ಸರಕಾರಿ ಶಾಲೆ ಮುಚ್ಚಿದರೆ ಶೋಷಿತರ ಮಕ್ಕಳ ಹಕ್ಕು ಕಸಿದಂತೆ – ಸಾಹಿತಿ, ಚಿಂತಕರ ಅಭಿಪ್ರಾಯ

ಬೆಂಗಳೂರು: ರಾಜ್ಯದಲ್ಲಿ ರಾಜ್ಯ ಶಿಕ್ಷಣ ನೀತಿ ಜಾರಿಗೆ ತರಲು ಹೇಳಿದ್ದ ಕಾಂಗ್ರೆಸ್ ಸರಕಾರ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುತ್ತಿರುವುದು ಅಪಾಯಕಾರಿ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ.ವಿ.ಪಿ ಕಳವಳ ವ್ಯಕ್ತಪಡಿಸಿದರು. ಸರಕಾರಿ

ಗಾಂಧಿ ಭವನದಲ್ಲಿ ಜಾಗೃತ ನಾಗರಿಕರು ಕರ್ನಾಟಕ, ದಸಂಸ ಒಕ್ಕೂಟ ಆಯೋಜಿಸಿದ್ದ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಕಲಿಕಾ ಮಾಧ್ಯಮ ಆಂಗ್ಲ ಭಾಷೆಯಲ್ಲಿ ಇದ್ದರೆ ಶಿಕ್ಷಣ ಸುಧಾರಿಸುತ್ತದೆ ಎಂಬ ಸರಕಾರದ ಕಲ್ಪನೆ ಅಪಾಯಕಾರಿಯಾಗಿದೆ. ಮಾತೃಭಾಷಾ ಶಿಕ್ಷಣ ಸಿಗದೆ ಆಂಗ್ಲ ಭಾಷೆಯನ್ನು ಕಲಿಯಲು ಹೇಗೆ ಸಾಧ್ಯ? ಇಂಗ್ಲೀಷ ಮಾಧ್ಯಮದ ಶಾಲೆಯಲ್ಲಿ ಇಬ್ಬರು ಮಾತ್ರ ಈಗ ಶಿಕ್ಷಕರಿದ್ದಾರೆ, ಇದರಿಂದ ಗುಣ ಮಟ್ಟದ ಶಿಕ್ಷಣ ಸಾಧ್ಯವೇ? ಎಂದು ಪ್ರಶ್ನಿಸಿದರು.

ಕರ್ನಾಟಕ ಪಬ್ಲಿಕ್ ಶಾಲೆಗೆ ವಿರೋಧ ಇಲ್ಲ. ಆದರೆ ಶಾಲೆಗಳನ್ನು ಮುಚ್ಚಿ ತೆಗೆಯುವುದಕ್ಕೆ ವಿರೋಧ ಇದೆ. ಸರಕಾರಿ ಶಾಲೆಗಳನ್ನು ಮುಚ್ಚಲು ಆಯಾ ಕ್ಷೇತ್ರದ ಶಾಸಕರೆ ಸಿದ್ದತೆ ನಡೆಸಿದ್ದು, ಶಿಕ್ಷಣದ ಅವನತಿಯನ್ನು ಸೂಚಿಸುತ್ತದೆ ಎಂದರು.

ಇದನ್ನೂ ಓದಿ: ಅಕ್ರಮ ಕಲ್ಲಿದ್ದಲು ಗಣಿಗಾರಿಕೆ: ಜಾರ್ಖಂಡ – ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಇಡಿ ದಾಳಿ

ಶಿಕ್ಷಣ ಸಚಿವರಿಗೆ ಸಾರ್ವತ್ರಿಕ ಶಿಕ್ಷಣವನ್ನು ಬಲಪಡಿಸುವ ಇಚ್ಚಾಶಕ್ತಿ ಇಲ್ಲ ಎಂಬುದು ಈ ನಡೆಗಳಿಂದ ಗೊತ್ತಾಗಿದೆ. ಶಾಲೆ ಮುಚ್ಚುವ ವಿಚಾರದಲ್ಲಿ ಕರ್ನಾಟಕ ಏಳನೇ ಸ್ಥಾನದಲ್ಲಿದೆ. ಕಳೆದ 15 ವರ್ಷದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಶಾಲೆ ಮುಚ್ಚಲಾಗಿದೆ. ಈಗ ವಿಲೀನದ ಹೆಸರಲ್ಲಿ 10 ಸಾವಿರಕ್ಕೂ ಶಾಲೆಗಳು ಮುಚ್ಚುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

2500 ಕೋಟಿ ಹಣವನ್ನು ಶಿಕ್ಷಣಕ್ಕೆ ಇಟ್ಟಾಗ ನನಗೆ ಖುಷಿಯಾಗಿತ್ತು. ಯಾಕೆ ಅಂದರೆ ಮಳೆ ಬಂದಾಗ ಸರಕಾರಿ ಶಾಲೆಗಳು ಸೋರುತ್ತವೆ, ಅದು ನಿಲ್ಲುತ್ತದೆ ಎಂದುಕೊಂಡಿದ್ದೆ. ಆದರೆ ಈಗ ಶಾಲೆಗಳನ್ನೆ ಸರಕಾರ ಮುಚ್ಚಲು ಮುಂದಾಗಿದೆ ಎಂದು ಶಿಕ್ಷಣ ಚಿಂತಕ ಎಫ್ ಸಿ. ಚೇಗರೆಡ್ಡಿ ಆಕ್ರೋಶ ಹೊರ ಹಾಕಿದರು.

