ಸಿಎಂ ಸಿದ್ದರಾಮಯ್ಯ ಅವರ ಸಮಾಜವಾದಕ್ಕೆ ಬಸವಣ್ಣ ಪ್ರೇರಣೆ | ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಮನುಷ್ಯನ ಎಲ್ಲ ಪ್ರಶ್ನೆಗಳಿಗೂ ವಚನದಲ್ಲಿ ಉತ್ತರ ಇದೆ. ಕಳಬೇಡ ಕೊಲಬೇಡ ಎನ್ನುವುದು ನಮ್ಮ ಧ್ಯೇಯವಾಗಬೇಕು. ಅದನ್ನು ಪಾಲಿಸಿದರೆ ಮನುಷ್ಯ ಸಂತೋಷ ಮತ್ತು ಸಮಾಧಾನದಿಂದ ಸರಳ ಜೀವನ ನಡೆಸಬಹುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ. ಬಸವಣ್ಣ 

ನವೆಂಬರ್-16‌ ರಂದು ಬೆಂಗಳೂರಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶರಣ ಸಾಹಿತ್ಯ ವಚನದ ರೂಪದಲ್ಲಿ ಬರದೇ ಇದ್ದರೆ ಕನ್ನಡ ಸಾಹಿತ್ಯ ಎಷ್ಟು ಬಡವಾಗುತ್ತಿತ್ತು ಎಂದು ಎಲ್ಲರೂ ಯೋಚನೆ ಮಾಡಬೇಕಿದೆ. ಮಾತಿಗೆ ಅರ್ಥ ಬರಬೇಕಾದರೆ ನಡೆ ನುಡಿ ಬಹಳ ಮುಖ್ಯ, ಜ್ಞಾನ, ವಿಜ್ಞಾನ ತಂತ್ರಜ್ಞಾನ ಎಲ್ಲವೂ ಇದೆ. ಅದರಲ್ಲಿ ನಮ್ಮ ತನದ ಭಾವ ಮೂಡಬೇಕಿರುವುದು ಮುಖ್ಯವಾಗಿದೆ. ವಚನಗಳು ಶುದ್ದ ಕನ್ನಡದಲ್ಲಿ ಶರಣರು ಕರ್ನಾಟಕಕ್ಕೆ ಕೊಟ್ಟಿರುವ ಶಾಸ್ವತ ಕೊಡುಗೆಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ಹೆಚ್.ಡಿ.ಕುಮಾರಸ್ವಾಮಿಯವರ ಕಾಮಾಲೆ ಕಣ್ಣಿಗೆ ಎಲ್ಲದರಲ್ಲಿಯೂ ಲಂಚವೇ ಕಾಣುತ್ತಿದೆ: ಸಿಎಂ ಸಿದ್ದರಾಮಯ್ಯ

ಇವನಾರವ ಇವನಾರವ ಎನ್ನುವ ಬದಲು ಇವನಮ್ಮವ ಎನ್ನುವ ವಚನದಲ್ಲಿ ಸಮಾನತೆ ಅಡಗಿದೆ. ದಯವೇ ಧರ್ಮದ ಮೂಲವಯ್ಯ ಎನ್ನುವ ವಚನದಲ್ಲಿ ಧರ್ಮದ ಸಾರ ಅಡಗಿದೆ. ಬಸವಣ್ಣನವರು ತಾವಷ್ಟೇ ವಚನ ಸಾಹಿತ್ಯ ನೀಡದೇ ಎಲ್ಲ ಸಮುದಾಯಗಳ ಅನುಭವಗಳನ್ನು ವಚನಗಳ ಮೂಲಕ ತರುವ ಪ್ರಯತ್ನ ಮಾಡಿದ್ದಾರೆ. ಬಸವಣ್ಣನವರು ದೇವರು ಮತ್ತು ಮನುಷ್ಯರ ನಡುವೆ ಮಧ್ಯವರ್ತಿಗಳನ್ನು ತೆಗೆದು ಹಾಕಿದ್ದಾರೆ. ಇದು ಬಹಳ ಚಿಂತನೆ ಮಾಡುವ ವಿಚಾರ. ನಾನು ಮತ್ತು ನನ್ನ ಆತ್ಮಸಾಕ್ಷಿಯ ನಡುವೆ ಯಾರೂ ಬೇಕಾಗಿಲ್ಲ ಅಂತ ಹೇಳಿದ್ದಾರೆ ಎಂದರು.

