ಬೆಂಗಳೂರು: ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು), 17ನೇ ಅಖಿಲ ಭಾರತ ಸಮ್ಮೇಳನ 2023ರ ಜನವರಿ 18 ರಿಂದ 22 ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಸಮ್ಮೇಳನದ ಪೂರ್ವಭಾವಿಯಾಗಿ ರಾಜ್ಯವ್ಯಾಪಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ವಿವರಿಸಿದರು.
ಈ ಕುರಿತು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಸಮ್ಮೇಳನ ಸಾಂಸ್ಕೃತಿಕ ಉಪಸಮಿತಿ ಸಂಚಾಲಕ ಗುಂಡಣ್ಣ ಚಿಕ್ಕಮಗಳೂರು ಮಾತನಾಡಿ, ರಾಷ್ಟ್ರ ಮತ್ತು ರಾಜ್ಯವ್ಯಾಪಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಿಐಟಿಯು ಸಂಘಟನೆಯ ಅಖಿಲ ಭಾರತ 17ನೇ ಸಮ್ಮೇಳನ 2023ರ ಜನವರಿ 18-22ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಈ ಹಿನ್ನಲೆಯಲ್ಲಿ, ಸಂಘಟನೆಯ ಧ್ಯೇಯ-ಧೋರಣೆಗಳನ್ನು ಸಾಮಾನ್ಯ ನಾಗರೀಕರಿಗೆ ಮತ್ತು ರಾಜ್ಯದ ಕಾರ್ಮಿಕ ಬಂಧುಗಳಿಗೆ ತಲುಪಿಸುವ ಉದ್ದೇಶದಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಏಳು ನಿಮಿಷಗಳ ಕಾಲದ ಕಿರುಚಿತ್ರ ನಿರ್ಮಾಣ ಸ್ಪರ್ಧೆ, ಬಹುಭಾಷಾ ಕವಿಗೋಷ್ಟಿ, ಚಿತ್ರಕಲಾ ರಚನೆ ಕಾರ್ಯಕ್ರಮ ಹಾಗೂ ರಾಜ್ಯದ ಐದು ವಿಭಾಗಗಳಿಂದ ಕಲಾ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರಾಜ್ಯದ ಐದು ವಿಭಾಗಗಳ ಕಲಾ ಜಾಥಾ:
ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ರಾಜ್ಯದ ಐದು ವಿಭಾಗಗಳಲ್ಲಿ ಜಿಲ್ಲಾ ಮಟ್ಟದ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ ಗುಂಡಣ್ಣ ಚಿಕ್ಕಮಗಳೂರು, ಈ ಕಾರ್ಯಕ್ರಮಗಳು ಕೋಲಾರ ವಿಭಾಗ; ಮೈಸೂರು ವಿಭಾಗ; ಬೆಳಗಾವಿ ವಿಭಾಗ: ಕಲಬುರಗಿ ವಿಭಾಗ; ಬೆಂಗಳೂರು ವಿಭಾಗಗಳ ಮುಖಾಂತರ ಆಯಾ ವಿಭಾಗದ ಎಲ್ಲ ಜಿಲ್ಲೆಗಳಲ್ಲಿ ಬೀದಿ ನಾಟಕಗಳು, ಜನಪರ ಮತ್ತು ವೈಚಾರಿಕತೆಯನ್ನು ಭಿತ್ತರಿಸುವ ಹಾಡುಗಳ 10 ದಿನಗಳ ಸಾಂಸ್ಕೃತಿಕ ಕಲಾ ಜಾಥಾವನ್ನು ಜನವರಿ 10 ರಿಂದ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಜನವರಿ 10ರಂದು ಏಕಕಾಲಕ್ಕೆ ಕಲಾ ಜಾಥಾ ಎಲ್ಲ ವಿಭಾಗಗಳಲ್ಲೂ ಉದ್ಘಾಟನೆಗೊಳ್ಳುತ್ತದೆ. ರಾಜ್ಯದ ಇತಿಹಾಸ ಪ್ರಸಿದ್ದ ಹಾಗೂ ಸ್ವಾತಂತ್ರ್ಯ ಹೋರಾಟದ ಪ್ರಾಮುಖ್ಯತೆಯ ಸ್ಥಳಗಳಲ್ಲಿ ಕಲಾ ಜಾಥಾದ ಉದ್ಘಾಟನೆ ಅಥವಾ ಸಮಾಪ್ತಿ ಆಗುವ ಹಾಗೆ ಆಯೋಜಿಸಿದ್ದೇವೆ. ಪ್ರತಿ ಜಿಲ್ಲೆಯ ಹೆಸರಾಂತ ಪ್ರಗತಿಪರ ಚಿಂತಕರು, ಬಂಡಾಯ ಸಂಘಟನೆಯ ಸಾಹಿತಿಗಳು, ಕಲಾವಿದರು, ಸ್ವಾತಂತ್ರ್ಯ ಸೇನಾನಿಗಳು, ಜಾತ್ಯತೀತ ವ್ಯಕ್ತಿಗಳು, ಎಡ ಚಿಂತನೆಯ ಕಾರ್ಮಿಕ ನಾಯಕರು ಮುಂತಾದವರನ್ನು ಉದ್ಘಾಟಟಕರಾಗಿ ಆಗಮಿಸಲಿದ್ದಾರೆ ಎಂದರು.
