ಕಾರ್ಮಿಕರ ಹಕ್ಕುಗಳಿಗಾಗಿ ವ್ಯಾಪಕ ಚಳುವಳಿ ಕಟ್ಟುವ ಪಣ ತೊಡೋಣ
ಎಸ್, ಸಿದ್ದಯ್ಯ
ಸಿಐಟಿಯು (ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್)ನ 53 ನೇ ಸಂಸ್ಥಾಪನಾ ದಿನ. ಇದೇ ವೇಳೆಗೆ ರಾಜ್ಯದಲ್ಲಿ, ಕಾರ್ಮಿಕರ ವ್ಯಾಪಕ ವಿರೋಧವನ್ನೂ ಲೆಕ್ಕಿಸದೆ, ಪ್ರತಿಭಟನೆಗೂ ಮಣಿಯದೆ, ರಾಜ್ಯದಲ್ಲಿ ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿಗೆ ತಂದು, ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಂಡ ಬಿಜೆಪಿಯನ್ನು ಜನತೆ ಸೋಲಿಸಿದ್ದಾರೆ. ಇದರ ಲಾಭ ಪಡೆದ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಆಡಳಿತದ ಅವಧಿಯಲ್ಲಿ ಕಳೆದುಕೊಂಡ ಹಕ್ಕುಗಳನ್ನು ಮತ್ತೆ ಪಡೆಯಲು ಮತ್ತು ಹಲವು ದಿನಗಳ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಕಾರ್ಮಿಕರು ಮುಂದಾಗಬೇಕಿದೆ. ಈ ಸಂದರ್ಭದಲ್ಲಿ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಾಗಿ ಒಂದು ಪುಟ್ಟ ಲೇಖನ.
ಖಾಯಂ ಮತ್ತು ಸಮರ್ಪಕ ಉದ್ಯೋಗ ಎಂಬುದು ಕಾರ್ಮಿಕರ ಕನಸು. ವರ್ಷಕ್ಕೆ 2 ಕೋಟಿ ಜನರಿಗೆ ಉದ್ಯೋಗ ಒದಗಿಸುವ 10 ವರ್ಷಗಳ ಹಿಂದಿನ ಬಿಜೆಪಿಯ ಚುನಾವಣಾ ಭರವಸೆ ಏನಾಯಿತು? ಈ ಪ್ರಶ್ನೆ ಕೇಳಿದಾಗ, ಗೃಹ ಸಚಿವ ಅಮಿತ್ ಶಾ ‘ಇದು ಜುಮ್ಲಾ’ (ಕೇವಲ ಮಾತು) ಎಂದು ಉತ್ತರಿಸಿದರು. ನಮ್ಮ ದೇಶದಲ್ಲಿ ಮಾನವ ಸಂಪನ್ಮೂಲವಿದೆ. ನೈಸರ್ಗಿಕ ಸಂಪನ್ಮೂಲಗಳಿವೆ. ಆದರೆ, ಅವುಗಳನ್ನು ಸಂಪೂರ್ಣವಾಗಿ ದೇಶದ ಪ್ರಗತಿಗೆ ಬಳಸುತ್ತೇವೆಯೇ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ನಮ್ಮ ದೇಶದ ಜನಸಂಖ್ಯೆಯಲ್ಲಿ ಯುವಕರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಎಲ್ಲರಿಗೂ ಸರಿಯಾದ, ವೈಜ್ಞಾನಿಕ ಶಿಕ್ಷಣ ಪಡೆಯಲು ಅವಕಾಶವಿಲ್ಲ. 1990 ರ ದಶಕದಲ್ಲಿ ಜಾರಿಗೆ ಬಂದ ನವ-ಉದಾರವಾದಿ ನೀತಿಗಳಿಂದಾಗಿ ಶಿಕ್ಷಣ, ವೈದ್ಯಕೀಯ, ಸಾರಿಗೆ, ದೂರಸಂಪರ್ಕ, ಹಣಕಾಸು ಇತ್ಯಾದಿಗಳಲ್ಲಿ ಖಾಸಗಿ ವಲಯವು ವ್ಯಾಪಕವಾಗಿ ಹರಡಿಹೋಗಿದೆ. ವರ್ಷದಲ್ಲಿ 240 ದಿನ ಕೆಲಸ ಮಾಡಿದರೆ ಖಾಯಂ ಮಾಡಬೇಕೆಂಬ ಕಾನೂನನ್ನು ಆಳುವ ವರ್ಗಗಳು ನಿರ್ಲಕ್ಷಿಸುತ್ತಲೇ ಇವೆ. ಅಪ್ರೆಂಟಿಸ್‌ಗಳಿಗೆ ಎನ್‌ಇಎಂ (ರಾಷ್ಟ್ರೀಯ ಉದ್ಯೋಗ ಅಭಿವೃದ್ಧಿ ಕಾರ್ಯಕ್ರಮ) ಮೂಲಕ ಉತ್ಪಾದನಾ ವಲಯದಲ್ಲಿ ಕೆಲಸ ಮಾಡಲು ಅವಕಾಶ ನೀಡಲಾಗುತ್ತದೆ. ಕಾರ್ಖಾನೆಗಳಲ್ಲಿ ಆರಂಭವಾದ ‘ನಿಶ್ಚಿತ ಅವಧಿಯ ಕೆಲಸ’ ಎಂಬುದು, ಸೇನೆಯಲ್ಲಿ ‘ಅಗ್ನಿ ವೀರ್’ ಯೋಜನೆಗೂ ವ್ಯಾಪಿಸಿದೆ. ಅಗ್ನಿ ವೀರ್ ಯೋಜನೆ ಮೂಲಕ ಸೈನ್ಯಕ್ಕೆ ಸೇರಿಕೊಳ್ಳುವವರು ಕೇವಲ ನಾಲ್ಕು ವರ್ಷಗಳ ಕಾಲ ಮಾತ್ರ ಸೈನಿಕರು ಎನಿಸಿಕೊಳ್ಳುತ್ತಾರೆ. ನಂತರ ಅವರ ಬುದುಕು ಕತ್ತಲೆಯ ಭವಿಷ್ಯದಲ್ಲಿ ಬೆಳಕಿಗಾಗಿ ಹುಡುಕಾಟ ನಡೆಸುವ ಸ್ಥಿತಿಗೆ ತಲುಪುತ್ತದೆ.
ಗುತ್ತಿಗೆ ಪದ್ದತಿ ಸಾಂಕ್ರಾಮಿಕವಾಗಿ ಹರಡುತ್ತಿದೆ.
ಎಲ್ಲೆಡೆ ಗುತ್ತಿಗೆ ಪದ್ದತಿ ಎಂಬುದು ಕ್ರಾಮಿಕವಾಗಿ ಹರಡುತ್ತಿದೆ. ಸರ್ಕಾರಿ ವಲಯದಲ್ಲಿ, ಸಾರ್ವಜನಿಕ ಉದ್ಯಮ ವಲಯದಲ್ಲಿ ಗುತ್ತಿಗೆ ಕಾರ್ಮಿಕರ ಸಂಖ್ಯೆ ಕಾಯಂ ಕಾರ್ಮಿಕರ ಸಂಖ್ಯೆಗಿಂತ ಹೆಚ್ಚುತ್ತಿದೆ. 1970ರ ಗುತ್ತಿಗೆ ಕಾಯಿದೆಯಲ್ಲಿ ಶಾಶ್ವತ ಸ್ವರೂಪದ ಕಾಮಗಾರಿಗಳಿಗೆ ಗುತ್ತಿಗೆ ವ್ಯವಸ್ಥೆ ಇರಬಾರದು ಎಂದು ಹೇಳಲಾಗಿದೆ. ಇದನ್ನು ಉಲ್ಲಂಘಿಸುವ ಯಾವುದೇ ಕಾರ್ಪೊರೇಟ್ ಸಂಸ್ಥೆ, ಮಾಲೀಕರ ವಿರುದ್ದ ಕ್ರಮ ತೆಗೆದುಕೊಳ್ಳುವ ಹಕ್ಕು ಸರ್ಕಾರಕ್ಕಿದೆ. ಅಥವಾ, 20 ಅಥವಾ ಅದಕ್ಕಿಂತ ಹೆಚ್ಚು ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳುವ ಗುತ್ತಿಗೆದಾರರು ಕಾನೂನುಬದ್ಧವಾಗಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಈ ಗುತ್ತಿಗೆ ಕಾರ್ಮಿಕರಿಗೂ ಪಿಎಫ್, ಇಎಸ್‌ಐ, ಬೋನಸ್‌ನಂತಹ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೊಳಿಸಬೇಕು. 20 ಇದ್ದ ಈ ಕಾರ್ಮಿಕರ ಸಂಖ್ಯೆಯನ್ನೂ 50ಕ್ಕೆ ಪರಿಷ್ಕರಿಸಲು ಕೇಂದ್ರ ಸರ್ಕಾರ ಇಂದು ಅವಕಾಶ ನೀಡಿದೆ. 50 ಕ್ಕಿಂತ ಕಡಿಮೆ ಸಂಖ್ಯೆಯ ಕಾರ್ಮಿಕರನ್ನು ಹೊಂದಿರುವ ಗುತ್ತಿಗೆದಾರರ ಬಳಿ ನೇಮಕಗೊಳ್ಳುವ ಕಾರ್ಮಿಕರು, ಕಾರ್ಮಿಕ ಕಾಯ್ದೆ ಮೂಲಕ ಸಿಗಬೇಕಾದ ಸಾಮಾಜಿಕ ಭದ್ರತಾ ಯೋಜನೆಗಳಿಂದ ವಂಚಿತರಾಗುತ್ತಾರೆ.
ಮತ್ತೊಂದಡೆ, 50 ಅಥವಾ ಅದಕ್ಕಿಂತ ಹೆಚ್ಚು, ನೂರಾರು ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳುವ ಗುತ್ತಿಗೆದಾರರು, ಕಾರ್ಮಿಕರನ್ನು 49, 49 ವಿಗಂಡಿಸಿ, ಪ್ರತ್ಯೇಕ ಗುಂಪುಗಳನ್ನಾಗಿ ಪರಿವರ್ತಿಸುವ ಮೂಲಕ ಸಣ್ಣ ಸಣ್ಣ ಗುತ್ತಿಗೆದಾರನೆಂದು ತೋರಿಸಿಕೊಂಡು, ಸಾರ್ವಜನಿಕ ವಲಯದಲ್ಲಿಯೂ ಸಹ ಕಾನೂನು ಜಾರಿಯಿಂದ ಸಂಪೂರ್ಣವಾಗಿ ತಪ್ಪಿಸಿಕೊಳ್ಳಬಹುದು. ಇದರಿಂದಾಗಿ, ಕಾರ್ಮಿಕನಿಗೆ ತನ್ನ ಜೀವನದುದ್ದಕ್ಕೂ ಗುತ್ತಿಗೆ ಕೆಲಸಗಾರನಾಗಿ ನಿವೃತ್ತಿಯಾಗುವ ದುರದೃಷ್ಟಕರ ಸ್ಥಿತಿ ಬರಬಹುದು. ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಸಿದ್ಧಾಂತದ ಪ್ರಕಾರ, ಕಾಯಂ ಕಾರ್ಮಿಕರಿಗೆ ಸಮಾನವಾಗಿ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರಿಗೆ ಸಮಾನ ವೇತನ ನಿರಾಕರಿಸುವ ಕಾರ್ಖಾನೆಗಳ ಮಾಲೀಕರ ಕ್ರೌರ್ಯ ಸರಕಾರಕ್ಕೆ ಕಾಣುತ್ತಿಲ್ಲ.
ಹೊಸ ಪಿಂಚಣಿ ಯೋಜನೆ ಭವಿಷ್ಯದ ಸುರಕ್ಷತೆಗೆ ನೆರವಾಗುವುದೇ?
ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಅವಲಂಬಿಸಿರುವ ಕಾರ್ಮಿಕರಿಗೆ ಭವಿಷ್ಯ ಉಳಿತಾಯ ನಿಧಿ ಪಿಎಫ್ ಸೌಲಭ್ಯ, ಪಿಂಚಣಿ ಸೌಲಭ್ಯ ಇತ್ಯಾದಿ ಸಾಮಾಜಿಕ ಭದ್ರತಾ ಯೋಜನೆಗಳಿವೆ. ಕೇಂದ್ರ ಸರ್ಕಾರವು ತನ್ನ ನಾಲ್ಕು ಕಾರ್ಮಿಕ ಸಂಹಿತೆಯ ಕಾನೂನುಗಳ ಮೂಲಕ, ಕಂಪನಿ ಆಡಳಿತ ಮತ್ತು ಕಾರ್ಮಿಕರು ಬಯಸಿದಲ್ಲಿ ಪಿಎಫ್ ಮತ್ತು ಇಎಸ್‌ಐ ಯೋಜನೆಗಳಿಂದ ಹೊರಗುಳಿಯಲು ಅನುಮತಿಸುವ ಷರತ್ತುಗಳನ್ನು ರೂಪಿಸಿದೆ. ಕಾರ್ಮಿಕರು ಹೋರಾಟ ಮಾಡಿ ಗಳಿಸಿದ ಸಾಮಾಜಿಕ ಭದ್ರತಾ ಯೋಜನೆಗಳು ಉಳಿಯುತ್ತವೆಯೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.
ಕೇಂದ್ರ ಸರ್ಕಾರವು ಖಾಸಗಿ ವಿಮೆ, ಖಾಸಗಿ ಆಸ್ಪತ್ರೆಗಳು ಮತ್ತು ಖಾಸಗಿ ಔಷಧ ತಯಾರಕರನ್ನು ಬೆಳೆಸಲು ಮುಂದಾಗುತ್ತಿದೆ. ಜನವರಿ 2004 ರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಹಳೆಯ ಪಿಂಚಣಿ ಯೋಜನೆಯಡಿ, ನೌಕರನು ತನ್ನ ಕೊನೆಯ ತಿಂಗಳ ಸಂಬಳದ ಅರ್ಧದಷ್ಟನ್ನು ನಿವೃತ್ತಿಯ ನಂತರ ಪಿಂಚಣಿಯಾಗಿ ಪಡೆಯುತ್ತಿದ್ದನು. ನೌಕರರ ಕೊಡುಗೆಗೆ ಸಮಾನವಾದ ಪಿಎಫ್ ಕೊಡುಗೆಯನ್ನು ಸರ್ಕಾರವು ಪಾವತಿಸುವುದಿಲ್ಲ. ಆದರೆ ಹೊಸ ಪಿಂಚಣಿ ಯೋಜನೆಯಲ್ಲಿ ಪಿಂಚಣಿಗಾಗಿಯೇ ಸರ್ಕಾರಿ ನೌಕರರ ಸಂಬಳದಿಂದ ಮಾಸಿಕ 10% ರಷ್ಟು ಹಣವನ್ನು ಕಡಿತಗೊಳಿಸಲಾಗುತ್ತದೆ. ಸರ್ಕಾರವೂ ತನ್ನ ಪಾಲಿನ ಹತ್ತರಷ್ಟನ್ನು ಕೊಡುತ್ತದೆ. 60 ನೇ ವಯಸ್ಸಿನಲ್ಲಿ, ಒಟ್ಟು ಪಿಂಚಣಿ ಉಳಿತಾಯದ ಶೇ. 60 ನಗದು ರೂಪದಲ್ಲಿ ಲಭ್ಯವಿರುತ್ತದೆ. ವಿಮಾ ಕಂಪನಿಗಳ ಸೆಕ್ಯೂರಿಟಿಗಳಲ್ಲಿ ಶೇ. 