ಬೆಂಗಳೂರು : ಬೆಂಗಳೂರಿನಲ್ಲಿ ರಾಜ್ಯದ ಒಂದು ಪ್ರಮುಖ ಕಾರ್ಮಿಕ ಸಂಘಟನೆಯಾದ ಸಿಐಟಿಯು ಮುಂಬರುವ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದ ಲಕ್ಷಾಂತರ ಶ್ರಮಿಕರ ಆಶಯಗಳನ್ನು ಮತ್ತು ನಿರೀಕ್ಷೆಗಳನ್ನು ಬಿಂಬಿಸುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಶಾಂತಿ-ಸೌಹಾರ್ದ-ಸಾಮರಸ್ಯದ ಕರ್ನಾಟಕಕ್ಕಾಗಿ, ದುಡಿಯುವ ಜನರ ಹಕ್ಕುಗಳು ಮತ್ತು ಜೀವನೋಪಾಯಗಳ ರಕ್ಷಣೆಗಾಗಿ ಮತ್ತು ಕಾರ್ಪೊರೇಟ್-ಪ್ರೇರಿತ ಕಾರ್ಮಿಕ-ವಿರೋಧಿ ನೀತಿಗಳ ವಿರುದ್ಧ ಕಾರ್ಮಿಕ ವರ್ಗದ ಮತ ಎಂದು ಅದು ಘೋಷಿಸಿದೆ.
ಕಳೆದ ಐದು ವರ್ಷಗಳ ಕಾರ್ಪೋರೆಟ್ ಪರ ಆರ್ಥಿಕ ನೀತಿಗಳು, ಮೂರು ವರ್ಷಗಳ ಹಿಂದೆ ದಾಳಿ ನಡೆಸಿದ ಕೊವಿಡ್ ಮತ್ತು ಕೊವಿಡೋತ್ತರ ಕಾಲಘಟ್ಟದಲ್ಲಿ ಕಾರ್ಮಿಕ ವರ್ಗ ಎದುರಿಸಿದ ಸಾವು ನೋವುಗಳು ಹಾಗೂ ದುಡಿಮೆಯ ಪ್ರಶ್ನೆಗಳು ಹಾಗೂ ಕಳೆದ ನಾಲ್ಕು ವರ್ಷಗಳ ಬಿಜೆಪಿ ಸರ್ಕಾರ ಜಾರಿ ಮಾಡಿದ ಕಾರ್ಮಿಕ ವಿರೋಧಿ ನೀತಿಗಳು ಮತ್ತು ಜನರನ್ನು ಛಿದ್ರಗೊಳಿಸಲು ಅನುಸರಿದ ಮತೀಯವಾದಿ ನಿಲುವುಗಳ ಅಧ್ಯಯನ ಪೂರ್ಣ ವಿಶ್ಲೇಷಣೆ ನಡೆಸಿರುವ ಈ ಪ್ರಣಾಳಿಕೆ, ರಾಜ್ಯವನ್ನು ‘ಭ್ರಷ್ಟಾಚಾರದ ಗಂಗೋತ್ರಿ’ಯನ್ನಾಗಿಸಿದ ಮತ್ತು ಜನರನ್ನು ಜಾತಿ ಹಾಗೂ ಕೋಮುವಾದದ ಹೆಸರಲ್ಲಿ ವಿಭಜನೆಗೊಳಿಸುವ ಮತ್ತು ಕಾರ್ಮಿಕ ವರ್ಗ ತ್ಯಾಗ ಬಲಿದಾನದ ಹೋರಾಟಗಳ ಮೂಲಕ ಪಡೆದ 8 ಗಂಟೆ ಕೆಲಸದ ಹಕ್ಕೂ ಸೇರಿದಂತೆ ಕಾನೂನುಬದ್ದ ಹಕ್ಕುಗಳನ್ನು ನಿರಾಕರಿಸುತ್ತಾ, ನಾಡಿನ ಅಭಿವೃದ್ದಿಗೆ ಮಹತ್ತರ ಕಾಣಿಕೆ ನೀಡಿದ ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣ ಮಾಡಲು ಹುನ್ನಾರ ನಡೆಸಿರುವ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ಬರದಂತೆ ತಡೆಯಬೇಕು ಎಂದು ಕರೆ ನೀಡಿದೆ.
