76ನೇ ಗಣರಾಜ್ಯೋತ್ಸವ ದಿನಾಚರಣೆ: ಜನತೆಗೆ ಸಿಎಂ ಶುಭಾಶಯ; ರಾಜ್ಯಪಾಲರು ಧ್ವಜಾರೋಹಣ

ಬೆಂಗಳೂರು: ನಗರದಲ್ಲಿ 76ನೇ ಗಣರಾಜ್ಯೋತ್ಸವದ ಅದ್ಧೂರಿ ಆಚರಣೆಗಾಗಿ ಮಾಣೆಕ್ಷಾ ಪರೇಡ್ ಮೈದಾನವು ಸಂಪೂರ್ಣವಾಗಿ ಸಿದ್ಧಗೊಂಡಿದ್ದು, ರಾಜ್ಯಪಾಲರು ಧ್ವಜಾರೋಹಣ ನೆರವೇರಿಸಲಿದ್ದಾರೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದ ಪೊಲೀಸರು ಮುಂಜಾಗ್ರತೆ ವಹಿಸಿದ್ದು, 8 ಮಂದಿ ಡಿಸಿಪಿ, 17 ಮಂದಿ ಎಸಿಪಿ, 44 ಮಂದಿ ಪಿಐ ಸೇರಿ 1051 ಪೊಲೀಸರ ನಿಯೋಜನೆ ಮಾಡಲಾಗಿದೆ.

ಇದರ ಜೊತೆಗೆ 114 ಪಿಎಸ್​​ಐ, 58 ಎಎಸ್‌ಐ, 80 ಸಿಬ್ಬಂದಿ, 30 ಕ್ಯಾಮೆರಾ ಸಿಬ್ಬಂದಿಯಿಂದ ಭದ್ರತೆ ಒದಗಿಸಲಾಗಿದೆ. ಬಂದೋಬಸ್ತ್​​ಗೆ 10 ಕೆಎಸ್​ಆರ್​ಪಿ ತುಕಡಿ, 2 ಅಗ್ನಿಶಾಮಕ ವಾಹನ, ಕ್ಷಿಪ್ರ ಕಾರ್ಯಾಚರಣೆ ತಂಡನ್ನು ನಿಯೋಜನೆ ಮಾಡಲಾಗಿದೆ.

ಇದಲ್ಲದೆ, ಮೈದಾನದ ಸುತ್ತ ಒಟ್ಟು 103 ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಲಾಗಿದ್ದು, ಕಲರ್ ಕೋಡ್​ಗಳ ಮೂಲಕ ಪಾಸ್ ವಿತರಿಸಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಪಿಂಕ್ ಬಣ್ಣದ ಪಾಸ್ ನೀಡಲಾಗುತ್ತದೆ. ವಿಐಪಿ ಪಾಸ್ ಇದ್ದವರು ಗೇಟ್-2ರ ಮೂಲಕ ಪ್ರವೇಶಿಸಬಹುದು. ಮುಖ್ಯ ಅತಿಥಿಗಳು, ಗಣ್ಯರು ಗೇಟ್-3 ಮೂಲಕ ಪ್ರವೇಶಿಸಬಹುದು. ಗೇಟ್-4ರಲ್ಲಿ ಬಿಳಿ ಪಾಸ್ ನೀಡಲಾಗುತ್ತದೆ. ಇಲ್ಲಿ ಮಾಧ್ಯಮದವರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: ಟ್ರಂಪ್ 2.0: ಮೊದಲ ದಿನವೇ ಸುಗ್ರೀವಾಜ್ಞೆಗಳ ಸೆಂಚುರಿ

ಗಣರಾಜ್ಯೋತ್ಸವ ಸಂಭ್ರಮ ಹಿನ್ನೆಲೆಯಲ್ಲಿ ಮೈದಾನದ ಸುತ್ತಮುತ್ತ ವಾಹನ ಸಂಚಾರ ನಿರ್ಬಂಧ ಹೇರಲಾಗಿದೆ. ಕಬ್ಬನ್ ರಸ್ತೆ, ಕಾಮರಾಜ ರಸ್ತೆ, ಬಿಆರ್​ವಿ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಪರ್ಯಾಯ ರಸ್ತೆಗಳಲ್ಲಿ ಸಂಚರಿಸಲು ನಗರ ಸಂಚಾರ ಪೊಲೀಸರು ಸೂಚನೆ ನೀಡಿದ್ದಾರೆ.

