ನವದೆಹಲಿ/ ಬೆಂಗಳೂರು : ಕಲ್ಲಿದ್ದಲು ದಾಸ್ತಾನು ಕುಸಿತವಾಗಿದ್ದು, ಥರ್ಮಲ್ ವಿದ್ಯುತ್ ಘಟಕಗಳ ಕೆಲಸ ಕುಂಠಿತಗೊಂಡಿದೆ. ಹೀಗಾಗಿ 12 ರಾಜ್ಯಗಳಲ್ಲಿ ವಿದ್ಯುತ್ ಬಿಕ್ಕಟ್ಟು ಎದುರಾಗಬಹುದು ಎಂದು ಅಖಿಲ ಭಾರತ ಎಂಜಿನಿಯರ್ಸ್ ಫೆಡರೇಷನ್ (ಎಐಪಿಇಇ) ಎಚ್ಚರಿಕೆ ನೀಡಿದೆ.
ಕಳೆದ ವರ್ಷ ಸುರಿದ ಭಾರೀ ಮಳೆ, ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚಿದ ಪರಿಣಾಮ ದರ ಏರಿಕೆ ಮೊದಲಾದ ಕಾರಣಗಳಿಂದಾಗಿ ದೇಶದ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ಸಂಗ್ರಹ ಕಳೆದೊಂದು ವರ್ಷದಿಂದ ಭಾರೀ ಪ್ರಮಾಣದಲ್ಲಿ ಕುಸಿಯಲು ಕಾರಣವಾಗಿದೆ.
2022ರ ಏಪ್ರಿಲ್ ಮೊದಲರ್ಧ ಭಾಗದಲ್ಲಿ ದೇಶೀಯ ವಿದ್ಯುತ್ ಬೇಡಿಕೆ 38 ವರ್ಷದ ಗರಿಷ್ಠಕ್ಕೆ ಮುಟ್ಟಿದೆ. ಅಕ್ಟೋಬರ್ 2021ರಲ್ಲಿ ಕಲ್ಲಿದ್ದಲು ಕೊರತೆ ಶೇ.1.1ರಷ್ಟಿತ್ತು. ಅದು 2022ರ ಏಪ್ರಿಲ್‌ನಲ್ಲಿ ಶೇ.1.4ಕ್ಕೆ ಏರಿದೆ. ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್, ಪಂಜಾಬ್, ಜಾರ್ಖಂಡ್ ಹಾಗೂ ಹರಾರಯಣದಂಥ ರಾಜ್ಯಗಳಲ್ಲಿ ವಿದ್ಯುತ್ ಕಡಿತವಾಗುತ್ತಿದೆ. ಉತ್ತರಪ್ರದೇಶದಲ್ಲಿ ಬೇಡಿಕೆ 21000 ಮೆಗಾವ್ಯಾಟ್ ತಲುಪಿದ್ದರೆ, ಪೂರೈಕೆ 19000-20000 ಮೆಗಾವ್ಯಾಟ್‌ನಷ್ಟಿದೆ. ಹೀಗಾಗಿ ಥರ್ಮಲ್ ಘಟಕಕ್ಕೆ ಕಲ್ಲಿದ್ದಲು ಪೂರೈಕೆ ಚುರುಕುಗೊಳಿಸಿ ಬಿಕ್ಕಟ್ಟು ಪರಿಹರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಫೆಡರೇಷನ್ ಆಗ್ರಹಿಸಿದೆ.
ರಾಜ್ಯದಲ್ಲಿ ತೀವ್ರ ವಿದ್ಯುತ್ ಕ್ಷಾಮ
ತೀವ್ರ ಕಲ್ಲಿದ್ದಲಿನ ಕೊರತೆಯಿಂದಾಗಿ ಶನಿವಾರ ಹಾಗೂ ಭಾನುವಾರ ಆರು ಶಾಖೋತ್ಪನ್ನ ವಿದ್ಯುತ್ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿತ್ತು. ಪರಿಣಾಮ ವಿದ್ಯುತ್ ಪೂರೈಕೆಯಲ್ಲಿ ಸಾಕಷ್ಟುವ್ಯತ್ಯಯವಾಗಿದ್ದು, ರಾಜ್ಯಾದ್ಯಂತ ಕಳೆದ ಎರಡು ದಿನಗಳಿಂದ ತೀವ್ರ ವಿದ್ಯುತ್ ಕಡಿತ ಮಾಡಲಾಗುತ್ತಿದೆ.
ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಲ್ಲಿನ ಉತ್ಪಾದನೆ 6220 ಮೆ.ವ್ಯಾ.ನಿಂದ 1915 ಮೆ.ವ್ಯಾಗೆ ಕುಸಿದಿದೆ. ಇದೇ ವೇಳೆ, ಬೇಸಿಗೆ ಹಿನ್ನೆಲೆಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿದ್ದರೂ, ಒಟ್ಟಾರೆ ಎಲ್ಲ ಮೂಲಗಳಿಂದ ಪೂರೈಕೆ ಆಗುತ್ತಿದ್ದ ವಿದ್ಯುತ್ ನಿತ್ಯದ ಸರಾಸರಿ 14,000 ಮೆ.ವ್ಯಾಟ್‌ನಿಂದ 11,550 ಮೆ.ವ್ಯಾಟ್‌ಗೆ (ಗರಿಷ್ಠ) ಶನಿವಾರ ಕುಸಿದಿದೆ. ಭಾನುವಾರ ಈ ಪ್ರಮಾಣ ಮತ್ತಷ್ಟುಕಡಿಮೆಯಾಗಿ 9,918 ಮೆ.ವ್ಯಾಟ್‌ಗೆ (ಗರಿಷ್ಠ) ಕುಸಿದಿದೆ. ಪರಿಣಾಮ, ಮಳೆಯ ನೆಪದಲ್ಲಿ ರಾಜ್ಯಾದ್ಯಂತ ತೀವ್ರ ವಿದ್ಯುತ್ ಕಡಿತ ಆರಂಭವಾಗಿದೆ ಎನ್ನಲಾಗಿದೆ.
ರಾಜ್ಯದ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಲ್ಲಿ ಕಲ್ಲಿದ್ದಲು ತಳಕಚ್ಚಿದೆ. ಕಲ್ಲಿದ್ದಲು ಗಣಿಗಳಿಂದ ರೇಕ್‌ಗಳಲ್ಲಿ ಸಾಗಣೆಯಾಗುವ ಕಲ್ಲಿದ್ದಲಿಗೆ ಕಾದು ಕುಳಿತು ನಂತರ ಬಳಕೆ ಮಾಡುವಂತಾಗಿದ್ದು, ಎರಡು ದಿನಗಳಿಗೆ ಆಗುವಷ್ಟೂಕಲ್ಲಿದ್ದಲು ಸಹ ಶೇಖರಣೆಯಿಲ್ಲ.
ಕಲ್ಲಿದ್ದಲು ಕೊರತೆಯಿಂದ ಬಳ್ಳಾರಿಯ ಕುಡುತಿನಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಒಂದು ಘಟಕ, ರಾಯಚೂರಿನ ಶಕ್ತಿನಗರದ (ಆರ್‌ಟಿಪಿಎಸ್) ಕೇಂದ್ರದಲ್ಲಿ ಮೂರು ಘಟಕ, ಉಡುಪಿಯ ಯುಪಿಸಿಎಲ್ (ಅದಾನಿ) ಕೇಂದ್ರದ ಎರಡೂ ಘಟಕ ಸ್ಥಗಿತಗೊಂಡಿದ್ದವು. ಪರಿಣಾಮ ಒಟ್ಟು 6,220 ಮೆ.ವ್ಯಾಟ್ ವಿದ್ಯುತ್ ಸಾಮರ್ಥ್ಯದ ಶಾಖೋತ್ಪನ್ನ ವಿದ್ಯುತ್ ಘಟಕಗಳಲ್ಲಿ ಕೇವಲ ಗರಿಷ್ಠ 2,365 ಮೆ.ವ್ಯಾಟ್ ವಿದ್ಯುತ್ ಮಾತ್ರ ಶನಿವಾರ ಉತ್ಪಾದನೆಯಾಗಿದೆ. ಇನ್ನು ಭಾನುವಾರ ಆರ್‌ಟಿಪಿಎಸ್‌ನ 3 ಘಟಕ (2,6,7ನೇ ಘಟಕ), ಬಿಟಿಪಿಎಸ್‌ನ 1 ಘಟಕ, ಉಡುಪಿಯ ಯುಪಿಸಿಎಲ್ (ಅದಾನಿ) ಕೇಂದ್ರದ ಎರಡೂ ಘಟಕ ಸ್ಥಗಿತಗೊಂಡಿದ್ದವು. ಹೀಗಾಗಿ ಭಾನುವಾರ ಈ ಪ್ರಮಾಣ 1,915 ಮೆ.ವ್ಯಾಟ್‌ಗೆ ಕುಸಿದಿದೆ.