40 ಹೂಡಿಕೆ ಮಾಡಬೇಕು. ಇದಕ್ಕೆ ಜಿಎಸ್‌ಟಿ ಕೂಡ ಪಾವತಿಸಬೇಕಾಗುತ್ತದೆ. ಹೂಡಿಕೆಯು ಉತ್ತಮ ಆದಾಯವನ್ನು ನೀಡಿದರೆ ಉತ್ತಮ ಪಿಂಚಣಿ. ಇದನ್ನು ಪಿಂಚಣಿ ಎಂದು ವ್ಯಾಖ್ಯಾನಿಸಲಾಗಿಲ್ಲ. ಹಳೆಯ ಪಿಂಚಣಿ ಯೋಜನೆಯಲ್ಲಿ ಶೇ. 40 ಪಿಂಚಣಿಯನ್ನು ನಗದು ರೂಪದಲ್ಲಿ ಕಮ್ಯುಟೇಶನ್ ಮೂಲಕ ಪಡೆಯಬಹುದು. ಆದರೆ ಹೊಸ ಪಿಂಚಣಿ ಯೋಜನೆಯಲ್ಲಿ ಇಂತಹ ಸೌಲಭ್ಯವಿಲ್ಲ. ರಾಜಸ್ಥಾನ, ಛತ್ತೀಸ್‌ಗಢ, ಜಾರ್ಖಂಡ್, ಪಂಜಾಬ್ ಮತ್ತು ಹಿಮಾಚಲ ಪ್ರದೇಶ ರಾಜ್ಯ ಸರ್ಕಾರಗಳು ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿವೆ. ಪಶ್ಚಿಮ ಬಂಗಾಳದಲ್ಲಿ ಹಳೆಯ ಪಿಂಚಣಿ ಯೋಜನೆ ಜಾರಿಯಲ್ಲಿದೆ
ಅಸಂಘಟಿತ ಕಾರ್ಮಿಕರಿಗೆ ಕೇಂದ್ರ ಸರ್ಕಾರದಿಂದ ದ್ರೋಹ
2008ರಲ್ಲಿ ಎಡ ಪಕ್ಷಗಳ 62 ಸಂಸದರ ಒತ್ತಾಯದಿಂದಾಗಿ ಅಸಂಘಟಿತ ಕಾರ್ಮಿಕರ ಸಾಮಾಜಿಕ ರಕ್ಷಣೆಗಾಗಿ ಅಖಿಲ ಭಾರತ ಕಾಯಿದೆಯನ್ನು ಅಂಗೀಕರಿಸಲಾಯಿತು. ಮನಮೋಹನ್ ಸಿಂಗ್ ಸರ್ಕಾರ ಕಾನೂನು ಜಾರಿಗಾಗಿಯೇ 1,000 ಕೋಟಿ ರೂ. ಮಂಜೂರು ಮಾಡಿತು. ಕೇಂದ್ರ ಸರ್ಕಾರವು ವಾರ್ಷಿಕವಾಗಿ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ GDP ಯ ಶೇ. 3ರಷ್ಟನ್ನು – ಅಂದರೆ ಮೂರು ಲಕ್ಷ ಕೋಟಿ ರೂಪಾಯಿಗಳನ್ನು ನಿಗದಿಪಡಿಸಬೇಕೆಂದು ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳು ಒತ್ತಾಯಿಸಿವೆ. ಇದು ಕಾರ್ಮಿಕರ ಎಲ್ಲಾ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಗಳಲ್ಲಿನ ಪ್ರಮುಖ ಬೇಡಿಕೆಯಾಗಿತ್ತು. ಇದಕ್ಕೆ ಬಿಜೆಪಿ ಸರಕಾರ ಇದುವರೆಗೂ ಹಣ ಮೀಸಲಿಟ್ಟಿಲ್ಲ. ಮತ್ತೊಂದೆಡೆ, ಕೇಂದ್ರ ಸರ್ಕಾರವು ಕಾರ್ಪೊರೇಟ್‌ಗಳಿಗೆ ಹಲವಾರು ಲಕ್ಷ ಕೋಟಿ ರೂಪಾಯಿಗಳ ತೆರಿಗೆ ಪ್ರೋತ್ಸಾಹವನ್ನು ನೀಡುತ್ತದೆ.
