ನಾ ದಿವಾಕರ
ಶತಮಾನಗಳ ಇತಿಹಾಸವನ್ನು ಗಮನಿಸಿದಾಗ ಇದು ಪೂರ್ಣ ಸತ್ಯವಲ್ಲ ಎಂದೂ ಅರಿವಾಗುತ್ತದೆ. ಅಪರಾಧಿಗಳನ್ನು, ಅತ್ಯಾಚಾರಿಗಳನ್ನು, ವಿಧ್ವಂಸಕರನ್ನು ಎನ್ಕೌಂಟರ್ ಮೂಲಕ ನಿರ್ನಾಮ ಮಾಡುವುದರ ಮೂಲಕ ತಾತ್ಕಾಲಿಕವಾಗಿ ಪಾತಕ ಕೃತ್ಯಗಳನ್ನು ನಿಯಂತ್ರಿಸಬಹುದು. ಆದರೆ ಅತ್ಯಾಚಾರವನ್ನಾಗಲೀ, ವಿಧ್ವಂಸಕತೆಯನ್ನಾಗಲೀ ನಿರ್ಮೂಲ ಮಾಡಲಾಗುವುದಿಲ್ಲ. ಇದು ವರ್ತಮಾನದ ವಾಸ್ತವ. ನಾಗರಿಕತೆ
ಪ್ರತೀಕಾರ-ಸೇಡು ವ್ಯವಸ್ಥೆಯೊಳಗಿನ ಮಾನವೀಯ ನೆಲೆಗಳನ್ನು ಶಾಶ್ವತವಾಗಿ ನಾಶಪಡಿಸುತ್ತವೆ
ಆಧುನಿಕ ಜಗತ್ತು ತಂತ್ರಜ್ಞಾನದ ಅಭಿವೃದ್ಧಿಯೊಂದಿಗೆ ಮುನ್ನಡೆಯುತ್ತಲೇ ತನ್ನ ಪ್ರಾಚೀನ ನಡವಳಿಕೆಗಳನ್ನೂ ಮರುಸ್ಥಾಪಿಸುವತ್ತ ಸಾಗುತ್ತಿರುವ ಒಂದು ಆತಂಕ ವರ್ತಮಾನದ ಸಮಾಜವನ್ನು ಕಾಡತೊಡಗಿದೆ. ಜಗತ್ತಿನಾದ್ಯಂತ ಪ್ರಭುತ್ವಗಳು ತಮ್ಮ ಅಧಿಕಾರ ಕೇಂದ್ರಗಳನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲಿ ತಳಮಟ್ಟದ ಸಾಮಾಜಿಕ ಧ್ವನಿಗಳನ್ನು ಆದಷ್ಟೂ ಮಟ್ಟಿಗೆ ಹತ್ತಿಕ್ಕಲು ಪ್ರಯತ್ನಿಸುತ್ತಿರುವಂತೆಯೇ, ರಾಜಕೀಯ ಅಧಿಕಾರದ ಸಹವರ್ತಿಯಾಗಿ ವರ್ತಿಸುತ್ತಿರುವ ಬಂಡವಾಳಶಾಹಿ ಮಾರುಕಟ್ಟೆ ಶಕ್ತಿಗಳು ಈ ಧ್ವನಿಗಳನ್ನು ನಿಷ್ಕ್ರಿಯಗೊಳಿಸಲು ಅಥವಾ ಹಿಂಬದಿಗೆ ದೂಡಲು ತನ್ನದೇ ಆದ ತಂತ್ರಗಾರಿಕೆಯನ್ನು ಅನುಸರಿಸುತ್ತಿರುತ್ತವೆ. ತಳಮಟ್ಟದ ಸಮಾಜದಲ್ಲಿ ಢಾಳಾಗಿ ಕಾಣಬಹುದಾದ ಅಸಮಾನತೆ, ಅನ್ಯಾಯ ಹಾಗೂ ಶೋಷಣೆಯನ್ನು ವಿರೋಧಿಸುವ ಪ್ರಜ್ಞಾವಂತ ಮನಸುಗಳನ್ನು ನಿಯಂತ್ರಿಸಲು ಪ್ರಭುತ್ವಗಳು ಒಂದೆಡೆ ಕಾನೂನುಗಳಿಗೆ ಮೊರೆ ಹೋಗುತ್ತವೆ. ಮತ್ತೊಂದೆಡೆ ಮಾರುಕಟ್ಟೆ ಶಕ್ತಿಗಳು ಜನಸಾಮಾನ್ಯರನ್ನು ಮುಖ್ಯವಾಹಿನಿಗೆ ತರಲು ನೆರವಾಗುವ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡೇ ಈ ಜನರ ನಡುವೆ ಇರುವ ಅಸಮಾಧಾನಗಳನ್ನು ನೇಪಥ್ಯಕ್ಕೆ ಸರಿಸಲು ಪ್ರಯತ್ನಿಸುತ್ತಿರುತ್ತವೆ. ನಾಗರಿಕತೆ
ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಕ್ಷಣ ಮಾತ್ರದಲ್ಲಿ ತಲುಪಬಹುದಾದ ಆಧುನಿಕ ಸಂವಹನ ಸಾಧನಗಳು ಮನುಷ್ಯನ ಭೌತಿಕ-ಬೌದ್ಧಿಕ ಅಭ್ಯುದಯಕ್ಕೆ ನೆರವಾಗುವುದಕ್ಕಿಂತಲೂ ಹೆಚ್ಚಾಗಿ, ಮನುಷ್ಯನೊಳಗಿರುವ ಅಸಂತೃಪ್ತಿ, ಅಸಮಾಧಾನ, ಆಕ್ರೋಶಗಳನ್ನು ನಿಷ್ಕ್ರಿಯಗೊಳಿಸಲು ಉಪಯುಕ್ತವಾಗಿ ಪರಿಣಮಿಸುತ್ತವೆ. ಏಕೆಂದರೆ ಈ ಸಂವಹನ ಸಾಧನಗಳ ನಿಯಂತ್ರಣ ಮತ್ತು ನಿರ್ವಹಣೆ ಎರಡೂ ಶೋಷಕ ವ್ಯವಸ್ಥೆಯ ಪರವಾದ ಮಾರುಕಟ್ಟೆ ಶಕ್ತಿಗಳ ಕೈಯ್ಯಲ್ಲಿರುತ್ತದೆ. ವರ್ತಮಾನ ಭಾರತದ ಸಂದರ್ಭದಲ್ಲಿ ನಿಂತು ನೋಡಿದಾಗ ವಿದ್ಯುನ್ಮಾನ ಮಾಧ್ಯಮಗಳು ನಿರ್ವಹಿಸುತ್ತಿರುವ ಪಾತ್ರದಲ್ಲಿ ಈ ಸೂಕ್ಷ್ಮವನ್ನು ಗುರುತಿಸಬಹುದು. ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸಿ, ವಿಮರ್ಶಾತ್ಮಕವಾಗಿ ಪರಿಶೀಲಿಸಿ ಸತ್ಯಾಸತ್ಯತೆಗಳನ್ನು ಜನತೆಯ ಮುಂದಿಡುವ ತಮ್ಮ ಸಾಮಾಜಿಕ ನೈತಿಕತೆಯನ್ನು ಮರೆತಿರುವ ಕಾರ್ಪೋರೇಟ್ ಮಾಧ್ಯಮಗಳು ಸ್ಥಾಪಿತ ವ್ಯವಸ್ಥೆಗೆ ಧಕ್ಕೆಯಾಗದಂತೆ ಅಭಿಪ್ರಾಯಗಳನ್ನು ಉತ್ಪಾದಿಸುವ ಕ್ರಿಯೆಯಲ್ಲಿ ತೊಡಗಿರುವುದನ್ನು ಭಾರತದ ಮಾಧ್ಯಮ ಲೋಕದಲ್ಲಿ ಕಾಣಬಹುದು. ಹಾಗಾಗಿಯೇ ಮಾಧ್ಯಮಗಳ ಭಾಷೆ ಮತ್ತು ಪರಿಭಾಷೆ ಎರಡೂ ಸಹ ಪ್ರಭುತ್ವದ ಅಭಿಪ್ರಾಯಗಳನ್ನೇ ಧ್ವನಿಸುವಂತಿರುತ್ತವೆ. ತಮ್ಮ ಔದ್ಯಮಿಕ ಅಸ್ತಿತ್ವವನ್ನು ರಕ್ಷಿಸಿಕೊಳ್ಳಲು ಅಥವಾ ಬಂಡವಾಳ ವಿಸ್ತರಣೆಯನ್ನು ವೃದ್ಧಿಸಿಕೊಳ್ಳಲು ಕಾರ್ಪೋರೇಟ್ ಮಾಧ್ಯಮಗಳಿಗೆ ಈ ತಂತ್ರಗಾರಿಕೆ ಅವಶ್ಯವೂ ಆಗಿರುತ್ತದೆ. ಹಾಗಾಗಿಯೇ ಸುಳ್ಳು ಸುದ್ದಿಗಳು, ತಿರುಚಿದ ಮಾಹಿತಿಗಳು ಸುಲಭವಾಗಿ ಜನಮಾನಸವನ್ನು ತಲುಪುತ್ತವೆ. ಆದರೆ ಇಲ್ಲಿ ವಾಸ್ತವತೆ ಹಾಗೂ ಸತ್ಯಾಂಶಗಳು ಶಾಶ್ವತವಾಗಿ ಬಲಿಯಾಗುತ್ತವೆ.
ನಾಗರಿಕತೆ ಮತ್ತು ಆಧುನಿಕ ಸಮಾಜ
ಈ ವಿಕೃತ ಬೆಳವಣಿಗೆಯ ನಡುವೆಯೇ ಆಧುನಿಕ ಸಮಾಜ ತನ್ನ ನಾಗರಿಕತೆಯ ಲಕ್ಷಣಗಳನ್ನು ಮರೆತು ಪ್ರಾಚೀನ ಸಮಾಜದ ಗುಣಲಕ್ಷಣಗಳನ್ನು ಮೈಗೂಡಿಸಿಕೊಳ್ಳುತ್ತಿರುವುದು ಸಮಾಜವನ್ನು ಕಾಡಲೇಬೇಕಾದ ಗಂಭೀರ ವಿಚಾರ. ಹಿಂಸೆ-ಪ್ರತಿಹಿಂಸೆ, ಸೇಡು-ಪ್ರತೀಕಾರ ಹಾಗೂ ದಾಳಿ-ಪ್ರತಿದಾಳಿ ಇಂದಿನ ಸಮಾಜದಲ್ಲಿ ಎಲ್ಲ ಹಂತಗಳಲ್ಲೂ ಕಾಣಬಹುದಾದ ಒಂದು ಸಾಮಾನ್ಯ ವಿದ್ಯಮಾನವಾಗಿದೆ. ಮನುಷ್ಯ ಸಮಾಜ ಪಡೆದುಕೊಂಡಿರುವ ಆಧುನಿಕ ಜ್ಞಾನ ಅಥವಾ ಅರಿವು ಈ ನೇತ್ಯಾತ್ಮಕ ಲಕ್ಷಣಗಳನ್ನು ಹೋಗಲಾಡಿಸಲು ನೆರವಾಗುತ್ತಿಲ್ಲ ಎನ್ನುವುದೂ ಶೋಚನೀಯ ವಿಚಾರ. ಬೌದ್ಧಿಕವಾಗಿ ವಿಶಾಲವಾಗುತ್ತಿರುವ ಮಾನವ ಪ್ರಪಂಚ ಭೌತಿಕವಾಗಿ ಸಂಕುಚಿತವಾಗುತ್ತಿರುವುದರ ನಡುವೆಯೇ, ಜಾತಿ-ಮತ-ಧರ್ಮ-ಪಂಥ ಹಾಗೂ ಪ್ರಾದೇಶಿಕ ಅಸ್ಮಿತೆಗಳಿಗೆ ಸಿಲುಕಿ ಮನುಷ್ಯರ ನಡುವಿನ ಅಂತರ ಹೆಚ್ಚಾಗುತ್ತಲೇ ಇರುವುದಕ್ಕೆ ಇದೂ ಒಂದು ಕಾರಣ ಎನ್ನಬಹುದು.
