ಪೋಕ್ಸೋ, ಅತ್ಯಾಚಾರ ಪ್ರಕರಣಗಳ ಎಫ್‌ಐಆರ್‌: ಪೊಲೀಸರಿಗೆ ಸುತ್ತೋಲೆ ಬಿಡುಗಡೆ

ಬೆಂಗಳೂರು: ಪೋಕ್ಸೋ, ಅತ್ಯಾಚಾರ ಪ್ರಕರಣದ ಎಫ್‌ಐಆರ್‌ ಮತ್ತು ತನಿಖಾ ವರದಿ ದಾಖಲು ಮಾಡುವ ವಿಚಾರದಲ್ಲಿ ಕರ್ನಾಟಕ ಪೊಲೀಸರಿಗೆ ಮಹತ್ವದ ಸುತ್ತೋಲೆಯನ್ನು ಡಾ.ಎಂ.ಎ.ಸಲೀಂ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರು ಹೊರಡಿಸಿದ್ದಾರೆ.

ಈ ಸುತ್ತೋಲೆಯು ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಮತ್ತು ಪೋಕ್ಸೋ ಪ್ರಕರಣ ದಾಖಲು ಮಾಡುವ ಸಂದರ್ಭದಲ್ಲಿ ದೂರು ಅರ್ಜಿ, ಪ್ರಥಮ ವರ್ತಮಾನ ವರದಿ ಮತ್ತು ತನಿಖಾ ವರದಿಗಳಲ್ಲಿ ನೊಂದ ಮಹಿಳೆ ಅಥವಾ ಅಪ್ರಾಪ್ತರ ಹೆಸರು ಮತ್ತು ವಿಳಾಸಗಳ ಗೌಪತ್ಯೆಯನ್ನು ಕಾಪಾಡುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ.

ಸುತ್ತೋಲೆಯ ವಿವರ: ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಮತ್ತು ಪೋಕ್ಸೋ ಪ್ರಕರಣ ದಾಖಲು ಮಾಡುವ ಸಂದರ್ಭದಲ್ಲಿ ದೂರು ಅರ್ಜಿ, ಪ್ರಥಮ ವರ್ತಮಾನ ವರದಿ ಮತ್ತು ತನಿಖಾ ವರದಿಗಳಲ್ಲಿ ನೊಂದ ಮಹಿಳೆ ಅಥವಾ ಅಪ್ರಾಪ್ತರ ಹೆಸರು ಮತ್ತು ವಿಳಾಸಗಳ ಗೌಪತ್ಯೆಯನ್ನು ಕಾಪಾಡುವ ಸರ್ವೋಚ್ಛ ನ್ಯಾಯಾಲಯದ ತೀರ್ಪು ಪಾಲಿಸುವಂತೆ ಆದೇಶಿಸಲಾಗಿರುತ್ತದೆ.

ಇದನ್ನೂ ಓದಿ: “ಜನರ ವಿರುದ್ಧದ ಒಂದು ಯುದ್ಧವಾಗಿ ಪರಿಣಮಿಸುತ್ತಿರುವ ಎಸ್‍ಐಆರ್ ನ್ನು ಕೈಬಿಡಬೇಕು”

ನ್ಯಾಯಾಲಯದ ಆದೇಶದಂತೆ ಮಹಿಳೆ ಮತ್ತು ಅಪ್ರಾಪ್ತ ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳಾದ ಆತ್ಯಾಚಾರ ಮತ್ತು ಪೋಕ್ಸೋ ಪ್ರಕರಣಗಳಲ್ಲಿ ನೊಂದ ಮಹಿಳೆ ಅಥವಾ ಅಪ್ರಾಪ್ತರ ಹೆಸರು, ಗುರುತು ಮತ್ತು ವಿಳಾಸವನ್ನು ಪೊಲೀಸ್ ಠಾಣಾಧಿಕಾರಿಗಳು ಸಾರ್ವಜನಿಕಗೊಳಿಸದಂತೆ ಗೌಪ್ಯತೆ ಕಾಪಾಡಿಕೊಳ್ಳುವಂತೆ ಸೂಚನೆ ನೀಡಲಾಗಿತ್ತು.