ವಸೂಲಾಗದ ಸಾಲ (NPA)ದ ಹೆಸರಲ್ಲಿ ಉದ್ಯಮಿಗಳ ಲಕ್ಷಾಂತರ ಕೋಟಿ ಬ್ಯಾಂಕ್ ಸಾಲ ಮನ್ನಾ ಮಾಡುವ ಕೇಂದ್ರ ಸರಕಾರ, 38 ಕೋಟಿ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಒಂದು ಪೈಸೆಯನ್ನೂ ಮೀಸಲಿಡದಿರುವುದು ದೊಡ್ಡ ದ್ರೋಹವಾಗಿದೆ. ‘ಇ-ಶ್ರಮ’ ಎಂಬ ಅಸಂಘಟಿತ ಕಾರ್ಮಿಕರ ನೊಂದಣಿ ಪ್ರಕ್ರಿಯೆಯು ಸುಪ್ರೀಂ ಕೋರ್ಟ್ ಆದೇಶದ ಮೇರಗೆ ಆಗಸ್ಟ್ 2021 ರಿಂದ ಜಾರಿಗೆ ಬಂದಿದೆ. ಹೊರ ರಾಜ್ಯದ ಕಾರ್ಮಿಕರೂ ಇದರಲ್ಲಿ ನೋಂದಾಯಿಸಿಕೊಂಡಿದ್ದಾರೆ. ಆದರೆ, ಸಾಮಾಜಿಕ ಭದ್ರತಾ ಯೋಜನೆಗಳು, ಹಣ ವಿನಿಯೋಗ, ಮೂಲಸೌಕರ್ಯ ಯಾವುದನ್ನೂ ಇದುವರೆಗೂ ಕೇಂದ್ರ ಸರ್ಕಾರ ಸ್ಥಾಪಿಸಿಲ್ಲ. ಪ್ರಧಾನ ಮಂತ್ರಿ ಶ್ರಮ ಯೋಗಿ ಮಂದನ್ (PM-SYM) ಎಂಬ ಮರುನಾಮಕರಣಗೊಂಡ ಅಟಲ್ ಪಿಂಚಣಿ ಯೋಜನೆಯನ್ನು ಸರ್ಕಾರ ಘೋಷಿಸಿದೆ. 18 ರಿಂದ 40 ವರ್ಷ ವಯಸ್ಸಿನವರು ಮಾತ್ರ ಈ ಯೋಜನೆಗೆ ಸೇರಬಹುದು. ಈ ಪಿಂಚಣಿ ಯೋಜನೆಗೆ ಕಾರ್ಮಿಕರು ಸರಕಾರಕ್ಕೆ ಮಾಸಿಕ 55 ರಿಂದ 200 ರೂ. ವರೆಗೂ ತುಂಬಬೇಕು. 60 ವಯಸ್ಸಿನ ನಂತರ ತಿಂಗಳಿಗೆ 3000 ರೂಪಾಯಿ ಪಿಂಚಣಿ ಸಿಗುತ್ತದೆ. ಈಗ 40 ವರ್ಷ ವಯಸ್ಸಿನ ಕಾರ್ಮಿಕರು ಯೋಜನೆಗೆ ಸೇರಿದರೆ, ಮುಂದಿನ 20 ವರ್ಷಗಳವರೆಗೆ ಸರ್ಕಾರಕ್ಕೆ ತಿಂಗಳಿಗೆ 200 ರೂ.ಗಳನ್ನು ಪಾವತಿಸುತ್ತಾರೆ ಮತ್ತು 20 ವರ್ಷಗಳ ನಂತರ ಅವರಿಗೆ ತಿಂಗಳಿಗೆ 3,000 ರೂ. ಮಾತ್ರ ಪಿಂಚಣಿ ಸಿಗುತ್ತದೆ. ಆಗ 3 ಸಾವಿರದ ನಿಜವಾದ ಮೌಲ್ಯ ತೀವ್ರವಾಗಿ ಕುಗ್ಗಿರುತ್ತದೆ.
