ಬೆಂಗಳೂರಿನಲ್ಲಿ ಸಿಐಟಿಯು ಅಖಿಲ ಭಾರತ ಸಮ್ಮೇಳನ : ಉತ್ಸಾಹ ತುಂಬಿದ ಸ್ವಾಗತ ಸಮಿತಿ ರಚನಾ ಸಭೆ

ವರದಿ: ಲಿಂಗರಾಜು ಮಳವಳ್ಳಿ

ಕಾರ್ಮಿಕ ವರ್ಗದ ಪಕ್ಷಪಾತಿ ಸಿಐಟಿಯು ಕರ್ನಾಟಕದಲ್ಲಿ ಮತ್ತೊಂದು ಮೈಲಿಗಲ್ಲಿನ ಹಾದಿಗೆ ಮುನ್ನುಡಿ ಬರೆದಿದೆ. 2023 ಜನವರಿ 18 ರಿಂದ 22ರವರೆಗೆ ಸಿಐಟಿಯು 17ನೇ ಅಖಿಲ ಭಾರತ ಸಮ್ಮೇಳನ ಈ ಬಾರಿ ಸಾರ್ವಜನಿಕ ಉದ್ದಿಮೆಗಳ ನಗರ ಬೆಂಗಳೂರಿನಲ್ಲಿ ನಡೆಯಲಿದೆ. ಹಿಂದುತ್ವ-ಕಾರ್ಪೊರೇಟ್ ಅಕ್ರಮ ಜೋಡಿ ದೇಶದ ಆರ್ಥಿಕತೆಯನ್ನು ಅಪಾಯದ ಅಂಚಿಗೆ ತಳ್ಳುವ ಜತೆಗೆ ದೇಶದ ಸೌಹಾರ್ದ, ಜಾತ್ಯಾತೀತ ಪರಂಪರೆಗೆ ಸವಾಲೊಡ್ಡಿರುವ ಈ ಪ್ರಕ್ಷಬ್ದ ಸನ್ನಿವೇಶದಲ್ಲಿ ನಡೆಯುತ್ತಿರುವ ಈ ಸಮ್ಮೇಳನಕ್ಕೆ ಅತ್ಯಂತ ಮಹತ್ವ ಪಡೆದುಕೊಂಡಿದೆ.

ಐತಿಹಾಸಿಕ ಮಹತ್ವ ಪಡೆದುಕೊಂಡಿರುವ ಈ ಸಮ್ಮೇಳನವನ್ನು ಕಾರ್ಮಿಕರ ನಗರವೆಂದೇ ಹೆಸರುವಾಸಿಯಾಗಿರುವ ಬೆಂಗಳೂರಿನಲ್ಲಿ ಯಶಸ್ವಿಗೊಳಿಸಲು ಸಿದ್ದತೆಗಳು ಆರಂಭಗೊಂಡಿವೆ. ಜುಲೈ 05 ಮಂಗಳವಾರ ಕಬ್ಬನ್ ಪಾರ್ಕ್ನ ಸಚಿವಾಲಯ ನೌಕರರ ಕ್ಲಬ್ ಭವನದಲ್ಲಿ ಸ್ವಾಗತ ಸಮಿತಿ ರಚನಾ ಸಭೆ ನಡೆಯಿತು. ಸಭೆಯಲ್ಲಿ ಕಾರ್ಮಿಕ ನಾಯಕರು ಮಾತ್ರವಲ್ಲದೇ ಸಾಂಸ್ಕೃತಿಕ ಕ್ಷೇತ್ರದ ಗಣ್ಯರು, ಪತ್ರಕರ್ತರು, ವಿಜ್ಞಾನಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿದ್ದು ವಿಶೇಷ.

