ದಿನದ ಕೆಲಸದ ಅವಧಿ 3 ಗಂಟೆ ಹೆಚ್ಚಳದ ತಿದ್ದುಪಡಿ ವಿಧೇಯಕವನ್ನು ಹಿಂಪಡೆಯಲು ಆಗ್ರಹಿಸಿ ಹಾಗೂ ಕಾರ್ಮಿಕರ ಶೋಷಣೆಗೆ ಹಾಗೂ ಬಂಡವಾಳಗಾರರ ಲಾಭ ಹೆಚ್ಚಳಕ್ಕೆ ಅವಕಾಶ ನೀಡಿದ ರಾಜ್ಯದ ಬಿಜೆಪಿ ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಇಂದು ಕರ್ನಾಟಕ ರಾಜ್ಯಾದ್ಯಂತ ಪ್ರತಿಭಟನೆಯ ಕರೆಯ ಮೇರೆಗೆ ಸೆಂಟರ್ ಆಫ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಸಂಘಟನೆ ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನಗಳು ನಡೆದಿವೆ.
ಮಂಗಳೂರು ನಗರದ ಕ್ಲಾಕ್ ಟವರ್ ಬಳಿಯಲ್ಲಿ ಸಿಐಟಿಯು ಹಾಗೂ ಹಾಗೂ ಐಎನ್‌ಟಿಯುಸಿ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನ ನಡೆದಿದ್ದು, ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಮಾತನಾಡಿ, ಜನಸಾಮಾನ್ಯರ ಬದುಕಿನ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲದ ರಾಜ್ಯದ ಬಿಜೆಪಿ ಸರಕಾರ ಕಾರ್ಮಿಕರ ಕೆಲಸದ ಅವಧಿಯನ್ನು 12 ಗಂಟೆಗೆ ಹೆಚ್ಚಳ ಮಾಡುವ ಮೂಲಕ ತಾನು ಬಂಡವಾಳಿಗರ, ಮಾಲಕರ ಪರವೆಂದು ಸಾಬೀತುಪಡಿಸಿದೆ. ಇತ್ತೀಚೆಗೆ ಮಂಡಿಸಿದ ಬಜೆಟ್ ಕೂಡಾ ದುಡಿಯುವ ವರ್ಗದ ವಿರುದ್ದವಾಗಿದ್ದು ಯಾವುದೇ ಆಶಾಭಾವನೆ ಇಲ್ಲವಾಗಿದೆ. ರಾಜ್ಯದ ಕಾರ್ಖಾನೆಗಳಲ್ಲಿ ದಿನದ ಕೆಲಸದ ಅವಧಿ ಗರಿಷ್ಟ 9 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಿ ಹಾಗೂ ದುಡಿಯುವ ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ದುಡಿಸಿಕೊಳ್ಳಲು ಅವಕಾಶ ಕಲ್ಪಿಸಿ ಕಾರ್ಖಾನೆ ಕಾಯ್ದೆ – 1948ಕ್ಕೆ ತಿದ್ದುಪಡಿ ಮಾಡಿ ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ 2023 ನ್ನು ರಾಜ್ಯ ಬಿಜೆಪಿ ಸರ್ಕಾರ ವಿಧಾನ ಸಭೆಯಲ್ಲಿ ಮಂಡಿಸಿ ಅಂಗೀಕಾರ ಮಾಡಿರುವುದು ಕಾರ್ಮಿಕ ವಿರೋಧಿ ನೀತಿಯಾಗಿದೆ. ಇದು ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಬಂಡವಾಳಗಾರರನ್ನು ಓಲೈಸುವ ಕ್ರಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ರಾಜ್ಯ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ರವರು ಸ್ವತಃ ಕೈಗಾರಿಕೋದ್ಯಮಿಯಾಗಿದ್ದು, ಸಾವಿರಾರು ಕಾರ್ಮಿಕರನ್ನು ಯಾವುದೇ ಸವಲತ್ತುಗಳನ್ನು ನೀಡದೆ ಸತಾಯಿಸುತ್ತಿರುವ ಕಾರ್ಮಿಕ ವಿರೋಧಿ ವ್ಯಕ್ತಿ. ಇಂಥವರಿಂದ ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಮುಂಬರುವ ಚುನಾವಣೆಯಲ್ಲಿ ರಾಜ್ಯದ ಮಾಲಕ ವರ್ಗದಿಂದ ಸಾವಿರಾರು ಕೋಟಿ ರೂಪಾಯಿ ಹಣವನ್ನು ದೋಚಿ ಮತ್ತೆ ಅಧಿಕಾರಕ್ಕೇರಲು ಬಿಜೆಪಿ ಹೂಡಿರುವ ಕುತಂತ್ರವಾಗಿದೆ. ಇಂತಹ ಕಾರ್ಮಿಕ ವಿರೋಧಿ ಸರಕಾರವನ್ನು ಮತ್ತೆ ಅಧಿಕಾರಕ್ಕೇರದಂತೆ ರಾಜ್ಯದ ಕಾರ್ಮಿಕ ವರ್ಗ ಒಂದಾಗಿ ತಡೆಯಬೇಕಾಗಿದೆ ಎಂದರು.
