ಚುನಾವಣಾ ಆಯೋಗದ ಮತ್ತೊಂದು ವಿಲಕ್ಷಣ ಕ್ರಮ – ಇಎಎಸ್ ಶರ್ಮ
ನವದೆಹಲಿ : ಗುಜರಾತಿನಲ್ಲಿ, ದೇಶದಲ್ಲೇ ಮೊತ್ತ ಮೊದಲ ಬಾರಿಗೆ 1000 ಕಾರ್ಪೊರೇಟ್‍ಗಳು ಅವರ ಬಳಿ ದುಡಿಯುವ ಕಾರ್ಮಿಕರ ‘ಚುನಾವಣಾ ಭಾಗವಹಿಸುವಿಕೆ’ಯ ಮೇಲೆ ನಿಗಾ ಇಡುವ ಬಗ್ಗೆ ಚುನಾವಣಾ ಆಯೋಗದೊಂದಿಗೆ ಒಂದು ‘ತಿಳುವಳಿಕೆ ಪತ್ರ’( ಎಂಒಯು)ಕ್ಕೆ ಸಹಿ ಹಾಕಿರುವುದಾಗಿ ವರದಿಯಾಗಿದೆ. ಕಾರ್ಪೊರೇಟ್‍ಗಳು ಮತ್ತು ಚುನಾವಣಾ ಆಯೋಗದ ನಡುವಿನ ಈ ಒಪ್ಪಂದದ ಪ್ರಕಾರ ಅವು ಮತದಾನದಲ್ಲಿ ಭಾಗವಹಿಸದ ತಮ್ಮ ಕಾರ್ಮಿಕರ ಹೆಸರುಗಳನ್ನು ತಮ್ಮ ನೋಟೀಸ್ ಫಲಕಗಳಲ್ಲಿ, ವೆಬ್ ಸೈಟ್‍ಗಳಲ್ಲಿ ಪ್ರಕಟಿಸಿ ಸಾರ್ವಜನಿಕ ಅವಮಾನದ ಕ್ರಮಕೈಗೊಳ್ಳುವ ಅಧಿಕಾರ ಪಡೆಯುತ್ತವೆ.
ಇದೊಂದು ‘ಕಾರ್ಮಿಕರ ಮೇಲೆ ನಡೆಸುವ ಪ್ರಚೋದನಕಾರಿ, ಬಲಾತ್ಕಾರಿ ಮತ್ತು ಅವರ ಹೆಸರುಗೆಡಿಸುವ ಕ್ರಮ’ ಎಂದು ಸಿಐಟಿಯು ಖಂಡಿಸಿದರೆ, ಭಾರತ ಸರಕಾರದ ನಿವೃತ್ತ ಕಾರ್ಯದರ್ಶಿ ಇ ಎ ಎಸ್ ಶರ್ಮ ಕೂಡ ಇದನ್ನು ಬಲಾತ್ಕಾರ ಹೇರುವ ಕ್ರಿಯೆ ಎನ್ನುತ್ತ ಚುನಾವಣಾ ಆಯೋಗ ಇದರಲ್ಲಿ ಭಾಗಿಯಾಗಬಾರದು ಎಂದು ಆಗ್ರಹಿಸಿ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಈ ರೀತಿ ಕಾರ್ಮಿಕರನ್ನು ಮತ ನೀಡುವಂತೆ ಬಲಾತ್ಕರಿಸುವ ಕ್ರಮ ಒಂದು ನಿರ್ದಿಷ್ಟ ಪಕ್ಷಕ್ಕೆ ಅವರು ಮತ ನೀಡುವಂತೆ ಬಲವಂತಪಡಿಸುವ ‘ಭ್ರಷ್ಟ ನಡವಳಿಕೆ’ಯ ಮಟ್ಟಕ್ಕೆ ಇಳಿಯಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಹದ್ದು ಮೀರಿದ ಕಸರತ್ತು ನಡೆಸಬೇಡಿ- ಸಿಐಟಿಯು ಆಗ್ರಹ
