ಸಾಹಿತ್ಯ ಹಾಗೂ ಚಳುವಳಿ ಒಂದಾಗಿ ಸಾಗಿದಾಗ ಬದುಕು ಸುಂದರವಾಗಲು ಸಾಧ್ಯ – ಮೀನಾಕ್ಷಿ ಸುಂದರಂ

ಹೊನ್ನಾವರ: ಡಾ. ವಿಠ್ಠಲ ಭಂಡಾರಿ ಒಬ್ಬ ಸಮರ್ಥ ಸಾಮಾಜಿಕ ಕಾರ್ಯಕರ್ತ ಆಗಿದ್ದರು. ಅವರ ಆಶಯ ಹಾಗು ಸಾಧನೆಗಳಿಗೆ ಪೂರಕ ಕೆಲಸಗಳು ನಮ್ಮಿಂದ ಆಗಬೇಕಿದೆ. ಸರಕಾರದ ನೀತಿಗಳು ಸಣ್ಣ ಬಂಡವಾಳದಾರರನ್ನು ಮುಗಿಸುತ್ತಿವೆ. ಜೀವವಿರೋಧಿ ಭಾವಗಳನ್ನು ಪ್ರಶ್ನಿಸುವ, ವಿರೋಧಿಸುವ ಕಾರ್ಯವನ್ನು ಚಳುವಳಿ ಮಾಡಿದಂತೆ ಅದಕ್ಕೆ ಪೂರಕವಾದ ಸಾಹಿತ್ಯವೂ ರಚನೆಯಾಗಬೇಕು. ಸಾಹಿತ್ಯ ಹಾಗೂ ಚಳುವಳಿ ಒಂದಾಗಿ ಸಾಗಿದಾಗ ಬದುಕು ಸುಂದರವಾಗಲು ಸಾಧ್ಯ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರ ಹೇಳಿದರು.

ಪ್ರಸ್ತುತ ದೇಶ ಮತ್ತು ರಾಜ್ಯ ರಾಜಕಾರಣದಲ್ಲಿ ಸಾಂಸ್ಕೃತಿಕ ಜವಾಬ್ದಾರಿಯನ್ನು ಹೇಳುತ್ತ ವಿಠ್ಠಲ ಭಂಡಾರಿಯವರೊಂದಿಗಿನ ಒಡನಾಟವನ್ನು ಮೆಲುಕು ಹಾಕಿದರು. ಅವರು ದಿನಾಂಕ 21-05-2023 ರಂದು ಹೊನ್ನಾವರದ ಸಹಯಾನ ಕೆರೆಕೋಣದ ಅಂಗಳದಲ್ಲಿ ನಡೆದ ವಿಠ್ಠಲ ಭಂಡಾರಿ ನೆನಪಿನ ಎರಡನೇ ವರ್ಷದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅತಿಥಿಯಾಗಿ ಭಾಗವಹಿಸಿದ ರಂಗಭೂಮಿ ಕಲಾವಿದರಾದ ಅನಂತ ನಾಯ್ಕರು ಸಹಯಾನದ ಮನೆಯೇ ಪ್ರೀತಿಯ ತಾಣವೆನ್ನುತ್ತಾ ವಿಠ್ಠಲರ ಕೆಲಸಗಳನ್ನು ತಮ್ಮ ಒಡನಾಟವನ್ನು ನೆನಪಿಸಿಕೊಂಡರು.

ಇನ್ನೊಬ್ಬ ಅತಿಥಿ ಕವಿ ಕಾವ್ಯಶ್ರೀ ನಾಯ್ಕ ಮನ್ಮನೆ ಮಾತನಾಡುತ್ತ ವಿದ್ಯಾರ್ಥಿಗಳ ಸಾಮಾಜಿಕ ಆರ್ಥಿಕ ಹಿನ್ನೆಲೆ ಅರಿತು ಆರ್ಥಿಕ ಸಹಾಯ ಮಾಡುತ್ತ ಪಾಠ ಮಾಡುವ ವಿಠ್ಠಲ ಮೇಷ್ಟ್ರು, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿರುವ ವಿಶೇಷ ಗುಣ ಆಸಕ್ತಿಗಳ ಗುರುತಿಸಿ ತಿದ್ದುವ ಮತ್ತು ಪ್ರೋತ್ಸಾಹಿಸುವ ಕೆಲಸ ಮಾಡಿದ್ದರಿಂದಲೇ ಅವರು ಎಲ್ಲರಿಗೂ ಸ್ಪೂರ್ತಿ ಎಂದು ಗುರುಶಿಷ್ಯ ಸಂಬಂಧವನ್ನು ಆರ್ದ್ರವಾಗಿ ತೆರೆದಿಟ್ಟರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಕೋಲ್ಸಿರ್ಸಿ ಕನ್ನೇಶ್ ಅವರು ಮಾತನಾಡುತ್ತಾ, ವಿಠ್ಠಲ್ ವಿದ್ಯಾರ್ಥಿಗಳಲ್ಲಿ ಕಾಣುವ ವಿಶೇಷತೆ ಏನೆಂದರೆ, ಪ್ರಾಮಾಣಿಕೆತೆ ಹಾಗೂ ಬುದ್ಧಿವಂತಿಕೆ. ಸಿದ್ದಾಪುರದಲ್ಲಿ ಕಾಲೇಜು ಕೆಲಸ ಮಾಡುತ್ತಲೇ ನಾಡಿನಲ್ಲಿ ಪ್ರಗತಿಪರ ಮೌಲ್ಯಗಳ ವ್ಯಕ್ತಿತ್ವಗಳನ್ನು ಬೆಳೆಸಲು ಅಪಾರವಾಗಿ ಶ್ರಮಿಸಿದರು. ತನ್ನ ಜೀವಿತದ ಕಡಿಮೆ ಅವಧಿಯಲ್ಲಿ ಉತ್ತಮ ಸಾಮಾಜಿಕ ಪರಿಸರ ನಿರ್ಮಾಣ ಮಾಡಿದ ವಿಠ್ಠಲರ ಕೊಡುಗೆ ಹಾಗೂ ಅನುಪಸ್ಥಿತಿ ಸದಾ ನಮ್ಮನ್ನು ಕಾಡುತ್ತದೆ ಎಂದು ನೆನಪಿಸುತ್ತ ತಮ್ಮ ಜೊತೆಗಿನ ವೈಚಾರಿಕ ವಾಗ್ವಾದಗಳ ಆಪ್ತತೆಯನ್ನು ಹೇಳಿದರು.