ಕಲ್ಲಿದ್ದಲು ಕೊರತೆ ಇದೆ: ಕೆಪಿಟಿಸಿಎಲ್ : ರಾಜ್ಯದ ಮೂರು ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ ಇದೆ ಎಂದು ಕೆಪಿಟಿಸಿಎಲ್ ಸ್ಪಷ್ಟ ಪಡಿಸಿದೆ. ಸಧ್ಯ ಸಂಗ್ರಹಣೆ ಕೇವಲ ಒಂದು ದಿನಕ್ಕಾಗುವಷ್ಟಿದೆ. ಸಾಮಾನ್ಯವಾಗಿ ದಿನವೊಂದಕ್ಕೆ 12ರಿಂದ 15 ರೇಕುಗಳಲ್ಲಿ ಕಲ್ಲಿದ್ದಲು ಪೂರೈಕೆಯಾಗುತ್ತಿತ್ತು. ಈಗ 8ರಿಂದ 9 ರೇಕುಗಳಲ್ಲಿ ಲಭ್ಯವಾಗುತ್ತಿದೆ. ಒಂದು ರೇಕಿನಲ್ಲಿ ಸಾಮಾನ್ಯವಾಗಿ 700ರಿಂದ 800 ಟನ್ ಕಲ್ಲಿದ್ದಲು ಪೂರೈಕೆಯಾಗುತ್ತದೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ತೀವ್ರ ಅಭಾವ ಉಂಟಾಗಿತ್ತು. ಜನವರಿ, ಫೆಬ್ರವರಿಯಲ್ಲಿ ಸುಧಾರಿಸಿದ್ದರೂ ಕ್ರಮೇಣ ಮತ್ತೆ ಅಭಾವ ತೀವ್ರಗೊಂಡಿದೆ. ಆದರೂ ಸಮರ್ಥವಾಗಿ ನಿಭಾಯಿಸುತ್ತಿದ್ದೇವೆ. ಎಲ್ಲೂ ಅನಗತ್ಯ ವಿದ್ಯುತ್ ಕಡಿತ ಉಂಟಾಗದಂತೆ ಎಸ್ಕಾಂಗಳಿಂದ ವಿದ್ಯುತ್ ಪೂರೈಕೆಯಾಗುತ್ತಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳುತ್ತಿದ್ದಾರೆ.
ವಿದ್ಯುತ್ ಕೊರತೆ : ದಿನವೊಂದಕ್ಕೆ ರಾಜ್ಯದ ಸರಾಸರಿ ವಿದ್ಯುತ್ ಬೇಡಿಕೆ – 13,500 ಮೆ.ವ್ಯಾಟ್‌ನಿಂದ 14,000 ಮೆ.ವ್ಯಾಟ್ ಬೇಕಿದೆ. ಆದರೆ ದಿನಕ್ಕೆ ಪೂರೈಕೆಯಾಗುತ್ತಿರುವ ಸರಾಸರಿ ವಿದ್ಯುತ್ – 10 ಸಾವಿರ ಮೆ.ವ್ಯಾಟ್ ಮಾತ್ರ. 3,500 ಮೆ.ವ್ಯಾಟ್‌ನಿಂದ 4 ಸಾವಿರ ಮೆ.ವ್ಯಾಟ್ ವಿದ್ಯುತ್ ಕೊರತೆಯಾಗುತ್ತಿದೆ. ಹಾಗಾಗಿ, ಕೆಲವೆಡೆ ಲೋಡ್ ಶೆಡ್ಡಿಂಗ್ ಅನಿವಾರ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಕೋವಿಡ್, ಲಾಕ್ಡೌನ್ ನಿಂದ ತತ್ತರಿಸಿರುವ ಜನರಿಗೆ, ವ್ಯಾಪಾರಸ್ಥರಿಗೆ, ಉದ್ದಿಮೆದಾರರಿಗೆ ಮತ್ತೊಂದು ಸಂಕಷ್ಟ ಎದುರಾಗುತ್ತಿದೆ. ಕೇಂದ್ರ ಸರಕಾರ ಕಲ್ಲಿದ್ದಲು ಕೊರತೆಯನ್ನು ನೀಗಿಸಲು ಮುಂದಾಗಬೇಲಿದೆ.