ಫೆಬ್ರುವರಿ 26ರಂದು ಚುನಾವಣಾ ಆಯೋಗ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಗಳಿಗೆ ಚುನಾವಣೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಚುನಾವಣಾ ಆಯೋಗ ಒಂದು ಸ್ವತಂತ್ರ ಸಂವಿಧಾನಿಕ ಪ್ರಾಧಿಕಾರವಾದರೂ, ಚುನಾವಣಾ ದಿನಾಂಕಗಳನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ಪ್ರಧಾನಿಗಳು ಈ ಮೊದಲೇ ಸೂಚನೆ ಕೊಟ್ಟಿದ್ದರು ಎಂಬುದು ಇಂದಿನ ದಿನಮಾನದಲ್ಲಿ ಗಮನಾರ್ಹ ಎಂದು ರಾಜಕೀಯ ವೀಕ್ಷಕರು ಟಿಪ್ಪಣಿ ಮಾಡುತ್ತಾರೆ.
ಅದೇನೇ ಇರಲಿ, ಇದೀಗ ಮತ್ತೊಂದು ಚುನಾವಣಾ ಕಾಲ, ಮುಖಂಡರ ನುಡಿಮುತ್ತುಗಳು ಉದುರಲಾರಂಭಿಸುವ ಕಾಲ.
***
ಈ ಬಾರಿಯ ತಿಂಗಳ ಮನ್ ಕೀ ಬಾತ್ ನಲ್ಲಿ ಪ್ರಧಾನಿಗಳು ತಮಗೆ ತಮಿಳು ಕಲಿಯಲಾಗದ ಬಗ್ಗೆ ನೋವಿದೆ ಎಂದರು.
ಸರಿ. ಬೇರೆ ಭಾಷೆಗಳ ಬಗ್ಗೆ ಈ ನೋವಿಲ್ಲವೇ? ಬಹುಶಃ ಅಸಾಮಿ, ಬಂಗಾಲಿ, ಮಲೆಯಾಳಂನಲ್ಲಿ ಹೇಗೋ ನಿಭಾಯಿಸಬಹುದು ಎಂದಿರಬಹುದು ಎನ್ನುತ್ತಾರೆ ಹಿಂದಿಯ ವ್ಯಂಗ್ಯಚಿತ್ರಕಾರ ಶೇಖರ ಗುರೇರ(ಕಾರ್ಟೂನಿಸ್ಟ್ಸ್ ಕ್ಲಬ್ ಆಫ್ ಇಂಡಿಯ).
***
ಈ ಸಂದರ್ಭದಲ್ಲಿ ಮೂರು ವರ್ಷಗಳ ಹಿಂದಿನ ಮನ್ ಕೀ ಬಾತ್‍ನಲ್ಲಿ ಅವರು ತಾನು ಬಾಲಕನಾಗಿದ್ದಾಗ ರೇಡಿಯೋದಲ್ಲಿ ಬಂಗಾಲಿ ಭಾಷೆಯಲ್ಲಿರುವ ರವೀಂದ್ರ ಸಂಗೀತ ಕೇಳುತ್ತಿದ್ದೆ ಎಂದು ಹೇಳಿದ್ದರು ಎಂಬುದನ್ನು ಹಲವರು ನೆನಪಿಸಿಕೊಂಡಿದ್ದಾರೆ. ಪೂರ್ವಭಾರತದಲ್ಲಿ ಪಶ್ಚಿಮ ಭಾರತಕ್ಕಿಂತ ಮೊದಲು ರೇಡಿಯೋ ಪ್ರಸಾರ ಆರಂಭವಾಗುತ್ತಿದ್ದುದರಿಂದ ಮುಂಜಾನೆ 5.30ಕ್ಕೇ ಕೇಳುತ್ತಿದ್ದೆ ಎಂದಿದ್ದರು. ಆದರೆ ಆಕಾಶವಾಣಿ ಕೊಲ್ಕತ ಪ್ರಸಾರ ಆರಂಭವಾಗುತ್ತಿದ್ದುದೇ ಮುಂಜಾನೆ 5.50ಕ್ಕೆ. ರವಿಂದ್ರ ಸಂಗೀತ ಪ್ರಸಾರವಾಗುತ್ತಿದ್ದುದು ಬೆಳಿಗ್ಯೆ 7.45ಕ್ಕೆ, ಪ್ರಧಾನಿಗಳು ಯಾವ ರೇಡಿಯೋ ನಿಲಯದಿಂದ ಅದನ್ನು ಕೇಳುತ್ತಿದ್ದರು ಎಂದು ಆಗ ಹಲವರು ಪ್ರಶ್ನಿಸಿದ್ದರು. ಸಹಜವಾಗಿಯೇ ಚುನಾವಣಾ ವಾಚಾಳಿತನದ ಸಂದರ್ಭದಲ್ಲಿ ಇದು ಈಗ ನೆನಪಾಗಿದೆ. ವಿಶೇಷವಾಗಿ, ಕೊವಿಡ್ ಕಾಲದಲ್ಲಿ ಅವರನ್ನು ನೋಡಿದರೆ ಬಿಜೆಪಿ ಐಟಿ ಸೆಲ್ ನವರಿಗೆ ಟಾಗೋರರ ನೆನಪಾಗುತ್ತದಂತೆ.
ಇರಬಹುದು, ತನ್ನ ಚುನಾವಣಾ ಗೆಟಪ್ ಅರ್ಧ ಟಾಗೋರ್ ರಂತಿರಲಿ, ಇನ್ನರ್ಧ ಪೆರಿಯಾರ್ ರಂತಿರಲಿ ಎಂದವರು ಬಯಸುತ್ತಿರಬಹುದು ಎಂಬುದು ಡೆಕ್ಕನ್ ಹೆರಾಲ್ಡ್ ನ ವ್ಯಂಗ್ಯಚಿತ್ರಕಾರ ಸಜಿತ್ ಕುಮಾರ್ ಊಹೆ.
***
ಬಿಜೆಪಿ ಮುಖಂಡರುಗಳು ಪಶ್ಚಿಮ ಬಂಗಾಲವನ್ನು ‘ಸೋನಾರ್ ಬಾಂಗ್ಲಾ’(ಬಂಗಾರದ ಬಂಗಾಲ)ಮಾಡುವುದಾಗಿ ಹೇಳುತ್ತಿದ್ದಾರೆ.
ಮೋದಿಯವರ ಈ ‘ಸೋನಾರ್ ಬಾಂಗ್ಲಾ’ದ ಸೋನಾರರು ಅಂದರೆ ರೂವಾರಿಗಳು (ಅಥವ ಫಲಾನುಭವಿಗಳು?) ಯಾರು ಎಂಬ ಬಗ್ಗೆ ಈಗ ನಾಲ್ಕು ತಿಂಗಳಾಗುತ್ತಿರುವ ರೈತರ ಹೋರಾಟದ ಸಂದರ್ಭದಲ್ಲಿ ಯಾರಿಗೂ ಸಂದೇಹವಿದ್ದಂತಿಲ್ಲ,
ಈ ವ್ಯಂಗ್ಯಚಿತ್ರ ಮಾಡಿರುವ ರಿಮಿಕ್ಸ್ ಕಾಮಿಕ್ಸ್ ನವರಿಗಂತೂ ಸಂದೆಹವೇ ಇಲ್ಲ
***
ಆದರೆ ಸದ್ಯಕ್ಕೆ ಪಶ್ಚಿಮ ಬಂಗಾಲದಲ್ಲಿ ಜನಗಳ ಜ್ವಲಂತ ಸಮಸ್ಯೆಗಳನ್ನು ಬದಿಗೊತ್ತುವಲ್ಲಿಯೇ ಸ್ಪರ್ಧೆ ನಡೆಯುತ್ತಿರುವಂತೆ ಕಾಣುತ್ತದೆ.
