“ಏಕೀಕೃತ ಪಿಂಚಣಿ ಯೋಜನೆ”  ಇನ್ನೊಂದು ಮೋಸ ಎಂದು ಸಾಬೀತು- ಸಿಐಟಿಯು ಖಂಡನೆ

ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆ ಜನವರಿ 24ರಂದು ರಂದು ಮೊಟಕುಗೊಳಿಸಿದ ‘ಏಕೀಕೃತ ಪಿಂಚಣಿ ಯೋಜನೆ ‘(ಯುಪಿಎಸ್) ಎಂಬುದರ ಅಧಿಸೂಚನೆಯನ್ನು ಪ್ರಕಟಿಸಿದೆ, ಇದನ್ನು ಮತ್ತೊಂದು ವಂಚನೆಯ ಕಸರತ್ತು ಎಂದು ಖಂಡಿಸಿರುವ ಸಿಐಟಿಯು, ಹಳೆಯ ಪಿಂಚಣಿ ಯೋಜನೆ(ಒಪಿಎಸ್)ಯನ್ನು ಬೇಷರತ್ತಾಗಿ ಪುನಃಸ್ಥಾಪಿಸಬೇಕು ಎಂದು ಆಗ್ರಹಿಸಿದೆ. ಒಪಿಎಸ್ ಗಾಗಿ ನೌಕರರು ನಡೆಸುತ್ತಿರುವ ಹೋರಾಟಗಳ ಬೆಂಬಲಕ್ಕೆ ತಾನು ನಿಲ್ಲುವುದಾಗಿ ಅದು ಹೇಳಿದೆ.

ಅಧಿಸೂಚನೆಯ ಪ್ರಕಾರ, ಯುಪಿಎಸ್ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ 1-4-2025 ರಿಂದ ಜಾರಿಗೆ ಬರುವ ಒಂದು ಆಯ್ಕೆಯಾಗಿರುತ್ತದೆ. ಆಗಸ್ಟ್ 2024 ರಲ್ಲಿ “ಏಕೀಕೃತ ಪಿಂಚಣಿ ಯೋಜನೆ “(ಯುಪಿಎಸ್) ಪರಿಚಯಿಸಲು ಕೇಂದ್ರ ಸಚಿವ ಸಂಪುಟದ ನಿರ್ಧರಿಸಿದೆ ಎಂದು ಪ್ರಕಟಿಸಿ ಆ ಬಗ್ಗೆ ಭಾರೀ ಪ್ರಚಾರ ಅಭಿಯಾನವನ್ನು ಹರಿಯ ಬಿಡಲಾಯಿತು. ಆದರೆ ಈಗ ಪ್ರಕಟಿಸುವ ಅಧಿಸೂಚನೆಯ ಪ್ರಕಾರ ಅದನ್ನು ಪೆನ್ಶನ್ ಅಥವ ಪಿಂಚಣಿ ಎಂದು ಕರೆಯಲಾಗುವುದಿಲ್ಲ. ಅದು ‘ಅಶ್ಯೂರ್ಡ್ ಪೇ ಔಟ್’ ಅಥವ ‘ಫ್ಯಾಮಿಲಿ ಪೇ ಔಟ್”(ಖಚಿತ ಪಾವತಿ ಅಥವ ಕುಟುಂಬ ಪಾವತಿ) ಆಗಿದ್ದು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಒಂದು ಆಯ್ಕೆಯಾಗಿರುತ್ತದಷ್ಟೇ. ನಿರೀಕ್ಷಿಸಿದಂತೆ ಮೋಸ ಬಯಲಿಗೆ ಬಂದಿದೆ ಎಂದಿರುವ ಸಿಐಟಿಯು ಇದು ಹಲವು ವಿಧಗಳಲ್ಲಿ ಸಂಪೂರ್ಣ ಮೋಸದಾಯಕವಾದ ಕ್ರಮ ಎಂದು ಕಂಡು ಬರುತ್ತಿದೆ ಎಂದು ಹೇಳಿದೆ.