ಕನಿಷ್ಟ ವೇತನ ರೂ. 31 ಸಾವಿರ…
1957 ರಲ್ಲಿ ನಡೆದ ಭಾರತೀಯ ಕಾರ್ಮಿಕ ಸಮ್ಮೇಳನವು ಕಾರ್ಮಿಕರ ಅಗತ್ಯತೆಗಳ ಆಧಾರದ ಮೇಲೆ ಕನಿಷ್ಟ ವೇತನವನ್ನು ನೀಡಲು ನಿರ್ಧರಿಸಿತು. ಈ ಒಂಬತ್ತು ವರ್ಷಗಳಲ್ಲಿ ಸರ್ಕಾರ ವಾರ್ಷಿಕವಾಗಿ ನಡೆಸುವ ‘ಭಾರತೀಯ ಕಾರ್ಮಿಕ ಸಮ್ಮೇಳನ’ ಎಂಬ ತ್ರಿಪಕ್ಷೀಯ ಸಮ್ಮೇಳನವನ್ನು ಮೋದಿ ಸರ್ಕಾರ 2015 ರಲ್ಲಿ ನಡೆಸಿದೆ. ಇಂದಿನ ಬೆಲೆಗಳ ಪ್ರಕಾರ, 1957 ರ ಸಮ್ಮೇಳನವು ನಿರ್ಧರಿಸಿದ ಅವಶ್ಯಕತೆಯ ಆಧಾರದ ಮೇಲೆ ಕನಿಷ್ಠ ಕೂಲಿ 31 ಸಾವಿರ ರೂ. ನಿಗದಿಮಾಡಬೇಕು. ಅದು ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳಬೇಕು. ಅಂತಹ ಪ್ರಮುಖ ಬೇಡಿಕೆಗಳನ್ನು ಒತ್ತಿಹೇಳುವುದು, ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಜನವಿರೋಧಿ ನೀತಿಗಳನ್ನು ಸೋಲಿಸಲು, ಜಾತಿ, ಧರ್ಮ, ಜನಾಂಗ ಮತ್ತು ಭಾಷೆಯ ಭೇದವಿಲ್ಲದೆ ಕರ್ನಾಟಕದ ಕಾರ್ಮಿಕ ವರ್ಗವನ್ನು ಒಗ್ಗೂಡಿಸಲು, ಪ್ರಬಲ ವರ್ಗ ಹೋರಾಟಗಳನ್ನು ಮುಂದಕ್ಕೆ ಕೊಂಡೊಯ್ಯಲು, ಮತೀಯ ರಾಜಕಾರಣಕ್ಕೆ ಅಂತ್ಯ ಹಾಡಲು… ಮೇ 30 ರಂದು ಸಿಐಟಿಯುನ 54 ನೇ ಸಂಸ್ಥಾಪನಾ ದಿನದ ಆಚರಣೆಯ ಈ ಸಂದರ್ಭದಲ್ಲಿ ಪಣತೊಡೋಣ.
ಹೊಸ ಸರ್ಕಾರಕ್ಕೆ ರಾಜ್ಯದ ಕಾರ್ಮಿಕರ ಹಕ್ಕೊತ್ತಾಯಗಳು ;
29 ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ಮಾಡಿರುವ ಕೇಂದ್ರದ ಶಾಸನಗಳ ನಿಯಮಾವಳಿಗಳನ್ನು ರಾಜ್ಯ ಸರ್ಕಾರ ಜಾರಿ ಮಾಡಬಾರದು. ಕಾರ್ಮಿಕರ ಪರವಾದ ಕಾನೂನುಗಳನ್ನು ಜಾರಿಗೆ ತರಬೇಕು. ವಿದ್ಯುಚ್ಛಕ್ತಿ ಖಾಸಗೀಕರಣ ಕೈಬಿಟ್ಟು, ವಿದ್ಯುತ್ ತಿದ್ದುಪಡಿ ಮಸೂದೆ 2020ನ್ನು ತಿರಸ್ಕರಿಸಬೇಕು. ಬೆಲೆ ಏರಿಕೆ ಆಧಾರದಲ್ಲಿನ ತುಟ್ಟಿಭತ್ಯೆಯೊಂದಿಗೆ ಎಲ್ಲಾ ವಿಭಾಗಗಳ ಕಾರ್ಮಿಕರಿಗೂ ಸಮಾನ ಕನಿಷ್ಠ ವೇತನ ರೂ. 31 ಸಾವಿರ ಜಾರಿಗೊಳಿಸಬೇಕೆಂದು.