ಬಹುಭಾಷಾ ಕವಿಗೋಷ್ಠಿ:
ಬಹುಭಾಷಾ ಕವಿಗೋಷ್ಟಿ ಸಂಚಾಲಕರಾದ ಕವಿಯತ್ರಿ ಡಾ. ಕೆ.ಷರೀಫಾ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮದ ಮತ್ತೊಂದು ಮಹತ್ತರ ಕಾರ್ಯಕ್ರಮ ಬಹುಭಾಷಾ ಕವಿಗೋಷ್ಟಿಯನ್ನು ಡಿಸೆಂಬರ್ 24ರಂದು ಬಸವನಗುಡಿಯ ಬ್ಯೂಗಲ್ ರಾಕ್ ಆವರಣದ ಬಿಬಿಎಂಪಿ ಬಯಲು ಸಭಾಂಗಣದಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಲಿದೆ. ಕನ್ನಡ, ತಮಿಳು, ತೆಲಗು, ಮಲೆಯಾಳಂ, ಹಿಂದಿ, ಉರ್ದು ಮತ್ತು ಇಂಗ್ಲೀಷ್ ಭಾಷೆಗಳ ಸಮಾಜಮುಖಿ ಮತ್ತು ಪ್ರಗತಿಪರ ಆಶಯಗಳ ಸ್ವರಚಿತ ಕವನಗಳನ್ನು ಕವಿಗಳು ವಾಚಿಸುತ್ತಾರೆ ಎಂದು ತಿಳಿಸಿದರು.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ನಾಡೋಜ ಬರಗೂರು ರಾಮಚಂದ್ರಪ್ಪ ಅವರು ವಹಿಸಿ ನಡೆಸಿಕೊಡಲಿದ್ದಾರೆ. ಕವಿಯಿತ್ರಿ ಮತ್ತು ಅಸಂಘಟಿತ ವಲಯದ ಸಾಮಾಜಿಕ ಹೋರಾಟಗಾರ್ತಿ ಕೆ. ನೀಲಾ (ಕಲಬುರಗಿ) ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಾರೆ.
ಏಳು ನಿಮಿಷಗಳ ಕಾಲದ ಕಿರುಚಿತ್ರ ನಿರ್ಮಾಣದ ಸ್ಪರ್ಧೆ:
ಸಾಂಸ್ಕೃತಿಕ ಉಪ ಸಮಿತಿ ಸದಸ್ಯ ಈ. ಬಸವರಾಜು ಮಾತನಾಡಿ, ಸಿಐಟಿಯು ಅಖಿಲ ಭಾರತ ಸಮ್ಮೇಳನದ ಭಾಗವಾಗಿ ಒಂದರಿಂದ ಏಳು ನಿಮಿಷಗಳ ಕಿರುಚಿತ್ರ ನಿರ್ಮಾಣ ಸ್ಪರ್ಧೆ ಮತ್ತು ಉತ್ಸವವನ್ನು ಆಯೋಜಿಸಲಾಗಿದೆ. ಇದು ಅಖಿಲ ಭಾರತ ಮಟ್ಟದ, ಬಹುಭಾಷಾ ಕಿರುಚಿತ್ರ ನಿರ್ಮಾಣದ ಸ್ಪರ್ಧೆಯಾಗಿರುತ್ತದೆ. ಕಿರುಚಿತ್ರ ನಿರ್ಮಾಣಕ್ಕೆ ಸಹಾಯವಾಗುವ ನಿಟ್ಟಿನಲ್ಲಿ ಆಸಕ್ತ ಯುವ ನಿರ್ದೇಶಕರುಗಳಿಗೆ ವಿಷಯಗಳನ್ನೂ ಸೂಚಿಸಲಾಗಿದೆ ಎಂದು ತಿಳಿಸಿದರು.
