ಪ್ರೊ. ಪ್ರಭಾತ್ ಪಟ್ನಾಯಕ್
ಕೇವಲ 60 ಶಾಖೆಗಳಿರುವ ಅದಾನಿ ಕ್ಯಾಪಿಟಲ್ ಎಂಬ ಒಂದು ‘ಬ್ಯಾಂಕೇತರ ಹಣಕಾಸು ಕಂಪನಿ’ (ಎನ್ಬಿಎಫ್ಸಿ) ಮತ್ತು 22,000 ಶಾಖೆಗಳನ್ನು ಹೊಂದಿರುವ, ದೇಶದ ಅತಿ ದೊಡ್ಡ ಬ್ಯಾಂಕಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಡುವೆ ಇತ್ತೀಚೆಗೆ ಏರ್ಪಟ್ಟ ಒಂದು ಒಪ್ಪಂದದ ಪ್ರಕಾರ, ಇವರಿಬ್ಬರೂ ಜತೆಗೂಡಿ ಸಾಲ ವಿತರಿಸುವ ಒಂದು ವ್ಯವಸ್ಥೆ ಜಾರಿಯಾಗಲಿದೆ – ಸಾಲದ 80% ಭಾಗವನ್ನು ಸ್ಟೇಟ್ ಬ್ಯಾಂಕ್ ಮತ್ತು 20% ಭಾಗವನ್ನು ಅದಾನಿ ಕ್ಯಾಪಿಟಲ್ ಕೊಡುತ್ತವೆ. ಯಾರಿಗೆ ಎಷ್ಟು ಸಾಲ ಕೊಡಬೇಕು ಎಂಬುದನ್ನು ಅದಾನಿ ಕ್ಯಾಪಿಟಲ್ ನಿರ್ಧರಿಸುತ್ತದೆ. ಅದನ್ನು ತೀರ್ಮಾನಿಸುವ ಯಾವ ಅಧಿಕಾರವನ್ನೂ ಹೊಂದಿಲ್ಲದ ಬ್ಯಾಂಕ್, ಆ ಸಾಲದಿಂದ ಉಂಟಾಗಬಹುದಾದ ರಿಸ್ಕಿನ ಬಹು ಭಾಗವನ್ನು ಹೊರಬೇಕಾಗುತ್ತದೆ. ಮೋದಿ ಸರ್ಕಾರವು ತನ್ನ ಬಂಟ ಬಂಡವಾಳಶಾಹಿಗೆ ಅನುಗ್ರಹಿಸುತ್ತಿರುವ ಅನುಕೂಲಗಳ ಭಾಗವಾಗಿರುವ ಈ ಎಸ್ಬಿಐ-ಅದಾನಿ ಒಪ್ಪಂದವು ಭೂ ಬಳಕೆಯ ವಿಧಾನವನ್ನು ಬದಲಾಯಿಸುವ ಒಂದು ನವೀನ ಮಾರ್ಗ. ಸರ್ಕಾರವು ಏನನ್ನು ಮೂರು ಕೃಷಿ ಕಾನೂನುಗಳ ಮೂಲಕ ಸಾಧಿಸಲು ಸಾಧ್ಯವಾಗಲಿಲ್ಲವೊ ಅದನ್ನೇ ಸಾಧಿಸಲು ಮತ್ತೊಮ್ಮೆ ಪ್ರಯತ್ನಿಸುತ್ತಿದೆ.
ವಸಾಹತುಶಾಹಿ ಕಾಲದಲ್ಲಿ ರೈತರು ಸಾಲವನ್ನು ಖಾಸಗಿ ಲೇವಾದೇವಿಗಾರರಿಂದ ಪಡೆಯುತ್ತಿದ್ದರು. ಈ ಲೇವಾದೇವಿಗಾರರು ವಾಣಿಜ್ಯ ಬ್ಯಾಂಕುಗಳಿಂದ ಸಾಲ ಪಡೆಯುತ್ತಿದ್ದರು ಮತ್ತು ಅದನ್ನು ದುಬಾರಿ ಬಡ್ಡಿ ದರದಲ್ಲಿ ರೈತರಿಗೆ ಸಾಲ ಕೊಡುತ್ತಿದ್ದರು. ಲೇವಾದೇವಿಗಾರರಿಂದ ಪಡೆದ ಸಾಲವನ್ನು ರೈತರು ಮರುಪಾವತಿಸದಿದ್ದರೆ ಅದರಿಂದ ಆಗಬಹುದಾದ ಹಾನಿಯನ್ನು(ರಿಸ್ಕ್) ಪೂರ್ಣವಾಗಿ ಲೇವಾದೇವಿಗಾರನೇ ಹೊರಬೇಕಿತ್ತು. ಈ ಬಗ್ಗೆ ಬ್ಯಾಂಕ್ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ, ಏಕೆಂದರೆ, ರೈತರ ಮತ್ತು ಬ್ಯಾಂಕ್ ನಡುವೆ ಯಾವ ಸಂಬಂಧವೂ ಇರಲಿಲ್ಲ ಎಂಬ ಸಂಗತಿಯನ್ನು ಪ್ರಾಂತೀಯ ಬ್ಯಾಂಕಿಂಗ್ ವಿಚಾರಣಾ ಸಮಿತಿಯ ವರದಿಗಳು ತಿಳಿಸುತ್ತವೆ.
ವಸಾಹತು ಕಾಲದ ಈ ಸಂಗತಿಯನ್ನು ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳು ಜತೆಗೂಡಿ ಸಾಲ ಕೊಡುವ ಒಂದು ಹೊಸ ವ್ಯವಸ್ಥೆಯನ್ನು ಜಾರಿಗೆ ತರುತ್ತಿರುವ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾಗಿ ಬಂತು. ಅದಾನಿ ಕ್ಯಾಪಿಟಲ್ ಎಂಬ ಒಂದು ‘ಬ್ಯಾಂಕೇತರ ಹಣಕಾಸು ಕಂಪನಿ’ (ಎನ್ಬಿಎಫ್ಸಿ) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಡುವೆ ಇತ್ತೀಚೆಗೆ ಏರ್ಪಟ್ಟ ಒಂದು ಒಪ್ಪಂದ ಪ್ರಕಾರ, ಸಾಲದಾತರು (ಬ್ಯಾಂಕ್ ಮತ್ತು ಎನ್ಬಿಎಫ್ಸಿ) ಜತೆಗೂಡಿ ಸಾಲ ವಿತರಿಸುವ ಒಂದು ವ್ಯವಸ್ಥೆ ಜಾರಿಯಾಗಲಿದೆ. ಈ ಏರ್ಪಾಟಿನ ಪ್ರಕಾರ, ಸಾಲದ ಶೇಕಡಾ 80 ಭಾಗವನ್ನು ಸ್ಟೇಟ್ ಬ್ಯಾಂಕ್ ಮತ್ತು ಶೇಕಡಾ 20 ಭಾಗವನ್ನು ಅದಾನಿ ಕ್ಯಾಪಿಟಲ್ ಕೊಡುತ್ತವೆ. ಇಲ್ಲಿರುವ ಒಂದು ಮುಖ್ಯವಾದ ಅಂಶವೆಂದರೆ, ಯಾರಿಗೆ ಎಷ್ಟು ಸಾಲ ಕೊಡಬೇಕು ಎಂಬುದನ್ನು ಈ ಎನ್ಬಿಎಫ್ಸಿಯೇ ನಿರ್ಧರಿಸುತ್ತದೆ. ಈ ಸಂಬಂಧವಾಗಿ ಮಾರ್ಗಸೂಚಿಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಜಾರಿ ಮಾಡಲಿದೆ ಎಂಬುದನ್ನು ಊಹಿಸಿಕೊಳ್ಳಬೇಕಿದೆ. ಈ ಏರ್ಪಾಟಿನಲ್ಲಿರುವ ಇನ್ನೊಂದು ಪ್ರಮುಖ ಅಂಶವೆಂದರೆ, ಸಾಲಗಾರನು ಸಾಲ ತೀರಿಸುವಲ್ಲಿ ಒಂದೊಮ್ಮೆ ವಿಫಲನಾದರೆ, ಅದರಿಂದಾಗುವ ನಷ್ಟವನ್ನು ಬ್ಯಾಂಕ್ ಮತ್ತು ಎನ್ಬಿಎಫ್ಸಿ ಎರಡೂ ಹೊರಬೇಕಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಯಾರಿಗೆ ಸಾಲ ಕೊಡಬೇಕು ಎಂಬುದನ್ನು ತೀರ್ಮಾನಿಸುವ ಯಾವ ಅಧಿಕಾರವನ್ನೂ ಹೊಂದಿಲ್ಲದ ಬ್ಯಾಂಕ್, ಸಾಲದಿಂದ ಉಂಟಾಗಬಹುದಾದ ರಿಸ್ಕನ್ನು ಹೊರಬೇಕಾಗುತ್ತದೆ. ಯಾರಿಗೆ ಮತ್ತು ಎಷ್ಟು ಸಾಲ ಕೊಡಬೇಕು ಎಂಬುದನ್ನು ಬ್ಯಾಂಕ್ ನಿರ್ಧರಿಸಿದ್ದರೆ, ಆಗ, ಅದರ ರಿಸ್ಕನ್ನು ಬ್ಯಾಂಕ್ ಹೊರಬೇಕಾಗುತ್ತಿತ್ತು ಮತ್ತು ಆ ವ್ಯವಹಾರವು ಸಾಲಗಾರ ಮತ್ತು ಬ್ಯಾಂಕ್ ನಡುವಿನ ನೇರಾ ನೇರಾ ದ್ವಿಪಕ್ಷೀಯ ಸಂಬಂಧವಾಗುತ್ತಿತ್ತು ಹಾಗೂ ಆ ಸಾಲವನ್ನು ಮತ್ತೊಬ್ಬರ ಜತೆಗೂಡಿ ನೀಡುವ ಅಗತ್ಯವೇ ಇರುತ್ತಿರಲಿಲ್ಲ.