ಒಬ್ಬರು ಕಾಲಿಗೆ ಬ್ಯಾಂಡೇಜು ಹಾಕಿಸಿಕೊಂಡಿದ್ದರೆ
“ನೀವು ಆಕೆಗಿಂತ ಉತ್ತಮ ಪ್ರದರ್ಶನ ಕೊಡಬೇಕು ಭಾಯ್” ಎನ್ನಬಹುದು ಇನ್ನೊಬ್ಬ ಉನ್ನತ ಮುಖಂಡರು
(ವ್ಯಂಗ್ಯಚಿತ್ರ : ಪಂಜು ಗಂಗೊಳ್ಳಿ)
***
ಈ ನಡುವೆ ಎರಡು ಹೂವುಗಳು ಮತ್ತು ಹುಲ್ಲು ಸೋರಿ/ಜಾರಿ ನೆಲಕ್ಕೆ ಬಿದ್ದಾಗ ಕಮಲಗಳಾಗಿ ಬಿಡುವುದು ಮುಂದುವರೆದಿದೆ.
(ವ್ಯಂಗ್ಯಚಿತ್ರ ಕೃಪೆ: ಸುರೇಂದ್ರನ್(ದಿ ಹಿಂದು).
***
ಹೀಗೆ ಹಿಂದೆ ಟಿಎಂಸಿ ಯಿಂದ ರಾಜ್ಯಸಬಾ ಸದಸ್ಯರಾಗಿದ್ದ ‘ಡಿಸ್ಕೊ ಡಾನ್ಸರ್’ ಖ್ಯಾತಿಯ ನಟರು ಈಗ ತಾನು ನೀರು ಹಾವಲ್ಲ ನಾಗರಹಾವು, ಕಚ್ಚಿಯೇ ಬಿಡುತ್ತೇನೆ, ನೇರವಾಗಿ ಸ್ಮಶಾನದಲ್ಲಿ ಬೀಲುವಂತೆ ಮಾಡುತ್ತೇನೆ ಇತ್ಯಾದಿ ಸಿನೆಮಾ ಡೈಲಾಗ್ ಗಳನ್ನು ಬ್ರಿಗೇಡ್ ಮೈದಾನದಲ್ಲಿ ದೇಶದ ಪ್ರಧಾನ ಮಂತ್ರಿಗಳ ಸಮ್ಮುಖದಲ್ಲೇ ಗುಡುಗಿದ್ದಾರಂತೆ.(ಅವರಿಗೆ ಈಗ ವೈ+ ಭದ್ರತೆ ಸಿಕ್ಕಿದೆ!) ಇದು ಚುನಾವಣಾ ಕಾಲದ ನಟನೆ ಎಂದು ಹಲವರಿಗೆ ಅನಿಸಿದರೆ ಆಶ್ಚರ್ಯವೇನಿಲ್ಲ. ಬಡವರಿಗಾಗಿ ಕೆಲಸ ಮಾಡಲು ಬಂದಿದ್ದೇನೆ ಎಂದು ಹೇಳಿದರೂ ಪಶ್ಚಿಮ ಬಂಗಾಲದಲ್ಲಿ ಶಾರದಾ ಹಗರಣ ಬಯಲಾದಾಗ ಕೇಂದ್ರದ ಆಳುವ ಪಕ್ಷಕ್ಕೆ ಹಾರಿ ಅಪಾಯದಿಂದ ಪಾರಾದ ಹಲವರಲ್ಲಿ ಇವರೂ ಒಬ್ಬರು ಎಂಬುದನ್ನು ಜನ ಮರೆತಿದ್ದಾರೋ ಗೊತ್ತಿಲ್ಲ, ವ್ಯಂಗ್ಯಚಿತ್ರಕಾರರು ಮರೆಯುವಂತಿಲ್ಲವಲ್ಲ.
