ಚುರಾಚಾಂದ್‌ಪುರ: ಮಣಿಪುರದ ಚುರಾಚಾಂದ್‌ಪುರ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ನಡೆದ ಪ್ರತಿಭಟನೆಗಳ ಬಳಿಕ ಫೆಬ್ರವರಿ 7ರ ಬೆಳಗ್ಗೆ ಕೆಲವು ಭಾಗಗಳಲ್ಲಿ ಪರಿಸ್ಥಿತಿ ನಿಧಾನವಾಗಿ ಸಹಜ ಸ್ಥಿತಿಗೆ ಮರಳಲು ಆರಂಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು newindianexpress ವರದಿ ಮಾಡಿದೆ.
ಫೆಬ್ರವರಿ 6ರ, ಕುಕಿ-ಝೋ ಹಾಗೂ ಹ್ಮಾರ್ ಸಮುದಾಯಕ್ಕೆ ಸೇರಿದ ಮೂವರು ಬಿಜೆಪಿ ಶಾಸಕರು ಮೈತೆಯಿ ಶಾಸಕರೊಂದಿಗೆ ಸೇರಿ ಸರ್ಕಾರ ರಚನೆಯಲ್ಲಿ ಭಾಗಿಯಾಗಿದ ನಂತರ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದವು. ಜನಾಂಗೀಯ ಸಂಘರ್ಷದಿಂದ ತೀವ್ರವಾಗಿ ಬಾಧಿತವಾಗಿರುವ ರಾಜ್ಯದಲ್ಲಿ ಈ ಬೆಳವಣಿಗೆ ಹೊಸ ಉದ್ವಿಗ್ನತೆಗೆ ಕಾರಣವಾಯಿತು.
ಕುಕಿ ಸಮುದಾಯದ ಶಾಸಕಿ ನೆಮ್ಚಾ ಕಿಪ್ಗೆನ್ ಅವರು ವೈ. ಖೇಮ್‌ಚಂದ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಸೇರಿಕೊಂಡಿದ್ದು, ಎಲ್.ಎಂ. ಖೌಟೆ ಮತ್ತು ಎನ್. ಸನಾಟೆ ಅವರು ಸರ್ಕಾರಕ್ಕೆ ಬೆಂಬಲ ನೀಡಿದರು.
ಇದನ್ನೂ ಓದಿ: ಗರ್ಭ ಧರಿಸುವುದು; ಗರ್ಭಪಾತ ಮಾಡಿಸಿಕೊಳ್ಳುವುದು ಮಹಿಳೆಯ ವೈಯಕ್ತಿಕ ಹಕ್ಕು: ಸುಪ್ರೀಂ ಕೋರ್ಟ್
ಪೊಲೀಸರ ಪ್ರಕಾರ, ಈ ಪ್ರತಿಭಟನೆಗಳು ಮುಖ್ಯವಾಗಿ ಚುರಾಚಾಂದ್‌ಪುರ ಪಟ್ಟಣದ ತುಯಿಬೊಂಗ್–ಕಾಂಗ್ವೈ ನಡುವಿನ ಪ್ರದೇಶಕ್ಕೆ ಸೀಮಿತವಾಗಿದ್ದವು. ಹಿಂದಿನ ಸಂದರ್ಭಗಳಲ್ಲಿ ಕಂಡಂತೆ ಜಿಲ್ಲೆ ಪ್ರಧಾನ ಕಚೇರಿಯೆಲ್ಲೆಡೆ ಅಶಾಂತಿ ವ್ಯಾಪಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
ಚುರಾಚಾಂದ್‌ಪುರ ಪಟ್ಟಣದ ಬಹುತೇಕ ಪ್ರದೇಶಗಳಲ್ಲಿ ವ್ಯಾಪಾರ ಚಟುವಟಿಕೆಗಳು ಪುನರಾರಂಭಗೊಂಡಿದ್ದರೂ, ತುಯಿಬೊಂಗ್ ಪ್ರದೇಶದ ಹಲವು ಅಂಗಡಿಗಳು ಇನ್ನೂ ಮುಚ್ಚಿಯೇ ಉಳಿದಿವೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದೇವೇಳೆ, ಕುಕಿ ಪ್ರಾಬಲ್ಯವಿರುವ ಚುರಾಚಾಂದ್‌ಪುರದಲ್ಲಿ ಎರಡು ಜನಾಂಗೀಯ ಸಂಘಟನೆಗಳು “ಸಂಪೂರ್ಣ ಬಂದ್”ಗೆ ಕರೆ ನೀಡಿವೆ. ಶಾಸಕರು ತಮ್ಮ ಸಮುದಾಯಕ್ಕೆ ದ್ರೋಹ ಮಾಡಿದ್ದಾರೆ ಎಂಬ ಆರೋಪದೊಂದಿಗೆ ಕಾಂಗ್‌ಪೋಕ್ಪಿ ಮತ್ತು ತೆಂಗ್ನೌಪಾಲ್ ಜಿಲ್ಲೆಗಳಲ್ಲಿಯೂ ಪ್ರತಿಭಟನಾ ಮೆರವಣಿಗೆಗಳು ನಡೆದಿವೆ.
