ಬೆಂಗಳೂರು : ಕಾರ್ಮಿಕ ವಿರೋಧಿ ಎಂದು ಟೀಕಿಸಲ್ಪಟ್ಟಿರುವ ನಾಲ್ಕು ಲೇಬರ್ ಕೋಡ್ಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪ್ರಕಟಿಸಿರುವ ಕರಡು ನಿಯಮಗಳಿಗೆ ವಿರೋಧ ವ್ಯಕ್ತಪಡಿಸಿ ಸಾಮೂಹಿಕ ಆಕ್ಷೇಪಣೆ ಸಲ್ಲಿಕೆ ಮತ್ತು ಮತ ಪ್ರದರ್ಶನ ಕಾರ್ಯಕ್ರಮವನ್ನು ಸಿಐಟಿಯು ನೇತೃತ್ವದಲ್ಲಿ ಗುರುವಾರ ಬೆಂಗಳೂರಿನ ಕಾರ್ಮಿಕ ಭವನದ ಎದುರು ನಡೆಸಲಾಯಿತು. ಬೆಂಗಳೂರು ಉತ್ತರ, ದಕ್ಷಿಣ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ನೂರಾರು ಕಾರ್ಮಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಆಕ್ಷೇಪಣೆಗಳನ್ನು ಅಧಿಕಾರಿಗಳಿಗೆ ಸಲ್ಲಿಸಿದರು.
ರಾಜ್ಯ ಸರ್ಕಾರ ತನ್ನ ಅಧಿಕಾರ ಬಳಸಿ ನಾಲ್ಕು ಲೇಬರ್ ಕೋಡ್ಗಳಿಗೆ ಕರ್ನಾಟಕದ ಮಟ್ಟದಲ್ಲಿ ತಿದ್ದುಪಡಿ ತರಬೇಕು, ಕರಡು ನಿಯಮಗಳನ್ನು ಕನ್ನಡದಲ್ಲಿಯೂ ಪ್ರಕಟಿಸಿ ಆಕ್ಷೇಪಣೆ ಸಲ್ಲಿಸಲು ಸಮರ್ಪಕ ಕಾಲಾವಕಾಶ ನೀಡಬೇಕು ಹಾಗೂ ಕನಿಷ್ಠ ವೇತನ ಜಾರಿಗೆ ತಕ್ಷಣ ಅಧಿಸೂಚನೆ ಹೊರಡಿಸಬೇಕು ಎಂದು ಸಿಐಟಿಯು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಸಿಐಟಿಯು ರಾಜ್ಯಾಧ್ಯಕ್ಷ ಮೀನಾಕ್ಷಿಸುಂದರಂ, ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ, ರಾಜ್ಯ ಮುಖಂಡರಾದ ಹೆಚ್.ಎನ್. ಗೋಪಾಲಗೌಡ, ಕೆ. ಮಹಾಂತೇಶ್, ಮಾಲೀನಿ ಮೆಸ್ತಾ, ಎನ್. ಪ್ರತಾಪ್ ಸಿಂಹ, ಬಿ.ಎನ್. ಮಂಜುನಾಥ್, ಲಿಂಗರಾಜು, ಪಿ. ಮುನಿರಾಜು, ಪಿ.ಎ. ವೆಂಕಟೇಶ್, ಬಿ.ಬಿ. ರಾಘವೇಂದ್ರ ಸೇರಿದಂತೆ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಪರ ಕಾರ್ಮಿಕ ಆಯುಕ್ತ ಡಾ. ಮಂಜುನಾಥ್ ಹಾಗೂ ಜಂಟಿ ಕಾರ್ಮಿಕ ಆಯುಕ್ತ ರವಿಕುಮಾರ್ ಅವರು ನೂರಾರು ಕಾರ್ಮಿಕ ಸಂಘಟನೆಗಳಿಂದ ಸಲ್ಲಿಸಲಾದ ಆಕ್ಷೇಪಣಾ ಅರ್ಜಿಗಳನ್ನು ಸ್ವೀಕರಿಸಿದರು.
ಇದೇ ವೇಳೆ ಸಿಐಟಿಯು ಮತ್ತು ಎಐಟಿಯುಸಿ ಸಂಘಟನೆಗಳು ಜಂಟಿಯಾಗಿ ಸರ್ಕಾರಕ್ಕೆ ಒತ್ತಾಯ ಪತ್ರ ಸಲ್ಲಿಸಿದವು. ವಿವಿಧ ಕಾರ್ಮಿಕ ಸಂಘಟನೆಗಳ ಸದಸ್ಯರು ತಂಡೋಪ ತಂಡವಾಗಿ ಸಾಲಿನಲ್ಲಿ ನಿಂತು ಆಕ್ಷೇಪಣಾ ಪತ್ರಗಳನ್ನು ಅಧಿಕಾರಿಗಳಿಗೆ ಸಲ್ಲಿಸಿದರು.

ಎಐಟಿಯುಸಿ ಭಾಗವಹಿಕೆ
ಕನಿಷ್ಠ ವೇತನ ಅಧಿಸೂಚನೆ ಹೊರಡಿಸಲು ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಎಐಟಿಯುಸಿ ಬೆಂಗಳೂರು ಜಿಲ್ಲಾ ಕಾರ್ಯಕರ್ತರೂ ಭಾಗವಹಿಸಿ ಜಂಟಿಯಾಗಿ ಕಾರ್ಮಿಕರ ಮತ ಪ್ರದರ್ಶನ ನಡೆಸಿದರು. ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್, ರಾಜ್ಯ ಮುಖಂಡರಾದ ಅಮ್ಜದ್, ಸತ್ಯಾನಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪೊಲೀಸರ ಅಡಚಣೆ:
ಆಕ್ಷೇಪಣಾ ಪತ್ರಗಳನ್ನು ಸಲ್ಲಿಸಲು ಕಾರ್ಮಿಕರು ಮುಂದಾದಾಗ ಪೊಲೀಸರು ಕೆಲಕಾಲ ಅಡಚಣೆ ವ್ಯಕ್ತಪಡಿಸಿದರು. ಇದಕ್ಕೆ ವಿರೋಧವಾಗಿ ಪ್ರತಿಭಟನಾ ಸ್ಥಳದಲ್ಲಿ ಕಾರ್ಮಿಕರು ಘೋಷಣೆಗಳನ್ನು ಕೂಗಿ ಪ್ರತಿರೋಧ ವ್ಯಕ್ತಪಡಿಸಿದರು.