ವ್ಯಂಗ್ಯಚಿತ್ರ ಕೃಪೆ: ಸತೀಶ ಆಚಾರ್ಯ
***
ಕೊನೆಗೂ ಚುನಾವಣೆಯ ಸಮಯದಲ್ಲಿ ಕೇಂದ್ರದಲ್ಲಿ ಮತ್ತು ಅಸ್ಸಾಂ ಹಾಗೂ ಪಶ್ಚಿಮ ಬಂಗಾಲದಲ್ಲಿ ಆಳುವವರಿಗೆ ಚಹಾತೋಟದ ಕಾರ್ಮಿಕರ ನೆನಪಾಗಿದೆ. ಪ್ರಧಾನಿಗಳು ಅಸ್ಸಾಂ ಚಹಾವನ್ನು ಪ್ರಶಂಸಿಸಿದರೆ, ಗೃಹ ಮಂತ್ರಿಗಳು ದಾರ್ಜಿಲಿಂಗ್ ಚಹಾವನ್ನು ಹೊಗಳಿದ್ದಾರೆ.
ಸುಭಾನಿ, ಡೆಕ್ಕನ್ ಕ್ರಾನಿಕಲ್
ಇದನ್ನನುಸರಿಸಿ ಫೆಬ್ರುವರಿ 1ರಂದು ಕೇಂದ್ರ ಬಜೆಟಿನಲ್ಲಿ ಈ ಎರಡು ಚುನಾವಣೆಗಳಿಗೆ ಸಿದ್ಧಗೊಳ್ಳುತ್ತಿರುವ ರಾಜ್ಯಗಳ ಚಹಾ ತೊಟದ ಕಾರ್ಮಿಕರ ಕಲ್ಯಾಣಕ್ಕೆಂದು 1000 ಕೋಟಿ ರೂ. ನೀಡಲಾಗಿದೆ. ಪಶ್ಚಿಮ ಬಂಗಾಲದ ಟಿಎಂಸಿ ಸರಕಾರ 150 ಕೊಟಿ ರೂ. ಪ್ರಕಟಿಸಿದೆ. ಅಸ್ಸಾಂನ ಬಿಜೆಪಿ ನೇತೃತ್ವದ ಸರಕಾರ ಮಾದರಿ ಚುನಾವಣಾ ಸಂಹಿತೆ ಜಾರಿಗೆ ಬರುವ ಸ್ವಲ್ವೇ ಮೊದಲು ಚಹಾತೊಟದ ಕಾರ್ಮಿಕರ ಕನಿಷ್ಟ ದಿನಕೂಲಿಯನ್ನು 167 ರೂ.ನಿಂದ 217 ರೂ.ಗೆ ಏರಿಸುವ ಅಧಿಸೂಚನೆ ಹೊರಡಿಸಿದೆ. ಚಹಾ ತೋಟದ ಕಾರ್ಮಿಕರು ಇದನ್ನು 351 ರೂ.ಗೆ ಏರಿಸಬೆಕೆಂದು ಕೇಳುತ್ತ ಬಂದಿದ್ದಾರೆ. ಆದರೆ ಈಗ ಈ 217 ರೂ.ಕೂಡ ಚಹಾತೊಟ ಕಾರ್ಮಿಕರಿಗೆ ಕನಸಾಗಿದೆ. ಏಕೆಂದರೆ 17 ಟೀ ಕಂಪನಿಗಳು ಇದನ್ನು ಪ್ರಶ್ನಿಸಿದ್ದು, ಇದನ್ನು ಕನಿಷ್ಟ ಕೂಲಿ ಕಾಯ್ದೆಯ ನಿಯಮಗಳ ಪ್ರಕಾರ ಮಾಡಿಲ್ಲ ಎಂದು ಗೌಹಾಟಿ ಹೈಕೋರ್ಟ್ ತಡೆಯಾಜ್ಞೆ ಕೊಟ್ಟಿದೆ.
