ನವದೆಹಲಿ: ಭಾರತದ ಚುನಾವಣಾ ಆಯೋಗದ (ಇಸಿಐ)ಸದಸ್ಯರ ನೇಮಕವನ್ನು ನಿರ್ಧರಿಸಲು ಭಾರತದ ಮುಖ್ಯ ನ್ಯಾಯಾಧೀಶರು, ಪ್ರಧಾನ ಮಂತ್ರಿಗಳು ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಒಂದು ಸಮಿತಿಯನ್ನು ರಚಿಸಬೇಕು ಎಂದು ಸುಪ್ರೀಂ ಕೋರ್ಟ್ ಒಂದು ಮಹತ್ವದ ನಿರ್ದೇಶನವನ್ನು ನೀಡಿದೆ. ಸಂಸತ್ತು ಈ ಸಂಬಂಧ ಕಾನೂನು ರೂಪಿಸುವ ವರೆಗೆ ಈ ಸಮಿತಿ ಕಾರ್ಯನಿರ್ವಹಿಸುತ್ತದೆ ಎಂದು ಅದು ಹೇಳಿದೆ.
ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ನೇತೃತ್ವದ ಸಂವಿಧಾನ ಪೀಠ ಮಾರ್ಚ್ 2ರಂದು ಈ ಕುರಿತು ಒಂದು ಆದೇಶವನ್ನು ಒರಡಿಸಿದೆ. ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿ.ಟಿ. ರವಿಕುಮಾರ್ ಈ ಸಂವಿಧಾನ ಪೀಠದಲ್ಲಿ ಇದ್ದರು. ಇದು ಈ ಸಂವಿಧಾನ ಪೀಠದ ಸರ್ವಾನುಮತದ ತೀರ್ಪಾಗಿದ್ದರೂ, ನ್ಯಾಯಮೂರ್ತಿ ರಸ್ತೋಗಿ ಅವರು ಇಸಿಐ ಸದಸ್ಯರ ಅಧಿಕಾರಾವಧಿಯ ಭದ್ರತೆಯ ಕುರಿತು ಹೆಚ್ಚುವರಿ ಅಂಶಗಳನ್ನು ಎತ್ತಿ ತೋರಿಸುವ ಪ್ರತ್ಯೇಕ ಸಮ್ಮತಿಯ ತೀರ್ಪನ್ನು ನೀಡಿದ್ದಾರೆ.
ಇದನ್ನು ಓದಿ: ಚುನಾವಣಾ ಆಯೋಗದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
“ಚುನಾವಣಾ ಆಯುಕ್ತರುಗಳನ್ನು ಭಾರತದ ರಾಷ್ಟ್ರಪತಿಗಳು ಪ್ರಧಾನ ಮಂತ್ರಿ, ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರು, ಅಥವಾ ಸಾಕಷ್ಟು ಸಂಖ್ಯಾ ಬಲವಿಲ್ಲದ ಸಂದರ್ಭಗಳಲ್ಲಿ ಅತಿ ದೊಡ್ಡ ವಿರೋಧ ಪಕ್ಷದ ನಾಯಕರು, ಮತ್ತು ಭಾರತದ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡಿರುವ ಒಂದು ಸಮಿತಿಯ ಸಲಹೆಯ ಮೇರೆಗೆ ನೇಮಿಸುತ್ತಾರೆ” ಎಂದು ಪೀಠವು ತೀರ್ಪು ನೀಡಿದೆ.
ಈ ಮೂಲಕ ಚುನಾವಣಾ ಆಯುಕ್ತರುಗಳ ನೇಮಕವನ್ನು ಸರಕಾರದ ಹಿಡಿತದಿಂದ ಮುಕ್ತಗೊಳಿಸುವ ಬಹು ಪರಿಣಾಮಕಾರಿ ಹೆಜ್ಜೆಯನ್ನು ಇಡಲು ಅವಕಾಶ ಉಂಟಾಗಿದೆ ಎಂದು ರಾಜಕೀಯ ವೀಕ್ಷಕರು ಹೇಳುತ್ತಾರೆ.
ಸಂವಿಧಾನದ ಕಲಮು 324(2) ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರುಗಳ ನೇಮಕಾತಿಯನ್ನು ರಾಷ್ಟ್ರಪತಿಗಳು “ಸಂಸತ್ತು ಅದಕ್ಕಾಗಿ ಮಾಡಿದ ಯಾವುದೇ ಕಾನೂನಿನ ನಿಬಂಧನೆಗಳಿಗೆ ಒಳಪಟ್ಟು” ಮಾಡುತ್ತಾರೆ ಎಂದು ವಿಧಿಸುತ್ತದೆ. ಆದ್ದರಿಂದಲೇ ಸಂವಿಧಾನ ಪೀಠದ ಈ ತೀರ್ಪು ಸಂಸತ್ತು ಚುನಾವಣಾ ಆಯುಕ್ತರುಗಳ ನೇಮಕಾತಿ ಪ್ರಕ್ರಿಯೆಯನ್ನು ನಿರ್ದಿಷ್ಟಪಡಿಸುವ ಶಾಸನವನ್ನು ತರಬೇಕೆಂಬ ನಿರೀಕ್ಷೆಯನ್ನು ವಿಧಿಸಿದೆ ಎಂದು ಕಾನೂನು ಪರಿಣಿತರು ಹೇಳುತ್ತಾರೆ.