ಕುಮಟಾ ಡಾ. ಕಮಲಾ ಬಾಳಿಗಾ ಬಿ.ಎಡ್ ಕಾಲೇಜಿನ ವಿದ್ಯಾರ್ಥಿಗಳು ಆರ್. ಕೆ. ಶಿವಕುಮಾರ್ ನಿರ್ದೇಶಿಸಿದ ಡಾ. ಚಂದ್ರಶೇಖರ ಕಂಬಾರರ ಮೂಲ ಕಾದಂಬರಿ ಆಧಾರಿತ ‘ಜಿ.ಕೆ. ಮಾಸ್ತರರ ಪ್ರಣಯ ಪ್ರಸಂಗ’ ನಾಟಕವನ್ನು ಪ್ರದರ್ಶಿಸಿದರು. ಅತ್ಯಂತ ಸರಳ ಸಜ್ಜಿಕೆಯಲ್ಲಿ ಅತ್ಯಂತ ಲವಲವಿಕೆಯಿಂದ ರಂಗ ಪ್ರದರ್ಶನ ಪ್ರೇಕ್ಷಕರನ್ನು ತಟ್ಟಿತು. ಕಲಾವಿದರಾದ ವಿನಾಯಕ ಅವರು ವಚನ, ತತ್ವಪದ ಹಾಗೂ ರಂಗ ಗೀತೆಗಳನ್ನು ಹಾಡಿದರು. ಸಹಯಾನದ ಮ್ಯಾನೇಜಿಂಗ್ ಟ್ರಸ್ಟಿ ಮಾಧವಿ ಭಂಡಾರಿ ಕೆರೆಕೋಣ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು. ಸಹಯಾನ ಟ್ರಸ್ಟ್, ಯಕ್ಷಕಿರೀಟ, ಚಿಂತನ ಉಕ, ಸಮುದಾಯ ಕರ್ನಾಟಕ, ಬಂಡಾಯ ಪ್ರಕಾಶನ, ಪ್ರೀತಿಪದ ಹಾಗೂ ಬಾಲಸಂಘ ಸಂಘಟನೆಗಳ ಪರವಾಗಿ ಇಂದಿರಾ ಭಂಡಾರಿ, ಕಿರಣ ಭಟ್, ಡಾ. ಉಮಾ, ನವೀನ್ ಕುಮಾರ್ ಹಾಸನ, ಗಣೇಶ ಭಂಡಾರಿ, ವಿ.ಟಿ. ಗೌಡ, ಕಮಲಾಕರ ಭಂಡಾರಿ, ಐಕೆ ಛಾಯಾ, ದಾಮೋದರ ನಾಯ್ಕ, ಮಂಜುನಾಥ ಶೆಟ್ಟಿ, ಗಂಗಾ ನಾಯ್ಕ, ಗಣೇಶ್ ರಾಠೋಡ್, ನಿತೀಶ್ ಗೌಡ, ಜಿತೇಂದ್ರ ನಾಯ್ಕ ಕಾರ್ಯಕ್ರಮದ ಸಂಯೋಜನೆಯಲ್ಲಿ ಸಹಾಯ ನೀಡಿದರು. ಯಮುನಾ ಗಾಂವ್ಕರ್ ವಿಠ್ಠಲ ಭಂಡಾರಿಯವರ ಬದುಕು, ಬರಹ ಮತ್ತು ನಿರ್ವಹಿಸಿದ ಕೆಲಸಗಳನ್ನು ಸಾಂದರ್ಭಿಕವಾಗಿ ನೆನಪಿಸುತ್ತ ಯಮುನಾ ಗಾಂವ್ಕರ್ ಕಾರ್ಯಕ್ರಮವನ್ನು ನಿರೂಪಿಸಿದರು.

ವರದಿ: ಮಂಜುನಾಥ ಶೆಟ್ಟಿ, ಕೆರೆಕೋಣ.

Donate Janashakthi Media

Leave a Reply

Your email address will not be published. Required fields are marked *