ಬೆಂಗಳೂರು:ಪೋಕ್ಸೋ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಇಂದು ಸಿಐಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಸೋಮವಾರ ಸಂಜೆ ನೋಟಿಸ್ ನೀಡಲಾಗಿದೆ.
ಸದ್ಯ ದೆಹಲಿಯಲ್ಲಿರುವುದರಿಂದ ಜೂನ್ 17ರಂದು ವಿಚಾರಣೆಗೆ ಹಾಜರಾಗುವುದಾಗಿ ವಕೀಲರ ಮೂಲಕ ಬಿ.ಎಸ್. ಯಡಿಯೂರಪ್ಪ ಉತ್ತರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಯಡಿಯೂರಪ್ಪ ವಿರುದ್ಧ ಕೇಳಿ ಬಂದಿತ್ತು.
ಫೆಬ್ರವರಿ ತಿಂಗಳಿನಲ್ಲಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ಬಾಲಕಿಯ ತಾಯಿ ಮಾರ್ಚ್ 14ರಂದು ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಯಡಿಯೂರಪ್ಪ ಅವರ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣದ ತನಿಖೆ ಸಿಐಡಿಗೆ ವರ್ಗಾಯಿಸಲಾಗಿತ್ತು. ಇತ್ತೀಚೆಗಷ್ಟೇ ದೂರು ದಾಖಲಿಸಿದ್ದ ಮಹಿಳೆ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ : ಬಿ.ಎಸ್.ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದ ಮಹಿಳೆ ಸಾವು
ಯಡಿಯೂರಪ್ಪ ಪ್ರತಿಕ್ರಿಯೆ : ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ತಮ್ಮ ಮೊದಲ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. “ನನ್ನ ವಿರುದ್ಧ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಸಹಾಯ ಮಾಡಿದವರಿಗೆ ಹೀಗಾಗುತ್ತದೆ ಎಂದು ನಾನು ಭಾವಿಸಿರಲಿಲ್ಲ. ನನ್ನ ಸಹಾಯವನ್ನೇ ತಿರುಚಿ ಈಗ ಎಫ್‌ಐಆರ್ ಮಾಡಲಾಗಿದೆ ಎಂದಿದ್ದಾರೆ.
ತಿರುಚಿದ ಕಾರಣ ನೀಡಿದ ಯಡಿಯೂರಪ್ಪ, “ಸುಮಾರು ಒಂದು ತಿಂಗಳ ಹಿಂದೆ ಆ ಮಹಿಳೆಯ ಭೇಟಿಯಾಗಿರಬೇಕು. ಅಳುತ್ತಿದ್ದ ಆ ಮಹಿಳೆ ಅಳುವುದಕ್ಕೆ ಕಾರಣ ಕೇಳಿದಾಗ, ಆಕೆ ತಮಗೆ ಅನ್ಯಾಯವಾಗಿದೆ ಎಂದಿದ್ದಳು.“ನಾನು ನಂತರ ಪೊಲೀಸ್ ಕಮಿಷನರ್ (ಬಿ) ದಯಾನಂದ ಅವರನ್ನು ಕರೆದು ಮಹಿಳೆಗಾಗಿರುವ ಅನ್ಯಾಯ ಏನೆಂಬುದನ್ನು ಕೇಳಿ, ಆಕೆಗೆ ಅಗತ್ಯ ನೆರವನ್ನು ಮಾಡುವಂತೆ ಹೇಳಿದ್ದೆ. ಆದರೆ, ಆ ಮಹಿಳೆ ಆಗಲೇ ನನ್ನ ವಿರುದ್ಧ ಮಾತನಾಡತೊಡಗಿದಳು. ಆಗ ಆಕೆ ಮಾನಸಿಕ ಅಸ್ವಸ್ಥಳಾಗಿದ್ದಾಳೆ ಎಂದು ನಾನು ಭಾವಿಸಿ ಪೊಲೀಸ್ ಕಮಿಷನರ್‌ಗೆ ತನಿಖೆ ನಡೆಸುವಂತೆ” ಹೇಳಿದ್ದೆ ಎಂದು ಯಡಿಯೂರಪ್ಪ ಕಾರಣ ನೀಡಿದ್ದು,
“ಈಗ ಇದನ್ನು ತಿರುಚಿ ಎಫ್‌ಐಆರ್ ಮಾಡಲಾಗಿದೆ. ಕಾನೂನಾತ್ಮಕವಾಗಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ಯಾರಿಗಾದರೂ ಸಹಾಯ ಮಾಡಿದರೆ ಹೀಗಾಗುತ್ತದೆ ಎಂದು ನಾನು ಭಾವಿಸಿರಲಿಲ್ಲ. ಅವರಿಗೂ ಒಂದಷ್ಟು ಹಣ ನೀಡಿದ್ದೆ. ಕಾನೂನಾತ್ಮಕ ಹೋರಾಟ ಮಾಡುವುದಾಗಿ ಹೇಳಿದ್ದಾರೆ.