ಇನ್ಫೆಂಟ್ರಿ ರಸ್ತೆಯಲ್ಲಿ ಮಣಿಪಾಲ್ ಸೆಂಟ‌ರ್ ಕಡೆಗೆ ಸಂಚರಿಸುವ ವಾಹನಗಳು ನೇರವಾಗಿ ಇನ್ ಫೆಂಟ್ರಿರಸ್ತೆ ಸಫೀನಾ ಪ್ಲಾಜಾದಲ್ಲಿ ಎಡತಿರುವು ಪಡೆದು ಮೈನ್​ಗಾರ್ಡ್​ರಸ್ತೆ – ಆಲೀಸ್​ ಸರ್ಕಲ್​​-ಡಿಸ್ಸೆನ್ಸರಿ ರಸ್ತೆ – ಕಾಮರಾಜರಸ್ತೆ ಮತ್ತು ಡಿಕನ್ಸನ್ ರಸ್ತೆ ಜಂಕ್ಷನ್​ನಲ್ಲಿ ಬಲಕ್ಕೆ ತಿರುವು ಪಡೆಯಬೇಕು. ಅಲ್ಲಿಂದ ಕಾಮರಾಜ ರಸ್ತೆ- ಕಬ್ಬನ್​ರಸ್ತೆ ಮತ್ತು ಕಾಮರಾಜ ರಸ್ತೆ ಜಂಕ್ಷನ್​ನಲ್ಲಿ ಎಡಕ್ಕೆ ತಿರುವು ಪಡೆದು- ಕಬ್ಬನ್‌ರಸ್ತೆ ಮುಖಾಂತರ ಮಣಿಪಾಲ್ ಸೆಂಟರ್ ಕಡೆಗೆ ಸಾಗಬೇಕು. ಜೊತೆಗೆ ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತ, ಶಿವಾಜಿನಗರ ಬಸ್ ನಿಲ್ದಾಣ, ಕಬ್ಬನ್ ರಸ್ತೆ, ಸಿಟಿಒ ವೃತ್ತದಿಂದ ಕೆ.ಆರ್.ರಸ್ತೆ, ಕಬ್ಬನ್ ಜಂಕ್ಷನ್​​ವರೆಗೆ ಹಾಗೂ ಎಂ.ಜಿ.ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಜನತೆಗೆ ಸಿಎಂ ಶುಭಾಶಯ

ಈ ನಡುವೆ ನಾಡಿನ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಣರಾಜ್ಯೋತ್ಸವ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ನಾಡಿನ ಸಮಸ್ತ ಬಂಧುಗಳಿಗೆ 76ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಸಂವಿಧಾನ ಜಾರಿಗೊಳಿಸಿ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಘೋಷಣೆ ಮಾಡಿಕೊಂಡ 75 ವರ್ಷಗಳ ನಂತರವೂ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಹೋರಾಟ ನಡೆಸಬೇಕಾದ ವಿಷಾದನೀಯ ಸ್ಥಿತಿಯಲ್ಲಿ ಗಣರಾಜ್ಯೋತ್ಸವವನ್ನು ನಾವು ಆಚರಿಸುತ್ತಿದ್ದೇವೆಂದು ಹೇಳಿದ್ದಾರೆ.

ಇದು ಗತವೈಭವದಲ್ಲಿ ಮೈಮರೆಯದೆ ವರ್ತಮಾನದ ವಾಸ್ತವಗಳಿಗೆ ಮುಖಾಮುಖಿಯಾಗುವ ಕಾಲ.ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳೆಂಬ ಸಂವಿಧಾನದ ಮೂರು ಮುಖ್ಯ ಆಧಾರ ಸ್ಥಂಭಗಳು ಭದ್ರವಾಗಿದ್ದು ಆರೋಗ್ಯಕರವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಸಂವಿಧಾನದ ಪಾಲನೆಯಾಗುತ್ತಿದೆ ಮತ್ತು ಪ್ರಜಾಪ್ರಭುತ್ವ ಸುರಕ್ಷಿತವಾಗಿದೆ ಎಂದು ಅರ್ಥ.

ಕಟುವಾದ ಸತ್ಯ ಏನೆಂದರೆ ಸರ್ವಾಧಿಕಾರದ ದಂಡದಡಿ ನಮ್ಮ ಕಾರ್ಯಾಂಗ ಕರ್ತವ್ಯಭ್ರಷ್ಟಗೊಳ್ಳುತ್ತಿದೆ, ಶಾಸಕಾಂಗವನ್ನು ಖರೀದಿಸಲಾಗುತ್ತಿದೆ ಮತ್ತು ನ್ಯಾಯಾಂಗಕ್ಕೆ ಬೆದರಿಕೆ ಒಡ್ಡಿ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಷಡ್ಯಂತ್ರ ನಡೆಯುತ್ತಿದೆ. ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳೆಂಬ ಆಧಾರ ಸ್ಥಂಭಗಳು ದುರ್ಬಲಗೊಂಡು ಶಕ್ತಿಹೀನವಾದಾಗ ಸಂವಿಧಾನವೇ ಅಪ್ರಸ್ತುತವಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲಾಗುವ ಸಾಧ್ಯತೆಗಳಿವೆ.