ಹಾಗೆ ನೋಡಿದರೆ, ವಸಾಹತುಶಾಹಿ ಕಾಲದ ಲೇವಾದೇವಿದಾರರಿಗೆ ಹೋಲಿಸಿದರೆ, ಇಂದಿನ ಎನ್ಬಿಎಫ್ಸಿಗಳು ಉತ್ತಮ ಸ್ಥಿತಿಯಲ್ಲಿವೆ ಎಂದೇ ಹೇಳಬಹುದು. ಯಾರಿಗೆ ಎಷ್ಟು ಸಾಲ ನೀಡಬೇಕು ಮತ್ತು ಯಾವ ಷರತ್ತುಗಳ ಮೇಲೆ ಎಂಬುದನ್ನು ಇಂದಿನ ಎನ್ಬಿಎಫ್ಸಿಗಳು ನಿರ್ಧರಿಸುತ್ತವೆ. ಆದರೆ, ವಸಾಹತುಶಾಹಿ ಕಾಲದ ಲೇವಾದೇವಿಗಾರರು ಎದುರಿಸುತ್ತಿದ್ದ ರಿಸ್ಕ್, ಇಂದಿನ ಎನ್ಬಿಎಫ್ಸಿಗಳಿಗಿಲ್ಲ. ಅದೇ ಸಮಯದಲ್ಲಿ, ಇಂದಿನ ಬ್ಯಾಂಕ್ಗಳ ಪರಿಸ್ಥಿತಿ, ವಸಾಹತುಶಾಹಿ ಕಾಲದಲ್ಲಿ ಬ್ಯಾಂಕ್ಗಳು ಎದುರಿಸುತ್ತಿದ್ದುದಕ್ಕಿಂತಲೂ ಕೆಟ್ಟದಾಗಿದೆ. ಯಾರಿಗೆ ಸಾಲ ಕೊಡಬೇಕು ಎಂಬುದನ್ನು ತೀರ್ಮಾನಿಸುವ ಅಧಿಕಾರವನ್ನೂ ಹೊಂದಿಲ್ಲದ ಅಥವಾ ಸಾಲಗಾರನ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿಲ್ಲದ ಬ್ಯಾಂಕ್, ಆ ಸಾಲದಿಂದ ಉಂಟಾಗಬಹುದಾದ ರಿಸ್ಕ್ ಅನ್ನು ಹೊರಬೇಕಾಗುತ್ತದೆ. ಮೋದಿ ಸರ್ಕಾರವು ತನ್ನ ಬಂಟ ಬಂಡವಾಳಶಾಹಿಗಳಿಗೆ (ಅಂದರೆ, ಎನ್ಬಿಎಫ್ಸಿಗಳ ಮಾಲೀಕರಿಗೆ) ಅನುಕೂಲಗಳ ಮಳೆಗರೆದಿದೆ. ಅವರ ವ್ಯವಹಾರ-ವಹಿವಾಟುಗಳು ವೇಗವಾಗಿ ವಿಸ್ತರಿಸಬಹುದು ಮತ್ತು ಲಾಭಗಳು ಯಥೇಚ್ಛವಾಗಬಹುದು. ಅದಕ್ಕಾಗಿ ಅವರು ರಿಸ್ಕ್ ತೆಗೆದುಕೊಳ್ಳಬೇಕಾಗಿಲ್ಲ. ಅದನ್ನೆಲ್ಲಾ ನೆಲಕ್ಕೆ ಬೀಳುತ್ತಿರುವ ರಾಷ್ಟ್ರೀಕೃತ ಬ್ಯಾಂಕುಗಳ ತಲೆಗೆ ಕಟ್ಟುವ ವ್ಯವಸ್ಥೆಯನ್ನು ಎನ್ಬಿಎಫ್ಸಿಗಳಿಗೆ ಸರಕಾರ ಅನುಗ್ರಹಿಸಿದೆ. ಈ ಬಗ್ಗೆ ಅದಕ್ಕೆ ಸ್ವಲ್ಪವೂ ಅಳುಕಿಲ್ಲ. ರಾಷ್ಟ್ರೀಕೃತ ಬ್ಯಾಂಕ್ಗಳ ರಿಸ್ಕನ್ನು ಠೇವಣಿದಾರರು ಭರಿಸುವಂತೆ ಮಾಡುವ ಯೋಜನೆಗಳು ಈಗಾಗಲೇ ತಯಾರಾಗುತ್ತಿವೆ. ರಾಷ್ಟ್ರೀಕೃತ ಬ್ಯಾಂಕ್ಗಳು ರಿಸ್ಕ್ ಗೆ ಒಳಗಾದ ಸಂದರ್ಭದಲ್ಲಿ ಅಂತಹ ನಷ್ಟವನ್ನು ಸರಿದೂಗಿಸಲು ಸರ್ಕಾರವು ಬಜೆಟ್ನಿಂದ ಹಣ ಒದಗಿಸಬೇಕಾಗಿಲ್ಲ. ಅಷ್ಟಕ್ಕೂ ನಷ್ಟಗಳು ಹೆಚ್ಚಾದರೆ, ಈ ಬ್ಯಾಂಕ್ಗಳನ್ನು ಕುರುಡು ಕಾಸಿಗೆ ಮಾರಬಹುದು. ಹೇಗಾದರೂ ಸರಿ ಅವುಗಳನ್ನು ಖಾಸಗಿಯವರಿಗೆ ಒಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಸರ್ಕಾರಕ್ಕೆ ಅವುಗಳನ್ನು ಮಾರಲು ನಷ್ಟದ ಒಂದು ನೆಪವೂ ಒದಗುತ್ತದೆ.
