ಸಿಎಂ ಖುರ್ಚಿಯ ಮೇಲೆ ಎಲ್ಲರ ಕಣ್ಣು?!

ಗುರುರಾಜ ದೇಸಾಯಿ

ರಾಜ್ಯದಲ್ಲಿ ನಡೆಯುತಿದ್ದ ನಾಯಕತ್ವ ಬದಲಾವಣೆಯ ಚರ್ಚೆ ಸದ್ಯ ಸ್ವಲ್ಪ ಮಟ್ಟಿಗೆ ತಣ್ಣಗಾಗಿದೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಆಗಮಿಸಿ ಸಾಲು ಸಾಲು ಸಭೆಗಳನ್ನು ನಡೆಸಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ತೂಗುಕತ್ತಿಯಿಂದ ಪಾರು ಮಾಡಿದ್ದಾರೆ.  ನಾಯಕತ್ವ ಬದಲಾವಣೆ ಇವತ್ತೆ ಅಂತ್ಯವಾಗಬೇಕು, ಬಹಿರಂಗವಾಗಿ ಯಾರೂ ಮಾತನಾಡಬಾರದು ಎಂದು ಖಡಕ್‌ ಸೂಚನೆಯ ನಡುವೆಯೂ ವಿಧಾನ ಪರಿಷತ್‌ ಸದಸ್ಯ ಎಚ್‌ ವಿಶ್ವನಾಥ್‌ ಅರ್ಧ ಘಂಟೆಯ ನಂತರ “ಯಡಿಯೂರಪ್ಪಗೆ ವಯಸ್ಸಾಯ್ತು ನಾಯಕತ್ವ ಬದಲಾಗಬೇಕು” ಎಂದು ಮಾಧ್ಯಮದ ಮುಂದೆ ಬಹಿರಂಗವಾಗಿ ಹೇಳಿದರು. ಅತ್ತ ಅರುಣ್‌ ಸಿಂಗ್‌ ವಿಮಾನದ ಮೂಲಕ ದೆಹಲಿಗೆ ಹಾರಿದರು. ಈಗಲೂ ದೆಹಲಿ ನಾಯಕರ ಜೊತೆ ಶಾಸಕ ಅರವಿಂದ್‌ ಬೆಲ್ಲದ ಸಂಪರ್ಕದಲ್ಲಿ ಇದ್ದಾರೆ ಅವರನ್ನು ಸಿಎಂ ಮಾಡುವಂತೆ ಅವರು ಹೈಕಮಾಂಡ್‌ ಹಿಂದೆ ಬಿದ್ದಿದ್ದಾರೆ. ಆಗಸ್ಟ್‌ ನಲ್ಲಿ ಯಡಿಯೂರಪ್ಪ ಆಂದ್ರಪ್ರದೇಶದ ರಾಜ್ಯಪಾಲರಾಗಲಿದ್ದಾರೆ ಎಂಬ ಚರ್ಚೆಗಳು ಬಿಜೆಪಿಯಿಂದಲೇ ಕೇಳಿ ಬರುತ್ತಿವೆ. ತೆಲುಗು ಮಾಧ್ಯಮಗಳಲ್ಲಿ ” ರಾಜ್ಯಪಾಲ” ವಿಚಾರ  ಜೋರಾಗಿ ಸದ್ದು ಮಾಡಿತ್ತು. ಹಾಗಾಗಿ ನಾಯಕತ್ವದ ಬದಲವಾಣೆ ಬಿಜೆಪಿಯೊಳಗೆ ಬೂದಿಮುಚ್ಚಿದ ಕೆಂಡದಂತಿದೆ. ಆ ಕಿಡಿ ಯಾವಾಗ ಬೇಕಾದರೂ ಹೊತ್ತಿಕೊಳ್ಳಬಹುದು.

ಇದನ್ನೂ ಓದಿ : ಮತ್ತೆ ಸಿಎಂ ಖುರ್ಚಿ ಅಲುಗಾಡುತ್ತಿದೆ : ಮುಂದಿನ ನಾಯಕ “ಬೆಲ್ಲ”ದ?