ಈ ಚುನಾವಣೆ ಕರ್ನಾಟಕದ ಕಾರ್ಮಿಕ ವರ್ಗಕ್ಕೆ ತಮ್ಮ ಭವಿಷ್ಯದ ಬದುಕನ್ನು ನಿರ್ಧರಿಸುವ ರಾಜಕೀಯವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಕೊಟ್ಟಿದೆ. ಸಂವಿಧಾನದ ಅಡಿಯಲ್ಲಿ ದೊರೆತಿರುವ ‘ಮತದಾನ’ದ ಹಕ್ಕನ್ನು ಚಲಾಯಿಸಿ ರಾಜ್ಯದ ಕಾರ್ಮಿಕ ವರ್ಗ ಎದುರಿಸುತ್ತಿರುವ ಜ್ವಲಂತ ಹಾಗೂ ಬದುಕಿನ ಪ್ರಶ್ನೆಗಳಾಗಿರುವ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಭಾಗವಾಗಿ ಕೆಲಸ ಮಾಡಬೇಕಿದೆ ಎಂದು ಪ್ರಣಾಳಿಕೆ ರಾಜ್ಯದ ಕಾರ್ಮಿಕ ವರ್ಗಕ್ಕೆ ಮತ್ತು ದುಡಿಯುವ ಜನವಿಭಾಗಗಳಿಗೆ ಕರೆ ನೀಡಿದೆ.
ಪ್ರಣಾಳಿಕೆ ರಾಜ್ಯದ್ಯಾಂತ ಶಾಸನಬದ್ಧ ಸಮಾನ ಹಾಗೂ ಏಕರೂಪದ ಕನಿಷ್ಠ ವೇತನ 36 ಸಾವಿರ ರೂ. ನಿಗದಿ ಮಾಡಬೇಕು, ಎಲ್ಲ ಸ್ಕೀಂ ನೌಕರರು, ಗ್ರಾಮ ಪಂಚಾಯತ್ ನೌಕರರು, ಮುನ್ಸಿಫಲ್ ನೌಕರರು, ಗುತ್ತಿಗೆ ಹೊರಗುತ್ತಿಗೆ ಮತ್ತು ಖಾಯಮೇತರ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಿ ಕನಿಷ್ಟ ವೇತನ ಜಾರಿಗೊಳಿಸಬೇಕು, ಕಾರ್ಮಿಕ ಸಂಹಿತೆಗಳನ್ನು ವಾಪಸ್ಸು ಪಡೆಯಬೇಕು, 12 ಗಂಟೆ ಕೆಲಸದ ಅವಧಿ ಹೆಚ್ಚಳವನ್ನು ಮತ್ತು ಮಹಿಳೆಯರ ರಾತ್ರಿ ಪಾಳಿ ಕೆಲಸವನ್ನು ರದ್ದುಪಡಿಸಬೇಕು ಮುಂತಾದ ರಾಜ್ಯದ ಕಾರ್ಮಿಕ ವರ್ಗದ ಮತ್ತು ಇತರ ದುಡಿಯುವ ಜನವಿಭಾಗಗಳ 25 ಹಕ್ಕೊತ್ತಾಯಗಳನ್ನು ಚುನಾವಣಾ ಸ್ಪರ್ಧಿಗಳ ಮುಂದಿಟ್ಟು ಜಾತ್ಯತೀತ ಮತ್ತು ಪ್ರಜಾಪ್ರಭುತ್ವವಾದಿ ರಾಜಕೀಯ ಪಕ್ಷಗಳು ಈ ಅಂಶಗಳನ್ನು ತಮ್ಮ ಪ್ರಣಾಳಿಕೆಯಲ್ಲಿ ಒಳಗೊಳ್ಳಬೇಕು ಮತ್ತು ಅವುಗಳನ್ನು ಈಡೇರಿಸಲು ತಮ್ಮ ಬದ್ದತೆಯನ್ನು ಪ್ರದರ್ಶಿಸಬೇಕೆಂದು ಆಗ್ರಹಪಡಿಸಿದೆ.
ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರ, ಮತ್ತು ರಾಜ್ಯ ಮುಖಂಡರುಗಳಾದ ಹೆಚ್.ಎಸ್.ಸುನಂದ, ಎನ್. ಪ್ರತಾಪ ಸಿಂಹ, ಮಾಲಿನಿ ಮೇಸ್ತ ಮತ್ತು ಬಿ.ವಿ.ರಾಘವೇಂದ್ರ ಸಿಐಟಿಯು ರಾಜ್ಯಸಮಿತಿಯ ಪರವಾಗಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಇದನ್ನೂ ಓದಿ : ಜ.18ರಿಂದ ಸಿಐಟಿಯು ಅಖಿಲ ಭಾರತ ಸಮ್ಮೇಳನ ಆರಂಭ
ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಬೇಕು ಮತ್ತು ಕಾರ್ಮಿಕರ ಈ ಹಕ್ಕೊತ್ತಾಯಗಳ ಕುರಿತು ರಾಜ್ಯದ ಮೂಲೆ ಮೂಲೆಯಲ್ಲಿರುವ ಸಂಘಟಿತ-ಅಸಂಘಟಿತ ಸ್ಕೀಂ, ಗುತ್ತಿಗೆ ಹೊರಗುತ್ತಿಗೆ ಸೇರಿದಂತೆ ಕೋಟ್ಯಾಂತರ ಕಾರ್ಮಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದೂ ಈ ಸಂದರ್ಭದಲ್ಲಿ ಸಿಐಟಿಯು ರಾಜ್ಯ ಸಮಿತಿ ಕರೆ ನೀಡಿದೆ.