ಈ ಎಲ್ಲವನ್ನೂ ಮಾಡುತ್ತಿರುವಾಗ, ಒಂದು ಪ್ರಶ್ನೆಗೆ ಉತ್ತರವಿಲ್ಲ: ಈ ಏರ್ಪಾಟನ್ನು ಮಾಡುತ್ತಿರುವುದಾದರೂ ಏಕೆ? ಈ ಏರ್ಪಾಟಿನಿಂದ ರೈತರಿಗೆ ಅಥವಾ ಮಧ್ಯಮ, ಸಣ್ಣ ಮತ್ತು ಕಿರು ಕೈಗಾರಿಕಾ ವಲಯಕ್ಕೆ, ಅಥವಾ ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ಅಥವಾ ಎನ್ಬಿಎಫ್ಸಿಗಳ ಮಾಲೀಕರನ್ನು ಹೊರತುಪಡಿಸಿ ಬೇರೆ ಯಾರಿಗಾದರೂ ಒಂದು ಸಣ್ಣ ಪ್ರಯೋಜನವಾದರೂ ಇದೆಯೇ? “ಇಲ್ಲ” ಎಂಬದೇ ಘಂಟಾಘೋಷ ಉತ್ತರ. ಈ “ಇಲ್ಲ” ಉತ್ತರವನ್ನು ಒಂದು ಸಮಂಜಸ ವಾದದೊಂದಿಗೆ ಅಲ್ಲಗಳೆಯುವ ಒಬ್ಬ ಸರ್ಕಾರಿ ವಕ್ತಾರನನ್ನಾದರೂ ಕಾಣಲಾಗದು.
ಅದಾನಿ ಕ್ಯಾಪಿಟಲ್ ಎಂಬ ಎನ್ಬಿಎಫ್ಸಿ ಯೊಂದಿಗೆ ಜತೆಗೂಡಿ ಕೊಡುವ ಸಾಲಗಳ ಸಂಬಂಧವಾಗಿ ಮಾಡಿಕೊಂಡಿರುವ ಒಪ್ಪಂದವನ್ನು ಸಮರ್ಥಿಸಿಕೊಳ್ಳಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ಹೇಳಿಕೆ ಏನೆಂದರೆ, ಈ ಏರ್ಪಾಟು “ಗ್ರಾಹಕ ನೆಲೆಯನ್ನು ವಿಸ್ತರಿಸಲು ಮತ್ತು ದೇಶದ ಸೌಲಭ್ಯ-ರಹಿತ ಕೃಷಿ ವಿಭಾಗದೊಂದಿಗೆ ಸಂಪರ್ಕ ಸಾಧಿಸಲು ಮತ್ತು ಭಾರತದ ಕೃಷಿ ಬೆಳವಣಿಗೆಗೆ ಇನ್ನೂ ಹೆಚ್ಚಿನ ಕೊಡುಗೆ ನೀಡಲು” ಸಹಾಯ ಮಾಡುತ್ತದೆ. ಈ ವಾದವನ್ನು ಕೇಳಿ ನಗಬಹುದು, ಅಷ್ಟೇ. ಎಸ್ಬಿಐ ಒಂದು ದೈತ್ಯ ಬ್ಯಾಂಕ್. ಭಾರತದಾದ್ಯಂತ 22,000 ಶಾಖೆಗಳನ್ನು ಹೊಂದಿದೆ. ಒಂದು ಕೋಟಿ ನಲವತ್ತು ಲಕ್ಷ ರೈತ ಸಾಲ ಖಾತೆಗಳನ್ನು ಹೊಂದಿದೆ. ರೈತರಿಗೆ ಎರಡು ಲಕ್ಷ ಕೋಟಿ ರೂ.ಗಳ ಸಾಲ ನೀಡಿದೆ. ದೇಶದ ಈ ಅತಿ ದೊಡ್ಡ ಬ್ಯಾಂಕ್ನ್ನು ಆನೆಗೆ ಹೋಲಿಸಿದರೆ, ದೇಶಾದ್ಯಂತ 60 ಶಾಖೆಗಳನ್ನು ಹೊಂದಿದ ಮತ್ತು 28,000 ಗ್ರಾಹಕರಿಗೆ 1,300 ಕೋಟಿ ರೂ ಸಾಲ ನೀಡಿರುವ ಅದಾನಿ ಕ್ಯಾಪಿಟಲ್ ಒಂದು ಆಡಿನ ಗಾತ್ರದ್ದೂ ಅಲ್ಲ. ಹಾಗಾಗಿ, ಅದಾನಿ ಕ್ಯಾಪಿಟಲ್ “ಎಸ್ಬಿಐನ ಗ್ರಾಹಕರ ನೆಲೆಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ” ಎಂದು ಹೇಳಿರುವುದು ಎಷ್ಟು ತಮಾಷೆಯಾಗಿ ಕಾಣುತ್ತದೆ ಎಂದರೆ, ನಮ್ಮ ಪ್ರತಿಷ್ಠಿತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಐಎಸ್ಆರ್ಒ ತನ್ನ ರಾಕೆಟ್ ಉಡಾವಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಪಟಾಕಿ ತಯಾರಿಸುವ ಶಿವಕಾಶಿಯ ಯಾವುದಾದರೂ ಒಂದು ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದಂತಾಗುತ್ತದೆ!