ಇದು ನಿಧಿ ಆಧಾರಿತ ಪಿಂಚಣಿ ವ್ಯವಸ್ಥೆಯಾಗಿದ್ದು, ಸಂಬಂಧಪಟ್ಟ ಉದ್ಯೋಗಿ ಮತ್ತು ಉದ್ಯೋಗದಾತನ ದೇಣಿಗೆಗಳ ನಿಯಮಿತ ಮತ್ತು ಸಕಾಲಿಕ ಸಂಚಯನ ಮತ್ತು ಹೂಡಿಕೆಯನ್ನು ಅವಲಂಬಿಸಿರುತ್ತದೆ. ಉದ್ಯೋಗಿಯ ದೇಣಿಗೆಗಳು ಮತ್ತು ಅದರ ಮೇಲಿನ ಪ್ರತಿಫಲಗಳು ಸೇರಿ ‘ಇಂಡಿವಿಜುವಲ್ ಕಾರ್ಪಸ್’( ವೈಯಕ್ತಿಕ ಸಂಚಿತ ನಿಧಿ) ಆಗಿರುತ್ತದೆ, ಇದು ಮತ್ತು ಉದ್ಯೋಗದಾತರು ಹಾಗೂ ಸರಕಾರದ ದೇಣಿಗೆಗಳು ಮತ್ತು ಪ್ರತಿಫಲಗಳು ‘ಪೂಲ್ ಕಾರ್ಪಸ್(ಒಟ್ಟುಸೇರಿಸಿದ ಸಂಚಿತ ನಿಧಿ) ಆಗಿರುತ್ತವೆ. ಈ ಯೋಜನೆಯ ಪೂರ್ಣ ಪ್ರಯೋಜನವನ್ನು ಪಡೆಯಲು ಉದ್ಯೋಗಿ ವೈಯಕ್ತಿಕ ಕಾರ್ಪಸ್ ಅನ್ನು ಸಂಪೂರ್ಣವಾಗಿ ಪೂಲ್ ಕಾರ್ಪಸ್‌ಗೆ ವರ್ಗಾಯಿಸಲು ಅಧಿಕಾರ ನೀಡಬೇಕು.

ಇದನ್ನೂ ಓದಿಹೊಸ ಸಂವಿಧಾನವಲ್ಲ “ಹೊಸ ಮನುಸ್ಮೃತಿ”

ಆಗಸ್ಟ್ 2024 ರಲ್ಲಿ ಸಂಪುಟ ನಿರ್ಧಾರವನ್ನು ಪ್ರಕಟಿಸಿದಾಗ ಉದ್ಯೋಗಿಗೆ 60% ವರೆಗೆ ಹಿಂಪಡೆಯಲು ಮತ್ತು ಪ್ರಮಾಣಾನುಗುಣವಾಗಿ ಕಡಿಮೆ ಪಿಂಚಣಿ ಪಡೆಯಲು ಅವಕಾಶವಿರುತ್ತದೆ ಎಂದು ಹೇಳಲಾಗಿತ್ತು. ಆದರೆ ಅಂತಿಮ ಅಧಿಸೂಚನೆಯಲ್ಲಿ ಅದರ ಉಲ್ಲೇಖವೇ ಇಲ್ಲ. ಇದು ಕೇಂದ್ರ ಸರ್ಕಾರದ ಮತ್ತೊಂದು ಜುಮ್ಲಾ ಆಗಿ ಪರಿಣಮಿಸಿದೆ ಎಂದು ಸಿಐಟಿಯು ವರ್ಣಿಸಿದೆ.

ನಿಗದಿತ ನಿವೃತ್ತಿಯ ದಿನಾಂಕದಿಂದ, ಖಚಿತ ಪಾವತಿ ಆರಂಭವಾಗುತ್ತದೆ; 10 ವರ್ಷಗಳಿಗಿಂತ ಕಡಿಮೆ ಸೇವೆಯ ನಂತರ ನಿವೃತ್ತಿಯಾಗಿದ್ದರೆ ಖಚಿತ ಪಾವತಿಗೆ ಅರ್ಹತೆ ಇರುವುದಿಲ್ಲ. 25 ವರ್ಷಗಳ ಕನಿಷ್ಟ ಸೇವೆಯ ನಂತರ ಸ್ವಯಂ ನಿವೃತ್ತಿಯ ಸಂದರ್ಭದಲ್ಲಿ ಇದು ನಿವೃತ್ತಿಯಾಗಬಹುದಾಗಿದ್ದ ದಿನಾಂಕದಿಂದಷ್ಟೇ ಲಭ್ಯವಾಗುತ್ತದೆ. ಉದ್ಯೋಗಿಯನ್ನು ಕೆಲಸದಿಂದ ತೆಗೆದುಹಾಕಿದ್ದರೆ, ವಜಾಗೊಳಿ ಸಿದ್ದರೆ ಅಥವಾ ರಾಜೀನಾಮೆ ನೀಡಿದ್ದರೆ ಅಥವಾ ಖಚಿತ ವೇತನಕ್ಕೆ ಅರ್ಹರಲ್ಲದಿದ್ದರೆ, ಅವರ ವೈಯಕ್ತಿಕ ನಿಧಿಗೆ ಏನಾಗುತ್ತದೆ ಎಂಬುದನ್ನು ಅಧಿಸೂಚನೆ ವಿವರಿಸುವುದಿಲ್ಲ.

ಮತ್ತೊಂದು ಗಮನಿಸಬೇಕಾದ ಅಂಶವೆಂದರೆ, ಖಾತರಿ ಪಿಂಚಣಿಯ ಕನಿಷ್ಟ ಮೊತ್ತ ರೂ.10000 ಎನ್ನಲಾಗಿತ್ತು. ಆದರೆ ಈ ಅಧಿಸೂಚನೆಯಲ್ಲಿ ಅಂತಹ ಖಾತರಿ ಇಲ್ಲ, ‘ಖಾತರಿ ಪಾವತಿ’ ಕೆಲವು ಸಂದರ್ಭಗಳಲ್ಲಿ ರೂ.10,000ಕ್ಕಿಂತಲೂ ಕಡಿಮೆ ಇರಬಹುದು.

