ದ್ವೇಷ ರಾಜಕಾರಣಕ್ಕೆ ಮಕ್ಕಳು, ಮಹಿಳೆಯರು ಬಲಿ – ಎಸ್.ಜಿ.ಸಿದ್ದರಾಮಯ್ಯ

ಬೆಂಗಳೂರು : “ದ್ವೇಷ ರಾಜಕಾರಣಕ್ಕೆ ಮಕ್ಕಳು ಮತ್ತು ಮಹಿಳೆಯರು ಬಲಿಯಾಗುತ್ತಿದ್ದಾರೆ, ಕೇಂದ್ರ ಸರ್ಕಾರ ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ” ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.

ಐಸಿಡಿಎಸ್, ಎಂಡಿಎಂ, ಎನ್ಎಂಎಂ, ಐಸಿಪಿಎಸ್, ಎನ್ಆರ್ಎಲ್ಎಂ, ಪೋಷಣ್ ಅಭಿಯಾನ ನರೇಗಾ ಯೋಜನೆಗಳಲ್ಲಿರುವ ನೌಕರರ ಸಂಘಟನೆಗಳು ಸೋಮವಾರ ಬೆಂಗಳೂರಿನ ಪುರಭವನದಲ್ಲಿ ಆಯೋಜಿಸಿದ್ದ ʻಆಹಾರ, ಆರೋಗ್ಯ, ಶಿಕ್ಷಣಕ್ಕಾಗಿ ಇರುವ ಕೇಂದ್ರ ಪುರಸ್ಕೃತ ಯೋಜನೆಗಳು- ನೌಕರರ ಸ್ಥಿತಿಗತಿಗಳು’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ಅವನತಿ ಕಡೆಗೆ ಹೆಜ್ಜೆ ಇಡುತ್ತಿರುವುದನ್ನು ನೋಡುತ್ತಿದ್ದೇವೆ. ದೇಶ ಮತ್ತು ಜನ ದೊಡ್ಡವರು ಎಂಬ ಅರಿವು ಆಳುವ ಪಕ್ಷ ಮತ್ತು ವಿರೋಧ ಪಕ್ಷಗಳಲ್ಲಿ ಇರಬೇಕು. ದುರಾದೃಷ್ಟವಶಾತ್ ದ್ವೇಷದ ರಾಜಕಾರಣ ಮತ್ತು ತಮ್ಮದೇ ಅಜೆಂಡಾಗಳ ಮೂಲಕ ದೇಶವನ್ನು ಆಳಲಾಗುತ್ತಿದೆ ಎಂದು ವಿಷಾದಿಸಿದರು.

ರಾಜ್ಯ ರಾಜ್ಯಗಳ ನಡುವೆ ದ್ವೇಷವನ್ನು ಬಿತ್ತಿದರೆ ಬಲಿಯಾಗುವುದು ಮಕ್ಕಳು ಮತ್ತು ಮಹಿಳೆಯರು. ಮಕ್ಕಳ ಶಿಕ್ಷಣ, ಆಹಾರಕ್ಕೆ ಕೊಡಬೇಕಾದ ಅನುದಾನವನ್ನು ಕಡಿತಗೊಳಿಸಿ ಮಾಡುತ್ತಿರುವ ದ್ವೇಷ ರಾಜಕಾರಣ ಬಿಡಬೇಕು. ಮಕ್ಕಳ ಹೊಣೆ ನಮ್ಮದೂ ಎಂಬುದನ್ನು ಕೇಂದ್ರ ಸರ್ಕಾರ ಅರಿಯಬೇಕು ಎಂದು ಮನವಿ ಮಾಡಿದರು.

