ಕಲ್ಲಿದ್ದಲು ಬಿಕ್ಕಟ್ಟು ಎಂಬುದು ಒಂದು ಹಗರಣವಲ್ಲದೆ ಬೇರೇನೂ ಅಲ್ಲ -ವಿದ್ಯುತ್‍ ಮತ್ತು ಕಲ್ಲಿದ್ದಲು ಕಾರ್ಮಿಕರ ಸಂಘಟನೆಗಳ ಆರೋಪ

ಕೆಂದ್ರ ವಿದ್ಯುತ್‍ ಮತ್ತು ಕಲ್ಲಿದ್ದಲು ಇಲಾಖೆಗಳ ನಡೆಗಳಲ್ಲಿನ ವೈರುಧ್ಯ  ಒಟ್ಟಾಗಿ ಸರಕಾರದ ಉದ್ದೇಶ ಮತ್ತು ನಡೆಗಳ ಬಗ್ಗೆ ಹಲವು ಸಂದೇಹಗಳನ್ನು ಎಬ್ಬಿಸಿವೆ ಈ ಇಡೀ ಕಲ್ಲಿದ್ದಲು ಬಿಕ್ಕಟ್ಟು ಎಂಬುದು ಒಂದು ಕಲ್ಲಿದ್ದಲು ಹಗರಣವಲ್ಲದೆ ಬೇರೇನೂ ಅಲ್ಲ ಎಂದು ಎಂದು ವಿದ್ಯುತ್‍ ಮತ್ತು ಕಲ್ಲಿದ್ದಲು ಕಾರ್ಮಿಕರ ಸಂಘಟನೆಗಳು ಆರೋಪಿಸಿವೆ. , ಒಂದೆರಡು ಖಾಸಗಿ ಕಂಪನಿಗಳಿಗೆ ಅನುಕೂಲ ಮಾಡಿಕೊಡಲಿಕ್ಕಾಗಿ ಬಳಕೆದಾರರ ಮೇಲೆ ವಿದ್ಯುತ್‍ ದರ ಏರಿಕೆಯ ಹೊರೆ ಹಾಕುವ, ಕ್ರಮಗಳು ಎಂದು ಅವು ಹೇಳಿವೆ.

ಅಖಿಲ ಭಾರತ ಕಲ್ಲಿದ್ದಲು ಕಾರ್ಮಿಕರ ಒಕ್ಕೂಟ (ಎಐಸಿಡಬ್ಲ್ಯುಎಫ್) ಮತ್ತು ಭಾರತದ ವಿದ್ಯುತ್‍ ನೌಕರರ ಒಕ್ಕೂಟ(ಇಇಎಫ್‍ಐ) ಒಟ್ಟುಗೂಡಿ  ದೇಶದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಬಹುದಾದ ಕಲ್ಲಿದ್ದಲಿಗೆ ಸಂಬಂಧಪಟ್ಟ ಕೇಂದ್ರ ಸರಕಾರದ ಧೋರಣೆಯನ್ನು ಬಯಲಿಗೆ ತಂದಿವೆ.

ಸಪ್ಟಂಬರ್ 1 ರಂದು ಭಾರತ ಸರಕಾರದ ವಿದ್ಯುತ್‍ ಮಂತ್ರಾಲಯ ಒಂದು ಸುತ್ತೋಲೆ ಹೊರಡಿಸಿತು. ಇದು ದೇಶೀ ಕಲ್ಲಿದ್ದಲು-ಆಧಾರಿತ ವಿದ್ಯುತ್ ಉತ್ಪಾದನಾ ಕಂಪನಿಗಳು ಮಾರ್ಚ್‍ 31, 2024ರ ವರೆಗೆ ಬಹಿರಂಗ ಹರಾಜು ಪ್ರಕ್ರಿಯೆಯ ಮೂಲಕ ಆಮದು ಮಾಡಿದ 4% ಕಲ್ಲಿದ್ದಲನ್ನು ಮಿಶ್ರಮಾಡಬೇಕು ಎಂದು ಆದೇಶ ನೀಡಿದ ಸುತ್ತೋಲೆ. ಈ ಮೊದಲು ಜನವರಿ 9, 2023ರಂದು ಇಂತಹ ಆದೇಶ ಹೊರಡಿಸಲಾಗಿತ್ತು. ಈ ನಿರ್ದೇಶನ ನೀಡಲು ಕಾರಣ ದೇಶದೊಳಗೆ ಸಾಕಷ್ಟು ಕಲ್ಲಿದ್ದಲು ಪೂರೈಕೆಯ ಅಭಾವ ಎನ್ನಲಾಯಿತು.