ವಾಸ್ತವವಾಗಿ, ಈ ಒಪ್ಪಂದವನ್ನು ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಎಂದು ಕರೆಯಲೂ ಸಹ, ವ್ಯಾಖ್ಯಾನವನ್ನು ಹಿಗ್ಗಾ ಮುಗ್ಗಾ ಎಳೆದಾಡಬೇಕಾಗುತ್ತದೆ. ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಲ್ಲಿ, ಖಾಸಗಿ ವಲಯವು ಲಾಭವನ್ನು ಜೇಬಿಗಿಳಿಸುತ್ತದೆ ಮತ್ತು ನಷ್ಟವನ್ನು ಸಾರ್ವಜನಿಕ ವಲಯದ ತಲೆಗೆ ಕಟ್ಟುತ್ತದೆ. ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಲ್ಲಿ ಈ ಅಪಾಯವಿದ್ದರೂ ಸಹ, ಖಾಸಗಿ ವಲಯದ ಕೊಡುಗೆ ಅಲ್ಪ-ಸ್ವಲ್ಪವಾದರೂ ಇರುತ್ತದೆ. ಅದರ ಕೊಡುಗೆಯ ಬಗ್ಗೆ ಹೆಚ್ಚು ನಿರೀಕ್ಷಿಸದಿದ್ದರೂ ಅದು ಬರಿಗೈಯಲ್ಲಂತೂ ಬರುವುದಿಲ್ಲ. ಆದರೆ, ಈ ಪಾಲುದಾರಿಕೆಯ ವಿಷಯ ಹಾಗಲ್ಲ. ಈ ಒಪ್ಪಂದದಲ್ಲಿ, ಅದಾನಿ ಕ್ಯಾಪಿಟಲ್ ಏನನ್ನೂ ತರುವುದಿಲ್ಲ. ಎಸ್ಬಿಐ ಸಾಲಕೊಡಲು ಹಣವನ್ನೂ ತರಬೇಕಾಗುತ್ತದೆ ಮತ್ತು ಸಾಲದಾತನ ರಿಸ್ಕ್ ಅನ್ನೂ ಪೂರ್ಣವಾಗಿ ಹೊರಬೇಕಾಗುತ್ತದೆ. ಚಾಟಿ ಇಲ್ಲದೆ ಬುಗುರಿ ಆಡಿಸುವ ಅದಾನಿ ಕ್ಯಾಪಿಟಲ್, ರಿಸ್ಕನ್ನು ಎಸ್ಬಿಐ ತಲೆಗೆ ಕಟ್ಟಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತದೆ. ಇದು ಉಂಡೂ ಹೋದ ಕೊಂಡೂ ಹೋದ ಪ್ರಕರಣವಾಗುತ್ತದೆ.
ಸ್ವಜನ ಪಕ್ಷಪಾತದ ಒಂದು ಲಜ್ಜೆಗೆಟ್ಟ ಉದ್ದೇಶಕ್ಕಾಗಿ ಸಾರ್ವಜನಿಕ ವಲಯದ ಒಂದು ದೊಡ್ಡ ಬ್ಯಾಂಕ್ ಅನ್ನು ಅದು ಸರ್ಕಾರದ ಜಾಗೀರ್ನ ಒಂದು ಭಾಗವೆಂಬಂತೆ ಬಳಸಲಾಗುತ್ತಿದೆ. ಈ ಪಕ್ಷಪಾತಕ್ಕೆ ತಲೆಬಾಗಿದ ಎಸ್ಬಿಐನ ವರ್ತನೆಯೂ ಅವಮಾನಕರವಾಗಿದೆ. ದೇಶದ ಬ್ಯಾಂಕಿಂಗ್ ವಲಯದ ಮೇಲೆ ಮೇಲುಸ್ತುವಾರಿ ಪಾತ್ರವನ್ನು ನಿರ್ವಹಿಸುವ ಭಾರತೀಯ ರಿಸರ್ವ್ ಬ್ಯಾಂಕ್ ಇಂತಹ ಒಂದು ಒಪ್ಪಂದಕ್ಕೆ ಸಮ್ಮತಿಸುವುದೂ ಸಹ ಸಂಪೂರ್ಣವಾಗಿ ಅವಮಾನಕರವೇ. ಆದರೆ, ಅಂಬಾನಿಯವರ ಕಂಪನಿಗೆ ಸಂಪೂರ್ಣವಾಗಿ ಅನುಕೂಲ ಮಾಡಿಕೊಡುವಂಥಹ ಒಂದು ಒಪ್ಪಂದಕ್ಕೆ ಎಸ್ಬಿಐಅನ್ನು ಕಟ್ಟಿಹಾಕಿದ ಅದರ ಅಧ್ಯಕ್ಷರೊಬ್ಬರು ತಾವು ಸೇವೆಯಿಂದ ನಿವೃತ್ತಿ ಹೊಂದಿದ ನಂತರ ಅಂಬಾನಿಗಳೊಂದಿಗೆ ಕೆಲಸಕ್ಕೆ ಸೇರಿಕೊಳ್ಳವಂತಹ ವ್ಯಕ್ತಿಗಳನ್ನು ತನ್ನ ಆಡಳಿತ ಮಂಡಳಿಯಲ್ಲಿ ಹೊಂದಿರುವ ಎಸ್ಬಿಐನಿಂದ ಏನಾದರೂ ಬೇರೆಯದನ್ನು ನಿರೀಕ್ಷಿಸಬಹುದೇ?