ನ್ಯಾಯಾಲಯದ ತೀರ್ಪಿನಲ್ಲಿ ಸೂಚನೆಗಳನ್ನು ನೀಡಿದ್ದರು ಸಹ ಕೆಲವು ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು ಮತ್ತು ಶಾಖಾಧಿಕಾರಿಗಳು ಮಹಿಳೆಯರ ಮತ್ತು ಅಪ್ತಾಪ್ತ ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಮತ್ತು ಪೋಕ್ಸೋ ಪ್ರಕರಣಗಳನ್ನು ದಾಖಲಿಸುವ ಸಂದರ್ಭದಲ್ಲಿ ಪ್ರಥಮ ವರ್ತಮಾನ ವರದಿಯಲ್ಲಿ ನೊಂದ ಮಹಿಳೆ ಅಥವಾ ಅಪ್ರಾಪ್ತರ ಹೆಸರು ಮತ್ತು ವಿಳಾಸಗಳನ್ನು ಸಾರ್ವಜನಿಕಗೊಳಿಸುವ ಮತ್ತು ತನಿಖಾ ವರದಿಯಲ್ಲಿಯೂ ಸಹ ಗೌಪ್ಯತೆಯನ್ನು ಕಾಪಾಡಿಕೊಳ್ಳದೇ ಇರುವುದು ಕಂಡುಬಂದಿದೆ.

ಇದರಿಂದ ಪ್ರಕರಣಗಳ ನ್ಯಾಯಾಲಯದ ವಿಚಾರಣೆ ಸಂದರ್ಭದಲ್ಲಿ ಆಕ್ಷೇಪಣೆ ವ್ಯಕ್ತಪಡಿಸುವ ಸಾಧ್ಯತೆ ಇರುತ್ತದೆ. ಆದುದರಿಂದ ಇನ್ನುಮುಂದೆ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು ಮತ್ತು ತನಿಖಾಧಿಕಾರಿಗಳಿಗೆ ಅತ್ಯಾಚಾರಕ್ಕೆ ಒಳಗಾದ ಮಹಿಳೆ ಮತ್ತು ಅಪ್ರಾಪ್ತರ ಹೆಸರು ಮತ್ತು ವಿಳಾಸಗಳ ಗೌಪ್ಯತೆಯನ್ನು ಕಾಪಾಡಿ, ಸಲ್ಲಿಸುವ ದಾಖಲಾತಿಗಳಲ್ಲಿ ಹೆಸರು, ಗುರುತು ಮತ್ತು ವಿಳಾಸವನ್ನು ಗೌಪ್ಯತೆ ಕಾಪಾಡುವ ಕುರಿತಂತೆ ಈ ಕೆಳಗಿನ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದೆ.

1. ಮೂಲ ದೂರು ಅರ್ಜಿಯಲ್ಲಿ ನೊಂದ ಮಹಿಳೆ ಅಥವಾ ಅಪ್ರಾಪ್ತರ ಹೆಸರು, ವಿಳಾಸ ಮತ್ತು ಗುರುತುಗಳ ವಿವರಗಳ ಇರತಕ್ಕದ್ದು.