ಕಡಿಮೆ ಮಕ್ಕಳಿವೆ ಎಂಬ ನೆಪವೊಡ್ಡಿ ಶಾಲೆ ಮುಚ್ಚುವುದು ಸರಿಯೇ? ಅಲ್ಲಿ ಮಕ್ಕಳ ಹಾಜರಾತಿ ಯಾಕೆ ಕಡಿಮೆ ಆಯಿತು? ಸೌಲಭ್ಯಗಳು ಇದ್ದವೆ? ಶಿಕ್ಷಕರು ಇದ್ದರೆಯೇ? ಎಂಬುದನ್ನು ಸರಕಾರ ಮತ್ತು ಶಿಕ್ಷಣ ಇಲಾಖೆ ಮೊದಲಿಗೆ ತಿಳಿಯಬೇಕು. ಚೆನ್ನಪಟ್ಟಣದಲ್ಲಿ 120 ಮಕ್ಕಳಿರುವ ಶಾಲೆ ಮುಚ್ಚಲಾಗಿದೆ. ಇದನ್ನು ಗಮನಿಸಿದರೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸುವುದಾಗಿದೆ.

ಗ್ರಾಮೀಣ ಭಾಗದ ಮಕ್ಕಳು, ಅದರಲ್ಲೂ ದುಡಿಯುವ ವರ್ಗದ ಜನರ ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಹೆಣ್ಣು ಮಕ್ಕಳಿಗೆ ಸಂಕಷ್ಟಗಳು ಹೆಚ್ಚಾಗಲಿವೆ.
ರಾಜ್ಯದ ಅರ್ಧಷ್ಟು ಹಳ್ಳಿಗಳು ಶಾಲೆ ಇಲ್ಲದ ಹಳ್ಳಿಗಳು ಎಂಬ ಕುಖ್ಯಾತಿಯನ್ನು ಪಡೆಯುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.

ಹಿರಿಯ ಸಾಹಿತಿ ಎಸ್ ಜಿ ಸಿದ್ದರಾಮಯ್ಯ ಮಾತನಾಡಿ, ಈ ಸ್ಥಿತಿಗೆ ಆಡಳಿತಾತ್ಮಕ ವ್ಯವಸ್ಥೆಯೇ ಕಾರಣ ಎಂದು ದೂರಿದರು. ರಾಜ್ಯ ಸರ್ಕಾರದಲ್ಲಿರುವ ಅತ್ಯುನ್ನತ ಹಿರಿಯ ಶಿಕ್ಷಣ ಅಧಿಕಾರಿಗಳಿಗೆ ಸರಕಾರಿ ಶಾಲೆಯ ಮಹತ್ವ ಅರ್ಥ ಮಾಡಿಸಬೇಕಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಮುತುವರ್ಜಿ ವಹಿಸಿದ್ದು ಇವರೆ. ವ್ಯವಸ್ಥೆ ಬದಲಾದರೆ ಮಾತ್ರ ಸಾರ್ವಜನಿಕ ಶಿಕ್ಷಣ ಉಳಿಯುತ್ತದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ ವಹಿಸಿದ್ದರು. ಸಭೆಯಲ್ಲಿ ಶಿಕ್ಷಣ ತಜ್ಞ ಶ್ರೀಪಾದ್ ಭಟ್, ದಲಿತ ಸಂಘಟನೆಯ ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರೆಗೂಡು, ವಿ.ನಾಗರಾಜ, ಕಾರಳ್ಳಿ ಶ್ರೀನಿವಾಸ, BGVS ನ ಪ್ರಶಾಂತ್ ಬಾಬು, ವಜ್ರಮುನಿ, ಅಹಮ್ಮದ್ದ ಹಗರೆ, ಸೌಭಾಗ್ಯ, ಜಾಗೃತ ನಾಗರಿಕರು ಕರ್ನಾಟಕದ ಕೆ.ಎಸ್. ವಿಮಲಾ, ಜನವಾದಿ ಮಹಿಳಾ ಸಂಘಟನೆಯ ಗೌರಮ್ಮ, ಪೋಷಕರ ಸಂಘಟನೆಯ ಯೋಗಾನಂದ, ಕಾಂಚಾನಾ ಸೇರಿದಂತೆ ಅನೇಕರಿದ್ದರು.

ಇದನ್ನೂ ನೋಡಿ: ಶಾಲಾ – ಕಾಲೇಜ್ ಸಮಯಕ್ಕೆ ಬಸ್ ಬಿಡಲು ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *