ಮತದಾರರ ಜಾಗೃತಿ ನೆಪದಲ್ಲಿ ಅವರ ವೈಯುಕ್ತಿಕ ಮಾಹಿತಿಗಳನ್ನು, ರಾಜಕೀಯ ಒಲವುಗಳನ್ನು ತಿಳಿದು ಖಾಸಗಿಯಾಗಿ ಅಕ್ರಮಗಳಿಗೆ ದುರ್ಬಳಕೆ ಮಾಡುತ್ತಿದ್ದ ಭಾರಿ ಹಗರಣ ಬೆಳಕಿಗೆ ಬರುತ್ತಿದೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿನ ಮತದಾರರ ಪಟ್ಟಿ ಪರಿಷ್ಕರಣೆ, ಮತದಾರರ ಹೆಸರಿಗೆ ಆಧಾರ ಜೋಡಣೆಯ ಕಲಸವನ್ನು ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ- ಬಿ.ಬಿ.ಎಂ.ಪಿ. `ಚಿಲುಮೆ’ ಎಂಬ ಖಾಸಗಿ ಸಂಸ್ಥೆಗೆ ವಹಿಸಿದ್ದಾಗಿ ತಿಳಿದು ಬಂದಿದೆ. ಮಲ್ಲೇಶ್ವರಂನಲ್ಲಿ ಕಛೇರಿ ಹೊಂದಿರುವ ಈ `ಚಿಲುಮೆ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ’ ಈ ಕೆಲಸವನ್ನು ಉಚಿತವಾಗಿ ಮಾಡುವುದಾಗಿ ಹೇಳಿತ್ತು ಎನ್ನುವ ಅಂಶವೂ ಅನುಮಾನಕ್ಕೆ ಕಾರಣವಾಗಿದೆ. ಈ ಕೆಲಸಕ್ಕೆ ತೊಡಗಿದ್ದ ಸುಮಾರು 10 ರಿಂದ -12 ಸಾವಿರ ಕೆಲಸಗಾರರಿಗೆ ವೇತನ ಎಲ್ಲಿಂದ ಬರುತ್ತಿತ್ತು? ಇದರಿಂದ ಅವರಿಗೇನು ಲಾಭ ಎನ್ನುವ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಪ್ರತಿಯೊಂದಕ್ಕೂ ಹಣಕಾಸು ಎಲ್ಲಿ ಎಂದು ಸಾರ್ವಜನಿಕರಿಗೆ ಕೇಳುವ ಮುಖ್ಯಮಂತ್ರಿ ಮತ್ತು ಬಿಬಿಎಂಪಿ ಆಯುಕ್ತರು ಏನೂ ಪ್ರಶ್ನಿಸದೇ ಅನುಮತಿ ಕೊಟ್ಟಿದ್ದಾರೆಂದು ನಂಬಲು ಸಾಧ್ಯವೇ? ಈ ಸಂಸ್ಥೆ ಮತದಾರರನ್ನು ಜಾಗೃತಿ ಮಾಡುವುದಾಗಿ ಹೇಳಿಕೊಂಡರೂ ವಹಿಸಿದ ಕೆಲಸವನ್ನು ಬಿಟ್ಟು ವಿವಿಧ ಮಾಹಿತಿಗಳನ್ನು ಸಂಗ್ರಹಿಸಿದ್ದು ಯಾಕೆ? ತಾವೇ ನೀಡಿದ ಗುರುತಿನ ಚೀಟಿಯೊಳಗೆ ಬೂತ್ ಮಟ್ಟದ ಅಧಿಕಾರಿ- ಬಿ.