2. ದೂರು ಸ್ವೀಕರಿಸಿದ ನಂತರ ಠಾಣಾಧಿಕಾರಿ/ ತನಿಖಾಧಿಕಾರಿಯು ಸದರಿ ಮೂಲ ದೂರಿನಲ್ಲಿನ ನೊಂದವರ ಗುರುತುಗಳ ಗೌಪ್ಯತೆ ಕಾಪಾಡಲು ಮೂಲ ಹೆಸರಿನ ಬದಲು ಬೇರೆ ಹೆಸರನ್ನು ಅಥವಾ ಅಕ್ಷರಗಳನ್ನು ನೀಡಿ ನ್ಯಾಯಾಲಯಕ್ಕೆ ಮೂಲ ದೂರು ಮತ್ತು ಯಾವ ಬದಲಿ ಹೆಸರು ನೀಡಲಾಗಿದೆ ಎಂಬುದನ್ನು ಸೀಲ್ಡ್ ಲಕೋಟೆಯಲ್ಲಿ ಸಲ್ಲಿಸುವುದು ಕಡ್ಡಾಯ.

3. ಪ್ರಥಮ ವರ್ತಮಾನ ವರದಿಯಲ್ಲಿ ನೊಂದವರ ಮೂಲ ಹೆಸರು ದಾಖಲಿಸದೇ ಬದಲಿಸಿದ ಹೆಸರನ್ನು ಅಥವಾ ಅಕ್ಷರಗಳನ್ನು ಸ್ಪಷ್ಟವಾಗಿ ನಮೂದಿಸುವುದು ಮತ್ತು ಹೆಸರು ಬದಲಾಯಿಸಲಾಗಿದೆ ಎಂದು ಟಿಪ್ಪಣಿಯಲ್ಲಿ ನಮೂದಿಸುವುದು.

4. ನೊಂದವರ ಬದಲಾಯಿಸಿದ ಹೆಸರಿನಲ್ಲಿಯೇ ಇತರೆ ವ್ಯವಹಾರಗಳನ್ನು ಮಾಡುವುದು.

5. ತನಿಖೆಯಲ್ಲಿ ದಾಖಲು ಮಾಡಿಕೊಳ್ಳುವ ಸಾಕ್ಷಿದಾರರ ಹೇಳಿಕೆಗಳಲ್ಲಿ ನೊಂದವರ ಮೂಲ ಹೆಸರು ಮತ್ತು ಗುರುತಿಸುವಿಕೆಯನ್ನು ದಾಖಲು ಮಾಡಿಕೊಂಡ ನಂತರ ಆ ಹೇಳಿಕೆಗಳನ್ನು ಸೀಲ್ಡ್ ಲಕೋಟೆಯಲ್ಲಿ ಇರಿಸಿ ನೊಂದ ಮಹಿಳೆ ಅಥವಾ ಅಪ್ರಾಪ್ತರ ಬದಲಾಯಿತ ಹೆಸರಿನಲ್ಲಿ ಹೇಳಿಕೆಯ ಪ್ರತಿಗಳನ್ನು ನಿತ್ಯದ ತನಿಖೆಗಳಲ್ಲಿ ಬಳಸಿಕೊಳ್ಳುವುದು.

6. ದೋಷಾರೋಪಣಾ ವರದಿಯಲ್ಲಿ ನೊಂದ ಮಹಿಳೆ ಅಥವಾ ಅಪ್ರಾಪ್ತರ ಗುರುತು, ವಿಳಾಸವಿರುವ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಿ ಆರೋಪಿಯ ವಿರುದ್ಧ ದೋಷಾರೋಪಣೆಯನ್ನು ರಚಿಸುವುದು ಮತ್ತು ಸದರಿ ದೋಷಾರೋಪಣಾ ವರದಿಯನ್ನು ಸೀಲ್ಡ್ ಕವರ್‌ನಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವುದು. ಇದಕ್ಕೆ ಪ್ರತಿಯಾಗಿ ಮತ್ತೊಂದು ದೋಷಾರೋಪಣಾ ವರದಿಯ ಪ್ರತಿಯಲ್ಲಿ ನೊಂದ ಮಹಿಳೆ ಅಥವಾ ಅಪ್ರಾಪ್ತರ ಬದಲಾಯಿತ ಹೆಸರನ್ನು ಬಳಸಿಕೊಂಡು ದೋಷಾರೋಪಣಾ ಪ್ರತಿಯನ್ನು ತಯಾರಿಸುವುದು. ಸದರಿ ದೋಷಾರೋಪಣಾ ವರದಿಯ ಪ್ರತಿಯನ್ನು ಆರೋಪಿ ಮತ್ತು ಅಭಿಯೋಜಕರಿಗೆ ಪೂರೈಸಲು ಕ್ರಮ ಕೈಗೊಳ್ಳಲು ನ್ಯಾಯಾಲಯಕ್ಕೆ ನಿವೇದಿಸಿಕೊಳ್ಳಬೇಕು.