***
ಇತ್ತ ಕೇರಳದಲ್ಲಿ “ಮೆಟ್ರೋಮನುಷ್ಯ” ಎಂದು ಖ್ಯಾತಿ ಪಡೆದಿರುವ ಇ. ಶ್ರೀಧರನ್ ಅವರು ಬಿಜೆಪಿ ಸೇರಿದ್ದು ದೊಡ್ಡ ಸುದ್ದಿಯಾಗಿದೆ. ಅವರ ಖ್ಯಾತಿಯಿಂದಾಗಿ ಈಗ ಏಕೈಕ ಸೀಟು ಹೊಂದಿರುವ ಪಕ್ಷ ಸರಕಾರವನ್ನೇ ರಚಿಸಬಹುದೆಂಬ ಉತ್ಸಾಹದಲ್ಲಿ ಆ ರಾಜ್ಯದಿಂದ ಕೇಂದ್ರ ಸಂಪುಟದಲ್ಲಿ ಪ್ರಾತಿನಿಧ್ಯ ಪಡೆದಿರುವ ಮಂತ್ರಿಗಳು ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ದೃಢ ಪಡಿಸಿದರು, ಎರಡು ದಿನಗಳ ನಂತರ ಇಲ್ಲ, ದೃಢಪಡಿಸಿಲ್ಲ ಎಂದರು.
ಬಹುಶಃ ಮಂತ್ರಿವರ್ಯರು ಶ್ರೀಧರ್ ಜಿ ಇನ್ನೂ ಕಟ್ಟದಿರುವ ಸೇತುವೆಯಲ್ಲಿ ನಿದ್ರಾನಡಿಗೆಯಲ್ಲಿರಬೇಕು ಎನ್ನುತ್ತಾರೆ
ಇಕನಾಮಿಕ್ ಟೈಮ್ಸ್ ವ್ಯಂಗ್ಯಚಿತ್ರಕಾರ ಆರ್. ಪ್ರಸಾದ್
***
88 ವರ್ಷ ಪ್ರಾಯದ ಶ್ರೀಧರನ್ ಮುಖ್ಯಮಂತ್ರಿಯಾಗುತ್ತಾರೆ, ಎಂದಾಗ ಸಹಜವಾಗಿಯೇ ಬಿಜೆಪಿಯ ‘ಮಾರ್ಗರ್ದರ್ಶಕ ಮಂಡಳಿ’ಯ ನೆನಪಾಗದಿರದು. ಅದು ಹೇಗೆ ಶ್ರೀಧರನ್ ಇನ್ನೂ ಮಾರ್ಗದರ್ಶಕ ಮಂಡಳಿಗೆ ಬಂದಿಲ್ಲ ಎಂದು ಅಡ್ವಾಣಿ, ಜೋಷಿ ಕೇಳಲಿಕ್ಕಿಲ್ಲವೇ ಎಂಬ ಪ್ರಶ್ನೆ ಇನ್ನೊಬ್ಬ ವ್ಯಂಗ್ಯಚಿತ್ರಕಾರ ಅಲೋಕ್ ನಿರಂತರ್ ರವರಲ್ಲಿ ಮೂಡಿದೆ.
***
ಕೇರಳದಲ್ಲಿ ಒಬ್ಬ ಕಾಂಗ್ರೆಸ್ ಮುಖಂಡರು ಎಲ್.ಡಿ.ಎಫ್. ಸರಕಾರ ಜನಗಳಿಗೆ ಕೊಡುತ್ತಿರುವ ಆಹಾರದ ಪೊಟ್ಟಣಗಳು ಕೇಂದ್ರ ಸರಕಾರದಿಂದ ಬಂದವುಗಳು ಎಂದು ಹೇಳಿದರೆ, ಬಿಜೆಪಿ ಮುಖಂಡರೊಬ್ಬರು ತಮಗೆ 35 ಸೀಟುಗಳು ಬಂದರೂ ತಾವು ಸರಕಾರವನ್ನು ರಚಿಸುತ್ತೇವೆ ಎಂದು ಹೇಳಿರುವುದಾಗಿ ವರದಿಯಾಗಿದೆ.
ಇದನ್ನು ಕಳೆದ ನಾಲ್ಕು ವರ್ಷಗಳಲ್ಲಿ ಪಕ್ಷಾಂತರ ನಡೆಸಿದ ಎಂ.ಎಲ್.ಎ.ಗಳಲ್ಲಿ ಅತಿ ಹೆಚ್ಚಿನ ಸಂಖ್ಯೆ ಈ ಮೊದಲು ಕಾಂಗ್ರೆಸಿನಿಂದ ಆರಿಸಿ ಹೋದವರು, 405ರಲ್ಲಿ 170, ಅಂದರೆ 42%, ಅಷ್ಟೇ ಅಲ್ಲ, ಕಾಂಗ್ರೆಸ್ ಪಕ್ಷಾಂತರಿಗಳಲ್ಲಿ 66% ನಿರ್ದಿಷ್ಟವಾಗಿ ಬಿಜೆಪಿಗೇ ಹೋಗಿದ್ದಾರೆ ಎಂಬ ವರದಿಯೊಂದಿಗೆ ನೋಡಿದಾಗ ಚುನಾವಣೆಯಲ್ಲಿ ಯಾರೇ ಗೆಲ್ಲಲಿ, ಸರಕಾರ ಮಾತ್ರ ಬಿಜೆಪಿಯದ್ದೇ ಎಂಬ ಹೊಸ ಗಾದೆ ನೆನಪಾಗದಿರುತ್ತದೆಯೇ?
ಆದರೂ ಇತ್ತೀಚೆಗೆ ಉತ್ತರಾಖಂಡದಲ್ಲಿ ಒಂದು ಸರಕಾರ ಹೋಗಿ ಇನ್ನೊಂದು ಸರಕಾರ ಬಂದದ್ದು ಇಂತಹ ಪಕ್ಷಾಂತರದಿಂದ ಅಲ್ಲ. ಏಕೆ ಹೀಗೆ ಎಂದು ಯಾರಾದರೂ ಕೇಳಿದರೆ, ಪಕ್ಷಾಂತರಿಗಳಿಂದಲೇ ಸರಕಾರ ರಚಿಸುತ್ತ ರಚಿಸುತ್ತ ಕಾಂಗ್ರೆಸ್ ಚಾಳಿ ಕಾಂಗ್ರೆಸಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿಗೆ ತಟ್ಟಿದೆ ಎಂದನಿಸಬಹುದು. ಆದರೆ ಆರಂಭದಲ್ಲಿ ಉಲ್ಲೇಖಿಸಿರುವ ವ್ಯಂಗ್ಯಚಿತ್ರಕಾರ ಶೇಖರ್ ಗುರೇರ ರವರ ಪ್ರಕಾರ ಬಹಳ ದಿನಗಳಿಂದ ರಾಜ್ಯ ಸರಕಾರವನ್ನು ಬದಲಿಸುವ ಅವಕಾಶ ಸಿಗಲಿಲ್ಲವಲ್ಲಾ, ಅದಕ್ಕೆ ತಮ್ಮ ಮುಖ್ಯಮಂತ್ರಿಯನ್ನೇ ಬದಲಿಸಿ ಬಿಟ್ಟರು! ಆದರೂ ಚಿಂತೆ ಮಾಡಬೇಡಿ, ಜಿ.ಕೆ.(ಜನರಲ್ ನಾಲೆಡ್ಜ್) ಪುಸ್ತಕದಲ್ಲಿ ಮುಖ್ಯಮಂತ್ರಿಯ ಹೆಸರು ಟಿ.ಎಸ್.ರಾವತ್ ಎಂದೇ (ತ್ರಿವೇಂದ್ರ ಸಿಂಗ್ ಬದಲಿಗೆ ತೀರಥ್ ಸಿಂಗ್) ಇರುತ್ತದೆ ಎಂದು ಅವರು ಬಿಜೆಪಿ ಮಂದಿಯನ್ನು ಸಮಾಧಾನ ಪಡಿಸುತ್ತಾರೆ.