ಎಲ್.ಒ. ಎಂದು ಬರೆದುಕೊಂಡು ಬಿಟ್ಟಿದ್ದಾರೆ ಎಂಬ ಆಯುಕ್ತರ ಬಾಲಿಷಃ ಹೇಳಿಕೆಯೂ ಹಾಸ್ಯಾಸ್ಪದವಾಗಿದೆ. ಇವರ ನಿರ್ದೇಶನ ಮೀರಿ ಆ ಸಂಸ್ಥೆ ಕೆಲಸ ಮಾಡುತ್ತಿತ್ತು ಎನ್ನುವುದಾದರೆ ಅದರ ನಿಜ ಉದ್ದೇಶ ಏನು ಎನ್ನುವುದನ್ನು ಅರಿಯಲಾರದಷ್ಟು ಇವರೆಲ್ಲಾ ಮುಗ್ಧರೇ? ಚುನಾವಣಾ ಆಯೋಗ ಮಾಡಬೇಕಿದ್ದ ಇಂತಹ ಕೆಲಸವನ್ನು ಒಂದು ಖಾಸಗಿ ಕಂಪನಿಗೆ ವಹಿಸಿ ಕಣ್ಣು ಮುಚ್ಚಿ ಕೈಚೆಲ್ಲಿ ಕೂಡುತ್ತಾರೆ ಎಂದರೆ ಏನರ್ಥ? ಇಂತಹ ಹೊಣೆಗೇಡಿ ಅಧಿಕಾರಿಯನ್ನು ಆಯುಕ್ತರನ್ನಾಗಿ ಕೂಡಿಸಲಾಯಿತೇ ಅಥವಾ ಸರಕಾರದಲ್ಲಿ ಇರುವವರು ತನ್ನ ಬಯಕೆಯಂತೆ ಈ ಕೃತ್ಯವನ್ನು ಮಾಡಿಸುತ್ತಿದ್ದಾರೆಯೇ? ಎನ್ನುವ ಸಾರ್ವಜನಿಕ ಪ್ರಶ್ನೆ ಸಹಜ. ಯಾಕೆಂದರೆ ಈ ಸಂಸ್ಥೆ ಕೇವಲ ಆಧಾರ್ ಸಂಖ್ಯೆ ಸಂಗ್ರಹಿಸಿದ್ದು ಮಾತ್ರವಲ್ಲ, ಹಿಂದೆ ಮತ್ತು ಈಗ ಮತದಾರರ ರಾಜಕೀಯ ಒಲವುಗಳನ್ನೂ, ಕಾರಣಗಳನ್ನೂ ಸಂಗ್ರಹಿಸಿದೆ. ಈಗಾಗಲೇ ನಮಗೆ ತಿಳಿದಿರುವಂತೆ ವಾಟ್ಸಾಪ್, ಫೇಸ್ ಬುಕ್ ಮುಂತಾದವುಗಳ ಡಾಟಾ ಇರಿಸಿಕೊಂಡು ಅವುಗಳನ್ನು ಬಳಸಿಯೇ ರಾಜಕೀಯ ಒಲವುಗಳನ್ನು ತಿಳಿದು ತನಗೆ ಬೇಕಾದಂತೆ ತಂತ್ರ ಮತ್ತು ಕುತಂತ್ರವನ್ನು ಹೆಣೆಯುವುದು ನಡೆಯುತ್ತಿದೆ. ಈಗ ದೊರೆತ ಪ್ರಾಥಮಿಕ ಮಾಹಿತಿಯಂತೆ ಈ ಪ್ರಕ್ರಿಯೆಯಲ್ಲಿಯೇ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿಯೇ ಸುಮಾರು 6,69,650 ಮತದಾರರ ಹೆಸರುಗಳು ನಾಪತ್ತೆ- ಡಿಲೀಟ್ ಆಗಿವೆ ಎನ್ನುವುದು ದಿಗ್ಬ್ರಾಂತಿಯನ್ನು ಉಂಟು ಮಾಡುತ್ತದೆ.
ಒಂದೊಂದು ವಿಧಾನಸಭಾ ಕ್ಷೇತ್ರದಲ್ಲೂ 30,000 ದಿಂದ 40,000 ಮತದಾರರು ಕಾಣೆಯಾಗಿದ್ದಾರೆ. ಈ ವ್ಯಕ್ತಿಗಳಿಗೆ ಮಾಹಿತಿ ನೀಡಿದವರೂ ಸಹ ಇದೀಗ ಷಾಕ್ ಗೆ ಒಳಗಾಗಿದ್ದಾರೆ. ಆಡಳಿತ ಪಕ್ಷ ಬಿಜೆಪಿಗೆ ಅನುಕೂಲಕರವಾಗಿ ಇಲ್ಲದ ಮತದಾರರನ್ನು ಹೀಗೆ ಡಿಲೀಟ್ ಮಾಡಲಾಗಿದೆಯೇ ಎಂಬ ಗುಮಾನಿಯೂ ಎದ್ದಿದೆ. ಅಂದರೆ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಿದ್ಧಗೊಳ್ಳುತ್ತಿರುವುದು ಕೇವಲ ಚುನಾವಣಾ ಆಯೋಗ ಮಾತ್ರವಲ್ಲ, ಅಧಿಕಾರ ನಡೆಸುತ್ತಿರುವ ಬಿಜೆಪಿಯೂ ಸಹ ಎನ್ನುವುದೂ ನಿಚ್ಚಳ. ಇದರಲ್ಲಿ ಆಳುವ ಪಕ್ಷದೊಂದಿಗೆ ಚುನಾವಣಾ ಆಯೋಗದ ಅಧಿಕಾರಿಗಳ ಪಾತ್ರ ಎಷ್ಟರ ಮುಟ್ಟಿನದು ಎನ್ನುವುದೂ ಆಳವಾದ ತನಿಖೆಗೂ ಒಳಗೊಳ್ಳಬೇಕಾಗಿದೆ. ಬಿಜೆಪಿಯ ಈ ಕೃತ್ಯಗಳು, ಕಾನೂನುಬದ್ದ ಕ್ರಮವಲ್ಲ. ಅದು ಅಕ್ರಮ, ಅನೈತಿಕ. ಮತದಾರರನ್ನು ಮನ ಗೆಲ್ಲಲು ಆಗದ ರಾಜಕೀಯ ಪಕ್ಷವೊಂದು ತನ್ನ ಅಧಿಕಾರ ಮತ್ತು ಅಪಾರ ಹಣದ ಮೂಲಕ ಹೀಗೆ ಅಕ್ರಮಗಳನ್ನು ನಡೆಸುವ ಹಾದಿ ಹಿಡಿದರೆ, ಅದರಲ್ಲೂ ಕೆಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ, ಎಲ್ಲ ವಿರೋಧ ಪಕ್ಷಗಳನ್ನು ನಿರ್ನಾಮ ಇಲ್ಲವೇ ಅಪೋಶನ ಮಾಡುತ್ತೇನೆ ಎಂದು ಬಹಿರಂಗವಾಗಿಯೇ ಸಾರುವ ಪಕ್ಷವೊಂದು ಹೀಗೆ ಮಾಡುತ್ತದೆ ಎನ್ನುವುದು ಭಾರೀ ಅಘಾತಕಾರಿ ಪರಿಣಾಮವನ್ನು ಬೀರಬಲ್ಲುದು. ಇಂತಹ ಚಿಂತನೆ, ಕೃತ್ಯಗಳು ಒಂದು ಘೋರ ಕ್ರಿಮಿನಲ್ ಅಪರಾಧವಾಗಿದೆ. ಬಿಜೆಪಿ ವಿವಿಧ ರಾಜ್ಯಗಳಲ್ಲಿ ನಡೆಸಿರುವ ಚುನಾವಣಾ ಅಕ್ರಮಗಳು ಯಾರೂ ಊಹಿಸಲಾರದಷ್ಟು ಇವೆ ಎನ್ನುವುದು ಹಿಂದಿನ ಅನುಭವಗಳಲ್ಲಿ ಕಂಡುಬರುತ್ತದೆ. ಮತದಾರರ ಕಾರ್ಡ್ ಗಳು ಮತ್ತು ಮತದಾನದ ಯಂತ್ರಗಳು ಸಾರ್ವಜನಿಕವಾಗಿಯೇ ಸಿಕ್ಕಿರುವ ಹಲವು ಉದಾಹರಣೆಗಳಿವೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳನ್ನು ಎದುರಿಸಲಾಗದೇ ಅವರ ಅಸ್ತಿತ್ವವನ್ನೇ ನಿರ್ಜೀವಗೊಳಿಸಿ ನಿರ್ನಾಮ ಮಾಡಿಬಿಡುವುದು ಫ್ಯಾಸಿಸ್ಟ್ ಮಾದರಿಯ ಅತಿರೇಕವಾಗಿದೆ. ಈ ಮೂಲಕ ಚುನಾವಣೆಗಳನ್ನೇ ಅರ್ಥಹೀನಗೊಳಿಸುತ್ತಾ ಹೋಗುವುದು ಒಂದೆಡೆಯಾದರೆ, ಮತ್ತೊಂದೆಡೆ ತಾನೇ ಅಧಿಕಾರದಲ್ಲಿ ಸದಾ ಮುಂದುವರೆಯ ಬೇಕು ಎನ್ನುವ ಸರ್ವಾಧಿಕಾರತ್ವ ಮಾತ್ರವಲ್ಲ ಅಧಿಕಾರ ಹಿಡಿಯಲು ಯಾವುದೇ ಹಂತಕ್ಕೂ ಹೋಗಬಹುದು ಎನ್ನುವ ದಾಷ್ಟ್ಯ ಅಪಾಯದ ಮಟ್ಟವನ್ನೂ ಮೀರಿದ್ದಾಗಿದೆ. ಈ ವರ್ತನೆ ಮತ್ತು ಒಟ್ಟು ವಿದ್ಯಾಮಾನಗಳು ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬುಡಮೇಲುಗೊಳಿಸುವ ಘೋರ ಪಾತಕದ ಕೃತ್ಯವಾಗಿದೆ.
ಈ ಇಡೀ ಪ್ರಕರಣ ಬೆಂಗಳೂರಿನ ಉಸ್ತುವಾರಿ ವಹಿಸಿರುವ ಮುಖ್ಯಮಂತ್ರಿಗಳಿಗೆ ಮತ್ತು ಆಯುಕ್ತರ ಪರಸ್ಪರ ಗಮನಕ್ಕೆ ಬಾರದೆ ನಡೆದಿರಲು ಸಾಧ್ಯವೇ ಇಲ್ಲ ಎನ್ನುವ ವಿರೋಧ ಪಕ್ಷದ ಮಾತುಗಳಲ್ಲಿ ಅರ್ಥವಿದೆ. ತನಿಖೆಯಲ್ಲಿ ನೋಟು ಎಣಿಸುವ ಯಂತ್ರವು ಸಿಕ್ಕಿದೆ ಎನ್ನುವುದು ಇದರ ವಹಿವಾಟು ಎಷ್ಟು ದೊಡ್ಡದಿರಬಹುದು ಎನ್ನುವುದನ್ನು ಹೇಳುತ್ತದೆ. ಕಂಪನಿ ತನ್ನ ಮೂಲ ಬಂಡವಾಳ ಕೇವಲ ಒಂದು ಲಕ್ಷ ಎಂದು ಪ್ರಕಟಿಸಿದೆ. ಆದರೆ ಇದು ನಡೆಸುತ್ತಿರುವ ಚಟುವಟಿಕೆಗಳ ಅಗಾಧತೆಯನ್ನು ನೋಡಿದಾಗ ಸಾವಿರಾರು ಕೋಟಿ ಇಲ್ಲವೇ ಕನಿಷ್ಠ ನೂರಾರು ರೂಪಾಯಿಗಳ ವ್ಯವಹಾರವಂತೂ ನಡೆದಿರಬಹುದಾದ ಸಾಧ್ಯತೆಗಳಿವೆ. ಈಗ ಕೇವಲ ಆ ಕಂಪನಿಯಲ್ಲಿ ಕೆಲಸ ಮಾಡುವ ನಾಲ್ಕು ಜನರನ್ನು ಮತ್ತು ಸ್ಥಳೀಯ ಚುನಾವಣಾ ಅಧಿಕಾರಿಯನ್ನು ಮಾತ್ರ ಬಂಧಿಸಲಾಗಿದೆ. ಈ ಸಂಸ್ಥೆಯ ಮುಖ್ಯಸ್ಥರಾಗಿರುವ ನಿರ್ದೇಶಕರುಗಳನ್ನು ಇದುವರೆಗೂ ಬಂಧಿಸದೆ ಇರುವುದು ಸಾರ್ವಜನಿಕರಲ್ಲಿ ಪ್ರಶ್ನೆಯನ್ನು ಹುಟ್ಟಿಸಿದೆ.