ಬಿಜೆಪಿಯಲ್ಲಿ ಹೊಗೆಯಾಡುತ್ತಿರುವ ನಾಯಕತ್ವ ಬದಲಾವಣೆ ಕೂಗಿಗೆ ತುಪ್ಪ ಸುರಿಯಲು ಪ್ರಯತ್ನಿಸಿ ಮನಸ್ಸಿನಲ್ಲಿ ಮಂಡಿಗೆ ಮೇಯ್ದು ತುಂಬಾ ಖುಷಿಯಾಗಿದ್ದ ಕಾಂಗ್ರೆಸ್​ ಪಕ್ಷದಲ್ಲೂ ಸಿಎಂ ವಿಚಾರಕ್ಕೆ ಜಟಾಪಟಿ ಶುರುವಾಗಿದೆ. ಆ ಮೂಲಕ ಕಾಂಗ್ರೆಸ್‌ನ “ಭಿನಾಭಿಪ್ರಾಯ ಸಂಸ್ಕೃತಿ” ಇಂದು ಮತ್ತೊಮ್ಮೆ ಹೊರಬಿದ್ದಿದೆ. ‌ ವಿಪಕ್ಷ ನಾಯಕ ಸಿದ್ಧರಾಮಯ್ಯ ಸಿಎಂ ವಿಚಾರದ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಡಿ ಎಂದು ಹೇಳುತ್ತಿದ್ದರೆ,  ಅತ್ತ ಡಿ.ಕೆ ಶಿವಕುಮಾರ್, ಜಮೀರ್‌ ಹೇಳಿಕೆಗೆ ಕೆಂಡಾಮಂಡಲವಾಗಿದ್ದಾರೆ. ನಾನು ಮುಂದಿನ ಸಿಎಂ ಎನ್ನಬೇಡಿ ಅದು ನನಗೆ ಡೇಂಜರ್‌ ಎಂದು ಡಾ. ಜಿ. ಪರಮೇಶ್ವರ್‌ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.  ಅಂದ ಹಾಗೆ ಕಾಂಗ್ರೆಸ್‌ ನಲ್ಲಿ ಸಿಎಂ  ವಿಚಾರದ ರಾಜಕೀಯ ಕಿಡಿಯನ್ನು ಹೊತ್ತಿಸಿದ್ದು ಶಾಸಕ  ಬಿ.ಝಡ್‌ ಜಮೀರ್‌ ಅಹ್ಮದ್‌ ಖಾನ್.‌

ಇತ್ತೀಚೆಗೆ ಕೊಪ್ಪಳದಲ್ಲಿ ಕಾಂಗ್ರೆಸ್‌ ಪಕ್ಷ ಆಯೋಜಿಸಿದ್ದ ಆಹಾರದ ಕಿಟ್‌ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ  ಶಾಸಕ ಜಮೀರ್‌ ರವರು  “ನಮ್ಮ ಭಾವಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಜನ ಹಾರೈಸಿದರೆ ಪಕ್ಷದ ಹೈಮಾಂಡ್​ನಿಂದ ಕೂಡ ಅವರನ್ನು ಮುಖ್ಯಮಂತ್ರಿ ಆಗುವುದರಿಂದ ತಡೆಯಲು ಸಾಧ್ಯವಿಲ್ಲ ಎಂದು  ಹೇಳುವ ಮೂಲಕ  ತನ್ನದೆ ಪಕ್ಷದ ನಾಯಕರೇ ಹುಬ್ಬೆರಿಸುವಂತೆ ಮಾಡಿದ್ದರು.  ಇದಕ್ಕೆ ನನ್ನ ಬೆಂಬಲವೂ ಇದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ತಲೆ ಅಲ್ಲಾಡಿಸಿದ್ದರು. ಈ ಚರ್ಚೆ ನಡೆದದ್ದು ಮಾಜಿ ಸಿಎಂ ಸಿದ್ದಾರಾಮಯ್ಯನವರ ಸಮ್ಮುಖದಲ್ಲಿ ಎಂಬುದು ವಿಶೇಷ.