ನಮ್ಮ ಸುತ್ತಲಿನ ವಿದ್ಯಮಾನಗಳನ್ನು, ದಿನಕ್ಕೊಂದು ರೂಪ ಪಡೆಯುವ ಬೆಳವಣಿಗೆಗಳನ್ನು ಯಾವ ನೆಲೆಯಲ್ಲಿ ನಿಂತು ನೋಡಬೇಕು ಎಂಬ ಜಿಜ್ಞಾಸೆ ಇಡೀ ಮಾನವ ಸಮಾಜವನ್ನು ಕಾಡುತ್ತಿರುವ ಹೊತ್ತಿನಲ್ಲಿ ನಮ್ಮ ಸಾಮಾಜಿಕ ಅರಿವು ಹಾಗೂ ಸಾರ್ವಜನಿಕ ಪ್ರಜ್ಞೆ ಹಲವು ಗಂಭೀರ ಸವಾಲುಗಳಿಗೆ ಮುಖಾಮುಖಿಯಾಗುತ್ತದೆ. ಕೋಮುವಾದದ ಕರಾಳ ಮುಖವಾಡಗಳು, ಮತಾಂಧತೆಯ ಕ್ರೂರ ಚಹರೆಗಳು, ಜಾತಿ ಶ್ರೇಷ್ಠತೆಯ ಅಸಹ್ಯಕರ ಅವತಾರಗಳು, ಸ್ತ್ರೀ ದ್ವೇಷದ ಯಜಮಾನಿಕೆಯ ಅಹಮಿಕೆಗಳು ಹಾಗೂ ಇವೆಲ್ಲವುಗಳ ನಡುವೆ ದುಡಿಯುವ ಜನತೆಯನ್ನು ತಳಮಟ್ಟದವರೆಗೂ ಶೋಷಿಸಿ ಹೈರಾಣಾಗಿಸುವ ಬಂಡವಾಳ-ಮಾರುಕಟ್ಟೆಯ ಆಧಿಪತ್ಯದ ನೆಲೆಗಳು ಈ ಎಲ್ಲ ವಿದ್ಯಮಾನಗಳೂ ಮಾನವ ಸಮಾಜವನ್ನು ಇಬ್ಭಾಗವಾಗಿಸುವ ಅಥವಾ ಭೌತಿಕವಾಗಿ-ಬೌದ್ಧಿಕವಾಗಿ ಛಿದ್ರವಾಗಿಸುವ, ಬಿಡಿಸಲಾಗದ ಸಿಕ್ಕುಗಳಿಗೆ ಸಿಲುಕಿಸುವ ಸಾಮಾಜಿಕ ವಿಕೃತಿಗಳು. ಇವುಗಳ ಮೂಲಕವೇ ಆಳುವ ವರ್ಗಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಜನಸಾಮಾನ್ಯರನ್ನು ವಿಭಜಿಸುತ್ತಾ ಆಧಿಪತ್ಯ ಸಾಧಿಸುತ್ತವೆ.