ಮತ್ತೊಂದು ಸಂಗತಿ ಎಂದರೆ ಈ ಸಂಸ್ಥೆಯ ಮುಖ್ಯಸ್ಥರು ಮತ್ತು ಸಚಿವ ಡಾ.ಅಶ್ವಥನಾರಾಯಣ ರವರ ಜೊತೆಗೆ ಇರುವ ರಕ್ತ ಸಂಬಂಧ ಮತ್ತು ಬಾಂಧವ್ಯಗಳು. ಈ ಅಂಶವೂ ಒಟ್ಟು ಹಗರಣದಲ್ಲಿ ಮುಖ್ಯವಾಗಿ ಕೆಲಸ ಮಾಡಿದ ಸಾಧ್ಯತೆಗಳಿವೆ. ಈ ಸಂಸ್ಥೆಯ ಮೂಲಚೂಲಗಳನ್ನು ಬಯಲೆಗೆ ಎಳೆಯುವ ಕಾರ್ಯ ತನಿಖೆಯಲ್ಲಿ ಮಹತ್ತರವಾಗಿದೆ.
ಚಿಲುಮೆ ಸಂಸ್ಥೆಯ ಕೆಲಸಗಳು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಕರ್ನಾಟಕದ ರಾಜ್ಯ ವಿವಿಧ ಜಿಲ್ಲೆಗಳ ಕ್ಷೇತ್ರಗಳಿಗೂ ವ್ಯಾಪಿಸಿರುವುದು ಕಂಡುಬಂದಿದೆ.
ಬಿಜೆಪಿ ಅಧಿಕಾರದಲ್ಲಿ ಬಂದ ಲಾಗಾಯ್ತಿನಿಂದಲೂ ಹಲವಾರು ಭಾರಿ ಹಗರಣಗಳು ಸ್ಫೋಟಗೊಳ್ಳುತ್ತಿವೆ. ಅವಿನ್ನೂ ಒಂದು ತಾರ್ಕಿಕ ಹಂತವನ್ನು ತಲುಪಿಲ್ಲ. ಅದೇ ಹೊತ್ತಿನಲ್ಲಿ ಚುನಾವಣಾ ಅಕ್ರಮಗಳ ಪ್ರಕರಣವೂ ಹೊರಬಂದಿದೆ. ಇಂಥದೊಂದು ಗಂಭೀರವಾದ ಆರೋಪ ಬಂದ ನಂತರ ಸರ್ಕಾರ ಅತ್ಯಂತ ಜವಾಬ್ದಾರಿಯಿಂದ ವರ್ತಿಸಬೇಕಾಗಿತ್ತು. ಅದಕ್ಕೆ ಬದಲಾಗಿ ಮುಖ್ಯಮಂತ್ರಿ ಮತ್ತು ಅವರ ಸಂಪುಟದ ಸಚಿವರು ಬಿಜೆಪಿ ನಾಯಕರು ಈ ಪ್ರಕರಣದ ಬಗ್ಗೆ ಪ್ರಶ್ನೆ ಎತ್ತಿದವರ ಮೇಲೆಯೇ ದಾಳಿಯನ್ನು ನಡೆಸುತ್ತಿರುವುದು ಅತ್ಯಂತ ಖಂಡನೀಯ. ಹಿಂದಿನ ಸರ್ಕಾರದ ಪಾತ್ರವೇನಾದರೂ ಇದ್ದರೆ ಅದನ್ನು ತನಿಖೆಗೆ ಒಳಪಡಿಸಬೇಕು. ಆದರೆ ಅದರ ಅರ್ಥ ಈಗಿನ ಹಗರಣದ ಸಮರ್ಥನೆಗೆ ಸಕಾರಣ ಹೇಗಾಗುತ್ತದೆ? ಇದು ಪ್ರಶ್ನಿಸಿದವರನ್ನೇ ಬೆಸರಿಸುವ ಬ್ಲಾಕ್ ಮೇಲ್‌ತಂತ್ರ. ಆಡಳಿತ ಪಕ್ಷದ ವರ್ತನೆ ಅತ್ಯಂತ ನಾಚಿಕೆಗೇಡಿನ, ಹೇಯ ಕೃತ್ಯವಾಗಿದೆ.
