ರಾಜ್ಯದ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಹಲವು ತಿಂಗಳ ಹಗ್ಗಜಗ್ಗಾಟದಿಂದ ನೆನ್ನೆ ಬಿ ಎಸ್ ಯಡಿಯೂರಪ್ಪ ರಾಜೀನಾಮೆಯಿಂದ ಕೊನೆಗೊಂಡಿದ್ದು, ಸದ್ಯ ಮುಂದಿನ ಮುಖ್ಯಮಂತ್ರಿ ಯಾರು ಆಗಲಿದ್ದಾರೆ ಎಂಬ ವಿಚಾರವೇ ಪ್ರಮುಖವಾಗಿದೆ.
ಕಾಂಗ್ರೆಸ್ ಆಡಳಿತದ ಸಂದರ್ಭದಲ್ಲೆಲ್ಲ ಬಿಜೆಪಿ ಪಾಳಯದಲ್ಲಿ ದೆಹಲಿ ಹಸ್ತಕ್ಷೇಪವನ್ನು ವಿರೋಧಿಸುತ್ತಿದ್ದ ಪಕ್ಷವೇ ಇಂದು ಹೈಕಮಾಂಡ್ ಅಂತಿಮ ನಿರ್ಧಾರ ಎಂಬದು ಜಗಜ್ಜಾಹೀರೂ ಪಡಿಸಿದ್ದಾರೆ. ಈಗಾಗಲೇ ಇಂದು ಬೆಳಿಗ್ಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ಸಂಸದೀಯ ಮಂಡಳಿ ಸಭೆ ನಡೆಸಿದ ಬಿಜೆಪಿ ಪಕ್ಷವು, ಯಾರನ್ನು ಆಯ್ಕೆ ಮಾಡಲಿದ್ದಾರೆ ಎಂಬುದು ಅಂತಿಮವಾಗಿದ್ದರೂ ಸಹ ನೆಪ ಮಾತ್ರಕ್ಕೆ ಇಂದು ಸಂಜೆಯೇ ರಾಜ್ಯ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಅಂತಿಮಗೊಳ್ಳಲಿದೆ ಎಂದು ತಿಳಿಸಲಾಗುತ್ತಿದೆ.
ಶಾಸಕಾಂಗ ಸಭೆಯ ನಂತರ ಮುಖ್ಯಮಂತ್ರಿ ಯಾರು ಆಗಲಿದ್ದಾರೆ ಎಂಬ ವಿಚಾರ ಬಹಿರಂಗಗೊಳ್ಳಿದೆ. ಕಳೆದ ಎರಡು ದಿನಗಳ ಕ್ಷಿಪ್ರ ಬೆಳವಣಿಗೆಯಲ್ಲಿ ಬಿಜೆಪಿ ಪಾಳಯದ ಹಲವು ಪ್ರಭಾವಿ ಶಾಸಕರ ಹೆಸರುಗಳು ಕೇಳಿ ಬಂದಿದ್ದರೂ ಸಹ ಸದಸ್ಯಕ್ಕೆ ಮೂವರು ಪ್ರಭಾವಿ ನಾಯಕರಾದ ಮುರುಗೇಶ್ ನಿರಾಣಿ, ಬಸವರಾಜ ಬೊಮ್ಮಾಯಿ, ಅರವಿಂದ ಬೆಲ್ಲದ ಹೆಸರುಗಳು ಕೇಳಿ ಬರುತ್ತಿವೆ.
ಈಗಾಗಲೇ, ದೆಹಲಿಯಿಂದ ರಾಜ್ಯಕ್ಕೆ ಆಗಮಿಸಿರುವ ಪಕ್ಷದ ದೆಹಲಿ ವೀಕ್ಷಕರಾದ ಧರ್ಮೆಂದ್ರ ಪ್ರಧಾನ್, ಕಿಶನ್ ರೆಡ್ಡಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಿದ್ದಾರೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನಿವಾಸದಲ್ಲಿಯೂ ಶಾಸಕರ ದಂಡು, ಪ್ರಮುಖರ ದಂಡೇ ಬೆಳಿಗ್ಗೆಯಿಂದಲೂ ಸಮಾಲೋಚನೆ ನಡೆಸಿದ್ದಾರೆ. ಈಗಾಗಲೇ ಕೇಂದ್ರದಿಂದ ಆಗಮಿಸಿರುವ ವೀಕ್ಷರು ಸಹ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ.
ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾದ ಬಿ ಎಸ್ ಯಡಿಯೂರಪ್ಪ ಅವರ ಕಳೆದ ಎರಡು ವರ್ಷದ ಈ ಅವಧಿಯಲ್ಲಿ ಅವರ ಕುಟುಂಬದ ಹಸ್ತಕ್ಷೇಪ ಪ್ರಮುಖವಾಗಿ ಚುನಾಯಿತ ಪ್ರತಿನಿಧಿಯಲ್ಲದಿದ್ದರೂ ಬಿ ವೈ ವಿಜಯೇಂದ್ರ ಆಡಳಿತದ ಎಲ್ಲಾ ಖಾತೆಗಳನ್ನು ಹಿಡಿತ ಸಾಧಿಸಲು ಮುಂದಾಗಿರುವುದು ಮತ್ತು ಭ್ರಷ್ಟಾಚಾರದ ಆರೋಪದ ಪ್ರಭಾವದಿಂದಾಗಿ ಬಿ ಎಸ್ ಯಡಿಯೂರಪ್ಪ ರಾಜೀನಾಮೆ ಸಲ್ಲಿಸಬೇಕಾಗಿ ಬಂದಿದು ಸ್ಪಷ್ಟವಾಗಿದೆ.
ಬಿ ಎಸ್ ಯಡಿಯೂರಪ್ಪ ರಾಜೀನಾಮೆ ನಂತರದಲ್ಲಿ ಬಿಜೆಪಿ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಂಸದ ಶಿವಕುಮಾರ ಉದಾಸಿ ಹೆಸರುಗಳು ಕೇಳಿ ಬಂದಿದ್ದವು.
ಸದಸ್ಯದ ಬೆಳವಣಿಗೆ ಪ್ರಕಾರ ಬಸವರಾಜ ಬೊಮ್ಮಾಯಿ, ಅರವಿಂದ ಬೆಲ್ಲದ, ಮುರುಗೇಶ ನಿರಾಣಿ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ.
ಪಕ್ಷ ರಾಜಕಾರಣದ ಏಳುಬೀಳಿನಂತೆ ಪ್ರಮುಖ ಜಾತಿ ಸಮುದಾಯದ ಹಿನ್ನೆಲೆ ಇರುವವರೇ ಮುಖ್ಯಮಂತ್ರಿ ಹುದ್ದೆ ಅಲಂಕರಿಸುವ ಸಾಧ್ಯತೆಗಳು ದಟ್ಟವಾಗಿದೆ. ಬಿಜೆಪಿ ನಂಬಿಕೊಂಡಿರುವ ಲಿಂಗಾಯಿತ ಸಮುದಾಯದವರೇ ಮುಖ್ಯಮಂತ್ರಿ ಗದ್ದುಗೆ ಹಿಡಿದರೆ ಆ ಸಮುದಾಯದಲ್ಲಿ ಒಂದಷ್ಟು ಪ್ರಭಾವ ಬೀರಬಹುದು ಮತ್ತು ಮುಂಬರುವ ಚುನಾವಣೆಯಲ್ಲಿ ಮತ ಸೆಳೆಯಲು ಸಹಾಯವಾಗಲಿದೆ ಎಂಬುದಿದೆ. ಅಲ್ಲದೆ ಬ್ರಾಹ್ಮಣ, ಹಿಂದುಳಿದ, ಕೆಳವರ್ಗ, ದಲಿತ ವಿಭಾಗ ಕೆಲ ಪ್ರಭಾವಿಗಳನ್ನು ಸ್ಥಾನಕ್ಕೆ ಕೂರಿಸುವುದು ಸದ್ಯಕ್ಕೆ ಆಗದು ಎನ್ನಾಗುತ್ತಿದ್ದರೂ ಸಹ ಆ ಸಮುದಾಯದವರನ್ನು ನಿರಾಶೆಗೊಳಿಸದಂತೆ ಉಪಮುಖ್ಯಮಂತ್ರಿ ಮತ್ತು ಪ್ರಮುಖ ಖಾತೆಗಳನ್ನು ನೀಡುವ ನಿರೀಕ್ಷೆಗಳು ಇವೆ.
ನೂತನ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಸದ್ಯದಲ್ಲೇ ಅಂತಿಮಗೊಳ್ಳಲಿದ್ದು ನಾಳೆಯೇ ಪ್ರಮಾಣ ವಚನ ಕಾರ್ಯಕ್ಕೆ ಸಜ್ಜಾಗುವಂತೆ ಸರಕಾರಿ ಅಧಿಕಾರಿಗಳ ವಲಯದಲ್ಲಿ ಸೂಚನೆಗಳು ಬಂದಿವೆ.