ಬೆಂಗಳೂರು: ತೀವ್ರ ವಿವಾದಕ್ಕೆ ಕಾರಣವಾಗಿರುವ 545 ಸಬ್ ಇನ್‌ಸ್ಪೆಕ್ಟರ್ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ತನಿಖೆ ಕೈಗೊಂಡಿರುವ ಸಿಐಡಿ, ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾಗಿರುವ ಮೊದಲ 50 ಅಭ್ಯರ್ಥಿಗಳನ್ನು ಬುಧವಾರ ವಿಚಾರಣೆ ನಡೆಸಿದೆ.
ದಿನವೊಂದಕ್ಕೆ 50 ಅಭ್ಯರ್ಥಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಎಲ್ಲ 545 ಅಭ್ಯರ್ಥಿಗಳ ವಿಚಾರಣೆಯೂ ನಡೆಯಲಿದೆ. ಪ್ರತಿಯೊಬ್ಬರ ಪ್ರವೇಶ ಪತ್ರ ಮತ್ತು ಒಎಂಆರ್ ಶೀಟ್‌ನ ಕಾರ್ಬನ್ ಪ್ರತಿಯನ್ನು ಪಡೆದು ನೇಮಕಾತಿ ವಿಭಾಗದಲ್ಲಿರುವ ಅಸಲಿ ದಾಖಲೆಗೂ ತಾಳೆ ಮಾಡಲಾಗುತ್ತದೆ. ವ್ಯತ್ಯಾಸ ಕಂಡು ಬಂದಲ್ಲಿ ಅಥವಾ ಅನುಮಾನ ಮೂಡುವವರಿಗೆ 2ನೇ ಸುತ್ತಿನ ವಿಚಾರಣೆಗೆ ಹಾಜರಾಗಲು ಸೂಚಿಸಲಾಗುತ್ತಿದೆ ಎನ್ನಲಾಗಿದೆ.
ಪ್ರಮುಖ ಸಾಕ್ಷಿ ಕಾರ್ಬನ್ ಶೀಟ್?
ಒಎಂಆರ್ ಶೀಟ್ ಮತ್ತು ಕಾರ್ಬನ್ ಶೀಟ್ ಅಕ್ರಮ ದಂಧೆ ಪ್ರಕರಣಕ್ಕೆ ಪ್ರಮುಖ ಸಾಕ್ಷ್ಯವಾಗಿ ಪರಿಣಮಿಸಲಿದೆ. ನೇಮಕಾತಿ ವಿಭಾಗದಲ್ಲಿ ಇರುವ ಅಸಲಿ ಒಎಂಆರ್ ಶೀಟ್‌ನಲ್ಲಿ ಮತ್ತು ಕಾರ್ಬನ್ ಶೀಟ್‌ನಲ್ಲಿ ಉತ್ತರಿಸುವ ಆಯ್ಕೆ ಒಂದೇ ಆಗಿರಬೇಕು. ಸ್ವಲ್ಪ ಬದಲಾವಣೆ ಇದ್ದರೂ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿ ಅಸಲಿತನ ಪರಿಶೀಲಿಸಲಾಗುತ್ತಿದೆ ಎನ್ನಲಾಗಿದೆ.
ಬುಧವಾರ ಹಾಜರಾಗಿದ್ದ ಕೆಲ ಅಭ್ಯರ್ಥಿಗಳು ಓಎಂಆರ್ ಶೀಟ್ಗಳನ್ನು ಸಲ್ಲಿಸಲು ಸಬೂಬು ಹೇಳಿದ್ದಾರೆ. ಓಎಂಆರ್ ಶೀಟ್‌ನ ಕಾರ್ಬನ್ ಪ್ರತಿ ಕಡ್ಡಾಯವಾಗಿ ಸಲ್ಲಿಸಬೇಕು. ವಿಫಲವಾಗುವ ಅಭ್ಯರ್ಥಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇದರ ಜತೆಗೆ ಪರೀಕ್ಷೆ ಕೊಠಡಿ ಮೇಲ್ವಿಚಾರಕ, ಪರೀಕ್ಷೆ ಮುಗಿದ ಮೇಲೆ ಶಂಕಾಸ್ಪದ ಅಭ್ಯರ್ಥಿಗಳ ಹೆಸರು ಮತ್ತು ಕಡಿಮೆ ಪ್ರಶ್ನೆಗಳಿಗೆ ಉತ್ತರಿಸುವ ಅಭ್ಯರ್ಥಿಗಳ ನೋಂದಣಿ ಮತ್ತು ಹೆಸರನ್ನು ದಾಖಲೆ ಮಾಡಿರುತ್ತಾರೆ. ಆ ದಾಖಲೆಗೂ ತಾಳೆ ಮಾಡಿ ಪ್ರತಿಯೊಬ್ಬ ಅಭ್ಯರ್ಥಿಗಳ ಓಎಂಆರ್ ಶೀಟ್ಗಳನ್ನು ಪರಿಶೀಲಿಸಲಾಗುತ್ತದೆ. ಎಷ್ಟು ಅಭ್ಯರ್ಥಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ವಿಚಾರ ತನಿಖೆ ಪೂರ್ಣ ಮುಗಿದ ಮೇಲೆ ಗೊತ್ತಾಗಲಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.