ಈ ಕ್ರಮ ಚುನಾವಣೆಗಳಲ್ಲಿ ಮತದಾರರ ನಿರಾಸಕ್ತಿ ನಿವಾರಣೆಗಾಗಿ ಮಾತ್ರವೇ ಅಲ್ಲ ಎಂಬುದು ಸ್ಪಷ್ಟವಾಗಿದೆ; ಮತದಾನ ಮಾಡದವರನ್ನು (ಕಾರ್ಮಿಕರಲ್ಲಿ) ಗುರುತಿಸುವ, ಹೆಸರಿಸುವ ಮತ್ತು ನಾಚಿಕೆಗೀಡು ಮಾಡುವ ಅರ್ಹತೆ ಚುನಾವಣಾ ಆಯೋಗ ಕ್ಕಾಗಲೀ ಉದ್ಯೋಗದಾತರಿಗಾಗಲೀ ಇಲ್ಲವಾದ್ದರಿಂದ ಹೀಗೆ ಬಲವಂತ ಪಡಿಸುವುದು ಬೆದರಿಸುವ, ತಪ್ಪಾಗಿ ಶಿಕ್ಷಿಸುವ ಕ್ರಮವಾಗುತ್ತದೆ., ಮತದಾನವು ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನ ಹಕ್ಕು, ಮತ್ತು ಆ ಹಕ್ಕನ್ನು ಚಲಾಯಿಸುವುದನ್ನು ಕಡ್ಡಾಯ ಮಾಡಲಾಗುವುದಿಲ್ಲ. ಹಿಂದೊಮ್ಮೆ ಇಂತಹ ಪ್ರಯತ್ನ ನಡೆದಾಗ ಅದನ್ನು ಗುಜರಾತ್‌ನಲ್ಲಿಯೇ ನ್ಯಾಯಾಂಗವು ತಡೆಹಿಡಿಯಿತು ಎಂಬ ಸಂಗತಿಯನ್ನು ಈ ಹೇಳಿಕೆಯಲ್ಲಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ತಪನ್ ಸೆನ್ ನೆನಪಿಸಿದ್ದಾರೆ.
ಅಲ್ಲದೆ ಚುನಾವಣಾ ಆಯೋಗವು ಸಂವಿಧಾನ ತನಗೆ ವಿಧಿಸಿರುವ ಕಾರ್ಯವ್ಯಾಪ್ತಿಯನ್ನು ಮೀರಿ ಹೋಗುತ್ತಿರುವುದರ ಇನ್ನೊಂದು ಉದಾಹರಣೆಯಾಗಿ ಇದು ಕಾಣುತ್ತಿದೆ. ಕೆಲವೇ ದಿನಗಳ ಹಿಂದೆ ಚುನಾವಣಾ-ಭರವಸೆಗಳ ವಿಷಯದಲ್ಲಿ ರಾಜಕೀಯ ಪಕ್ಷಗಳ ಹಕ್ಕುಗಳಲ್ಲಿ ಹಸ್ತಕ್ಷೇಪ ಮಾಡುವ ಕ್ರಮವನ್ನು ಆಯೋಗ ಮುಂದಿಟ್ಟಿದ್ದನ್ನು ಸಿಐಟಿಯು ಹೇಳಿಕೆ ಪ್ರಸ್ತಾಪಿಸಿದೆ.
ಇದಲ್ಲದೆ ಇದು ಮಾಲಕ ವರ್ಗಕ್ಕೆ ದುಡಿಯುವ ಜನರನ್ನು ಬೆದರಿಸಲು ಮತ್ತು ಕಿರುಕುಳ ನೀಡಲು ಮತ್ತೊಂದು ಹಿಡಿತವನ್ನು ನೀಡುತ್ತದೆ ಮಾತ್ರವಲ್ಲ, ಮಾಲಕರು ಮತದಾರರ ಮೇಲೆ, ವಿಶೇಷವಾಗಿ ಆಳುವವರ ಪರವಾಗಿ ಅನಗತ್ಯ ಒತ್ತಡ ಹೇರಲು, ಕೈಚಳಕ ತೋರಲು ಅಥವಾ ಪ್ರಭಾವವನ್ನು ಮಾರ್ಗವನ್ನು ತೆರೆಯಬಹುದು ಎಂಬ ಸಂದೇಹವನ್ನು ಸಿಐಟಿಯು ವ್ಯಕ್ತಪಡಿಸಿದೆ.