ಇಂತಹದ್ದೊಂದು ಅಪಾಯದ ಸ್ಥಿತಿಯಲ್ಲಿ ಭಾರತ ಇಂದು ನಿಂತಿದೆ. ಪ್ರಜಾಪ್ರಭುತ್ವವನ್ನು ಉಳಿಸುವ ದೊಡ್ಡ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಯ ಹೆಗಲ ಮೇಲಿದೆ. ಜಾತಿ, ಮತ, ಪಂಥ, ಪ್ರದೇಶದ ಭೇದಗಳನ್ನು ಮರೆತು ಇಡೀ ದೇಶ ಒಂದಾಗಿ ಹೊರಗಿನ ಶತ್ರುಗಳನ್ನು ಹೊಡೆದೋಡಿಸಲು ಹೇಗೆ ಸ್ವಾತಂತ್ರ್ಯಹೋರಾಟ ನಡೆಸಲಾಯಿತೋ, ಅಂತಹದ್ದೇ ಒಂದು ಹೋರಾಟವನ್ನು ದೇಶದೊಳಗಿನ ಸಂವಿಧಾನ ವಿರೋಧಿ ಶತ್ರುಗಳ ವಿರುದ್ಧ ನಡೆಸಬೇಕಾಗಿದೆ.

ಇದಕ್ಕಾಗಿ ಎರಡನೇ ಸ್ವಾತಂತ್ರ್ಯ ಹೋರಾಟ ನಡೆಯದೆ ಹೋದರೆ ಮುಂದಿನ ಪೀಳಿಗೆಗೆ ಬದುಕುಳಿಯಲು ಪ್ರಜಾಪ್ರಭುತ್ವ ಇರುವುದಿಲ್ಲ. ಇದೊಂದು ಜೀವನ್ಮರಣದ ಪ್ರಶ್ನೆಯಾಗಿದ್ದು, ಗಣರಾಜ್ಯೋತ್ಸವದ ದಿನವಾದ ಇಂದು ನಾವೆಲ್ಲರೂ ಒಗ್ಗೂಡಿ ದೃಢಚಿತ್ತದಿಂದ ಸಂವಿಧಾನವನ್ನು ಉಳಿಸುವ ಸಂಕಲ್ಪ ಮಾಡಬೇಕಾಗಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಮೂಲಕ ನಮ್ಮ ಭಾರತವನ್ನು ರಕ್ಷಿಸುವ ಹೋರಾಟಕ್ಕೆ ನಮಗಿರುವ ಅಸ್ತ್ರಗಳೆಂದರೆ ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ಚಿಂತನೆಗಳು.

ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದ ನಮ್ಮ ಕಾಂಗ್ರೆಸ್ ಪಕ್ಷ ಜೈ ಬಾಪು, ಜೈ ಭೀಮ್ ಮತ್ತು ಜೈ ಸಂವಿಧಾನ ಎಂಬ ಅಭಿಯಾನವನ್ನು ಪ್ರಾರಂಭಿಸಿದೆ. ನಾಡ ಬಾಂಧವರೆಲ್ಲರೂ ಪಕ್ಷ, ಪಂಥ, ಜಾತಿ-ಧರ್ಮಗಳ ಎಲ್ಲೆಯನ್ನು ಮೀರಿ ಈ ಅಭಿಯಾನದಲ್ಲಿ ಕೈ ಜೋಡಿಸಬೇಕೆಂದು ಮನವಿ ಮಾಡುತ್ತೇನೆ. ಮತ್ತೊಮ್ಮೆ ನಾಡಬಾಂಧವರಿಗೆಲ್ಲ ಗಣರಾಜ್ಯೋತ್ಸವದ ಶುಭಾಶಯಗಳು ಎಂದು ತಿಳಿಸಿದ್ದಾರೆ.

ಕಾಂಗ್ರೆಸ್‌ ಕಚೇರಿಯಲ್ಲಿ ಗಣರಾಜ್ಯೋತ್ಸವ: ಧ್ವಜಾರೋಹಣ ನೆರವೇರಿಸಿದ ಮಲ್ಲಿಕಾರ್ಜುನ ಖರ್ಗೆ

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಗಿದ್ದು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಸೇರಿದಂತೆ ಇತರೆ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

ಇದನ್ನೂ ನೋಡಿ: ಉದ್ಘಾಟನೆ | ಗಣರಾಜ್ಯ ಭಾರತ @75 : ಪ್ರಸಕ್ತ ಸವಾಲುಗಳು | ರಾಜ್ಯ ಮಟ್ಟದ ವಿಚಾರ ಸಕಿರಣ

Donate Janashakthi Media

Leave a Reply

Your email address will not be published. Required fields are marked *