ಜಮೀರ್‌ ಸ್ಪೋಟಿಸಿದ ಹೇಳಿಕೆ ಮಾಧ್ಯಮದಲ್ಲಿ ವರದಿಯಾಗುತ್ತಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಕೆಂಡಾಮಂಡಲವಾಗಿದ್ದರೆ. ” ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಹೈಕಮಾಂಡ್‌ ತೀರ್ಮಾನಿಸುತ್ತದೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಮೇಲ್ನೋಟಕ್ಕೆ ಡಿಕೆಶಿ ಜಮೀರ್‌ ರವರಿಗೆ ನೀಡಿದ ಹೇಳಿಕೆ ಎಂದು ಅನಿಸಿದರೂ ಕರ್ನಾಟಕದ ರಾಜಕೀಯವನ್ನು ಸೂಕ್ಷಮವಾಗಿ ಗಮನಿಸಿದವರಿಗೆ ಇದು ಸಿದ್ಧರಾಮಯ್ಯ ವರ್ಸಸ್‌ ಡಿಕೆ ಶಿವಕುಮಾರ್‌ ನಡುವಿನ ಗುದ್ದಾಟ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ.  ಈಗ ಕಾಂಗ್ರೆಸ್‌ ನಿಂದ ಗೆದ್ದಿರುವ ಶಾಸಕರಲ್ಲಿ ಬಹುತೇಕರ ಸಿದ್ಧರಾಮಯ್ಯನವರ ಮಿತ್ರಮಂಡಳಿಯವರು. ಸಿದ್ದು ಹೇಳಿದ್ದಕ್ಕೆಲ್ಲ ಎಸ್‌ ಅನ್ನೋದು ಅವರ ಕೆಲಸ.  ಮುಖ್ಯಮಂತ್ರಿ ಹೆಸರು ಪ್ರಸ್ತಾಪ ಶಾಸಕರ ವೈಯಕ್ತಿಕ ಅಭಿಪ್ರಾಯ ಎಂದು ಸಿದ್ದು ಮೇಲ್ನೋಟಕ್ಕೆ ಹೇಳುತ್ತಿದ್ದಾರೆ. ಜಮೀರ್‌ ಅಹ್ಮದ್‌ ಸಿದ್ದುನ ಆಪ್ತರಲ್ಲಿ ಆಪ್ತರು. ಇನ್ನೂ ರಾಘವೇಂದ್ರ ಹಿಟ್ನಾಳ ಸಿದ್ದರಾಮಯ್ಯನವರ ಭಕ್ತ, ಸ್ವಜಾತಿ ಎಂಬುದು ಬಲವಾದ ಕಾರಣ.  ಅವರಿಗಾಗಿ ಕ್ಷೇತ್ರವನ್ನೆ ಬಿಟ್ಟುಕೊಡಲು ಸಿದ್ಧವಿದ್ದಾರೆ ಹಿಟ್ನಾಳ. ಹಾಗಾಗಿ ಇವರ ಬಾಯಲ್ಲಿ ಮುಂದಿನ “ಮುಖ್ಯಮಂತ್ರಿ” ಹೆಸರು ಪ್ರಸ್ತಾಪವಾಗಿದೆ ಎಂದರೆ ಅದರ ಹಿಂದೆ ಮುಂದೆ ಯಾರಿದ್ದಾರೆ ಎಂಬುದು ಸುಲಭವಾಗಿ ಗೊತ್ತಾಗುವ ವಿಚಾರ.