ಇಂತಹ ಕ್ರಮಕ್ಕೆ, ವಿಶೇಷವಾಗಿ ಕಾರ್ಮಿಕರನ್ನು ಗುರಿಯಾಗಿಸುವುದಕ್ಕೆ ಹೊರಟಿರುವ ಚುನಾವಣಾ ಆಯೋಗವನ್ನು ಖಂಡಿಸುತ್ತಲೇ, ಸಿಐಟಿಯು “ದಯವಿಟ್ಟು ಇಂತಹ ಹದ್ದುಮೀರುವ ಕಸರತ್ತು ನಡೆಸಲು ಹೋಗಬೇಡಿ” ಎಂದು ಆಗ್ರಹಿಸಿದೆ ಮತ್ತು ಇಂತಹ ಅಸಾಂವಿಧಾನಿಕ ಮತ್ತು ನಿರಂಕುಶ ಕ್ರಮದ ವಿರುದ್ಧ ಪ್ರತಿಭಟನೆಗೆ ಕಾರ್ಮಿಕರು ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ಎದ್ದೇಳಬೇಕೆಂದು ಕರೆ ನೀಡಿದೆ.
ಕಾರ್ಪೊರೇಟ್‍ಗಳನ್ನು ಏಕೆ ಒಳಗೊಳ್ಳಬೇಕು?-ಶರ್ಮಾ ಪ್ರಶ್ನೆ
ಈ ಎಂಒಯುಗಳನ್ನು ಉದ್ಯಮ ಸಂಸ್ಥೆಗಳು, ಮಾತ್ರವಲ್ಲ, ಅವುಗಳ ಪ್ರತ್ಯೇಕ ಘಟಕಗಳೊಂದಿಗೆಯೂ ಮಾಡಿಕೊಳ್ಳಲಾಗಿದೆ. ಮತ್ತು ಮತದಾನದ ದಿನದವರೆಗೆ ಇನ್ನಷ್ಟು ಮಾಲಕರೊಡನೆ ಈ ರೀತಿಯ ಎಂಒಯುಗಳ ಪ್ರಯತ್ನ ಮುಂದುವರಿಯಲಿದೆ. ಗುಜರಾತಿನಲ್ಲಿ ಈ ವರ್ಷದ ಕೊನೆಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹಿಮಾಚಲ ಪ್ರದೇಶದಲ್ಲೂ ವಿಧಾನಸಭಾ ಚುನಾವಣೆ ನಡೆಯಬೇಕಾಗಿದ್ದು, ಚುನಾವಣಾ ಆಯೋಗ ಅಲ್ಲಿ ಮತದಾನದ ದಿನಾಂಕಗಳನ್ನು ಪ್ರಕಟಿಸಿದರೂ, ಗುಜರಾತಿನ ಸಂದರ್ಭದಲ್ಲಿ ದಿನಾಂಕ ಪ್ರಕಟಿಸುವುದನ್ನು ಮುಂದೂಡಿರುವುದು ಈಗಾಗಲೇ ಹಲವರಲ್ಲಿ ಸಂದೇಹ ಮೂಡಿಸಿದೆ.