ಕುಟುಂಬ ಪಾವತಿಯು ಖಚಿತ ಪಾವತಿಯ 60% ಆಗಿರುತ್ತದೆ. ರೂ. 10000 ರ ಕನಿಷ್ಠ ಪಾವತಿಯ ರಕ್ಷಣೆ ಕುಟುಂಬ ಪಾವತಿಗೆ ಅನ್ವಯಿಸುವುದಿಲ್ಲ. ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳಿಗೆ ಅನ್ವಯವಾಗುವ ತುಟ್ಟಿ ಭತ್ಯೆಯಂತೆಯೇ ಪರಿಹಾರವನ್ನು ರೂಪಿಸಲಾಗುತ್ತದೆ. ಆದರೆ ಯುಪಿಎಸ್ ಅಡಿಯಲ್ಲಿ ‘ಖಚಿತ ಪಾವತಿ’ಗಳಿಗೆ ಅದೇ ದರಗಳನ್ನು ಅನ್ವಯಿಸಲಾಗುತ್ತದೆಯೇ ಎಂದು ಅಧಿಸೂಚನೆಯು ಸ್ಪಷ್ಟಪಡಿಸುವುದಿಲ್ಲ.

ಒಪಿಎಸ್ ನಲ್ಲಿ ಇರುವಂತೆ ಕಮ್ಯುಟೇಷನ್ ಸೌಲಭ್ಯ ಅಂದರೆ ಪಿಂಚಣಿಯಲ್ಲಿ ಭಾಗಶಃ ಮುಂಗಡ ಪಡೆಯುವ ಸೌಲಭ್ಯ, 80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಹೆಚ್ಚುವರಿ ಪಿಂಚಣಿ, ವೇತನ ಆಯೋಗಗಳ ನಂತರ ಪಿಂಚಣಿ ಪರಿಷ್ಕರಣೆ ಮುಂತಾದ ಸೌಲಭ್ಯಗಳು ಇಲ್ಲ. ಕುಟುಂಬ ಪಿಂಚಣಿಯನ್ನು ಪತಿ/ಪತ್ನಿಗೆ ಸೀಮಿತಗೊಳಿಸಲಾಗಿದೆ.

ಒಟ್ಟಿನಲ್ಲಿಖಚಿತ ಪಾವತಿಎಂಬ ಏಕೀಕೃತ ಪಿಂಚಣಿ ಯೋಜನೆ’ಯಡಿಯಲ್ಲಿ, ಆಗಸ್ಟ್ 2024 ರಲ್ಲಿ ಪ್ರಚಾರ ಮಾಡಿದಂತೆ ಯಾವುದೂಖಚಿತಅಲ್ಲ, ಅಂತಿಮ ಅಧಿಸೂಚನೆಯು ನೂರಾರುರೆಗಳ ಮೂಲಕ ನೌಕರರನ್ನು ಮತ್ತಷ್ಟು ಹಿಂಡುವ ಮತ್ತು ವಂಚಿಸುವ ಕೆಲಸ ಮಾಡಿದೆ ಎಂದು ಸಿಐಟಿಯು ಅಧಿಸೂಚನೆಯ ವಿಶ್ಲೇಷಣೆ ಮಾಡುತ್ತ ಹೇಳಿದೆ.

ಹೀಗೆ, ಒಪಿಎಸ್‌ಗೆ ಆಗ್ರಹ ಪ್ರಬಲವಾದಾಗ, ಆಗಸ್ಟ್ 2024 ರಲ್ಲಿ ಪ್ರಕಟಿಸಿದ ಯುಪಿಎಸ್ ಒಂದು ವಂಚನೆಯ ಕಸರತ್ತಿನ ಮಾದರಿ ಎಂದು ಆಗ ಹೇಳಿರುವುದು ನಿಜ ಎಂಬುದನ್ನು ಜನವರಿ 2025ರ ಅಂತಿಮ ಅಧಿಸೂಚನೆ ಸಾಬೀತು ಮಾಡಿದೆ, ನೌಕರರ ನ್ಯಾಯಬದ್ಧ ಮತ್ತು ಸುಸ್ಥಾಪಿತ ಹಕ್ಕನ್ನು ವಂಚಿಸಲಾಗಿದೆ ಎಂದಿರುವ ಸಿಐಟಿಯು ‘ನುಡಿದಂತೆ ನಡೆಯದಿರುವ’ ತನ್ನ ಕಳೆದ 10ವರ್ಷಗಳ ದಾಖಲೆಯನ್ನು ಮೋದಿ ನೇತೃತ್ವದ ಸರಕಾರ ಇದರಲ್ಲೂ ಮುಂದೊಯ್ದಿದೆ ಎಂದು ಖೇದ ವ್ಯಕ್ತಪಡಿಸಿದೆ.

Donate Janashakthi Media

Leave a Reply

Your email address will not be published. Required fields are marked *