ಗೌರವಾಧ್ಯಕ್ಷರಾಗಿ ಹಿರಿಯ ನ್ಯಾಯವಾದಿ ಕೆ.ಸುಬ್ಬರಾವ್

ಕಾರ್ಮಿಕರ ನ್ಯಾಯಾಧೀಶರೆಂದೇ ಪ್ರಖ್ಯಾತರಾದ ನ್ಯಾಯವಾದಿ ಕೆ.ಸುಬ್ಬರಾವ್ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ನೆರೆದವರ ಕರತಾಡತನದೊಂದಿಗೆ ಆಯ್ಕೆಯಾದರು. ‘ನನಗೀಗ 91 ವರ್ಷ, ಆದರೂ ಕಾರ್ಮಿಕರ ಪರ ವಾದ ಮಾಡುತ್ತಿದ್ದೇನೆ, ಇದಕ್ಕೆ ಕಾರಣ ಕಾರ್ಲ್ಮಾರ್ಕ್ಸ್ನೇ ಕಾರಣ. ಜಗತ್ತಿನ ಕಾರ್ಮಿಕರೇ ಒಂದಾಗಿ ಎಂದು ಕರೆಕೊಟ್ಟು, 150 ವರ್ಷಗಳಾದರೂ ಕಾರ್ಮಿಕ ವರ್ಗ ಇಂದಿಗೂ ಒಗ್ಗಟ್ಟಾಗಿಲ್ಲ, ಶ್ರಮಜೀವಿ ವರ್ಗಕ್ಕೆ ಕಾರ್ಮಿಕ ವರ್ಗದ ಪ್ರಜ್ಞೆ ಮೂಡಿಸುವ ಜವಾಬ್ದಾರಿ ಕಾರ್ಮಿಕ ಸಂಘಟನೆಗಳ ಮೇಲಿದೆ’ ಎಂದರು.

ಅಧ್ಯಕ್ಷರಾಗಿ ಅಮಾನುಲ್ಲಾಖಾನ್ ಆಯ್ಕೆ

ವಿಮಾ ನೌಕರರ ಸಂಘಟನೆ ಎಐಐಇಎ ಅಖಿಲ ಭಾರತ ಅಧ್ಯಕ್ಷರಾದ ಅಮಾನುಲ್ಲಾಖಾನ್ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದರು. ಕಾರ್ಯಾಧ್ಯಕ್ಷರಾಗಿ ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ, ಪ್ರಧಾನ ಕಾರ್ಯದರ್ಶಿಯಾಗಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮೀನಾಕ್ಷಿಸುಂದರಂ, ಖಜಾಂಚಿಯಾಗಿ ಸಿಐಟಿಯು ರಾಜ್ಯ ಖಜಾಂಚಿ ಪಿ.ಕೆ.ಪರಮೇಶ್ವರ್ ಆಯ್ಕೆಯಾದರು.

ನಾದಬ್ರಹ್ಮನ ಆಗಮನದಿಂದ ಪುಳಕಿತಗೊಂಡ ಸಭಿಕರು

ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕ ಹಂಸಲೇಖ ಸ್ವಾಗತ ಸಮಿತಿ ರಚನಾ ಸಭೆಯಲ್ಲಿ ಭಾಗವಹಿಸಿದ್ದು ಸಭೆಗೆ ಹೊಸ ಹುರುಪು ತಂದಿತ್ತು. ‘ಲಿನ್ ನಿಂದ ಲಿನ್ ವರೆಗೆ’ ಓದಿದ್ದೇನೆ, (ಚಾಪ್ಲಿನ್ ನಿಂದ ಲೆನಿನ್‌ವರೆಗೆ) ಬರೆದಿದ್ದೇನೆ, ಆದರೆ ಕಾರ್ಮಿಕರ ನಡುವೆ ನೇರವಾಗಿ ಭಾಗವಹಿಸಿದ್ದು ಇದೇ ಮೊದಲು, ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕರ ಬದುಕು ಇಂದಿಗೂ ಯಾತನೆಯಲ್ಲಿರುವುದು ನೋವಿನ ಸಂಗತಿ’ ಎಂದರು. ಸಮ್ಮೇಳನಕ್ಕೆ ಅಗತ್ಯ ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಸ್ವಾಗತ ಸಮಿತಿಯ ಮಾರ್ಗದರ್ಶಕರಾಗಿ ಇರಲು ಸಮ್ಮತಿಸಿದರು.