ಚುನಾವಣಾ ಆಯೋಗವು ಮತದಾರರನ್ನು ಚುನಾವಣೆಯಲ್ಲಿ ಭಾಗವಹಿಸುವಂತೆ ಒತ್ತಾಯಿಸಲು ಬಲವಂತದ ಕ್ರಮವನ್ನು ಅಳವಡಿಸಿಕೊಳ್ಳಲು ಕಾರ್ಪೊರೇಟ್‍ಗಳನ್ನು ಅದೂ ಚುನಾವಣೆಗಳಲ್ಲಿ ಅವುಗಳ ಪಾತ್ರ ದ ಬಗ್ಗೆ ಬಹಳಷ್ಟು ಆತಂಕಗಳು ಇರುವಾಗ, ಏಕೆ ಒಳಗೊಳ್ಳಬೇಕು ಎಂದು ಅನುಭವೀ ಆಡಳಿತಗಾರ ಇ.ಎ,ಎಸ್ ಶರ್ಮ ಮುಖ್ಯ ಚುನಾವಣಾ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ಭಾರತದಲ್ಲಿ ಈ ಕಾರ್ಪೊರೇಟ್‍ಗಳು ವಿವಾದಾತ್ಮಕ ಚುನಾವಣಾ ಬಾಂಡ್‌ಗಳ ಮೂಲಕ ನಿಧಿ ಒದಗಿಸುವುದು, ರಾಜಕೀಯ ರ್ಯಾಲಿಗಳಿಗೆ ಸಂಚಾರ-ಸಾರಿಗೆ ಮತ್ತು ಇತರ ಬೆಂಬಲಗಳನ್ನು ಒದಗಿಸುವುದು ಸೇರಿದಂತೆ ಹಲವಾರು ಪಾರದರ್ಶಕವಲ್ಲದ ರೀತಿಯಲ್ಲಿ ರಾಜಕೀಯ ಪಕ್ಷಗಳಿಗೆ ಧನಸಹಾಯ ನೀಡುತ್ತಿರುವ ಬಗ್ಗೆ ದೂರುಗಳಿವೆ. ಹೀಗಿರುವಾಗ ಚುನಾವಣಾ ಆಯೋಗ ಕಾರ್ಮಿಕರನ್ನು ಮತ ಚಲಾಯಿಸಲು ಮನವೊಲಿಸಲು ಅದೇ ಕಾರ್ಪೊರೇಟ್ ಗಳನ್ನು ಅವಲಂಬಿಸುವುದು ಸ್ವಲ್ಪ ವಿಲಕ್ಷಣವಾಗಿದೆ ಎಂದು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಕಂಪನಿಗಳ ಕಾಯಿದೆ ಮತ್ತು ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆಯ ಅಸ್ತಿತ್ವದಲ್ಲಿರುವ ನಿಬಂಧನೆಗಳು, ರಾಜಕೀಯ ಪಕ್ಷಗಳು ಕಾರ್ಪೊರೇಟ್‌ಗಳಿಂದ ಹಣವನ್ನು ಪಡೆಯಲು ಅನುಮತಿ ನೀಡುತ್ತವೆ. ಹೀಗೆ ರಾಜಕೀಯ ಪಕ್ಷಗಳಿಗೆ ನಿದಿ ಒದಗಿಸುವ ಕಾರ್ಪೊರೇಟ್‍ಗಳು ಮತ್ತು ಸಾಮಾನ್ಯ ನಾಗರಿಕ-ಮತದಾರರು ಚುನಾವಣೆಗಳಿಗೆ ಸಂಬಂಧಪಟ್ಟಂತೆ ಒಂದೇ ನೆಲೆಯಲ್ಲಿ ಇರುವುದಿಲ್ಲ. ಆದ್ದರಿಂದ ಈ ವಿಷಯದಲ್ಲಿ ಮತದಾರರ ಮೇಲೆ ನಿಗಾ ಇಡಲು ಕಾರ್ಪೊರೇಟ್‍ಗಳಿಗೆ ಅನುವು ಮಾಡಿ ಕೊಡುವುದು ಚುನಾವಣಾ ಪ್ರಕ್ರಿಯೆಯ ಸಮಗ್ರತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
“ವಿಶ್ವಾಸಾರ್ಹತೆಯನ್ನು ಕೆಡಿಸುವ ಕ್ಷೇತ್ರಗಳಿಗೆ ಕಾಲಿಡಬೇಡಿ”