7. ನೊಂದ ಮಹಿಳೆ ಅಥವಾ ಅಪ್ರಾಪ್ತರ ನೈಜ ಹೆಸರು ಮತ್ತು ಗುರುತು ಇರುವ ಪ್ರಥಮ ವರ್ತಮಾನ ವರದಿ, ದೋಷಾರೋಪಣಾ ವರದಿಯ ದಾಖಲಾತಿಗಳನ್ನು ಸಾರ್ವಜನಿಕಗೊಳಿಸದಂತೆ ಎಲ್ಲಾ ಕ್ರಮಗಳನ್ನು ತನಿಖಾಧಿಕಾರಿಗಳು ಕೈಗೊಳ್ಳತಕ್ಕದ್ದು.

8. ಪೊಲೀಸ್ ಇಲಾಖೆಯ ಪ್ರಥಮ ವರ್ತಮಾನ ವರದಿಗಳು ಸಾರ್ವಜನಿಕವಾಗಿ ಲಭ್ಯವಾಗುವಂತೆ ಕೈಗೊಂಡಿರುವ ಡಿಜಿಟಲ್ ಪೋರ್ಟಲ್‌ಗಳಲ್ಲಿ ಮಹಿಳಾ ಬಲಾತ್ಕಾರ, ದೌರ್ಜನ್ಯ ಹಾಗೂ ಪೋಕ್ಸೋ ಪ್ರಕರಣಗಳ ಪ್ರಥಮ ವರ್ತಮಾನ ವರದಿಗಳು ಸಾರ್ವಜನಿಕರಿಗೆ ಲಭ್ಯವಾಗದಂತೆ ಗೌಪ್ಯತೆಯನ್ನು ಕಾಪಾಡಿಕೊಂಡು ಸೂಕ್ತ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವುದು.

ನ್ಯಾಯಾಲಯದ ತೀರ್ಪುಗಳನ್ನು ರಾಜ್ಯದ ಎಲ್ಲಾ ಪೊಲೀಸ್ ಠಾಣಾಧಿಕಾರಿಗಳು ಹಾಗೂ ತನಿಖಾಧಿಕಾರಿಗಳು ಕಡ್ಡಾಯವಾಗಿ ಪಾಲಿಸತಕ್ಕದ್ದು. ಒಂದು ವೇಳೆ ಸೂಚನೆಗಳನ್ನು ಪಾಲಿಸದೇ ನಿರ್ಲಕ್ಷ್ಯತೆ ತೋರಿದಲ್ಲಿ ಅದನ್ನು ಗಂಭೀರ ಕರ್ತವ್ಯಲೋಪವೆಂದು ಪರಿಗಣಿಸಿ ಇಲಾಖಾ ಶಿಸ್ತು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಇದನ್ನೂ ನೋಡಿ: ‌ಪಿಚ್ಚರ್ ಪಯಣ – 166 | ಸಿನೆಮಾ: ‘ನಮ್ಮ ಸಾಲಿ, ನಿರ್ದೇಶನ – ಅನಿಲ್ ರೇವೂರ ವಿಶ್ಲೇಷಣೆ : ಮೀನಾಕ್ಷಿ ಬಾಳಿ

Donate Janashakthi Media

Leave a Reply

Your email address will not be published. Required fields are marked *