ಇದನ್ನೂ ಓದಿ : ದ್ವೇಷ ಕಾರುವ ಚರ್ಚೆ ನಡೆಸುವ 14 ಆಂಕರ್‌ಗಳನ್ನು ಬಹಿಷ್ಕರಿಸಿದ ‘ಇಂಡಿಯಾ’ ಒಕ್ಕೂಟ

ಇದಾದ ನಾಲ್ಕೇ ದಿನಗಳಲ್ಲಿ, ಅಂದರೆ ಸಪ್ಟಂಬರ್‍ 5ರಂದು ಕಲ್ಲಿದ್ದಲು ಮಂತ್ರಾಲಯ ಹೆಚ್ಚುತ್ತಿರುವ ವಿದ್ಯುತ್‍ ಪೂರೈಕೆಗೆ ಬೇಕಾದಷ್ಟು ಕಲ್ಲಿದ್ದಲು ಲಭ್ಯವಿದೆ ಎಂದು ಒಂದು ಪತ್ರಿಕಾ ಹೇಳಿಕೆಯನ್ನು ನೀಡಿತು.

ಏಕೆ ವಿರೋಧಾಭಾಸದ ನಡೆಗಳು?

ಎಪ್ರಿಲ್ 2022ರಲ್ಲಿ ದೇಶ ತೀವ್ರ ವಿದ್ಯುತ್‍ ಕೊರತೆಯನ್ನು ಎದುರಿಸಿತು. ಆಗ ಸರಕಾರ 10% ಆಮದು ಕಲ್ಲಿದ್ದಲನ್ನು ಮಿಶ್ರ ಮಾಡಬೇಕು, ಅದಕ್ಕೆ ಜುಲೈ 2022ರ ಮೊದಲು ಅದನ್ನು ಆಮದು ಮಾಡಿಕೊಳ್ಳಬೇಕು ಎಂದು ವಿದ್ಯುತ್‍ ಕಂಪನಿಗಳಿಗೆ ಆದೇಶ ನೀಡಿತ್ತು. ಕೋಲ್‍ ಇಂಡಿಯ ಯುನಿಟಿಗೆ 2ರೂ. ದರದಲ್ಲಿ ಕಲ್ಲಿದ್ದಲು ಪೂರೈಸುತ್ತಿದ್ದರೆ, ಆಮದು ಮಾಡಿದ ಕಲ್ಲಿದ್ದಲು ವೆಚ್ಚ ಯುನಿಟಿಗೆ 7-8ರೂ. ಇದರಿಂದಾಗಿ ಸಪ್ಟಂಬರ್‍ ತ್ರೈಮಾಸಿಕದ ಅಂತ್ಯದಲ್ಲಿ ತಾಪ ವಿದ್ಯುತ್‍ ಘಟಕವಾದ ಎನ್‍ಟಿಪಿಸಿ ಯ ನಿವ್ವಳ ಲಾಭದಲ್ಲಿ 7% ಇಳಿಕೆಯಾಯಿತು.

ಆದರೆ ಇದೇ ಅವಧಿಯಲ್ಲಿ ರಾಜ್ಯಸಭೆಯಲ್ಲಿ ಸರಕಾರ ನೀಡಿದ ಹೇಳಿಕೆಯ ಪ್ರಕಾರ ದೇಶದಲ್ಲಿ ಕಲ್ಲಿದ್ದಲು ಕೊರತೆ ಇಲ್ಲ! ಇದೆಂತಹ ವೈರುಧ್ಯ.?

ವಾಸ್ತವವಾಗಿ, ಸರಕಾರದ ಎರಡು ಇಲಾಖೆಗಳ ಕ್ರಮ/ಹೇಳಿಕೆಯಲ್ಲಿನ ಈ ವೈರುಧ್ಯ ದಾರಿತಪ್ಪಿಸುವಂತದ್ದು,  ವಿದ್ಯುತ್‍ ಬಳಕೆದಾರರ ಮತ್ತು ಒಟ್ಟಾರೆಯಾಗಿ ದೇಶದ ಹಿತಾಸಕ್ತಿಗಳಿಗೆ ಮಾರಕವಾದ ಧೋರಣೆಗಳ ದುಷ್ಫಲ, ಒಂದೆರಡು ಖಾಸಗಿ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು  ಮಾಡಿದ ಪ್ರಯತ್ನಗಳು ಎಂಬುದನ್ನು ಈ ಹಿನ್ನೆಲೆಯಲ್ಲಿ ಈ ಎರಡು ಕಾರ್ಮಿಕ ಸಂಘಟನೆಗಳು ಸಾರ್ವಜನಿಕರ ಗಮನಕ್ಕೆ ತಂದಿವೆ. ಇಂತಹ ಕ್ರಮಗಳನ್ನು ಕೈಗೊಳ್ಳಲು ಪ್ರಭಾವ ಬೀರಿದ ಗುಂಪುಗಳು ಯಾವವು ಎಂದು ಬಹಿರಂಗ ಪಡಿಸಬೇಕು ಎಂದು ಕೇಂದ್ರ ಸರಕಾರವನ್ನು ಅವು ಆಗ್ರಹಿಸಿವೆ.

