್ನು ಹಿಮ್ಮೆಟ್ಟಿಸಿ, ರೈತ ಪರವಾದ ಸಹಕಾರಿ ಕೃಷಿಗೆ ಒತ್ತು ನೀಡಬೇಕು.

 

Donate Janashakthi Media

Leave a Reply

Your email address will not be published. Required fields are marked *