ಈ ಸರ್ಕಾರದಲ್ಲಿರುವವರ ಬಾಗಿತ್ವವನ್ನು ಪ್ರಶ್ನಿಸುವ ಮತ್ತು ಇಡೀ ಪ್ರಕರಣದಲ್ಲಿ ಮುಖ್ಯಮಂತ್ರಿಯನ್ನು ಒಳಗೊಂಡಂತೆ ಸಂಬಂಧಿಸಿದ ಸಚಿವರು, ಶಾಸಕರು ಮತ್ತು ಬಿಬಿಎಂಪಿಯ ಆಯುಕ್ತರನ್ನು ಒಳಗೊಂಡು ಎಲ್ಲಾ ಅಧಿಕಾರಿಗಳನ್ನು ಆಳವಾದ ತನಿಖೆಗೆ ಒಳಪಡಿಸಬೇಕು. ಆದರೆ ಸರ್ಕಾರಕ್ಕೆ ಈ ಪ್ರಕರಣವನ್ನ ಮೂಲಚೂಲವಾಗಿ ಭೇದಿಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡುವ ಮನಸ್ಸು ಇದ್ದಂತೆ ಕಾಣುವುದಿಲ್ಲ. ಇದಕ್ಕೆ ಮುಖ್ಯವಾಗಿ ಚುನಾವಣಾ ಅಕ್ರಮಗಳನ್ನು ತಡೆಯುವ ದೃಢ ಮನಸ್ಸು ಇರಬೇಕು ಆದರೆ ಈ ಸರ್ಕಾರದಲ್ಲಿ ಅದೇ ಗೈರಾಗಿದೆ. ಪೊಲೀಸರ ಮೂಲಕ ನಡೆಸುವ ಈ ತನಿಖೆ ಸಾಕಾಗುವುದಿಲ್ಲ. ಹಗರಣ ನಡೆಸಿದ ಆರೋಪದಲ್ಲಿರುವವರ ಅಡಿಯಲ್ಲಿಯೇ ಇರುವ ಪೊಲೀಸ್ ಇಲಾಖೆಯ ತನಿಖೆಗೆ ಆದೇಶಿಸಿರುವುದು ಸರಿಯಲ್ಲ. ಇಲಾಖೆ ಕಾರ್ಯದಕ್ಷತೆಯಲ್ಲಿ ಸಮರ್ಥವಿದೆ ಎಂದರೂ ಈ ಸರ್ಕಾರದ ಆದೇಶ ಇಂಗಿತವನ್ನು ಮೀರಿ ಅದು ಕೆಲಸ ಮಾಡಲು ಸಾಧ್ಯವಿಲ್ಲ ಎನ್ನುವುದು ಹಲವು ಪ್ರಕರಣಗಳಲ್ಲಿ ಎದ್ದು ಕಾಣಿಸುತ್ತದೆ. ಬದಲಾಗಿ ಇದನ್ನು ಮುಚ್ಚಿ ಹಾಕುವ ಸಾಧ್ಯತೆಗಳೇ ಹೆಚ್ಚು ಎನ್ನುವ ಸಾರ್ವಜನಿಕರ ಅನುಮಾನಕ್ಕೆ ಆಧಾರ ಇಲ್ಲದಿಲ್ಲ. ಶೇ. 40ರ ಭ್ರಷ್ಟಾಚಾರ ಹಗರಣ, ರಮೇಶ್ ಜಾರಕಿಹೊಳಿಯವರ ಲೈಂಗಿಕ ಹಗರಣ, ಕೆ.