ಯಾವುದೇ ದೇಶದ ರಾಜಕೀಯ ನಾಯಕತ್ವವು ಅಗ್ನಿಪರೀಕ್ಷೆಗೆ ಗುರಿಯಾಗುವುದು ಈ ವಿಕೃತಿಗಳು ಸ್ಫೋಟಿಸಿದಾಗ. ರಾಜಕೀಯ ನಾಯಕತ್ವವು ಒಂದು ದೇಶಕ್ಕೆ ಶಾಂತಿಯುತ ವರ್ತಮಾನವನ್ನು ಸೃಷ್ಟಿಸಲು ಸಾಧ್ಯವಾಗದೆ ಹೋದರೆ ಇಂತಹ ವಿಕೃತಿಗಳಿಂದ ಜನತೆಯನ್ನು ರಕ್ಷಿಸಲು ಹೇಗೆ ಸಾಧ್ಯವಾದೀತು ? ವಿಶ್ವದ ಬಹುತೇಕ ರಾಷ್ಟ್ರಗಳ ಪ್ರಭುತ್ವಗಳೂ ಜನಸಾಮಾನ್ಯರ ನಡುವೆ ಸ್ಪೋಟಿಸುವ ಆಕ್ರೋಶ-ಅಸಮಾಧಾನಗಳನ್ನು ತಣಿಸಲು ಹೆಚ್ಚಿನ ಮಟ್ಟಿಗೆ ಪ್ರತೀಕಾರದ ಕ್ರಮಗಳನ್ನು ಅನುಸರಿಸುತ್ತವೆಯೇ ಹೊರತು ಸಂಧಾನ-ಸಮಾಲೋಚನೆಯ ಮಾರ್ಗವನ್ನು ಅನುಸರಿಸುವುದಿಲ್ಲ. ಹಾಗಾಗಿಯೇ ಜನತೆಯ ನಡುವೆ ಸ್ಪೋಟಗೊಳ್ಳುವ ಆಕ್ರೋಶವು ಹಿಂಸಾತ್ಮಕವಾದ ಕೂಡಲೇ ಪ್ರಭುತ್ವಗಳು ಮತ್ತಷ್ಟು ಕ್ರೂರ ಹೆಜ್ಜೆಗಳನ್ನು ಅನುಸರಿಸುತ್ತವೆ. ಅಸಂತೃಪ್ತ ಜನತೆಯ ಆಕ್ರೋಶಭರಿತ ಪ್ರತಿರೋಧವನ್ನು ಪ್ರಚೋದನೆ ಎಂದೇ ಭಾವಿಸುವ ಪ್ರಭುತ್ವಗಳು ಹಿಂಸೆಯನ್ನು ಪ್ರತಿಹಿಂಸೆಯಿಂದಲೇ ನಿವಾರಿಸುವ ನಿಟ್ಟಿನಲ್ಲಿ ಯೋಚಿಸುತ್ತವೆ. ಪ್ರಜಾಪ್ರಭುತ್ವ ವ್ಯವಸ್ಥೆಗಳಲ್ಲೂ ಇದೇ ಮಾದರಿ ಅನುಸರಿಸುತ್ತಿರುವುದನ್ನು ಭೌಗೋಳಿಕ ರಾಜಕಾರಣದಲ್ಲಿ ಗುರುತಿಸಬಹುದು. ಪ್ರಭುತ್ವಗಳ ಇಂತಹ ಸೇಡಿನ-ಪ್ರತೀಕಾರದ ನಡೆಯನ್ನು ತತ್ವಶಾಸ್ತ್ರಜ್ಞ ಫ್ರಾನ್ಸಿಸ್ ಬೇಕನ್ ಅರಣ್ಯ ನ್ಯಾಯ ಎಂದು ಬಣ್ಣಿಸುತ್ತಾರೆ.
ಇದನ್ನೂ ಓದಿ: ಗಾಜಾ ಯುದ್ಧ ಇಡೀ ಪ್ರದೇಶಕ್ಕೆ ವ್ಯಾಪಿಸುವ ಅಪಾಯ ಇದೆಯಾ?
ಸಂಯಮದ ಹಾದಿಯ ಅಗತ್ಯತೆ
ಆದರೆ ಪ್ರಭುತ್ವಗಳ ಪ್ರತೀಕಾರದ ಕ್ರಮಗಳು ಸಮಸ್ಯೆಗಳನ್ನು ಬಗೆಹರಿಸುವುದೇ ? ಜಾಗತಿಕ ಇತಿಹಾಸವನ್ನೊಮ್ಮೆ ಇಣುಕಿ ನೋಡಿದಾಗ ಇಲ್ಲ ಎಂದೇ ಉತ್ತರಿಸಬೇಕಾಗುತ್ತದೆ. ಹಿಂಸಾತ್ಮಕ ಮಾರ್ಗ ಅನುಸರಿಸುವ ಕೆಲವು ಹೋರಾಟಗಳ ಸಂದರ್ಭದಲ್ಲಿ ಸರ್ಕಾರಗಳು ಸಂಧಾನ-ಸಮಾಲೋಚನೆಯನ್ನು ಕೈಬಿಟ್ಟು ಪ್ರತಿರೋಧವನ್ನು ಹತ್ತಿಕ್ಕಲು ಪ್ರತಿಹಿಂಸಾತ್ಮಕ ಮಾರ್ಗಗಳನ್ನು ಅನುಸರಿಸುವ ಸುದೀರ್ಘ ಪರಂಪರೆಯನ್ನೇ ಕಂಡಿದ್ದೇವೆ. ಆದರೆ ಇದು ಪ್ರತಿರೋಧದ ಕಾವನ್ನು ತಾತ್ಕಾಲಿಕವಾಗಿ ತಗ್ಗಿಸಬಹುದೇ ಹೊರತು ಹೋರಾಟನಿರತ ಸಂಘಟನೆಯ ಅಸ್ತಿತ್ವವನ್ನು ಅಳಿಸಿಹಾಕಲಾಗುವುದಿಲ್ಲ. ಬದಲಾಗಿ ಕಾಲಕ್ರಮೇಣ ಹಿಂಸೆ-ಪ್ರತಿಹಿಂಸೆಯ ವಿಷವರ್ತುಲವನ್ನು ಸೃಷ್ಟಿಸಲಾಗುತ್ತದೆ. ಹಿಂಸಾತ್ಮಕ ಹೋರಾಟಗಳನ್ನೇ ಪ್ರಧಾನವಾಗಿ ಅನುಸರಿಸುವ ಸಂಘಟನೆಗಳೂ ಸಹ ಸ್ವಯಂ ವಿನಾಶಕಾರಿ ಘಟನೆಗಳಿಗೆ ಮುಕ್ತ ಅವಕಾಶಗಳನ್ನು ಕಲ್ಪಿಸುತ್ತವೆ. ಇಲ್ಲಿ ಪರ ವಿರೋಧದ ನೆಲೆಗಳಲ್ಲಿನ ಜನರೊಡನೆ ತಟಸ್ಥರಾಗಿರುವಂತಹ ಅಮಾಯಕರೇ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಾರೆ.