ಮೇ 2023ರಲ್ಲಿ ಆರಂಭವಾದ ಜನಾಂಗೀಯ ಹಿಂಸಾಚಾರದಿಂದ ಕುಕಿ ಮತ್ತು ಮೈತೆಯಿ ಸಮುದಾಯಗಳ ನಡುವೆ ತೀವ್ರ ವಿಭಜನೆ ಉಂಟಾಗಿದ್ದು, ಕುಕಿ-ಝೋ ಸಂಘಟನೆಗಳು ತಮ್ಮಿಗೆ ಪ್ರತ್ಯೇಕ ಆಡಳಿತ ಘಟಕವನ್ನು ರಚಿಸುವಂತೆ ಆಗ್ರಹಿಸುತ್ತಿವೆ. ಈ ಸಂಘರ್ಷಗಳಲ್ಲಿ ಇದುವರೆಗೆ 260ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸಾವಿರಾರು ಜನರು ಸ್ಥಳಾಂತರಗೊಳ್ಳಬೇಕಾಯಿತು.
ಮಣಿಪುರದಲ್ಲಿ ಒಂದು ವರ್ಷದಿಂದ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದ್ದು, ಬುಧವಾರ ಸಿಂಗ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಈ ನಡುವೆ, ಝೋಮಿ ಸಮುದಾಯದ ಉನ್ನತ ಸಂಘಟನೆಯಾದ ಝೋಮಿ ಕೌನ್ಸಿಲ್, ಸರ್ಕಾರಕ್ಕೆ ಸೇರಿಕೊಂಡಿರುವ ಮೂವರು ಶಾಸಕರಿಗೆ ಮೂರು ದಿನಗಳೊಳಗೆ ತನ್ನ ಕಚೇರಿಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.
ಶುಕ್ರವಾರ ರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, “ಸಮುದಾಯದ ಹಕ್ಕುಗಳು, ಧ್ವನಿ ಮತ್ತು ಆಶಯಗಳನ್ನು ಪ್ರತಿನಿಧಿಸುವ ನಿರೀಕ್ಷೆಯೊಂದಿಗೆ ಈ ಶಾಸಕರನ್ನು ಜನರು ಆಯ್ಕೆ ಮಾಡಿದ್ದಾರೆ. ಆದರೆ ಅವರ ಇತ್ತೀಚಿನ ಕ್ರಮಗಳು ಸಾರ್ವಜನಿಕರಲ್ಲಿ ತೀವ್ರ ನಿರಾಶೆ ಮೂಡಿಸಿವೆ” ಎಂದು ಕೌನ್ಸಿಲ್ ತಿಳಿಸಿದೆ.
ಸಂವಾದಕ್ಕೆ ನೀಡಿರುವ ಆಹ್ವಾನಕ್ಕೆ ಸ್ಪಂದಿಸದಿದ್ದರೆ, ಶಾಸಕರಿಗೆ ಝೋಮಿ ಕೌನ್ಸಿಲ್ ಕಚೇರಿಗೆ ಪ್ರವೇಶ ನಿರ್ಬಂಧಿಸುವುದೂ ಸೇರಿದಂತೆ ಸಂಘಟನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಇದನ್ನೂ ನೋಡಿ: ಮುಚ್ಚುವ ಅಂಚಿನಿಂದ.. ನೂರರ ಸಂಭ್ರಮದವರೆಗೆ – ಸರಕಾರಿ ಶಾಲೆಯ ಕಥೆ Janashakthi Media