ಎಸ್. ಈಶ್ವರಪ್ಪನವರ ಭ್ರಷ್ಟಾಚಾರದ ಹಗರಣ, ಪೊಲೀಸ್ ನೇಮಕಾತಿಯಲ್ಲಿ ನಡೆದಿರುವ ಬೃಹತ್ ಹಗರಣಗಳ ಪರಿಸ್ಥಿತಿ ಏನಾಗುತ್ತಿದೆ ಎನ್ನುವುದೇ ಸಾಕು. ಆದ್ದರಿಂದ ಈ ಪ್ರಕರಣವನ್ನು ರಾಜ್ಯ ಸರ್ಕಾರದ ಸುಪರ್ದಿಯಿಂದ ಬೇರೆ ಏಜೆನ್ಸಿ ಕೊಡಬೇಕು. ಇದನ್ನು ಹೈಕೋರ್ಟ್ ನ ಹಾಲಿ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ತನಿಖೆಗೆ ಒಳಪಡಿಸಲು ಒತ್ತಾಯಿಸುತ್ತಿರುವುದನ್ನೂ ಪರಿಗಣಿಸಬೇಕು. ಒಟ್ಟುಆಗಬೇಕಿರುವುದು ನಿಸ್ಪಕ್ಷಪಾತದ ತನಿಖೆ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಮತ್ತು ಸಂಸದೀಯ ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ಸಂರಕ್ಷಣೆ. ಹೀಗಾಗಿ ಸಂವಿಧಾನ ಬದ್ಧ ಸರಕಾರ ಒಂದು ಪಾರದರ್ಶಕವಾಗಿ ನಡೆದುಕೊಳ್ಳುವುದು ಅತ್ಯಂತ ಅಗತ್ಯ.
ಎಲ್ಲಾ ರಂಗಗಳಲ್ಲಿ ವಿಫಲವಾಗಿ, ರಾಜ್ಯದ ಬೊಕ್ಕಸ ಮತ್ತು ಸಾರ್ವಜನಿಕ ಸಂಪತ್ತನ್ನು ಲೂಟಿ ಹೊಡೆಯುತ್ತಿರುವ ಬಿಜೆಪಿ ಹಾಗೂ ಕೋಮುವಾದಿ ಕಾರ್ಪೋರೇಟ್ ದುಷ್ಟಕೂಟವು ಹಗರಣವನ್ನು ಮುಚ್ಚಿ ಹಾಕಲು ಬಿಡಬಾರದು. ಇದರ ಹೊಣೆ ಹೊತ್ತು ಮುಖ್ಯಮಂತ್ರಿ, ಹೆಸರು ಕೇಳಿ ಬಂದಿರುವ ಸಚಿವ ಅಶ್ವಥನಾರಾಯಣ ರಾಜೀನಾಮೆ ಸಲ್ಲಿಸಬೇಕು. ಆ ಮೂಲಕ ತನಿಖೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಅವರ ಹೆಗಲ ಮೇಲೆಯೇ ಇದೆ.