ಭಯೋತ್ಪಾದಕ ದಾಳಿಗಳ ಮೂಲಕವೇ ತಮ್ಮ ಇರುವಿಕೆಯನ್ನು, ಪ್ರಸ್ತುತತೆಯನ್ನು ಪ್ರಕಟಗೊಳಿಸಲು ಇಚ್ಚಿಸುವ ಉಗ್ರಗಾಮಿ ಸಂಘಟನೆಗಳು ಇಂತಹ ವಿಷವರ್ತುಲಗಳನ್ನು ಸಮಾಜದ ಸುತ್ತಲೂ ನಿರ್ಮಿಸುವುದನ್ನು ಜಾಗತಿಕ ಇತಿಹಾಸದುದ್ದಕ್ಕೂ ಗಮನಿಸಬಹುದು. ಈಗ ನಡೆಯುತ್ತಿರುವ ಹಮಾಸ್-ಇಸ್ರೇಲ್ ಕಾಳಗದಲ್ಲೂ ಇದನ್ನು ಗುರುತಿಸಬಹುದು. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಕಳೆದ ಒಂದು ತಿಂಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಅಮಾಯಕರ ಜೀವ ಹರಣ ಮಾಡಿದೆ. ಗಾಝಾ ಪಟ್ಟಿಯಲ್ಲಿ ನೆಲೆಸಿರುವ ಸಮಸ್ತ ಪ್ಯಾಲೆಸ್ಟೈನೀಯರೂ ಇಸ್ರೇಲ್‌ನ ಕ್ರೂರ ದಾಳಿಗೆ ತುತ್ತಾಗಿ ತಮ್ಮ ನೆಲೆ ಕಳೆದುಕೊಳ್ಳುತ್ತಿದ್ದಾರೆ. ಒಂದು ಸಂಘಟನೆಯನ್ನು ನಿರ್ಮೂಲ ಮಾಡಲು ಇಡೀ ಭೂಪ್ರದೇಶವನ್ನೇ ಮಸಣವನ್ನಾಗಿಸುವ ಅಮಾನುಷತೆಗೆ ಗಾಝಾ ಸಾಕ್ಷಿಯಾಗುತ್ತಿದೆ. ಜಾಗತಿಕ ಸಮುದಾಯ ಈ ಸಂದರ್ಭದಲ್ಲಿ ಇಸ್ರೇಲ್‌ನ ದಾಳಿಯನ್ನು ಬೆಂಬಲಿಸದೆ, ಸಂಧಾನ-ಮಾತುಕತೆಗಳಿಗೆ ಮೊರೆ ಹೋಗಿದ್ದರೆ ಸಾವಿರಾರು ಅಮಾಯಕ ಜೀವಗಳು ಉಳಿಯುತ್ತಿದ್ದವು.
“ ಪ್ರಾಚೀನ ಹಮುರಾಬಿ ಸಂಹಿತೆಯೂ ಸಹ “ಒಂದು ಕಣ್ಣಿಗೆ ಒಂದು ಕಣ್ಣು” ಎಂದು ಹೇಳುತ್ತದೆಯೇ ಹೊರತು ಮನುಷ್ಯನ ಇಡೀ ದೇಹವನ್ನು ಬಯಸುವುದಿಲ್ಲ. ಮಹಾತ್ಮ ಗಾಂಧಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ನಿಯಮವನ್ನೇ ಅನುಸರಿಸಿದರೆ ಇಡೀ ಜಗತ್ತು ಕುರುಡಾಗುತ್ತದೆ ಎಂದು ಹೇಳಿರುವುದನ್ನು ಸ್ಮರಿಸಬೇಕಿದೆ “ (ಅಶೋಕ್ ಲವಾಸಾ- ದ ಹಿಂದೂ- Reconciliation over Retribution). ಆಧುನಿಕ ಜಗತ್ತಿನ ಆಳ್ವಿಕೆಯಲ್ಲಿ ಗಾಂಧಿ ಪ್ರತಿಪಾದಿಸುವ ಅಹಿಂಸಾತ್ಮಕ ಅಥವಾ ಸಂಧಾನ ಮಾರ್ಗಗಳನ್ನು ಅಪ್ರಸ್ತುತ ಎಂದೂ ನಿರಾಕರಿಸಲಾಗುತ್ತದೆ. ಹಿಂಸಾತ್ಮಕ ಮಾರ್ಗದ ಮೂಲಕ ಸಮಾಜದಲ್ಲಿ ಕ್ಷೋಭೆ ಉಂಟುಮಾಡುವ ಯಾವುದೇ ಸಂಘಟನೆಗಳನ್ನು ಪ್ರತಿಹಿಂಸೆಯ ಮೂಲಕವೇ ನಿರ್ನಾಮ ಮಾಡುವುದು ಸಾಮಾಜಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಸಹಾಯಕವಾಗುತ್ತದೆ ಎಂಬ ಭಾವನೆ ಆಳವಾಗಿ ಬೇರೂರಿದೆ. ಆದರೆ ಶತಮಾನಗಳ ಇತಿಹಾಸವನ್ನು ಗಮನಿಸಿದಾಗ ಇದು ಪೂರ್ಣ ಸತ್ಯವಲ್ಲ ಎಂದೂ ಅರಿವಾಗುತ್ತದೆ. ಅಪರಾಧಿಗಳನ್ನು, ಅತ್ಯಾಚಾರಿಗಳನ್ನು, ವಿಧ್ವಂಸಕರನ್ನು ಎನ್ಕೌಂಟರ್ ಮೂಲಕ ನಿರ್ನಾಮ ಮಾಡುವುದರ ಮೂಲಕ ತಾತ್ಕಾಲಿಕವಾಗಿ ಪಾತಕ ಕೃತ್ಯಗಳನ್ನು ನಿಯಂತ್ರಿಸಬಹುದು. ಆದರೆ ಅತ್ಯಾಚಾರವನ್ನಾಗಲೀ, ವಿಧ್ವಂಸಕತೆಯನ್ನಾಗಲೀ ನಿರ್ಮೂಲ ಮಾಡಲಾಗುವುದಿಲ್ಲ. ಇದು ವರ್ತಮಾನದ ವಾಸ್ತವ.