2021 ರಲ್ಲಿ ವಕೀಲ ಅನೂಪ್ ಬರನ್ವಾಲ್ ಮತ್ತು ಸರ್ಕಾರೇತರ ಸಂಸ್ಥೆಯಾದ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ಚುನಾವಣಾ ಆಯೋಗದ ಸದಸ್ಯರುಗಳ ನೇಮಕಾತಿಗಾಗಿ ತಟಸ್ಥ ಆಯ್ಕೆ ಸಂಸ್ಥೆಯನ್ನು ರಚಿಸುವಂತೆ ಕೋರಿ ಸಲ್ಲಿಸಿದ ಅರ್ಜಿಗಳ ಮೇಲೆ ನ್ಯಾಯಾಲಯವು ತನ್ನ ಈ ನಿರ್ಧಾರವನ್ನು ನೀಡಿದೆ.
ಇದನ್ನು ಓದಿ: ಆಗಬೇಕಿದೆ ಚುನಾವಣಾ ಆಯೋಗದ್ದೇ ಸುಧಾರಣೆ
ಪ್ರಜಾಪ್ರಭುತ್ವದ ಅತ್ಯಂತ ಪ್ರಮುಖ ಅಂಶವೆಂದರೆ ಚುನಾವಣಾ ಪ್ರಕ್ರಿಯೆ, ಅದರ ಶುದ್ಧತೆ ಮಾತ್ರವೇ ಜನರ ಇಚ್ಛೆಯನ್ನು ನಿಜವಾಗಿಯೂ ಪ್ರತಿಬಿಂಬಿಸುತ್ತದೆ, ಆ ಮೂಲಕವೇ ಪ್ರಜಾಪ್ರಭುತ್ವದ ಫಲವನ್ನು ನಿಜವಾಗಿಯೂ ಪಡೆಯಬಹುದು ಎಂದಿರುವ ಈ ತೀರ್ಪು “ರಾಜಕೀಯ ಪಕ್ಷಗಳು ಮತ್ತು ಅವುಗಳ ಅಭ್ಯರ್ಥಿಗಳ ಭವಿಷ್ಯ, ಮತ್ತು ಅದರಿಂದಾಗಿ, ಸ್ವತಃ ಪ್ರಜಾಪ್ರಭುತ್ವದ ಭವಿಷ್ಯವು ಬಹುಮಟ್ಟಿಗೆ, ಚುನಾವಣಾ ಆಯೋಗದ ಕೈಗಳಲ್ಲಿ ಇರಲು ಅವಕಾಶ ನೀಡಲಾಗಿದೆ” ಎಂದು ಹೇಳುತ್ತದೆ.
ಚುನಾವಣಾ ಆಯೋಗ ಕಾರ್ಯಾಂಗದಿಂದ ದೂರವೇ ಉಳಿಯುವ ಪ್ರಯಾಸಕರ ಕಾರ್ಯಭಾರವನ್ನು ನಿರ್ವಹಿಸಬೇಕಾಗಿರುವುದರಿಂದ ಅದಕ್ಕೆ ಹಣಕಾಸಿನ ಸ್ವಾತಂತ್ರ್ಯ ಅಗತ್ಯ ಎಂದಿರುವ ತೀರ್ಪಿನಲ್ಲಿ, ಅದನ್ನು ಖಚಿತಪಡಿಸಲು, ಅದರ ವೆಚ್ಚನಿರ್ವಹಣೆಗೆ ಒಂದು ಪ್ರತ್ಯೇಕ ಮತ್ತು ಖಾಯಂ ಕಾರ್ಯದರ್ಶಿ ಕಚೇರಿಯನ್ನು ರಚಿಸುವಂತೆಯೂ ಕೇಂದ್ರ ಸರ್ಕಾರ ಮತ್ತು ಸಂಸತ್ತಿಗೆ ಮನವಿ ಮಾಡಲಾಗಿದೆ.