ಪರಮೇಶ್ವರ ಪ್ರತಿಕ್ರಿಯೆ : ಈ ಹಿಂದೆ 17 ವರ್ಷದ ಬಾಲಕಿಯ ತಾಯಿ ಮಾಜಿ ಮುಖ್ಯಮಂತ್ರಿ ವಿರುದ್ಧ ಔಪಚಾರಿಕ ದೂರು ದಾಖಲಿಸಿದ್ದರು. ದೂರಿನಲ್ಲಿ, 81 ವರ್ಷದ ಹಿರಿಯ ಬಿಜೆಪಿ ನಾಯಕನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪವಿದೆ. ಫೆಬ್ರವರಿ 2 ರಂದು ಅಧಿಕೃತ ವಿಷಯಗಳ ಸಭೆಯ ಸಂದರ್ಭದಲ್ಲಿ ಇದು ನಡೆದಿದೆ ಎನ್ನಲಾಗಿದೆ.
ಪೋಕ್ಸೊ (ಲೈಂಗಿಕ ದೌರ್ಜನ್ಯ) ಸೆಕ್ಷನ್ 8 ಮತ್ತು ಸೆಕ್ಷನ್ 354 ಎ (ಲೈಂಗಿಕ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಫ್‌ಐಆರ್‌ನ ಪ್ರಕಾರ, ಸಂತ್ರಸ್ತೆ ಇತರರಿಂದ ಅತ್ಯಾಚಾರಕ್ಕೊಳಗಾದ ನಂತರ ಸಹಾಯ ಪಡೆಯಲು ಹೋದಾಗ ಲೈಂಗಿಕ ಕಿರುಕುಳ ನೀಡಲಾಯಿತು ಎಂದು ವರದಿಯಾಗಿದ್ದು, ಇದೊಂದು ಸೂಕ್ಷ್ಮ ವಿಷಯ ಎಂದು ಗೃಹ ಸಚಿವ ಡಾ|ಜಿ.ಪರಮೇಶ್ವರ್ ಸೂಚ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
ಕಳೆದ ರಾತ್ರಿ 10 ಗಂಟೆ ಸುಮಾರಿಗೆ ಮಹಿಳೆಯೊಬ್ಬರು ಬಿಎಸ್ ಯಡಿಯೂರಪ್ಪ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸತ್ಯ ತಿಳಿಯುವವರೆಗೂ ನಾವು ಏನನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ.ಇದರಲ್ಲಿ ಯಾವುದೇ ರಾಜಕೀಯ ದೃಷ್ಟಿಕೋನ ಇದೆ ಎಂಬುದನ್ನು ನಾನು ಭಾವಿಸುವುದಿಲ್ಲ. ಸಂಕಷ್ಟದಲ್ಲಿರುವ ಮಹಿಳೆಗೆ ರಕ್ಷಣೆ ಬೇಕಿದ್ದರೆ ಅದನ್ನು ನೀಡಲಾಗುವುದು,’’ ಎಂದು ಪರಮೇಶ್ವರ್ ಹೇಳಿದ್ದಾರೆ.