ಐಎನ್‌ಟಿಯುವ ಜಿಲ್ಲಾಧ್ಯಕ್ಷ ಬೊಂಡಾಲ ಚಿತ್ತರಂಜನ್ ಶೆಟ್ಟಿ ಮಾತನಾಡುತ್ತಾ, ಪ್ರಸ್ತುತ ಕಾಲಘಟ್ಟದಲ್ಲಿ ಉದ್ಯೋಗದ ಕಡಿತ, ಕಡಿಮೆ ವೇತನಕ್ಕೆ ದುಡಿಮೆ, ಅಧಿಕ ಉತ್ಪಾದನೆ ಮಾಡಿಸಿಕೊಳ್ಳುವುದು ಹೆಚ್ಚಾಗಿದೆ. ಈ ತಿದ್ದುಪಡಿ ಕಾಯ್ದೆಯು ಕಾರ್ಮಿಕರ ಮೇಲೆ ವಿರಾಮವಿಲ್ಲದೆ ಅಧಿಕ ಉತ್ಪಾದನೆ ಮಾಡಬೇಕೆನ್ನುವ ಒತ್ತಡ, ಶೋಷಣೆ ಹೆಚ್ಚಿಸಲಿದೆ. ಹಲವು ಕಾರ್ಖಾನೆಗಳ ಮಾಲಿಕರಿಗೆ 6 ದಿನಗಳಲ್ಲಿ ಉತ್ಪಾದನೆ ಆಗುತ್ತಿದದ್ದು 4 ದಿನಗಳಲ್ಲೇ ಉತ್ಪಾದನೆ ಕಾರ್ಮಿಕರ ಶ್ರಮದ ಶೋಷಣೆಯಿಂದ ಸಿಗಲಿದೆ. ಚಾರಿತ್ರಿಕ 8 ಗಂಟೆ ಕೆಲಸ 8 ಗಂಟೆ ವಿರಾಮ ಮತ್ತು 8 ಗಂಟೆ ಮನೋರಂಜನೆ ಎಂಬ ಜೀವಪರ ತಾತ್ವಿಕ ನೆಲೆಯನ್ನು ಕಳಚಿ ಹಾಕಿ ಬಂಡವಾಳಕ್ಕೆ ಲಾಭ ಮಾಡಿಕೊಡುವ ನವಉದಾರವಾದಿ ಆರ್ಥಿಕ ನೀತಿಯ ಜಾರಿಯ ನಿಟ್ಟಿನಲ್ಲಿ ಬಿಜೆಪಿ ಸರ್ಕಾರವು ಈ ತಿದ್ದುಪಡಿಗೆ ಕ್ರಮ ವಹಿಸಿದೆ ಎಂದು ಹೇಳಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಜೆ ಬಾಲಕೃಷ್ಣ ಶೆಟ್ಟಿ ಮಾತನಾಡಿ, ದುಡಿಯುವ ಮಹಿಳೆಯರ ಸುರಕ್ಷತೆ, ಕೆಲಸದ ಭದ್ರತೆ, ಸಾರಿಗೆ, ಸೇವಾ ಸೌಲಭ್ಯಗಳಿಂದ ಮಹಿಳಾ ಕಾರ್ಮಿಕರು ವಂಚಿತರಾಗಿದ್ದಾರೆ. ಹೀಗಿರುವಾಗ ಮಹಿಳಾ ಕಾರ್ಮಿಕರನ್ನು ರಾತ್ರಿಪಾಳಿಯಲ್ಲಿ ದುಡಿಮೆ ಮಾಡಿಕೊಳ್ಳಲು ಕಾರ್ಖಾನೆ ಮಾಲಿಕರಿಗೆ ಅನುವುಗೊಳಿಸಿ ತಿದ್ದುಪಡಿ ಮಾಡಿದನ್ನು ಖಂಡಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಮಂಗಳೂರು ಜಿಲ್ಲಾ ಮುಖಂಡರಾದ ಯೋಗೀಶ್ ಜಪ್ಪಿನಮೋಗರು, ನೊಣಯ್ಯ ಗೌಡ, ಪದ್ಮಾವತಿ ಶೆಟ್ಟಿ, ಜಯಂತಿ ಶೆಟ್ಟಿ, ಜಯಂತ್ ನಾಯಕ್, ವಸಂತಿ ಕುಪ್ಪೆಪದವು, ಭವಾನಿ ವಾಮಂಜೂರು, ಜನಾರ್ಧನ ಕುತ್ತಾರ್, ಮಹಮ್ಮದ್ ಮುಸ್ತಫಾ, ವಿಲ್ಲಿ ವಿಲ್ಸನ್, ಭಾರತಿ ಬೋಳಾರ, ಜಯಲಕ್ಷ್ಮಿ, ಐಎನ್‌ಟಿಯುಸಿ ಮುಖಂಡರಾದ ರಾಜೇಶ್, ಯಮುನಪ್ಪ, ಹನುಮಂತ, ಲಿಂಗದೊರೈ, ರೈತ ಸಂಘದ ನಾಯಕರಾದ ಕೃಷ್ಣಪ್ಪ ಸಾಲಿಯಾನ್, ಸದಾಶಿವ ದಾಸ್, ವಾಸುದೇವ್ ಉಚ್ಚಿಲ, ಯುವಜನ ನಾಯಕರಾದ ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ನವೀನ್ ಕೊಂಚಾಡಿ, ಜಗದೀಶ್ ಬಜಾಲ್, ನಾಗೇಶ್ ಕೋಟ್ಯನ್ ಮುಂತಾದವರು ಉಪಸ್ಥಿತರಿದ್ದರು.
ಬೆಂಗಳೂರು
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಿಐಟಿಯು ಬೆಂಗಳೂರು ಉತ್ತರ, ದಕ್ಷಿಣ ಮತ್ತು ರಾಮನಗರ ಜಿಲ್ಲಾ ಸಮಿತಿಯು ಪ್ರತಿಭಟನೆಯನ್ನು ಹಮ್ಮಿಕೊಂಡಿತು. ಸರಕಾರ ತಿದ್ದುಪಡಿ ವಿಧೇಯಕ ಜಾರಿ ಖಂಡಿಸಿ ವಿಧೇಯಕ ಪ್ರತಿದಹನ ಪ್ರತಿಭಟನೆ ನಡೆಸಿದ ಸಿಐಟಿಯು ಸಂಘಟನೆಯ ಕಾರ್ಯಕರ್ತರು ವಾರಕ್ಕೆ 5 ದಿನ ಕೆಲಸ, ದಿನಕ್ಕೆ 7 ಗಂಟೆ ಅಥವಾ ವಾರಕ್ಕೆ 35 ಗಂಟೆ ಕೆಲಸದ ಅವಧಿ ನಿಗದಿಪಡಿಸಿ ಕಾಯ್ದೆಯನ್ನು ಮತ್ತೊಮ್ಮೆ ತಿದ್ದುಪಡಿ ಮಾಡಬೇಕೆಂದು ಆಗ್ರಹಿಸಿದರು.
ತುಮಕೂರು
ನೂರಾರು ಕಾರ್ಮಿಕರು ತುಮಕೂರಿನ ಜಿಲ್ಲಾಧಿಕಾರಿಗಳ ಕಛೇರಿ ಎದುರು ಸಿಐಟಿಯು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಅಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ಈ ಹಿಂದೆ ವಿಧಾನ ಪರಿಷತ್ ನಲ್ಲಿ ಸೋಲು ಕಂಡಿದ್ದ ಮಸೂದೆಯನ್ನು ಮತ್ತೆ ಚರ್ಚೆಯೆ ಇಲ್ಲದೆ ಅಂಗೀಕರಿಸಲಾಗಿದೆ, ಇದು ಅನ್ಯಾಯ. ದಿನಕ್ಕೆ 8 ಗಂಟೆಯ ದುಡಿಮೆಯ ಸೂತ್ರ ವೈಚಾರಿಕವಾಗಿ ಜಗತ್ತಿನ ಎಲ್ಲೆಡೆ ಇರುವಾಗ, ಕಾರ್ಮಿಕರಿಗೆ ಅನ್ಯಾಯವೆಸಗುವ ಈ ಹೊಸ ನೀತಿ ಏಕೆ ಎಂದು ಪ್ರಶ್ನಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ಕೆ. ಸುಬ್ರಮಣ್ಯ ಸರ್ಕಾರ ಮಹಿಳಾ ವಿರೋಧಿಯಾಗಿ ಸುರಕ್ಷತೆಯನ್ನು ಗಾಳಿಗೆ ತೂರಿ ರಾತ್ರಿ ಪಾಳಿಯಲ್ಲಿ ಮಹಿಳೆಯಲ್ಲಿ ದುಡಿಸಲು ಕಾನೂನು ತಂದಿದೆ ಎಂದು ಆಪಾದಿಸಿದರು.
