ಕೋಲಾರ : ಮುಂಬರುವ ರಾಜ್ಯ ಬಜೆಟ್ ಅಧಿವೇಶನದಲ್ಲಿ ರೈತ ವಿರೋಧಿ ಕೃಷಿ ಮಸೂದೆಗಳು ಹಾಗೂ ಕಾರ್ಮಿಕ ವಿರೋಧಿ ಸಂಹಿತೆಯ ತಿದ್ದುಪಡಿಯನ್ನು ತಿರಸ್ಕರಿಸಬೇಕು ಎಂದು ಸಿಐಟಿಯು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ನಗರದ ತಹಶಿಲ್ದಾರ್ ಕಛೇರಿ ಮುಂದೆ ಧರಣಿ ನಡೆಸಿದರು.
ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ರಾಜ್ಯ ಮತ್ತು ಕೇಂದ್ರ ಸರಕಾರದ ಜನ ವಿರೋಧಿ ರೈತ ಕಾರ್ಮಿಕ ನೀತಿಗಳ ವಿರುದ್ಧ ಘೋಷಣೆ ಕೂಗುತ್ತಾ ತಹಶಿಲ್ದಾರ್ ಕಛೇರಿಗೆ ಆಗಮಿಸಿದ ಕಾರ್ಯಕರ್ತರು ಜನಸಾಮಾನ್ಯರ ವಿರೋಧಿ ಕಾನೂನನ್ನು ಹಿಂಪಡೆಯಬೇಕು ಹಾಗೂ ಸಂಘಟಿತ ಅಸಂಘಟಿತ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದರು
ಸಿಐಟಿಯು ಜಿಲ್ಲಾ ಗೌರವ ಅಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ದೇಶದಲ್ಲಿ 29 ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ಮಾಡಿರುವ ಕೇಂದ್ರದ ಶಾಸನಗಳನ್ನು ರಾಜ್ಯ ಸರ್ಕಾರ ಜಾರಿ ಮಾಡಬಾರದು ಕಾರ್ಮಿಕರ ಪರವಾದ ಕಾನೂನುಗಳು ಜಾರಿಯಾಗಬೇಕು ರೈತವಿರೋಧಿಯಾಗಿರುವ 3 ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಕೇಂದ್ರದ ಶಾಸನಗಳನ್ನು ತಿರಸ್ಕರಿಸಬೇಕು ವಿದ್ಯುಚ್ಚಕ್ತಿ ಖಾಸಗೀಕರಣ ಕೈಬಿಡಬೇಕು ವಿದ್ಯುತ್ ತಿದ್ದುಪಡಿ ಮಸೂದೆ 2020 ಅನ್ನು ತಿರಸ್ಕರಿಸಬೇಕು ಬೆಲೆ ಏರಿಕೆ ಆಧಾರದಲ್ಲಿನ ತುಟ್ಟಿ ಭತ್ಯೆಯೊಂದಿಗೆ ಎಲ್ಲಾ ವಿಭಾಗಗಳ ಕಾರ್ಮಿಕರಿಗೂ ಕನಿಷ್ಠ ವೇತನ 24 ಸಾವಿರ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು
ಅಭಿವೃದ್ಧಿಯ ಹೆಸರಿನಲ್ಲಿ ಬೆಮೆಲ್, ಎಲ್‍ಐಸಿ, ಬ್ಯಾಂಕ್ ಮತ್ತಿತರ ಸಾರ್ವಜನಿಕ ಉದ್ದಿಮೆಗಳ ಹಾಗು ಸೇವೆಗಳ ಖಾಸಗೀಕರಣದ ನೀತಿಗಳನ್ನು ಕೈಬಿಡಬೇಕು ಎಲ್ಲಾ ವಿಭಾಗದ ನೌಕರರಿಗೂ ಕೋವಿಡ್ ಲಾಕ್ಡೌನ್ ಕಾಲಾವಧಿಯ ವೇತನ ನೀಡಬೇಕು ಸಂಘ ಮಾನ್ಯತೆಗೆ, ಗುತ್ತಿಗೆ ಮುಂತಾದವರ ಖಾಯಂಮಾತಿಗೆ ಶಾಸನ ರೂಪಿಸಿ ಜಾರಿಗೊಳಿಸಬೇಕು ಸರ್ಕಾರದ ನಿಗಮ ಮಂಡಳಿಗಳಲ್ಲಿ ಮತ್ತು ಇಲಾಖೆಗಳಲ್ಲಿ ದುಡಿಯುವ ಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ ಖಾಯಂ ಮಾಡಬೇಕು. ಗುತ್ತಿಗೆ ಕಾರ್ಮಿಕರ ನಿಯಂತ್ರಣಕ್ಕೆ ಅಗತ್ಯ ಕ್ರಮ ವಹಿಸಬೇಕು ಎಂದರು
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ ವಿಜಯಕೃಷ್ಣ ಮಾತನಾಡಿ
ಪ್ರತಿ ಜಿಲ್ಲೆಯಲ್ಲಿ ಕಾರ್ಮಿಕ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಅಂಗನವಾಡಿ, ಬಿಸಿಯೂಟ, ಮತ್ತು ಆಶಾ ಕಾರ್ಯಕರ್ತೆಯರ ಕೆಲಸ ಖಾಯಂ ಆಗಬೇಕು. ಕನಿಷ್ಟ ವೇತನ ಮತ್ತು ನಿವೃತ್ತಿ ಸೌಲಭ್ಯಗಳನ್ನು ಜಾರಿ ಮಾಡಿ, ಕೊರೊನಾದಿಂದ ಮೃತರಾದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಕೂಡಲೇ ಪರಿಹಾರ ನೀಡಬೇಕು ಜಿಲ್ಲೆಯಲ್ಲಿ ಸುಸಜ್ಜಿತ ಇಎಸ್‍ಐ ಆಸ್ಪತ್ರೆಯಲ್ಲಿ ಆರಂಭಿಸಬೇಕು ಕೈಗಾರಿಕೆಗಳಲ್ಲಿ ಕಾರ್ಮಿಕ ಕಾನೂನುಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಈ ಬಗ್ಗೆ ಕಾರ್ಮಿಕ ಆಯುಕ್ತರಿಂದ ತಪಾಸಣೆ ಮಾಡಬೇಕು ಎಂದು ಒತ್ತಾಯಿಸಿದರು.
ಧರಣಿಯ ನೇತೃತ್ವವನ್ನು ಸಿಐಟಿಯು ಮುಖಂಡರಾದ ಎಂ.ಭೀಮರಾಜ್, ಕೇಶವರಾವ್, ಆಶಾ, ಮಂಜುಳಮ್ಮ, ಜಯಲಕ್ಷ್ಮಿ, ಲೋಕೇಶ್ವರಿ, ಆರೋಗ್ಯನಾಥನ್, ನಾರಾಯಣಪ್ಪ, ಗುಲಾಜರ್, ವೆಂಕಟರಾಮೇಗೌಡ, ವೆಂಕಟಲಕ್ಷ್ಮಮ್ಮ ಮುಂತಾದವರು ಇದ್ದರು.