ಜತೆಗೂಡಿ ಕೊಡುವ ಸಾಲ ಏರ್ಪಾಟು, ಕಾರ್ಪೊರೇಟ್ ದೈತ್ಯರ ಒಡೆತನದ ಎನ್ಬಿಎಫ್ಸಿಗಳಿಗೆ ಅನುಕೂಲ ಮಾಡಿಕೊಡುವುದಕ್ಕಿಂತ ಮಿಗಿಲಾದ ಒಂದು ದೂರದ ಆಲೋಚನೆಯಿಂದ ಕೂಡಿದೆ. ಈಗ ರದ್ದುಗೊಳಿಸಲಾದ ಕೃಷಿ ಕಾನೂನುಗಳ ಉದ್ದೇಶಗಳಲ್ಲಿ ಅತಿ ಮುಖ್ಯವಾದದ್ದೆಂದರೆ, ಆಹಾರ ಧಾನ್ಯಗಳ ಉತ್ಪಾದನೆಯಿಂದ ದೂರ ಸರಿದು ದೇಶದಲ್ಲಿ ಭೂ ಬಳಕೆಯ ಮಾದರಿಯನ್ನು ಬದಲಾಯಿಸುವುದು (ಅಂದರೆ, ಧಾನ್ಯಗಳನ್ನು ಬೆಳೆಯುವ ಭೂಮಿಯಲ್ಲಿ ಹಣ್ಣು ಹಂಪಲುಗಳನ್ನು ಬೆಳೆವುದು). ಮೆಟ್ರೋಪಾಲಿಟನ್ ದೇಶಗಳು ಬಹಳ ದಿನಗಳಿಂದಲೂ ಈ ಬಗ್ಗೆ ಒತ್ತಾಯಿಸುತ್ತಲೇ ಇದ್ದವು. ಕಾರ್ಪೊರೇಟ್-ಹಣಕಾಸು ಕುಳಗಳ ಮತ್ತು ಸಾಮ್ರಾಜ್ಯಶಾಹಿ-ಪರ ಅರ್ಥಶಾಸ್ತ್ರಜ್ಞರು ಈ ಉದ್ದೇಶವನ್ನು ಹಾಡಿ ಹೊಗಳಿದರು. ಮೆಟ್ರೋಪಾಲಿಟನ್ ದೇಶಗಳ ಈ ಬೇಡಿಕೆಗೆ ಕಾರಣವೆಂದರೆ, ಆಹಾರ ಧಾನ್ಯಗಳನ್ನು ಬೆಳೆಯುತ್ತಿರುವ ಭೂಮಿಯನ್ನು ಈ ದೇಶಗಳು ಬಯಸುವ ಆದರೆ ಅವರು ಉತ್ಪಾದಿಸಲು ಸಾಧ್ಯವಾಗದ ಬೆಳೆಗಳನ್ನು ಉತ್ಪಾದಿಸಲು ಬಳಕೆ ಮಾಡಿಕೊಳ್ಳಬೇಕು ಎಂಬುದು. ಏಕೆಂದರೆ, ಈ ದೇಶಗಳು ಆಹಾರ ಧಾನ್ಯಗಳ ಹೆಚ್ಚುವರಿಯನ್ನು ಹೊಂದಿವೆ. ಈ ಹೆಚ್ಚುವರಿಯನ್ನು ಮೂರನೇ ಜಗತ್ತಿನ ದೇಶಗಳಿಗೆ ಮಾರಾಟ ಮಾಡುವ ಉದ್ದೇಶ ಹೊಂದಿವೆ ಮತ್ತು ಅದಕ್ಕೆ ಬದಲಾಗಿ ತಾವು ಬೆಳೆಯಲಾಗದ ಹಣ್ಣು ಹಂಪಲುಗಳನ್ನು ಕೊಳ್ಳಲು ಬಯಸುತ್ತವೆ. ಎಲ್ಲಿಯವರೆಗೆ ಸರ್ಕಾರವು ಮೊದಲೇ ಘೋಷಿಸಿದ ಬೆಲೆಗಳಲ್ಲಿ ಧಾನ್ಯಗಳನ್ನು ರೈತರಿಂದ ಖರೀದಿಸಿ ಅವುಗಳನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ವಿತರಿಸುತ್ತದೆಯೊ ಅಲ್ಲಿಯವರೆಗೆ ರೈತರು ಧಾನ್ಯಗಳನ್ನು ಬೆಳೆಯುವುದು ನಿಲ್ಲದು. ಹಾಗಾಗಿ, ದೇಶೀಯ ಕಾರ್ಪೊರೇಟ್-ಹಣಕಾಸು ಕುಳಗಳಿಗೆ ಕೃಷಿ ವಲಯದಲ್ಲಿ ಅತಿಕ್ರಮಣಗಳ ಮೂಲಕ ಲಾಭ ದೋಚುವ ಅವಕಾಶಗಳು ಸಂಕುಚಿತವಾಗಿರುತ್ತವೆ.
