ಬೆಂಗಳೂರು : ಬಲಪಂಥೀಯ ಶಕ್ತಿಗಳು ಸಮಾಜದಲ್ಲಿರುವ ಅಡೆತಡೆಗಳನ್ನು ಗುರುತಿಸಿ ಅದರ ಒಟ್ಟಾರೆ ಸ್ವರೂಪವನ್ನು ಕೋಮುವಾದೀಕರಣಗೊಳಿಸಲು ಮುಂದಾಗಿವೆ. ಇದು ಜನರ ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲೆ ನೇರ ಹೊಡೆತವಾಗಿದೆ ಎಂದು ಸಿಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಹೇಳಿದರು.
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು), 17ನೇ ಅಖಿಲ ಭಾರತ ಸಮ್ಮೇಳನ ಅಂಗವಾಗಿ ಇಂದು(ಜನವರಿ 19) ಹಮ್ಮಿಕೊಳ್ಳಲಾದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಅಂತರರಾಷ್ಟ್ರೀಯ ಸಂಬಂಧಗಳು ಹಾಗೂ ಅದರ ಆರ್ಥಿಕ ಮತ್ತು ರಾಜಕೀಯ ಸಂಬಂಧಗಳನ್ನು ವಿಶ್ಲೇಷಿಸಿದ ಅವರು, ವಿಭಜಿತ ರಾಜಕಾರಣವನ್ನು ಮಾಡುತ್ತಾ ಜನರ ಹಾದಿ ತಪ್ಪಿಸುತ್ತಿರುವ ಈ ಸಂದರ್ಭದಲ್ಲಿ ನಮ್ಮ ಮುಂದೆ ಜನರಿಗೆ ಅರಿವು ಮೂಡಿಸಲು ಮತ್ತು ಅವರನ್ನು ಒಗ್ಗೂಡಿಸುವ ಒಂದು ದೊಡ್ಡ ಸವಾಲು ನಮ್ಮ ಮುಂದಿವೆ ಎಂದು ತಿಳಿಸಿದರು.
ಅರ್ಥಿಕತೆಯು ನಾಶವಾಗುತ್ತಿದೆ. ಭಾರತದ ಸ್ವಾಲಂಬಿ ಗುಣಮಟ್ಟವು ಕುಗ್ಗುತ್ತಿದೆ. ಈ ಪ್ರಶ್ನೆಗಳನ್ನು ಎದುರಿಸಲು ಹೋರಾಟ ಒಂದೇ ದಾರಿಯಾಗಿದೆ. ಸಮ್ಮೇಳನವು ಬೆಂಗಳೂರಿನಲ್ಲಿ ನಡೆಯುತ್ತಿದೆ. ಬಿಇಎಂಎಲ್ ನ ಒಟ್ಟಾರೆ ವ್ಯವಹಾರವನ್ನು ಖಾಸಗೀಕರಣಗೊಳಿಸಲು ಹೊರಟಿರುವ ಸರ್ಕಾರ ಜಂಟಿ ಕಾರ್ಮಿಕ ಸಂಘಟನೆಗಳ ವೇದಿಕೆಯ ಹೋರಾಟಗಳನ್ನು ಗಮನಿಸಿ ಹಿಂಜರಿದಿದೆ. ಕಾರ್ಮಿಕ ಸಂಘಟನೆಗಳು ಇಂತಹ ಸಮಸ್ಯೆಗಳನ್ನು ಎದುರಿಸುವುದರ ಒಂದು ಸ್ವರೂಪವನ್ನು ಸ್ವತಂತ್ರವಾಗಿ ರೂಪಿಸುವ ಅಗತ್ಯವಿದೆ.
ಈವರೆಗೂ ಸಮ್ಮೇಳನದಲ್ಲಿ 23 ಪ್ರತಿನಿಧಿಗಳು ಕಾರ್ಯದರ್ಶಿಯ ವರದಿಯ ಮೇಲೆ ಚರ್ಚಿಸಿ ಮಾತನಾಡಿದ್ದಾರೆ. ಅವರು ಹೋರಾಟವನ್ನು ಬಲಿಷ್ಠಗೊಳಿಸುವುದರ ಕಡೆಗೆ ತಮ್ಮ ಚರ್ಚೆಯನ್ನು ಮಂಡಿಸಿದ್ದಾರೆ.
ಕಾರ್ಮಿಕ ಚಳುವಳಿಯನ್ನು ಬಲಿಷ್ಟಗೊಳಿಸಲು ಪ್ರಮುಖವಾಗಿ ಮೂರು ಅಂಶಗಳನ್ನು ಗುರುತಿಸಿದೆ. ಅದರಂತೆ, ಸಿಐಟಿಯು ಸಂಘಟನೆಯನ್ನು ಬಲಿಷ್ಠಗೊಳಿಸುವುದು, ಎಲ್ಲಾ ಕಾರ್ಮಿಕ ಸಂಘಟನೆಗಳೊಂದಿಗೆ ಹೋರಾಟವನ್ನು ಸಂಘಟಿಸುವುದು. ಕಾರ್ಮಿಕರ ಮತ್ತು ರೈತರ ಸಂಘಟನೆಗಳ ಐಕ್ಯ ಚಳುವಳಿಯನ್ನು ರೂಪಿಸುವ ಬಗ್ಗೆ ಚರ್ಚಿಸಲಾಗುತ್ತಿದೆ.
ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಆಡಳಿತದ ಅವಧಿಯಲ್ಲಿ ನಡೆದ ನರಮೇಧ ಜನಾಂಗೀಯ ಹತ್ಯೆ ಮತ್ತು ಯಾತನಾ ಶಿಬಿರ ಕುರಿತಾದ ಛಾಯಾಚಿತ್ರ ಪ್ರದರ್ಶನವನ್ನು ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಡಾ. ಕೆ. ಹೇಮಲತಾ ಉದ್ಘಾಟಿಸಿದರು.