ಬೀಡಿ ಕಾರ್ಮಿಕರ ಎಲ್ಲಾ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಬೇಕು. ರಾಜ್ಯ ಸರ್ಕಾರ ಕೇರಳ ಮಾದರಿಯಲ್ಲಿ ಕಲ್ಯಾಣ ಕಾರ್ಯಕ್ರಮ ಜಾರಿ ಮಾಡಬೇಕು. ತೋಟ ಕಾರ್ಮಿಕರ ಕಾಯ್ದೆಯನ್ನು ಉಳಿಸಿ ಪ್ಲಾಂಟೇಶನ್ ಕಾರ್ಮಿಕರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿ ಸ್ಥಾಪಿಸಿ ಮನೆ, ಶಿಕ್ಷಣ, ಆರೋಗ್ಯ, ಸವಲತ್ತುಗಳನ್ನು ಜಾರಿ ಮಾಡಬೇಕು. ಅಂತರ ರಾಜ್ಯ ವಲಸೆ ಕಾರ್ಮಿಕರ ಕಲ್ಯಾಣ ಮಂಡಳಿ ರಚಿಸಿ, ಯೋಜನೆ ರೂಪಿಸಿ ವಸತಿ ಆರೋಗ್ಯ, ಶಿಕ್ಷಣ ಒದಗಿಸಬೇಕು. ಜೀವವಿಮಾ ಪ್ರತಿನಿಧಿಗಳನ್ನು ಕೇರಳದ ಮಾದರಿಯಲ್ಲಿ ರಾಜ್ಯ ಸರ್ಕಾರದ ಅಸಂಘಟಿತ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಸೇರ್ಪಡೆ ಮಾಡಬೇಕು.
ಕನಿಷ್ಟ ವೇತನ ಸಲಹಾ ಮಂಡಳಿ, ಕಾರ್ಮಿಕರ ಕಲ್ಯಾಣ ಮಂಡಳಿ, ಕಟ್ಟಡ ಹಾಗು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಅಸಂಘಟಿತ ಕಾರ್ಮಿಕರ ಕಲ್ಯಾಣ ಮೊದಲಾದ ತ್ರಿಪಕ್ಷೀಯ ಮಂಡಳಿ ಸಮಿತಿಗಳಲ್ಲಿ ಸಿಐಟಿಯು ಪ್ರತಿನಿಧಿಗಳನ್ನು ಸೇರ್ಪಡೆ ಮಾಡಬೇಕು. ರಾಜ್ಯದಲ್ಲಿ ಕಾರ್ಖಾನೆ ಕಾಯ್ದೆಗೆ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, ಕೈಗಾರಿಕಾ ನಿಶ್ಚಿತ ಕಾಲಾವಧಿ ಕಾರ್ಮಿಕರ ನೇಮಕದ ಮಾದರಿ ಸ್ಥಾಯಿ ಆದೇಶಗಳಿಗೆ ಮಾಡಲಾಗಿರುವ ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ವಾಪಸ್ಸು ಪಡೆಯಬೇಕು.
ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ಮತ್ತು ಅಪಾಯಕಾರಿ ಕೆಲಸಗಳಲ್ಲೂ ದುಡಿಸಿಕೊಳ್ಳಲು ನೀಡಿರುವ ರಿಯಾಯಿತಿ ರದ್ದು ಮಾಡಬೇಕು. ಆಟೋ, ಟ್ಯಾಕ್ಸಿ ಮುಂತಾದ ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ರಚಿಸಬೇಕು. ಹಮಾಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ದರ್ಜಿಗಳು, ಮೆಕ್ಯಾನಿಕ್ ಗಳು, ಮನೆಗೆಲಸ ಮಹಿಳೆಯರು ಸೇರಿ ವಿವಿಧ ವಿಭಾಗಗಳಿಗೆ ಈಗಾಗಲೇ ಕಾರ್ಮಿಕ ಇಲಾಖೆ ರೂಪಿಸಿರುವ ಅಸಂಘಟಿತ ಕಾರ್ಮಿಕರ ಭವಿಷ್ಯ ನಿಧಿ ಕರಡನ್ನು ಶಾಸನವನ್ನಾಗಿ ವಿಧಾನಸಭೆಯಲ್ಲಿ ಅಂಗೀಕರಿಸಬೇಕು. ಅದಕ್ಕೆ ಅಗತ್ಯವಿರುವ ಸೆಸ್ ಸಂಗ್ರಹಕ್ಕೆ ಸರ್ಕಾರ ಕ್ರಮವಹಿಸಬೇಕು.