ಕಾರ್ಮಿಕರ ಕೋಪ ಹೆಪ್ಪುಗಟ್ಟುತ್ತಿದೆ, ಅದು ಒಮ್ಮೆಲೆ ಸಿಡಿಯಲಿದೆ: ಡಾ.ಹೇಮಲತಾ

‘ದೇಶದ ಆಳುವ ಸರ್ಕಾರಗಳ ಕಾರ್ಮಿಕ ವಿರೋಧಿ ಧೋರಣೆಗಳ ವಿರುದ್ಧ ಕಾರ್ಮಿಕ ವರ್ಗ ಭಾರಿ ಪ್ರತಿರೋಧ ತೋರುತ್ತಲೇ ಬಂದಿದೆ. ಅಖಿಲ ಭಾರತ ಮುಷ್ಕರಗಳ ಮೂಲಕ ಆಳುವ ವರ್ಗಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಾ ಬಂದಿದೆ. ಕಾರ್ಮಿಕರ ವಿರೋಧದ ನಡುವೆಯೂ ಪ್ರಸ್ತುತ ಮೋದಿ ಸರ್ಕಾರ ಕಾರ್ಮಿಕ ಕಾಯ್ದೆಗಳನ್ನು ಸಂಹಿತೀಕರಣಗೊಳಿಸಿದೆ. ಇದು ದೇಶದ ಮೇಲೆ ಭಾರಿ ಅಪಾಯಗಳನ್ನು ತಂದೊಡ್ಡಲಿದೆ. ಹಾಗೆಯೇ ಅತೀವ ಶೋಷಣೆಗೊಳಗಾಗುತ್ತಿರುವ ಕಾರ್ಮಿಕ ವರ್ಗದ ಕೋಪ ಹೆಪ್ಪುಗಟ್ಟಿ ಒಮ್ಮೆಲೆ ಸ್ಪೋಟಗೊಳ್ಳಲಿದೆ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ’ ಎಂದು ಸಿಐಟಿಯು ಅಖಿಲ ಭಾರತ ಅಧ್ಯಕ್ಷರಾದ ಡಾ.ಹೇಮಲತಾ ಹೇಳಿದರು.

‘ಸಂವಿಧಾನ ವಿರೋಧಿ ಧರ್ಮ ರಾಜಕಾರಣ ಕಾರ್ಮಿಕ ವರ್ಗದ ಐಕ್ಯತೆಗೆ ಧಕ್ಕೆ ತಂದಿದೆ. ಜನರ ನೈಜ ಸಮಸ್ಯೆಗಳನ್ನು ಮರೆಮಾಚಿ ಭಾವನಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತಂದಟಿದರ ಮರೆಯಲ್ಲಿ ದೇಶದ ಸಂಪತ್ತನ್ನು ಕಾರ್ಪೊರೇಟೀಕರಣ ಮಾಡಲಾಗುತ್ತಿದೆ. ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ನಡೆಯುತ್ತಿರುವ ಈ ಸಮ್ಮೇಳನಕ್ಕೆ ಅತ್ಯಂತ ಮಹತ್ವವಿದೆ’ ಎಂದರು.

ಸಂವಿಧಾನ ಬುಡಮೇಲು ಮಾಡುವ ಹುನ್ನಾರ: ಎಸ್.ಜಿ.ಸಿದ್ದರಾಮಯ್ಯ

ರಾಜ್ಯದಲ್ಲಿ ನಡೆಯುತ್ತಿರುವ ಪಠ್ಯಪುಸ್ತಕ ಪರಿಷ್ಕರಣೆ, ಕಾರ್ಮಿಕ ಕಾನೂನುಗಳ ರದ್ದತಿ, ಸಿಎಎ ಜಾರಿ, ಇತ್ಯಾದಿ ವಿಚಾರಗಳು ಪ್ರತ್ಯೇಕವಾದವಲ್ಲ, ಇವುಗಳ ನಡುವೆ ಅಂತರ್ ಸಂಬAಧವಿದೆ, ಸಂವಿಧಾನದ ಜಾಗದಲ್ಲಿ ಮನುಸ್ಮೃತಿಯನ್ನು ಪ್ರತಿಷ್ಟಾಪಿಸುವ ಬಿಜೆಪಿಯ ಗುಪ್ತ ಕಾರ್ಯಸೂಚಿಯ ಭಾಗವಾಗಿ ಇವೆಲ್ಲವೂ ನಡೆಯುತ್ತಿವೆ. ಆದ್ದರಿಂದ ಸಿಐಟಿಯು ಅಖಿಲ ಭಾರತ ಸಮ್ಮೇಳನವು ಇಂತಹ ಗಂಭೀರ ವಿಷಯಗಳ ಕುರಿತು ಚರ್ಚಿಸಿಸಬೇಕು ಎಂದು  ಕವಿ, ಚಿಂತಕ ಎಸ್.ಜಿ.ಸಿದ್ದರಾಮಯ್ಯ ಹೇಳಿದರು.