ಇನ್ನೂ ವಿಲಕ್ಷಣ ಸಂಗತಿಯೆಂದರೆ ಹಲವು ಖಾಸಗಿ ಕಂಪನಿಗಳು ತಮ್ಮ ಕಾರ್ಮಿಕರು/ನೌಕರರು ಮತದಾನ ಮಾಡಲು ಬಿಡುವುದಕ್ಕೆ ಹಿಂದೇಟು ಹಾಕುವ ದೂರುಗಳ ಹಿನ್ನೆಲೆಯಲ್ಲಿ ಜನತಾ ಪ್ರಾತಿನಿಧ್ಯ ಕಾಯ್ದೆಯಲ್ಲಿ ಸೆಕ್ಷನ್ 135 ಬಿ ಅಡಿಯಲ್ಲಿ ಮತದಾನದ ದಿನ ರಜಾ ಕೊಡಬೇಕೆಂದು ವಿಧಿಸಬೇಕಾಗಿ ಬಂದಿತ್ತು ಎಂಬುದನ್ನು ಮುಖ್ಯ ಚುನಾವಣಾ ಆಯುಕ್ತರ ಗಮನಕ್ಕೆ ತಂದಿರುವ ಶರ್ಮ ಅವರು “ಈ ಬಾಧ್ಯತೆಯ ಜಾರಿಯ ಮೇಲ್ವಿಚಾರಣೆಯ ಅಗತ್ಯವಿದ್ದಲ್ಲಿ, ಅಂತಹ ಮೇಲ್ವಿಚಾರಣೆಯು ಖಾಸಗಿ ಕಂಪನಿಗಳು ಮತ್ತು ಅವುಗಳ ಪ್ರವರ್ತಕರಿಗೆ ಸಂಬಂಧಿಸಿದಂತೆ ಮಾತ್ರ ಅಗತ್ಯವಿದೆಯೇ ಹೊರತು ಕಾರ್ಮಿಕರಿಗೆ ಸಂಬಂಧಿಸಿದಂತೆ ಅಲ್ಲ” ಎಂದು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಕಾರ್ಮಿಕರು ತಮ್ಮ ಮತಗಳನ್ನು ಚಲಾಯಿಸುವಂತೆ ಒತ್ತಾಯಿಸುವಲ್ಲಿ ಖಾಸಗಿ ಕಂಪನಿಗಳನ್ನು ತೊಡಗಿಸಿಕೊಳ್ಳುವುದರಿಂದ ಅವರು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಮತ ಚಲಾಯಿಸುವಂತೆ ಕಾರ್ಮಿಕರನ್ನು ಒತ್ತಾಯಿಸುವ ಭ್ರಷ್ಟ ಆಚರಣೆಗೆ ಅನುವು ಮಾಡಿಕೊಡಬಹುದು ಎಂದು ಭಯಪಡಲು ಸಾಕಷ್ಟು ಕಾರಣಗಳಿವೆ. ಆದ್ದರಿಂದ “ಮತದಾರರು ತಮ್ಮ ಮತ ಚಲಾಯಿಸುವಂತೆ ಬಲವಂತ ಪಡಿಸುವಲ್ಲಿ ಖಾಸಗಿ ಕಂಪನಿಗಳನ್ನು ತೊಡಗಿಸದಂತೆ ನಾನು ಭಾರತದ ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇನೆ, ಏಕೆಂದರೆ ಇದು ಇತರರಿಗೆ ಅನನುಕೂಲವಾಗುವಂತೆ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಪ್ರಯೋಜನಕಾರಿಯಾಗಿ ಪರಿಣಮಿಸಬಹುದು” ಎಂದಿರುವ ಇ.ಎ.ಎಸ್. ಶರ್ಮ, ಚುನಾವಣೆಗಳನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸುವ ಜವಾಬ್ದಾರಿಯಿರುವ ಸ್ವತಂತ್ರ ಸಾಂವಿಧಾನಿಕ ಪ್ರಾಧಿಕಾರವಾಗಿ ಚುನಾವಣಾ ಆಯೋಗ ತನ್ನ ವಿಶ್ವಾಸಾರ್ಹತೆಯನ್ನು ಸವೆಸುವ ಕ್ಷೇತ್ರಗಳಿಗೆ ಕಾಲಿಡುತ್ತಿದೆಯೇನೋ ಎಂಬ ಭೀತಿ ವ್ಯಕ್ತಪಡಿಸಿದ್ದಾರೆ.