ಪ್ರಜಾಪ್ರಭುತ್ವವನ್ನು ಅನುಮೋದಿಸುವ ವ್ಯವಸ್ಥೆಯಲ್ಲಿ ಆಳ್ವಿಕೆ ನಡೆಸುವವರು ಎಂತಹುದೇ ಪ್ರತಿರೋಧ ಎದುರಾದರೂ ಅದನ್ನು ಸಂಧಾನ-ಸಮಾಲೋಚನೆಗಳ ಮೂಲಕ ಪರಿಹರಿಸುವ ಪ್ರಯತ್ನಗಳನ್ನು ಮಾಡುವುದು ಅಪೇಕ್ಷಣೀಯ. ಆದರೆ 20ನೆಯ ಶತಮಾನದ ಬೆಳವಣಿಗೆಗಳನ್ನು ಗಮನಿಸಿದರೆ ಯಾವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಆಳ್ವಿಕೆಯಲ್ಲಿ ಈ ಧೋರಣೆಯನ್ನು ಕಾಣಲಾಗುವುದಿಲ್ಲ. ಮೇಲ್ನೋಟಕ್ಕೆ ಕಾಲ್ಪನಿಕ ಎನಿಸಿದರೂ ಇಂತಹ ಪ್ರಯತ್ನಗಳು ಹಲವು ದೇಶಗಳಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿರುವುದನ್ನೂ ಸಹ ಗುರುತಿಸಬಹುದು. ಮತ್ತೊಂದೆಡೆ ಪ್ರಭುತ್ವದ ಅತಿರೇಕದ ಪ್ರತೀಕಾರದ ಕ್ರಮಗಳ ಪರಿಣಾಮವಾಗಿ ಒಂದು ಇಡೀ ತಲೆಮಾರು ಹಿಂಸಾತ್ಮಕ ಮಾರ್ಗಗಳನ್ನು ಅನುಸರಿಸಿರುವುದನ್ನೂ ಗುರುತಿಸಬಹುದು. ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತಿತರ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಇಂದಿಗೂ ಉಲ್ಪಣಿಸುತ್ತಿರುವ ಹಿಂಸಾತ್ಮಕ ರಾಜಕಾರಣ ಒಂದು ಸ್ಪಷ್ಟ ನಿದರ್ಶನ.
ಭಾವೋನ್ಮಾದದ ಅತಿರೇಕಗಳ ನಡುವೆ
ಒಂದು ನಿರ್ದಿಷ್ಟ ಭೂ ಪ್ರದೇಶದ ಅಥವಾ ಜನಸಮುದಾಯದ ಮೂಲ ಅಸ್ಮಿತೆ ಹಾಗೂ ಅಸ್ತಿತ್ವಕ್ಕಾಗಿ ಹೋರಾಡುವ ಸಂಘಟನೆಗಳೂ ಸಹ ಅನೇಕ ಸಂದರ್ಭಗಳಲ್ಲಿ ಹಿಂಸಾತ್ಮಕ ಮಾರ್ಗವನ್ನೇ ಮೂಲ ಮಂತ್ರವನ್ನಾಗಿ ಅನುಸರಿಸುವ ಮೂಲಕ ಪ್ರಭುತ್ವದ ಪ್ರತಿದಾಳಿಯನ್ನು ಎದುರಿಸುತ್ತಿವೆ. ಇಸ್ಲಾಮಿಕ್ ಸ್ಟೇಟ್ ಅಥವಾ ಖಲೀಫೇಟ್ ಸ್ಥಾಪಿಸುವ ಉದ್ದೇಶದೊಂದಿಗೆ ಧರ್ಮಯುದ್ಧದಲ್ಲಿ ತೊಡಗಿರುವ ಸಂಘಟನೆಗಳು ಮಧ್ಯಪ್ರಾಚ್ಯದಲ್ಲಿ, ಆಫ್ರಿಕಾ ಮತ್ತು ಏಷ್ಯಾದ ದೇಶಗಳಲ್ಲಿ ಮಾಡಿರುವ ದುಸ್ಸಾಹಸಗಳಿಗೆ ಲಕ್ಷಾಂತರ ಅಮಾಯಕರು ಈಗಾಗಲೇ ಬಲಿಯಾಗಿದ್ದಾರೆ. ಇರಾಕ್, ಸಿರಿಯಾ, ಸೂಡಾನ್, ಲಿಬ್ಯಾ, ನೈಜೀರಿಯಾ, ಸೊಮಾಲಿಯಾ, ಯಮನ್ ಮುಂತಾದ ದೇಶಗಳಲ್ಲಿ ತಳಮಟ್ಟದ ಜನಸಮುದಾಯಗಳ ಸಾಮಾಜಿಕ-ಸಾಂಸ್ಕೃತಿಕ ಹಾಗೂ ಪ್ರಾದೇಶಿಕ ಅಸ್ಮಿತೆಗಳನ್ನು ರಕ್ಷಿಸುವ ಹೋರಾಟಗಳಲ್ಲಿ ಧರ್ಮರಕ್ಷಣೆಯೇ ಪ್ರಧಾನವಾಗಿರುವುದರಿಂದ, ಈ ದೇಶಗಳ ಸಾಮಾನ್ಯ ಜನತೆ ಹಿಂಸೆ-ಪ್ರತಿಹಿಂಸೆಯ ವಾತಾವರಣದಲ್ಲೇ ನಲುಗಿಹೋಗುತ್ತಿರುವುದನ್ನು ಗಮನಿಸಬಹುದು. ಇತ್ತೀಚಿನ ಹಮಾಸ್ ದಾಳಿಯೂ ಇದೇ ಹಾದಿಯಲ್ಲಿ ಸಾಗುತ್ತಿದೆ.