ಇಲ್ಲಿ, ಸಾಮ್ರಾಜ್ಯಶಾಹಿಯ ಮತ್ತು ದೇಶೀಯ ಕಾರ್ಪೊರೇಟ್-ಕುಳಗಳ ಹಿತಾಸಕ್ತಿಗಳು ಸಂಧಿಸುತ್ತವೆ. ಇದರಲ್ಲಿ ಆಶ್ಚರ್ಯವೇನಿಲ್ಲ. ಆದರೆ, ಅವರ ಈ ಉದ್ದೇಶಗಳನ್ನು ಆರ್ಥಿಕ ಪರಿಭಾಷೆಯಲ್ಲಿ ಹಾಡಿ ಹೊಗಳಿ ಅವುಗಳನ್ನು ಜನರು ನಂಬುವಂತೆ ಮಾತನಾಡುವ ಅರ್ಥಶಾಸ್ತ್ರಜ್ಞರಿಗೇನೂ ಕೊರತೆ ಇಲ್ಲ. ಕನಿಷ್ಠ ಬೆಂಬಲ ಬೆಲೆಯಲ್ಲಿ ಸರ್ಕಾರ ಖರೀದಿ ಮಾಡುವ ವ್ಯವಸ್ಥೆಯನ್ನು ಕೊನೆಗೊಳಿಸುವುದನ್ನು ಒಪ್ಪಿಕೊಳ್ಳುವಂತೆ ಮತ್ತು ಆಹಾರ ಧಾನ್ಯಗಳನ್ನು ಉತ್ಪಾದಿಸುವುದನ್ನು ನಿಲ್ಲಿಸಿ ಅದರಿಂದ ದೂರ ಸರಿಯುವಂತೆ ರೈತರಿಗೆ ಅವರು “ಸಲಹೆ” ನೀಡುತ್ತಾರೆ.
ಈಗಿರುವ ಕೃಷಿ ವ್ಯವಸ್ಥೆಯು ದೇಶದ ಆಹಾರ ಭದ್ರತೆಯನ್ನು ಖಚಿತಪಡಿಸಿದೆ. ಆದಾಗ್ಯೂ, ಈ ವ್ಯವಸ್ಥೆಯನ್ನು ಬದಲಾಯಿಸುವ ಉದ್ದೇಶದಿಂದ ಮೋದಿ ಸರ್ಕಾರವು ಮೂರು ಕೃಷಿ ಕಾನೂನುಗಳನ್ನು ಜಾರಿಗೊಳಿಸುವ ನಾಚಿಕೆಗೇಡಿನ ಪ್ರಯತ್ನ ಮಾಡಿತು. ರೈತರ ಅಚಲ ಮತ್ತು ಪ್ರಶಂಸನೀಯ ಪ್ರತಿರೋಧದ ಹಿನ್ನೆಲೆಯಲ್ಲಿ ಆ ಕಾನೂನುಗಳನ್ನು ರದ್ದುಗೊಳಿಸಬೇಕಾಗಿ ಬಂತು. ಇದು ಅಂತಾರಾಷ್ಟ್ರೀಯ ಕೃಷಿ ಉದ್ದಿಮೆ ಮತ್ತು ದೇಶೀಯ ಕಾರ್ಪೊರೇಟ್ ಬೆಂಬಲಿಗರಿಗೆ ನಿರಾಸೆ ಮೂಡಿದೆ. ಹಾಗಾಗಿ, ಸರ್ಕಾರವು ಕಸಿವಿಸಿಗೊಂಡಿದೆ. ಬೆಳೆ ಮಾದರಿಯನ್ನು ಬದಲಾಯಿಸುವುದು ಮತ್ತು ಆ ಮೂಲಕ ಭೂ-ಬಳಕೆಯನ್ನು ಬದಲಿಸುವುದು ಸರ್ಕಾರದ ಬಯಕೆಯಾಗಿತ್ತು. ಯಾವ ಬಗೆಯಲ್ಲಾದರೂ ಸರಿ ಅದನ್ನು ಸಾಧಿಸಲೇಬೇಕು ಎಂಬುದು ಸರ್ಕಾರದ ಹಠ. ಸರ್ಕಾರದ ಸಾಂಸ್ಥಿಕ ಸಾಲವನ್ನು ಕಾರ್ಪೊರೇಟ್ ದೈತ್ಯರ ಒಡೆತನದ ಎನ್ಬಿಎಫ್ಸಿಗಳ ಮೂಲಕ ಹರಿಸುವುದು ಅಂತಹ ಒಂದು ಬಗೆ ಆಗಿದೆ.