ನಮ್ಮ ದೇಶ ಅಸಮಾನತೆಯ ಆಗರದಿಂದ ಕೂಡಿದೆ. ಹೀಗಾಗಿ ಸ್ವಾತಂತ್ರಯ ಪಡೆದು ಸರ್ಕಾರ ರಚಿಸಿಕೊಂಡ ನಂತರದಲ್ಲಿ ಸಾಂಸ್ಕೃತಿಕ, ರಾಜಕೀಯ, ಧಾರ್ಮಿಕ ಅಸಮಾನತೆಯನ್ನು ಹೋಗಲಾಡಿಸುವ ಗುರಿ ಇಟ್ಟುಕೊಳ್ಳಲಾಗಿತ್ತು. ಪಂಚವಾರ್ಷಿಕ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಕೆಲಸಗಳಾದವು. ವಿರೋಧ ಪಕ್ಷಗಳು ಇದಕ್ಕೆ ಪೂರಕವಾಗಿದ್ದವು. ಆಳುವ ಪಕ್ಷಗಳ ತಪ್ಪು ಹೆಜ್ಜೆಗಳನ್ನು ಖಂಡಿಸುತ್ತಲೇ, ತಿದ್ದುವ ಕೆಲಸವನ್ನು ಮಾಡುತ್ತಿದ್ದರು. ಲೋಹಿಯಾ ಅಂಥವರು ಆರೋಗ್ಯಕರವಾಗಿ ಚರ್ಚೆಗಳನ್ನು ನಡೆಸುತ್ತಿದ್ದರು. ಒಳ್ಳೆಯ ಸಂಗತಿಗಳ ಬೆಳವಣಿಗೆಗೆ ಸಹಕರಿಸುತ್ತಿದ್ದರು. ಉಚಿತ ಶಿಕ್ಷಣ, ಕಡ್ಡಾಯ ಶಿಕ್ಷಣ ನೀಡಲಾಯಿತು. ಇಂದು ನಮ್ಮ ಶಿಕ್ಷಣ, ಆರೋಗ್ಯ ಕ್ಷೇತ್ರಗಳು ದ್ವೇಷ ರಾಜಕಾರಣಕ್ಕೆ ಬಲಿಯಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಎ.ಆರ್.ಸಿಂಧು – ರಾಷ್ಟ್ರೀಯ ಕಾರ್ಯದರ್ಶಿ – ಸಿಐಟಿಯು

ಸ್ಕೀಂ ನೌಕರರನ್ನು ಜೀತದ ರೀತಿ ನಡೆಸಿಕೊಳ್ಳುತ್ತಿದ್ದಾರೆ. ವೇತನ ತಾರತಮ್ಯ ಎಂಬುದು ಒಂದು ಅಪರಾಧ. 18 ಗಂಟೆ ದಡಿಯುವ ಸ್ಥಿತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಹೊರಗುತ್ತಿಗೆಯಲ್ಲಿ ದುಡಿಯುವ ಮೇಷ್ಟ್ರಗಳ ಸ್ಥಿತಿ  ಶೋಚನೀಯವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದ ಮೇಲೆ ಮಕ್ಕಳು ಡ್ರಾಫ್ ಔಟ್ ಆಗುತ್ತಿರುವುದು ಹೆಚ್ಚಾಗಿದೆ. ಯಾವುದೇ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತರುವಾಗ ಪ್ರಾಥಮಿಕ ಹಂತದಿಂದ ನಿಧಾನಕ್ಕೆ ವರ್ಷ ವರ್ಷವೂ ಅನುಷ್ಠಾನ ಮಾಡುತ್ತಾ ಹೋಗಬೇಕು. ಆದರೆ ಉನ್ನತ ಶಿಕ್ಷಣದಿಂದ ಎನ್ಇಪಿ ಆರಂಭಿಸಲಾಯಿತು. ಪಠ್ಯಪುಸ್ತಕಗಳಿಲ್ಲ, ಶಿಕ್ಷಕರಿಗೆ, ಉಪನ್ಯಾಸಕರಿಗೆ  ತರಬೇತಿ ಇಲ್ಲದೆ  ಉನ್ನತ ಶಿಕ್ಷಣ ವ್ಯವಸ್ಥೆ ಎಕ್ಕಟ್ಟು ಹೋಗಿದೆ ಎಂದರು.

ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಎ.ಆರ್.ಸಿಂಧು ಮಾತನಾಡಿ, “ಈ ದೇಶವನ್ನು ಆಳುತ್ತಿರುವವರು ತಾವೇ ದೇಶದ ಅಭಿವೃದ್ಧಿಯ ಹರಿಕಾರರು ಎನ್ನುತ್ತಿದ್ದಾರೆ. ಜಿಡಿಪಿಯೇ ದೇಶದ ಆರ್ಥಿಕತೆ ಎನ್ನತ್ತಿದ್ದಾರೆ. ಜನರ ಪರ ಇರಬೇಕಾದವರು ಕಾರ್ಪೊರೇಟರ್ಗಳ ಪರ ಇದ್ದಾರೆ. ಮಕ್ಕಳು ಅಪೌಷ್ಟಿಕತೆಯಿಂದಾಗಿ ಜೀವಂತ ಶವಗಳಾಗುತ್ತಿವೆ” ಎಂದು ಬೇಸರ ವ್ಯಕ್ತಪಡಿಸಿದರು.

ಮೀನಾಕ್ಷಿ ಸುಂದರಂ, ಸಿಐಟಿಯು ಪ್ರಧಾನ ಕಾರ್ಯದರ್ಶಿ

ಕಳೆದ ಒಂದು ವರ್ಷದಲ್ಲಿ ೭೫೦೦೦ ಮಕ್ಕಳು ಸಾವನ್ನಪ್ಪಿವೆ. ಭಾರತದಲ್ಲಿ ಗಂಭೀರವಾಗಿ ಚರ್ಚೆಯಾಗಲೇ ಇಲ್ಲ. ಜಿಡಿಪಿಯ ಅಂಕಿ- ಅಂಶಗಳನ್ನು ಮಾತ್ರ ತೋರಿಸಿದ್ದಾರೆ. ಇಂತಹ ಸರ್ಕಾರಗಳು ಏಕೆ ಬೇಕು ಎಂದು ಪ್ರಶ್ನಿಸಿದರು.

ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ, “ಅಂಗನವಾಡಿ ಟೀಚರ್ಗಳಿಂದ ರೈತರಿಂದಲೇ ಈ ಸರ್ಕಾರವನ್ನು ಹೊಗಳಿಸುವ ಕೆಲಸ ಆಗುತ್ತಿದೆ. ಕೆರೆ ತುಂಬಿಲ್ಲದಿದ್ದರೂ ತುಂಬಿದೆ ಎಂದು ನಿಮ್ಮಿಂದಲೇ ಹೇಳಿಸಲಾಗುತ್ತಿದೆ” ಎಂದು ಸರ್ಕಾರದ ಹುನ್ನಾರವನ್ನು ವಿವರಿಸಿದರು.  ಆಳುವ ಸರ್ಕಾರಗಳು ಜನರಿಗೆ ಮಾಡುತ್ತಿರುವ ಅನ್ಯಾಯವನ್ನು ತಡೆಯಲು ಬೃಹತ್‌ ಹೋರಾಟ ರೂಪಗೊಳ್ಳಬೇಕು ಎಂದರು.

 

ಸಿಐಟಿಯು ರಾಜ್ಯಾಧ್ಯಕ್ಷರಾದ ಎಸ್‌. ವರಲಕ್ಷ್ಮೀ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಂಗನವಾಡಿ ನೌಕರರ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್‌ಎಸ್‌ ಸುನಂದ ಸಮಾವೇಶದ ನಿರ್ಣಯವನ್ನು ಮಂಡಿಸಿದರು. ವೇದಿಕೆಯ ಮೇಲೆ ಕಾಂತರಾಜು, ಕಾತ್ಯಾಯಿನಿ ಚಾಮರಾಜ್‌, ಮಾಲಿನಿ ಮೇಸ್ತ, ಯಮುನಾ ಗಾಂವ್ಕರ್‌, ಲಾವಣ್ಯ, ಶಾಂತಾ ಘಂಟೆ ಸೇರಿದಂತೆ ಸಾವಿರಾರು ಪ್ರತಿನಿಧಿಗಳು ಹಾಜರಿದ್ದರು.

 

 

ಈ ವಿಡಿಯೋ ನೋಡಿ : ವಿಚಾರ ಸಂಕಿರಣ : ಆಹಾರ,ಆರೋಗ್ಯ,ಶಿಕ್ಷಣಕ್ಕಾಗಿ ಇರುವ ಕೇಂದ್ರ ಪುರಸ್ಕೃತ ಯೋಜನೆಗಳ ನೌಕರರ ಪರಿಸ್ಥಿತಿ

 

 

Donate Janashakthi Media

Leave a Reply

Your email address will not be published. Required fields are marked *