ಈ ಹಿಂದೆ ವಿವಿಧ ಆಯೋಗಗಳು ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಚುನಾವಣಾ ಆಯುಕ್ತರ ಅಧಿಕಾರಾವಧಿಯ ಅಸಮಾನ ಭದ್ರತೆಯನ್ನು ಎತ್ತಿ ತೋರಿಸಿವೆ ಎಂದು ಹೇಳಿರುವ ನ್ಯಾಯಮೂರ್ತಿ ರಸ್ತೋಗಿ ತಮ್ಮ ಪ್ರತ್ಯೇಕ ತೀರ್ಪಿನಲ್ಲಿ ಎಲ್ಲಾ ಇಸಿಐ ಸದಸ್ಯರಿಗೆ ಒಂದೇ ರೀತಿಯ ನಿಯಮಗಳು ಅನ್ವಯವಾಗಬೇಕು ಎಂದಿದ್ದಾರೆ. ಅಂದರೆ ಆನಿಯಮಗಳು ನೇಮಕಾತಿಯ ನಂತರ ಅವರಿಗೆ ಅನನುಕೂಲ ಉಂಟುಮಾಡುವಂತೆ ಭಿನ್ನವಾಗಿರಬಾರದು, ಮತ್ತು ಅವರುಗಳನ್ನು ತೆಗೆದು ಹಾಕುವ ಪ್ರಕ್ರಿಯೆ ಈ ನಿಟ್ಟಿನಲ್ಲಿ ಸಂಸತ್ತು ನಿರ್ದಿಷ್ಟ ನಿಬಂಧನೆಗಳನ್ನು ರೂಪಿಸುವ ವರೆಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಂತೆಯೇ ಇರುತ್ತದೆ ಎಂದಿದ್ದಾರೆ. ಅಂದರೆ ಅವರುಗಳನ್ನು ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರುಗಳ ಬಹುಮತದ ಠರಾವಿನ ಮೂಲಕ ಮಾತ್ರವೇ ತೆಗೆದು ಹಾಕಬಹುದು.
ಬಹು ಪರಿಣಾಮ ಬೀರಬಹುದಾದ ತೀರ್ಪು-ಸಿಪಿಐ(ಎಂ)
ಇದು ಮುಂದೆ ಬಹಳಷ್ಟು ಪರಿಣಾಮ ಬೀರಬಹುದಾದ ತೀರ್ಪು ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‍ಬ್ಯುರೊ ಈ ತೀರ್ಪನ್ನು ಸ್ವಾಗತಿಸುತ್ತ ಹೇಳಿದೆ.
ಸಂವಿಧಾನದ 324 ನೇ ವಿಧಿಯ ಅಡಿಯಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ನಡೆಸುವ ಅಧಿಕಾರವನ್ನು ಚುನಾವಣಾ ಆಯೋಗ ಮಾತ್ರವೇ ಹೊಂದಿದೆ. ಸುಪ್ರಿಂ ಕೋರ್ಟಿನ ಸಂವಿಧಾನ ಪೀಠದ ಈ ತೀರ್ಪು ಅದರ ಸ್ವತಂತ್ರ ಅಧಿಕಾರವನ್ನು ಮತ್ತು ಕಾರ್ಯನಿರ್ವಹಣೆಯನ್ನು ಬಲಪಡಿಸುವ ದಿಕ್ಕಿನಲ್ಲಿ ಒಂದು ಮುಂದಣ ಹೆಜ್ಜೆಯಾಗಿದೆ ಎಂದು ಅದು ಅಭಿಪ್ರಾಯ ವ್ಯಕ್ತಪಡಿಸಿದೆ.
ಚುನಾವಣಾ ಆಯೋಗವು ಕಾರ್ಯಾಂಗದ ಎಲ್ಲಾ ಸ್ವರೂಪಗಳ ಅಧೀನತೆಯಿಂದ ದೂರವಿರಬೇಕು ಎಂದು ಕೂಡ ಸಂವಿಧಾನ ಪೀಠ ಹೇಳಿರುವುದನ್ನು ಗಮನಿಸುತ್ತ, ಚುನಾವಣಾ ಆಯೋಗದ ನೇಮಕಾತಿಯು ಸಿಬಿಐ ನಿರ್ದೇಶಕ, ಲೋಕಪಾಲ್ ಇತ್ಯಾದಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸಂಸತ್ತು ರೂಪಿಸಿರುವ ಶಾಸನಗಳಂತೆಯೇ ಪಾರದರ್ಶಕ ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ಇರಬೇಕು ಎಂದು ಸಿಪಿಐ(ಎಂ) ಪ್ರತಿಪಾದಿಸುತ್ತ ಬಂದಿದೆ ಎಂಬುದನ್ನು ಈ ಸಂದರ್ಭದಲ್ಲಿ ಪೊಲಿಟ್‌ಬ್ಯುರೊ ನೆನಪಿಸಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