ರಾಜ್ಯದಲ್ಲಿ ಸುಳ್ಳುಸುದ್ದಿ ತಡೆಗೆ Fact check ಘಟಕ ರಚನೆ – ಸಿಎಂ ಸಿದ್ದರಾಮಯ್ಯ

ಬೆಂಗಳೂರು :  ಪ್ರಜಾಪ್ರಭುತ್ವಕ್ಕೆ ಬೆದರಿಕೆ ಹಾಗೂ ಸಮಾಜದ ಧ್ರವೀಕರಣಕ್ಕೆ ಸುಳ್ಳು ಸುದ್ದಿಗಳು ಕಾರಣವಾಗಿದ್ದು, ಇದರ ನಿಯಂತ್ರಣ ಅತ್ಯಗತ್ಯವಾಗಿದೆ. ಹೀಗಾಗಿ ರಾಜ್ಯದಲ್ಲಿ ಫ್ಯಾಕ್ಟ್‌ ಚೆಕ್‌ ಘಟಕ ಸ್ಥಾಪನೆ ಸೇರಿದಂತೆ ಅಗತ್ಯ ಇರುವ ಎಲ್ಲಾ ನಿಯಮ ಮತ್ತು ಕಾನೂನು ರೂಪಿಸುವ ಪ್ರಯತ್ನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮತಿ ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸೈಬರ್‌ ಸುರಕ್ಷತೆಗೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚಿಸಿ ಈ ನಿರ್ಧಾರ ಕೈಗಳ್ಳಲಾಗಿದೆ. ಸುಳ್ಳು ಸುದ್ದಿ ಮತ್ತು ಸುಳ್ಳು ಸುದ್ದಿ ಸೃಷ್ಟಿಸುವ ಸಿಂಡಿಕೇಟ್‌ಗಳ ಪತ್ತೆ, ಸುಳ್ಳು ಸುದ್ದಿ ಪ್ರಸಾರಕ್ಕೆ ತಡೆ,ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವ ಮೂರು ಹಂತಗಳ ಕ್ರಮಕ್ಕೆ ಅನುಮೋದನೆ ನೀಡಿದ್ದಾರೆ.

ಇದನ್ನೂ ಓದಿ:ಬಡ ಹಾಗೂ ಮಧ್ಯಮ ವರ್ಗದ ಜನರ ಸ್ವಂತ ಸೂರಿನ ಕನಸಿಗೆ ಆಸರೆಯಾಗಿ ನಿಲ್ಲುತ್ತೇವೆ:ಸಿಎಂ ಸಿದ್ದರಾಮಯ್ಯ

ಸಭೆಯಲ್ಲಿ ಫ್ಯಾಕ್ಟ್‌ಚೆಕ್‌ ಘಟಕದ ಮೇಲುಸ್ತುವಾರಿ ಸಮಿತಿ, ನೋಡಲ್‌ ಅಧಿಕಾರಿಗಳ ನೇಮಕ, ವಿಶ್ಲೇಷಣಾ ತಂಡ, ಸಾಮರ್ಥ್ಯ ವರ್ಧನೆ ತಂಡಗಳ ರಚನೆಯ ಜತೆಗೆ ವ್ಯವಸ್ಥಿತವಾಗಿ ತಂತ್ರಜ್ಞಾನ ಬಳಕೆ ಮಾಡುವ ಕುರಿತು ಸಭೆಯಲ್ಲಿ ವಿವರಿಸಲಾಗಿದೆ ಎಂದರು.

ರಾಜ್ಯದ ಪೊಲೀಸರೂ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಯಾಶೀಲರಾಗಿದ್ದಾರೆ:

ಈ ವೇಳೆ ಮಾತನಾಡಿದ ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ, ಬೆಂಗಳೂರು ಪೊಲೀಸರು ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಯಾಶೀಲರಾಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯಕ್ಕೆ ಫ್ಯಾಕ್ಟ್‌ ಚೆಕ್‌ ಘಟಕದ ಅವಶ್ಯಕತೆಯಿದೆ. ಕೃತಕ ಬುದ್ಧಿಮತ್ತೆ ಬಳಕೆ ಮಾಡಿ ಸುಳ್ಳು ಸುದ್ದಿ ಹರಡಿಸಲಾಗುತ್ತಿದೆ ಎಂದು ಹೇಳಿದರು.

ಸುಳ್ಳು ಸುದ್ದಿ ಗುರುತಿಸುವುದು, ಕಾನೂನು ಸುವ್ಯವಸ್ಥೆ ಕಾಪಾಡಲು ಈ ಘಟಕದ ಅವಶ್ಯಕತೆಯಿದೆ. ಆರಂಭಿಕ ಹಂತದಲ್ಲಿ ಐಟಿ-ಬಿಟಿ ಇಲಾಖೆ ಎಲ್ಲ ರೀತಿಯ ಸಹಕಾರ ನೀಡುತ್ತದೆ. ಘಟಕವನ್ನು ಕಾನೂನಿನ ವ್ಯಾಪ್ತಿಯಲ್ಲಿ ತರಲು ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು. ಕ್ರಮೇಣ ಘಟಕವು ಗೃಹ ಇಲಾಖೆಯ ವ್ಯಾಪ್ತಿಯಲ್ಲಿಯೇ ಇರುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸುಳ್ಳು ಸುದ್ದಿ ಹರಡುವವರಿಗೆ ಕಠಿಣ ಶಿಕ್ಷೆ ಕೂಡ ಆಗಬೇಕು:

ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಮಾತನಾಡಿ, ಸುಳ್ಳು ಸುದ್ದಿ ಹರಡುವ ಜಾಲ ಸದ್ಯ ಆರಂಭಿಕ ಹಂತದಲ್ಲಿದ್ದರೂ ಮುಂದಿನ ದಿನಗಳಲ್ಲಿ ಅದು ವ್ಯಾಪಕವಾಗಿ ಬಳಕೆಯಾಗುವ ಸಾಧ್ಯತೆಗಳಿವೆ. ಸುಳ್ಳು ಸುದ್ದಿ ಹರಡುವವರಿಗೆ ಕಠಿಣ ಶಿಕ್ಷೆ ಕೂಡ ಆಗಬೇಕು. ಈ ಸಮಿತಿಯನ್ನು ಕೂಡಲೇ ರಚಿಸುವ ಕೆಲಸವಾಗಬೇಕು. ಅಲ್ಲದೆ ಸುಳ್ಳು ಸುದ್ದಿ ಹರಡುವುದು ಶಿಕ್ಷಾರ್ಹ ಅಪರಾಧ ಎಂಬುದು ಜನರಿಗೆ ಮನವರಿಕೆಯಾಗಬೇಕು ಎಂದು ಹೇಳಿದರು.

ಕಂದಾಯ ಸಚಿವ ಕೃಷ್ಣ ಬೈರೇಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್‌, ಅಪರ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್‌ ಗೋಯಲ್‌, ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್‌ ನಿಂಬಾಳ್ಕರ್‌ ಇತರರಿದ್ದರು.

Donate Janashakthi Media

Leave a Reply

Your email address will not be published. Required fields are marked *