ಇದನ್ನೂ ಓದಿ: ‘ವಾರದಲ್ಲಿ 70 ಗಂಟೆ ಕೆಲಸ’ದ ಸಲಹೆ: ನಿಜವಾಗಿಯೂ ಯುವಜನರ ಹಿತದೃಷ್ಟಿಯಿಂದಲೋ ಅಥವಾ ಕಾರ್ಪೊರೇಟ್‍ಗಳ ಗರಿಷ್ಟ ಲಾಭಕ್ಕೋ?
ಇಂತಹ ಹಿಂಸಾತ್ಮಕ ಪ್ರತಿರೋಧಗಳಿಗೆ ಪ್ರತೀಕಾರದ ಉಪಕ್ರಮಗಳನ್ನು ಕೈಗೊಳ್ಳುವ ರಾಷ್ಟ್ರ ಪ್ರಭುತ್ವಗಳ ಪ್ರತಿದಾಳಿಯನ್ನು ಸಾಮಾನ್ಯ ಜನತೆ ಒಂದು ನೆಲೆಯಲ್ಲಿ ಅಂಗೀಕರಿಸುತ್ತಾರೆ. ಇದರಿಂದ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂಬ ಭಾವನೆ ಅಥವಾ ದುಷ್ಟ ಶಕ್ತಿಗಳನ್ನು ನಿಗ್ರಹಿಸಲು ಈ ಮಾರ್ಗಗಳು ಅನಿವಾರ್ಯ ಎಂಬ ಮನೋಭಾವ ಸಾರ್ವಜನಿಕರಲ್ಲಿ ಸಹಜವಾಗಿಯೇ ಇರುತ್ತದೆ. ಭಾರತದಲ್ಲೂ ಸಹ ಎನ್ಕೌಂಟರ್ ಸಂಸ್ಕೃತಿಯನ್ನು ಸಮಾಜದ ಒಂದು ವರ್ಗ ಸ್ವಾಗತಿಸುತ್ತಲೇ ಬಂದಿರುವುದನ್ನು ಗಮನಿಸಬಹುದು. ಅಪರಾಧವನ್ನು ತಡೆಗಟ್ಟುವ ಹಾದಿಯಲ್ಲಿ ಆರೋಪಿಗಳನ್ನು ಅಥವಾ ಅಪರಾಧಿಗಳನ್ನು ಭೌತಿಕವಾಗಿ ನಿರ್ಮೂಲ ಮಾಡುವ ಧೋರಣೆ ಧಾರ್ಮಿಕ ಮೂಲಭೂತವಾದಿಗಳ ನಡುವೆ ತುಡುಗು ಪಡೆಗಳನ್ನು (Fringe elements) ಸುಲಭವಾಗಿ ಸೃಷ್ಟಿಸುತ್ತದೆ. ಇಂತಹ ಸಮಾಜದಲ್ಲಿ ಹಿಂಸೆ-ಪ್ರತಿಹಿಂಸೆ ಎರಡೂ ಸ್ವೀಕೃತವಾಗಿಬಿಡುತ್ತದೆ. ಧರ್ಮ-ಸಂಸ್ಕೃತಿ ರಕ್ಷಣೆಯ ನೆಪದಲ್ಲಿ ಈ ತುಡುಗು ಪಡೆಗಳೇ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಅನಧಿಕೃತ ಕಾವಲುಪಡೆಗಳಾಗಿ ಕಾರ್ಯನಿರ್ವಹಿಸುತ್ತವೆ. ಸರ್ಕಾರಗಳು ಇಂತಹ ಪ್ರವೃತ್ತಿಯನ್ನು ಮೌನವಾಗಿ ಸಮ್ಮತಿಸುತ್ತವೆ.