ಇದನ್ನೂ ಓದಿ : ಸರಕಾರ ವಿಫಲವಾಗಿದೆ-ನಾಯಕತ್ವ ಬದಲಾವಣೆಯಿಂದ ಏನು ಸಾಧ್ಯ: ಸಿದ್ದರಾಮಯ್ಯ

ಕಾಂಗ್ರೆಸ್‌ ನಲ್ಲಿ ಮುಖ್ಯಮಂತ್ರಿ ವಿಚಾರ ಮುನ್ನಲೆಗೆ ಬರಲು ಕಾರಣವೇನು : ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನೂ 23 ತಿಂಗಳು ಬಾಕಿ ಇರುವಾಗಲೇ ಕಾಂಗ್ರೆಸ್‌ ನಲ್ಲಿ ಸಿಎಂ ಖುರ್ಚಿಗೆ ಟವಲ್‌ ಹಾಕಲು ಕಾರಣ ಏನು ಎಂಬುದು ತಿಳಿಯಲು ಹೊರಟಾಗ ಸಿಗುವ ಅಂಶಗಳು ಅಚ್ಚರಿ ಎನಿಸುತ್ತಿವೆ.  ಈಗಿರುವ ಶಾಸಕರಲ್ಲಿ ಸಿದ್ದು ಆಪ್ತರೆ‌ ಹೆಚ್ಚಿದ್ದು ಮುಂದಿನ ಚುನಾವಣೆಯಲ್ಲಿ ಅವರಿಗೆ ಟಿಕೆಟ್‌ ತಪ್ಪಿಸಲು ಡಿಕೆಶಿ ತಂತ್ರ ಹೆಣೆದಿದ್ದಾರೆ ಎಂಬ ಅಂಶ, ಸಿಎಂ‌ ಖುರ್ಚಿ ಚರ್ಚೆಯಿಂದ ಬಯಲಾಗಿದೆ. ಕಾಂಗ್ರೆಸ್ ಮೂಲಗಳ ಪ್ರಕಾರ ಡಿಕೆಶಿ ತನ್ನ ಬೆಂಬಲಿಗರಿಗೆ ಟಿಕೆಟ್‌ ಖಾತ್ರಿ ಪಡಿಸಿದ್ದಾರಂತೆ. ಅದು ಬರೋಬ್ಬರಿ 50 ಜನರಿಗೆ! ಅವರೆಲ್ಲ ಗೆದ್ದರೆ ನನ್ನ ಸಿಎಂ ದಾರಿ ಸುಲಭ ಎನ್ನುವುದು ಡಿಕೆ ಶಿವಕುಮಾರ್‌  ಲೆಕ್ಕಾಚಾರ.  ಇದು ಸಿದ್ದುಗೆ ಕಸಿವಿಸಿ ಮೂಡಿಸಿದ್ದು ಅವರು ಈ ರೀತಿಯ ಬಹಿರಂಗ ತಂತ್ರವನ್ನು ಅವರ ಬೆಂಬಲಿಗರ ಮೂಲಕ ಹಾಕುತ್ತಿದ್ದಾರೆ ಎನ್ನುವುದು ನೂರಕ್ಕೆ ನೂರರಷ್ಟು ಸತ್ಯ!

ಇನ್ನೂ ಇದೇವೇಳೆ ದಲಿತ ಸಿಎಂ ವಿಚಾರವೂ ಈಗ ಮುನ್ನಲೆಗೆ ಬಂದಿದೆ. ಪ್ರತಿಬಾರಿಯೂ ಅದು ಚರ್ಚೆಗೆ ಬಂದರೂ “ಪ್ರಭಲ” ಮನಸ್ಥಿತಿಗಳ ನಡುವೆ ಅದು ಮಾಯವಾಗುತ್ತಿದೆ. ದಲಿತ ಸಿಎಂ ವಿಚಾರ ಚರ್ಚೆಗೆ ಬಂದಿದ್ದೆ ತಡ “ಈ ಆಟಕ್ಕೆ ನನ್ನನ್ನು ತಳ್ಳಬೇಡಿ ಸಿಎಂ ಪದವೇ ನನಗೆ ಡೇಂಜರ್‌ ಎಂದು ಶಾಸಕ ಡಾ. ಜಿ.ಪರಮೇಶ್ವರ್‌  ಅಸಹಾಯಕತೆಯನ್ನು ಹೊರಹಾಕಿದ್ದಾರೆ.” ಕರ್ನಾಟಕದ ರಾಜಕಾರಣದಲ್ಲಿ ದಲಿತ ಸಮುದಾಯಕ್ಕೆ ಸೇರಿದವರು ಸಚಿವರಾಗಿದ್ದಾರೆ,  ಅದರಲ್ಲಿ ಕೆಲವರು ಒಂದಿಷ್ಟು ಉತ್ತಮ ಎನ್ನಬಹುದಾದ ಕೆಲಸಗಳನ್ನು ಮಾಡಿದ್ದಾರೆ. ಆದರೆ ಅದನ್ನು ಸಮರ್ಥಿಸಿಕೊಳ್ಳಲು ಬಲವಾದ ಧ್ವನಿ ಇಲ್ಲದ ಕಾರಣ ಈ ಚರ್ಚೆ ಹಿಂದಕ್ಕೆ ಸರಿಯಲು ಕಾರಣ ಇರಬಹುದು. ಮಲ್ಲಿಕಾರ್ಜುನ್‌ ಖರ್ಗೆಯವರ ಪ್ರಭಾವ ಇತ್ತೀಚೆಗೆ ಕುಸಿತ ಕಂಡಿದೆ. ಕೆ.ಎಚ್‌ ಮುನಿಯಪ್ಪ ಸ್ಪರ್ಧೆ ಒಡ್ಡುವ ಪ್ರಯತ್ನ ನಡೆಸುತ್ತೀದ್ದಾರಾದರೂ ಅದು ಸುಲಭದ ಕೆಲಸವಲ್ಲ. ಇನ್ನೂ ಸಚಿವರಾದವರು, ಶಾಸಕರಾದವರು ಆ ಸಮುದಾಯದ ಜೊತೆ ನಿಂತು ಅವರನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ ಬಲಪಡಿಸುವ ಕೆಲಸ ಮಾಡಿದ್ದರೆ ಇವತ್ತು ದಲಿತ ಸಮುದಾಯಕ್ಕೆ ರಾಜಕಾರಣದಲ್ಲಿ ಸೋಲಾಗುತ್ತಿರಲಿಲ್ಲ. ಈಗಲೂ ದಲಿತ ಸಮುದಾಯದ ಶಾಸಕರು ತಮ್ಮ ಹಿಂದಿರುವ ಒಂದಿಷ್ಟು ಜನರಿಗೆ ಸಹಾಯವಾಗುವ ಕೆಲಸ ಮಾಡಿದ್ದು ಬಿಟ್ಟರೆ ಸಮುದಾಯಕ್ಕೆ ಸಾರ್ಥಕವಾಗುವ ಕೆಲಸ ಮಾಡಿಲ್ಲ.