ಕ್ಷಣ ಹೊತ್ತು ಅಣಿ ಮುತ್ತು ಕೃತಿಕಾರ ಷಡಕ್ಷರಿಯವರು ಎಂದೂ ಕೂಡ ಅಸಮಾಧಾನಗೊಂಡಿಲ್ಲ. ಅವರು ಯಾವಾಗಲೂ ಸಮಾಧಾನದಿಂದ ಎಲ್ಲರೊಂದಿಗೆ ಬೆರೆಯುವ ಗುಣ ಅನುಕರಣೀಯ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮಾಜವಾದಕ್ಕೆ ಮೂಲ ಪ್ರೇರಣ ಬಸವಣ್ಣ ಮತ್ತು ವಚನ ಸಾಹಿತ್ಯ. ಅವರು ಬಸವಣ್ಣನವರ ತತ್ವಗಳನ್ನು ನಂಬಿದವನು ಎಂದು ಬಲವಾಗಿ ಹೇಳುತ್ತಾರೆ. ಹೀಗಾಗಿ ಅವರ ಕೆಲಸಗಳು ಮತ್ತು ನಡೆ ಎಲ್ಲರಿಗಿಂತ ಬಿನ್ನವಾಗಿ ಕಾಣುತ್ತದೆ. ಸಮಾಜದ ತುಳಿತಕ್ಕೊಳಗಾದವರ ಸಮಾನತೆಗಾಗಿ ನಿರಂತರವಾಗಿ ಕೆಲಸ ಮಾಡುವುದೇ ಒಬ್ಬ ನಿಜವಾದ ನಾಯಕನ ಜವಾಬ್ದಾರಿ.

ರಾಜಕಾರಣಿಯ ಕಣ್ಣು ಮುಂದಿನ ಚುನಾವಣೆಯ ಮೇಲೆ ಇದ್ದರೆ, ಒಬ್ಬ ಸ್ಟೇಟ್ಸ್ ಮನ್ ಕಣ್ಣು ಮುಂದಿನ ಜನಾಂಗದ‌ ಮೇಲೆ ಇದೆ. ನಾವು ವಿರೋಧ ಪಕ್ಷದಲ್ಲಿ ಇದ್ದರೂ ಕೂಡ ಸಿದ್ದರಾಮಯ್ಯ ಅವರ ಈ ವಿಚಾರಧಾರೆಯನ್ನು ನಾವು ಮೊದಲಿನಿಂದಲೂ ನೋಡಿಕೊಂಡು ಬಂದಿದ್ದೇವೆ. ಅವರ ನಡೆ ನುಡಿ ಎಲ್ಲರಿಗೂ ಅರ್ಥವಾಗಿದೆ. ಅವರಿಂದ ಶರಣ ಸಾಹಿತ್ಯ ಪ್ರಶಸ್ತಿ ನೀಡಿರುವುದು ಅತ್ಯಂತ ಸೂಕ್ತವಾಗಿದೆ. ಇದರಿಂದ ಅವರಲ್ಲಿ ಇನ್ನಷ್ಟು ಬಸವ ತತ್ವ ವಿಚಾರಗಳು ಗಟ್ಟಿಯಾಗುತ್ತವೆ ಎಂದು ಹೇಳಿದರು.

ವಿಡಿಯೋ ನೋಡಿ:ಮಾನವೀಯತೆ ಜಾಗಕ್ಕೆ ಮತೀಯತೆ ಬಂದಿದೆ – ಬರಗೂರು ರಾಮಚಂದ್ರಪ್ಪ Janashakthi Media

Donate Janashakthi Media

Leave a Reply

Your email address will not be published. Required fields are marked *