ಅಸಮರ್ಥತೆ ಮತ್ತು ಸಂದೇಹಗಳು

ಕೇಂದ್ರೀಯ ವಿದ್ಯುತ್‍ ಪ್ರಾಧಿಕಾರ (ಸಿಇಎ) ಮತ್ತು ಗ್ರಿಡ್‍ ಇಂಡಿಯ ಅಂದಾಜು ಮಾಡುವ ವಿದ್ಯುತ್‍ ಬೇಡಿಕೆಯ ಆಧಾರದಲ್ಲಿ ಕಲ್ಲಿದ್ದಲು ಉತ್ಪಾದನೆ ಮತ್ತು ಸಾಗಾಣಿಕೆಯನ್ನು ಯೋಜಿಸಲಾಗುತ್ತದೆ. ಅದಕ್ಕೆ ಅನುಗುಣವಾಗಿ ಕೋಲ್‍ ಇಂಡಿಯ, ರೈಲ್ವೆ ಮತ್ತು  ಇತರ ಸಂಸ್ಥೆಗಳು ತಮ್ಮ ಗುರಿಗಳನ್ನು ನಿರ್ಧರಿಸುತ್ತವೆ. 2022-23ರಲ್ಲಿ ಕಲ್ಲಿದ್ದಲು ಉತ್ಪಾದನೆ ಮತ್ತು ಸಾಗಾಣಿಕೆಯಲ್ಲಿ ಗಮನಾರ್ಹ ಹೆಚ್ಚಳವಾಗಿತ್ತು, ದಾಸ್ತಾನಿನಲ್ಲೂ ಬಹಳಷ್ಟು ಹೆಚ್ಚಳವಾಗಿತ್ತು.  ಆದರೂ ಕಲ್ಲಿದ್ದಲು ಪೂರೈಕೆಯಲ್ಲಿ ಕೊರತೆಯಾಗಿದ್ದರೆ, ಅದಕ್ಕೆ ಕೇಂದ್ರ ಕಾರಣ ಸರಿಯಾದ ಗುರಿಗಳನ್ನು ನಿರ್ಧರಿಸುವಲ್ಲಿ, ಮತ್ತು ಸಾಕಷ್ಟು ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಅಗತ್ಯ ಪ್ರಮಾಣದಲ್ಲಿ ಕಲ್ಲಿದ್ದಲು ಸಾಗಾಣಿಕೆಯಾಗುವಂತೆ ಖಚಿತ ಪಡಿಸುವಲ್ಲಿ ಸರಕಾರದ ಅಸಮರ್ಥತೆಯೇ ಕಾರಣ ಎನ್ನಬೇಕಾಗುತ್ತದೆ ಎಂದು ಈ ಕಾರ್ಮಿಕ ಒಕ್ಕೂಟಗಳು ಹೇಳುತ್ತವೆ.

ಅಲ್ಲದೆ, ವಿದ್ಯುತ್‍ ಉತ್ಪಾದನೆಗೆ ಮಾರ್ಚ್‍ 2024 ರವರೆಗೆ 7 ಎಂ.ಟಿ. ಕೊರತೆ ಇದೆ ಎಂದು ಹೇಳಿದ್ದರೂ 20 ಎಂ.ಟಿ. ಆಮದಿಗೆ ನಿರ್ದೇಶನ ನೀಡಿದ್ದೇಕೆ ಎಂಬ ಪ್ರಶ್ನೆಯೂ ಎದ್ದಿತು. 2020ರ ವರೆಗೆ ಆಸ್ಟ್ರೇಲಿಯಾದಿಂದ ಉಗಿ ಉತ್ಪಾದಿಸುವ ಕಲ್ಲಿದ್ದಲು ಆಮದಿನ ಪ್ರಮಾಣ ಬಹಳ ಅಲ್ಪ ಪ್ರಮಾಣದಲ್ಲಿತ್ತು. ಆದರೆ ಹಣಕಾಸು ವರ್ಷ22ರಲ್ಲಿ ಒಮ್ಮೆಲೇ 13% ಏರಿಕೆಯಾಯಿತು. ಇದು ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡಿನಲ್ಲಿರುವ  ಅದಾನಿಯ ಕಾರ್‍ ಮೈಕಲ್ ಕಲ್ಲಿದ್ದಲು ಗಣಿಯಿಂದ ಕಲ್ಲಿದ್ದಲು ಉತ್ಪಾದನೆ ಆರಂಭವಾದ ಅವಧಿ. ಟಾಟಾ, ಅದಾನಿ ,ಎಸ್ಸಾರ್‍ ಮತ್ತಿತರ ಖಾಸಗಿ ಕಾರ್ಪೊರೇಟ್‍ಗಳ ಬೇಡಿಕೆಗೆ ಸ್ಪಂದಿಸಿದ ಕೇಂದ್ರೀಯ ವಿದ್ಯುತ್ ನಿಯಂತ್ರಣ ಆಯೋಗ (ಸಿ.ಇ.ಆರ್‍.ಸಿ.) ಆಸ್ಟ್ರೇಲಿಯ ಮತ್ತು ದಕ್ಷಿಣ ಆಪ್ರಿಕಾದ ಕಲ್ಲಿದ್ದಲಿಗೆ ಬಹಳ ಮೇಲ್ಮಟ್ಟದ ಬೆಲೆ ಸೂಚ್ಯಂಕವನ್ನು ಸೂಚಿಸಿತು.