ಸಧ್ಯ ರಾಜ್ಯದಲ್ಲಿ ಕೋವಿಡ್‌ ಆರ್ಭಟ ಇನ್ನೂ ನಿಂತಿಲ್ಲ, ಜನ ಸಂಕಷ್ಟದಲ್ಲಿರುವಾಗ ಈ ರಾಜಕಾರಣಿಗಳಿಗೆ ಸಿಎಂ ಖುರ್ಚಿಯ ಚಿಂತೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.  ನಾಯಕತ್ವ ಬದಲಾವಣೆ ವಿಚಾರ ಬಂದಾಗ ಕಾಂಗ್ರೆಸ್‌ ಬಿಜೆಪಿ ಗೆ ಪಾಠ ಮಾಡಿತ್ತು. ಕೋವಿಡ್‌ ಕಾಲದಲ್ಲಿ ದುರಾಡಳಿತ ಸರಕಾರ ನೋಡುವಂತಾದೆವಲ್ಲ ಎಂದು ಕ್ಲಾಸ್‌ ಹಾಕಿತ್ತು. ಈಗ ತಾನೇ ಸಿಎಂ ಖುರ್ಚಿಯ ಬಿಸಿ ಬಾಣಲಿಗೆ ಬಿದ್ದಿದೆ.   ಕೋವಿಡ್ ಎರಡನೇ ಅಲೇ ಇನ್ನೂ ತಗ್ಗಿಲ್ಲ, ಮೂರನೇ ಅಲೆ ಇನ್ನೇನು ಬಂದು ಬಿಡುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ. ಸರಕಾರ, ಸಚಿವರು, ಶಾಸಕರು ಇನ್ನಾದರೂ ಜಾಗೃತೆ ವಹಿಸದೆ ಇದ್ದರೆ ಇನ್ನಷ್ಟು ಸಂಕಷ್ಟಗಳನ್ನು ಕರ್ನಾಟಕ ನೋಡಬೇಕಾಗುತ್ತದೆ. ಸಿಎಂ ಚರ್ಚೆಯ ವಿಚಾರವನ್ನು ಬದಿಗಿಟ್ಟು ಕಾಂಗ್ರೆಸ್‌ ಮತ್ತು ಬಿಜೆಪಿ ಶಾಸಕರು ಜನರ ಕಲ್ಯಾಣದ ಕಡೆ ಗಮನ ಕೊಡಬೇಕಿದೆ.

Donate Janashakthi Media

Leave a Reply

Your email address will not be published. Required fields are marked *