ಸಾಂಸ್ಥಿಕ ಸಾಲವನ್ನು ಎನ್ಬಿಎಫ್ಸಿ ಮತ್ತು ಬ್ಯಾಂಕ್ಗಳು ಜತೆಗೂಡಿ ಕೊಡುವ ಸಾಲಗಳ ಮೂಲಕ ಹರಿಸುವ ಈ ಪ್ರಯತ್ನದಲ್ಲಿಯೂ ಸಹ, ವಸಾಹತುಶಾಹಿ-ಶೈಲಿ ಆಡಳಿತದ ಅನುಕರಣೆಯನ್ನು ಕಾಣಬಹುದು. ವಸಾಹತುಶಾಹಿ ಆಡಳಿತದ ಕಾಲದಲ್ಲಿ, ಭೂ ಕಂದಾಯವನ್ನು ನಿರ್ದಿಷ್ಟ ದಿನಾಂಕ-ಸಮಯದೊಳಗೆ ಪಾವತಿಸಬೇಕಾಗಿತ್ತು. ಕಟ್ಟುನಿಟ್ಟಿನ ಈ ನಿಯಮವನ್ನು ಪಾಲಿಸುವ ಸಲುವಾಗಿ ರೈತರು ವ್ಯಾಪಾರಿಗಳಿಂದ ಮತ್ತು ಈಸ್ಟ್ ಇಂಡಿಯಾ ಕಂಪನಿಯ ಏಜೆಂಟರಿಂದ ಸಾಲ ಪಡೆಯುತ್ತಿದ್ದರು. ಈ ಸಾಲದಾತರು, ಇಂತಿಂತಹ ಬೆಳೆಗಳನ್ನೇ ಬೆಳೆಯಬೇಕು ಮತ್ತು ಅವುಗಳನ್ನು ಇಂತಿಷ್ಟೇ ಬೆಲೆಗೆ ತಮಗೇ ಮಾರಾಟ ಮಾಡಬೇಕೆಂಬ ಷರತ್ತಿನ ಮೇಲೆ ಮುಂಗಡ ಕೊಡುತ್ತಿದ್ದರು. ಈ ವಿಧಾನದ ಮೂಲಕವೇ ಭಾರತದಲ್ಲಿ ಅಫೀಮು ಮತ್ತು ಇಂಡಿಗೊದಂತಹ ಬೆಳೆಗಳನ್ನು ಬೆಳೆಯಲೇ ಬೇಕೆಂಬ ಒತ್ತಾಯವನ್ನು ಮಾಡಲಾಗಿತ್ತು.
ಸಂಕ್ಷಿಪ್ತವಾಗಿ ಹೇಳುವುದಾದರೆ, ಭೂ ಬಳಕೆಯ ವಿಧಾನವನ್ನು ಬದಲಾಯಿಸುವ ಉದ್ದೇಶದಿಂದ ಸಾಂಸ್ಥಿಕ ಸಾಲವನ್ನು ಒಂದು ಪ್ರಬಲ ಸಾಧನವಾಗಿ ಬಳಸಲಾಗುತ್ತದೆ. ಎಸ್ಬಿಐ-ಅದಾನಿ ಒಪ್ಪಂದವು ಭೂ ಬಳಕೆಯ ವಿಧಾನವನ್ನು ಬದಲಾಯಿಸುವ ಒಂದು ನವೀನ ಮಾರ್ಗ. ಈ ಅಂಶವನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಇಂತಹ “ರಾಷ್ಟ್ರೀಕೃತ ಬ್ಯಾಂಕ್-ಎನ್ಬಿಎಫ್ಸಿ” ಒಪ್ಪಂದಗಳ ಮೂಲಕ ಸರ್ಕಾರವು ಏನನ್ನು ಮೂರು ಕೃಷಿ ಕಾನೂನುಗಳ ಮೂಲಕ ಸಾಧಿಸಲು ಸಾಧ್ಯವಾಗಲಿಲ್ಲವೊ ಅದನ್ನೇ ಸಾಧಿಸಲು ಮತ್ತೊಮ್ಮೆ ಪ್ರಯತ್ನಿಸುತ್ತಿದೆ. ಅಂತಹ ಒಪ್ಪಂದ-ಪ್ರಯತ್ನಗಳನ್ನು, ಕೃಷಿ ಕಾನೂನುಗಳನ್ನು ವಿರೋಧಿಸಿದ ತೀವ್ರತೆಯಿಂದ ಮತ್ತು ಏಕ-ಮನಸ್ಸಿನಿಂದ ವಿರೋಧಿಸಬೇಕು, ಏಕೆಂದರೆ, ಇದೂ ಸಹ ಅದೇ ಹೋರಾಟದ ಭಾಗವೇ.
ಅನು: ಕೆ.ಎಂ. ನಾಗರಾಜ್