ಇವೆಲ್ಲವುಗಳು ಒಟ್ಟಾಗಿ ಸರಕಾರದ ಉದ್ದೇಶ ಮತ್ತು ನಡೆಗಳ ಬಗ್ಗೆ ಹಲವು ಸಂದೇಹಗಳನ್ನು ಎಬ್ಬಿಸಿವೆ ಎಂದಿರುವ ಕಾರ್ಮಿಕ ಸಂಘಟನೆಗಳು ಒಟ್ಟಿನಲ್ಲಿ,  ಈ ಇಡೀ ಕಲ್ಲಿದ್ದಲು ಬಿಕ್ಕಟ್ಟು ಎಂಬುದು ಒಂದು ಕಲ್ಲಿದ್ದಲು ಹಗರಣವಲ್ಲದೆ ಬೇರೇನೂ ಅಲ್ಲ ಎಂದು ಹೇಳುತ್ತವೆ. ಏಕೆಂದರೆ ಇವು ಬಳಕೆದಾರರ ಮೇಲೆ ವಿದ್ಯುತ್‍ ದರ ಏರಿಕೆಯ ಹೊರೆ ಹಾಕುತ್ತವೆ, ಜತೆಗೆ ದೇಶದ ವಿದೇಶಿ ಕರೆನ್ಸಿ ಮೀಸಲು ಮತ್ತು ಚಾಲ್ತಿ ಖಾತೆ ಬಾಕಿಯ ಮೇಲೂ ನಕಾರಾತ್ಮಕ ಪ್ರಭಾವ ಬೀರುತ್ತವೆ.

ಆದ್ದರಿಂದ ಸರಕಾರ ಕೂಡಲೇ ಆಮದಾದ ಕಲ್ಲಿದ್ದಲು ಮಿಶ್ರ ಮಾಡುವ ಆದೇಶವನ್ನು ಹಿಂತೆಗೆದುಕೊಳ್ಳಬೇಕು ಮತ್ತು ಸಾಕಷ್ಟು ಪ್ರಮಾಣದ ಕಲ್ಲಿದ್ದಲು ಪೂರೈಕೆಗೆ ಅಗತ್ಯ ವ್ಯವಸ್ಥೆಗಳನ್ನು ಏರ್ಪಡಿಸಬೇಕು ಎಂದು ಆಗ್ರಹಿಸಿವೆ. ಸಾರ್ವಜನಿಕ ವಲಯದ ಉದ್ದಿಮೆಗಳು ತಮ್ಮ ಪೂರ್ಣ ಸಾಮರ್ಥ್ಯವನ್ನು ಬಳಸದಂತೆ ಅಡ್ಡಿಯುಂಟು ಮಾಢುವ ಮೋದಿ ಸರಕಾರ ಮತ್ತು ಅದರ ಬಂಟ ಕಾರ್ಪೊರೇಟ್‍ ಹಿತಗಳ ಅಪವಿತ್ರ ಮೈತ್ರಿಯನ್ನು ಬಯಲಿಗೆ ತರುವಲ್ಲಿ ಕಾರ್ಮಿಕರು ಮತ್ತು ಸಾರ್ವಜನಿಕರು ಕೈಜೋಡಿಸಬೇಕು ಎಂದು ಕರೆ ನೀಡಿವೆ.

 

 

Donate Janashakthi Media

Leave a Reply

Your email address will not be published. Required fields are marked *