ಹಾಗಾಗಿ ಭಾವೋನ್ಮಾದದ ಸನ್ನಿವೇಶಗಳಲ್ಲಿ ಸಾರ್ವಜನಿಕ ವಲಯದಲ್ಲಿ ನಡೆಯುವ ವ್ಯಕ್ತಿಗತ ದಾಳಿ, ಹಲ್ಲೆ, ಗುಂಪುಥಳಿತ, ಬಾಂಬ್ ಸ್ಫೋಟಗಳೂ ಸಹ ಮತಾಂಧರಿಗೆ ಸ್ವೀಕೃತವಾಗಿಬಿಡುತ್ತದೆ. ಧರ್ಮ-ಸಂಸ್ಕೃತಿ ಸಂರಕ್ಷಣೆಯ ನೆಪದಲ್ಲಿ ಮೂಲಭೂತವಾದಿಗಳು, ಮತಾಂಧರು ಸಮಾಜದ ನಡುವೆಯೇ ʼಅನ್ಯರನ್ನುʼ ಸೃಷ್ಟಿಸಿ ಕಾನೂನು ಕೈಗೆತ್ತಿಕೊಂಡು ಅಮಾಯಕರ ಮೇಲೆ ದಾಳಿ ನಡೆಸುವ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಈ ದೃಷ್ಟಿಯಿಂದಲೇ ನೋಡಬೇಕಿದೆ. ನಾಗರಿಕತೆಯ ಸಮಾಜವನ್ನು ಕಟ್ಟಲು ಬಯಸುವ ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಆಡಳಿತ ಸಂಯಮ ಹಾಗೂ ಶಾಂತಿ-ಸಂಧಾನ-ಸಮಾಲೋಚನೆಯ ಮನೋಭಾವ ಇರಬೇಕಾಗುತ್ತದೆ. ಜನಸಾಮಾನ್ಯರ-ಸಮುದಾಯಗಳ ನಡುವೆ ಉದ್ಭವಿಸುವ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಅಥವಾ ತಳಮಟ್ಟದ ಸಮುದಾಯಗಳಲ್ಲಿನ ವ್ಯವಸ್ಥೆಯ ವಿರುದ್ದದ ಆಕ್ರೋಶಗಳನ್ನು ನಿಭಾಯಿಸಲು ಶಾಂತಿಯುತ ಮಾರ್ಗಗಳನ್ನು ಅನುಸರಿಸುವ ಮೂಲಕ ಪ್ರಭುತ್ವಗಳು ಒಂದು ನಾಗರಿಕ ಜಗತ್ತನ್ನು ನಿರ್ಮಿಸಬಹುದು.
ಯುದ್ಧೋನ್ಮಾದ, ಅತಿರೇಕದ ಧಾರ್ಮಿಕ ಭಾವೋನ್ಮಾದ ಹಾಗೂ ಉನ್ಮತ್ತ ರಾಷ್ಟ್ರೀಯತೆಯೇ ಇಡೀ ಜಗತ್ತನ್ನು ಆಕ್ರಮಿಸುತ್ತಿರುವ ಸಂದರ್ಭದಲ್ಲಿ ನಾಗರಿಕ ಪ್ರಪಂಚ ಹಿಂಸೆ-ಪ್ರತಿಹಿಂಸೆಯಿಂದ ಸೃಷ್ಟಿಯಾಗುವ ಶಾಶ್ವತ ಮಸಣಗಳತ್ತ ಒಮ್ಮೆಯಾದರೂ ದೃಷ್ಟಿಹಾಯಿಸಬೇಕಿದೆ. ನಾಗರಿಕ ಎಂದು ಬೆನ್ನುತಟ್ಟಿಕೊಳ್ಳುವ ಪ್ರಜ್ಞಾವಂತ ಜನತೆ ಈ ಸಂದರ್ಭದಲ್ಲಿ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳುವ ಮೂಲಕ ಹಿಂಸಾತ್ಮಕ ಮನೋಭಾವದ ವಿರುದ್ಧ ದನಿ ಎತ್ತಬೇಕಿದೆ. ಗಾಝಾಪಟ್ಟಿಯ ಸಾವಿರಾರು ಅಮಾಯಕ ಶವಗಳು ಈ ನಾಗರಿಕ ಪ್ರಪಂಚದ ಕಣ್ತೆರೆಸಬೇಕಿದೆ. ಅಂತಿಮವಾಗಿ ಯಾವುದೇ ಧರ್ಮ ಉಳಿದರೂ ಅದನ್ನು ಅನುಸರಿಸುವ ಮನುಷ್ಯರೂ ಉಳಿಯಬೇಕಲ್ಲವೇ ? ಹಿಂಸೆ-ಪ್ರತಿಹಿಂಸೆಯ ಧೋರಣೆ ಭೌತಿಕವಾಗಿ ಸಾಂಸ್ಥಿಕ ಧರ್ಮಗಳನ್ನು ಉಳಿಸಿದರೂ ತಾತ್ವಿಕವಾಗಿ ಮಾನವ ಧರ್ಮವನ್ನು ನಾಶಪಡಿಸುವ ಮೂಲಕ ನಾಗರಿಕತೆಯನ್ನು ಆಧುನಿಕತೆಯಿಂದ ಪ್ರಾಚೀನತೆಯೆಡೆಗೆ ಕರೆದೊಯ್ಯುತ್ತದೆ. ಈ ಎಚ್ಚರಿಕೆ ನಮ್ಮೊಳಗಿದ್ದರೆ ನಾವು ಯುದ್ಧೋನ್ಮಾದದಿಂದ ಮುಕ್ತರಾಗಬಹುದು.
-೦-೦-೦-
ವಿಡಿಯೋ ನೋಡಿ: ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿರುವ ಪ್ಯಾಲಿಸ್ಟೈನ್ ಕಾರ್ಮಿಕರನ್ನು ಹೊರದಬ್ಬಲಾಗುತ್ತಿದೆ. Janashakthi Media