ಹರಿದು ಬಂದ ಭರವಸೆಯ ಮಹಾಪೂರ

ಸಮ್ಮೇಳನವನ್ನು ಯಶಸ್ವಿಗೊಳಿಸಲು ವಿವಿಧ ಸಂಘಟನೆಗಳು, ಸಂಘಗಳು ನೆರವಿನ ಭರವಸೆಯನ್ನಿತ್ತಿವೆ. ಬಿಡದಿಯ ಟಯೋಟಾ ಕಾರ್ಮಿಕರು ಸ್ಥಳದಲ್ಲೇ ಒಂದೂವರೆ ಲಕ್ಷ ರೂಪಾಯಿ ನೀಡುವ ಮೂಲಕ ಸಮ್ಮೇಳನದ ಯಶಸ್ವಿಗೆ ದುಡಿಯುವ ಭರವಸೆ ನೀಡಿದರು. ಅನೇಕರು ಸ್ಥಳದಲ್ಲೇ ಸಹಾಯ ನೀಡಿದರು. ಸಮ್ಮೇಳನಕ್ಕೆ ಆಗುವ ಖರ್ಚುವೆಚ್ಚ ಹಾಗು ಸಮ್ಮೇಳನದ ತಯಾರಿ ಕೆಲಸಗಳಲ್ಲಿ ಭಾಗಿಯಾಗುವುದಾಗಿ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಮಾತನಾಡಿ ಭರವಸೆ ನೀಡಿದರು.

ರಂಗಕರ್ಮಿ ಸಿ.ಬಸವಲಿಂಗಯ್ಯ, ಸಾಮಾಜಿಕ ಹೋರಾಟಗಾರ ಎಸ್.ಆರ್.ಹೀರೇಮಠ್, ಸಿಐಟಿಯು ಹಿರಿಯ ಮುಖಂಡ ವಿಜೆಕೆ ನಾಯರ್, ಹಿರಿಯ ಪತ್ರಕರ್ತೆ ಪೂರ್ಣಿಮಾ, ಬರಹಗಾರ್ತಿ ವಸುಂಧರಾ ಭೂಪತಿ, ವಿಜ್ಞಾನಿ ಡಾ.ಎಸ್.ಚಟರ್ಜಿ, ರೈತ ಮುಖಂಡ ಜಿ.ಸಿ.ಬಯ್ಯಾರೆಡ್ಡಿ, ಚಿಂತಕ ಜಿ.ಎನ್.ನಾಗರಾಜ್ ಹಾಗು ಇತರರು ಇದ್ದರು.

ಸಿಐಟಿಯು ರಾಜ್ಯಾಧ್ಯಕ್ಷೆ ಎಸ್‌. ವರಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು, ಸಿಐಟಿಯು ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮೀನಾಕ್ಷಿ ಸುಂದರಂ ಪ್ರಾಸ್ತಾವಿಕವಾಗಿ ಮತನಾಡಿದರು. ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ್ ಕಾರ್ಯಕ್ರಮ ನಿರ್ವಹಿಸಿದರು. ಸಿಐಟಿಯು ಬೆಂಗಳೂರು ದಕ್ಷಿಣ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎನ್.ಮಂಜುನಾಥ್ ಸ್ವಾಗತಿಸಿ, ಬೆಂಗಳೂರು ಉತ್ತರ ಸಮಿತಿಯ ಮುಖಂಡ ಮುನಿರಾಜು ವಂದಿಸಿದರು. ಕೆ.ಎಸ್.ಲಕ್ಷ್ಮೀ, ಎಚ್‌.ಎಸ್‌ ಸುನಂದ, ಲಿಂಗರಾಜು ಹಾಗು ಇತರರು ಹಾಡುಗಳನ್ನು ಹಾಡಿದರು.

Donate Janashakthi Media

Leave a Reply

Your email address will not be published. Required fields are marked *