ಕರ್ನ ಲಿಬರಸ ಕಾರ್ಮಿಕರ ಸಂಘದ ಮುಖಂಡ ರಾಘವೇಂದ್ರ, ದಿಸಾ ಕಾರ್ಮಿಕರ ಸಂಘ ಮುಖಂಡ ಅನಂದ್ ಮಾತನಾಡಿದರು. ಪ್ರತಿಭಟನೆಯಲ್ಲಿ ವಾಹನ ಚಾಲಕರ ಸಂಘದ ಉಮೇಶ್, ನಾಗರಾಜು, ಕಸದ ವಾಹನ ಚಾಲಕರ ಸಂಘ ಮಂಜುನಾಥ್, ಕುಮಾರ್, ಡಿಸಾ ಕಾರ್ಮಿಕರ ಸಂಘ ಕರ್ನ ಲಿಬರಸ ಕಾರ್ಮಿಕರ ಸಂಘ ಪುಟ್ಟೆಗೌಡ, ಎಂ. ಹೆಚ್ ಐ ಎನ್ ಕಾರ್ಮಿಕ ಸಂಘ, ಧನಂಜಯ, ಪೀಟ್ ವೆಲ್ ಕಾರ್ಮಿಕರ ಸಂಘ ರಮೇಶ ಮತ್ತಿತರರು ಹಾಜರಿದ್ದರು.
ತುಮಕೂರು ಜಿಲ್ಲಾಧಿಕಾರಿ ವೈ.ಎಸ್ ಪಾಟಿಲ್ ಪ್ರತಿಭಟನಾಕಾರರು ಸಲ್ಲಿಸಿದ ಮನವಿ ಸ್ವೀಕರಿಸಿದರು.
ಕೋಲಾರ
ಸಿಐಟಿಯು ವತಿಯಿಂದ ಕೋಲಾರದ ಮೆಕ್ಕೆ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ ವಿಜಯಕೃಷ್ಣ, ಮುಖಂಡರಾದ ಪಿ.ಶ್ರೀನಿವಾಸ್, ಗಾಂಧಿನಗರ ನಾರಾಯಣಸ್ವಾಮಿ, ಎ.ಆರ್.ಬಾಬು, ಭೀಮರಾಜ್, ಕೇಶವರಾವ್ ಹನುಮಂತರಾಯ, ಅಪ್ಪಯ್ಯಣ್ಣ ಮತ್ತಿತರರು ಭಾಗವಹಿಸಿದ್ದರು.
ಉಡುಪಿ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ಮೈಸೂರು, ಕಲಬುರಗಿ, ಕೊಪ್ಪಳ, ಯಾದಗಿರಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಬಳ್ಳಾರಿ, ವಿಜಯಪುರ, ಚಿತ್ರದುರ್ಗ, ಮಂಡ್ಯ, ಹಾಸನ, ಬೀದರ್, ರಾಮನಗರ ಸೇರಿದಂತೆ ವಿವಿಧ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿಯೂ ಪ್ರತಿಭಟನೆ ನಡೆದಿದೆ.
ದಿನದ ದುಡಿಮೆ 8 ಗಂಟೆಯ ಬದಲಿಗೆ 12 ಗಂಟೆ ಮಾಡಿರುವುದನ್ನು ವಿರೋಧಿಸಿ ರಾತ್ರಿ ಪಾಳೆಯಲ್ಲಿ ಮಹಿಳೆಯರನ್ನು ದುಡಿಸುವ ಅಧಿಕಾರವನ್ನು ಮಾಲೀಕರಿಗೆ ಕೊಟ್ಟಿರುವ ಮಸೂದೆಯನ್ನು ವಾಪಸ್ಸು ಪಡೆಯಬೇಕೆಂದು ಆಗ್ರಹಿಸಿ ಕಾರ್ಖಾನೆಗಳ ಮುಂದೆ ಮಸೂದೆಯ ಪ್ರತಿಯನ್ನು ಸುಡುತ್ತಿರುವುದು.