ಕಿರುಚಿತ್ರ ನಿರ್ಮಾಣದ ಸ್ಪರ್ಧೆಯ ಯೋಜನೆಯ ಜವಾಬ್ದಾರಿಯನ್ನು ಚಲನಚಿತ್ರ ನಿರ್ದೇಶಕ ಹಾಗೂ ಸಾಕ್ಷ್ಯಚಿತ್ರ ನಿರ್ದೇಶಕ ಕೇಸರಿ ಹರವೂ ಅವರ ನಿರ್ದೇಶಕತ್ವದಲ್ಲಿ ನಡೆಯುತ್ತದೆ. ಸ್ಪರ್ಧೆಗೆ ಕಿರುಚಿತ್ರಗಳನ್ನು ಕಳುಹಿಸಿಕೊಡಲು ಕೊನೆಯ ದಿನಾಂಕ ಡಿಸೆಂಬರ್ 31 ಆಗಿದೆ ಎಂದರು.
ಚಿತ್ರಕಲಾ ರಚನೆ ಕಾರ್ಯಕ್ರಮ:
ಸಿಐಟಿಯು ಮುಖಂಡ ಲಿಂಗರಾಜು ಮಾತನಾಡಿ, ಕಾರ್ಮಿಕ ವರ್ಗದ ಕುಟುಂಬದ ಸದಸ್ಯರನ್ನು ಹಾಗೂ ಬೆಂಗಳೂರು ನಗರದ ನಾಗರೀಕರನ್ನು ಒಳಗೊಳ್ಳುವ ನಿಟ್ಟಿನಲ್ಲಿ ಚಿತ್ರಕಲಾ ಶಿಬಿರವನ್ನು ಆಯೋಜಿಸಲಾಗಿದೆ. ಪ್ರಸ್ತುತ ಸಂದರ್ಭ, ದುರಿತ ಕಾಲದ ಜ್ವಲಂತ ಸಮಸ್ಯೆಗಳನ್ನು ಬಿಂಬಿಸುವ ಚಿತ್ರಕಲಾ ರಚನೆಯ ಕಾರ್ಯಕ್ರಮ ಇದಾಗಿರುತ್ತದೆ. ನಾಡಿನ ಹೆಸರಾಂತ ಚಿತ್ರಕಲೆ ಕಲಾವಿದರಿಗೂ ಸಹ ತಮ್ಮ ಕೃತಿಗಳನ್ನು ರಚನೆ ಮಾಡಲು ಆಹ್ವಾನ ಮಾಡಿದ್ದೇವೆ ಎಂದು ತಿಳಿಸಿದರು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ ಮಾತನಾಡಿ, ಸಿಐಟಿಯು ಸಂಘಟನೆಯು ಕಳೆದ 50 ವರುಷಗಳಿಂದ ರೈತ-ಕಾರ್ಮಿಕರು, ಅಸಂಘಟಿತ ವಲಯದ ನೌಕರರು, ಸೇವಾ ವಲಯದ ನೌಕರರ ಪರವಾಗಿ ಕಾರ್ಮಿಕ ಹಕ್ಕುಗಳಿಗಾಗಿ, ಕನಿಷ್ಠ ಕೂಲಿ ಮತ್ತು ಕಾನೂನಾತ್ಮಕ ವೇತನಗಳಿಗಾಗಿ, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣದ ವಿರುದ್ಧ, ನಿರುದ್ಯೋಗ, ಮಹಿಳಾ ಸಮಾನತೆ ಹಾಗೂ ಉದ್ಯೋಗ ಸ್ಥಳದಲ್ಲಿ ಮಹಿಳೆಯರ ಭದ್ರತೆಗಾಗಿ ಹೋರಾಟಗಳ ಮುಖಾಂತರ ಕಾರ್ಯಚಟುವಟಿಕೆಯನ್ನು ನಡೆಸುತ್ತಿರುವ ಒಂದು ರಾಷ್ಟ್ರ ಮಟ್ಟದ ಬೃಹತ್ ಸಂಘಟನೆ. ಸುಮಾರು 70 ಲಕ್ಷ ಸದಸ್ಯತ್ವವನ್ನು ಹೊಂದಿರುವ ಈ ಸಂಘಟನೆ, ಕಳೆದ ಐವತ್ತು ವರುಷಗಳಿಂದಲೂ ಸಕ್ರಿಯವಾಗಿ ದುಡಿಯುವ ವರ್ಗದ ಜನರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುವ ಕಾರ್ಮಿಕ ಸಂಘಟನೆಯಾಗಿದೆ ಎಂದು ತಿಳಿಸಿದರು.
ಸಿಐಟಿಯು ಅಖಿಲ ಭಾರತ ಸಮ್ಮೇಳನ ಅಂಗವಾಗಿ ಹಮ್ಮಿಕೊಂಡಿರುವ ಇಂತಹ ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ಕಾರ್ಮಿಕ ಮತ್ತು ಜನ ಚಳುವಳಿಯ ಮಹತ್ವ ಮತ್ತು ಆಶಯಗಳನ್ನು ಪ್ರಚುರ ಪಡಿಸಲು ಮುಂದಾಗಿದ್ದೇವೆ ಎಂದು ಸಂಘಟಕರು ತಿಳಿಸಿದರು.