ಮಹಿಳೆಯರ ಆಯ್ಕೆ ; ಇರಾನ್‌ ಪ್ರಭುತ್ವಕ್ಕೆ ಅಪಾಯಕಾರಿ

ಹಿಜಾಬ್‌ ಧರಿಸುವುದು ಪ್ರಭುತ್ವಕ್ಕೆ ಸವಾಲು ಆಗುವುದಿಲ್ಲ  ಅದು ವೈಯಕ್ತಿಕ ಆಯ್ಕೆ

ಮೂಲ :  ಝಿಯಾ ಉಸ್‌ ಸಲಾಂ

ದ ಹಿಂದೂ 06 ಅಕ್ಟೋಬರ್‌ 2022

ಅನುವಾದ : ನಾ ದಿವಾಕರ

 

ಭಾರತದಲ್ಲಿ ಬಲಪಂಥೀಯ ರಾಜಕಾರಣಿಗಳು ಶಾಲಾ ಹೆಣ್ಣುಮಕ್ಕಳಿಗೆ ಹಿಜಾಬ್‌ ಧರಿಸುವ ಹಕ್ಕನ್ನು ನಿರಾಕರಿಸುತ್ತಿರುವ ಸಂದರ್ಭದಲ್ಲೇ ಇರಾನ್‌ನಲ್ಲಿ ತದ್ವಿರುದ್ಧವಾದ ಬೆಳವಣಿಗೆಗಳು ನಡೆಯುತ್ತಿವೆ. ಪ್ರಭುತ್ವದ ಅಧಿಕಾರದ ಮೂಲಕ ಪುರುಷರು ಮಹಿಳೆಯರನ್ನು ಅಡಿಯಿಂದ ಮುಡಿಯವರೆಗೂ ಪರದೆಯ ಹಿಂದೆ ಇರಿಸುವ ಪ್ರಯತ್ನ ಮಾಡುತ್ತಿದ್ದು ಮಹಿಳೆಯರಿಗೆ ಆಯ್ಕೆಯ ಸ್ವಾತಂತ್ರ್ಯವನ್ನು ನಿರಾಕರಿಸುತ್ತಿದ್ದಾರೆ. ಅಮಿನಿ ಮಾಡಿದ ಅಪರಾಧವೆಂದರೆ, ಆಕೆ ಪುರುಷಾಧಿಪತ್ಯವನ್ನು ಧಿಕ್ಕರಿಸಿದ್ದು. ಈ ಪರಮಾಧಿತ್ಯ ಎಷ್ಟು ಸೂಕ್ಷ್ಮವಾದದ್ದೆಂದರೆ ಹಿಜಾಬ್‌ ಸರಿಯಾಗಿ ಧರಿಸದೆ ಹೋದರೆ ಅಥವಾ ಹಿಜಾಬ್‌ ತ್ಯಜಿಸಿದರೆ ಸಾಕು, ಅದು ಕಾನೂನು ಭಂಗವಾಗುತ್ತದೆ.     

ಮಹಿಳೆಯರ ಸರ್ವವ್ಯಾಪಿ ಖಂಡನೀಯತೆಯನ್ನು ಪ್ರಚಾರ ಮಾಡುವುದರಲ್ಲೇ ಇರಾನ್‌ ಪ್ರಭುತ್ವದ ಶಕ್ತಿಯೂ ಅಡಗಿದೆ.  ಮಹಿಳೆಯರ ದೇಹದ ಮೇಲೆ ನಿಯಂತ್ರಣ ಸಾಧಿಸುವುದು, ಅವರ ಉಡುಪು, ಮಾತು ಮತ್ತು ಚಲನವಲನಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪುರುಷ ಪ್ರಾಧಾನ್ಯತೆ ಮೇಲುಗೈ ಸಾಧಿಸಲು ಈ ಪ್ರಚಾರವೂ ನೆರವಾಗುತ್ತದೆ.  ಧಿಕ್ಕರಿಸುವ ಪ್ರಶ್ನೆ ಇರಲಿ ಒಂದು ಸಣ್ಣ ವಿಷಯಾಂತರವನ್ನೂ ಸಹ ಪುರಾತನ ಪುರುಷ ಪ್ರಾಧಾನ್ಯತೆಗೆ ಸವಾಲು ಎಂದೇ ಪರಿಗಣಿಸಲಾಗುತ್ತದೆ. ಇರಾನ್‌ನ ಮೆಹ್ಸಾನಾ ಅಮಿನಿ ಎಂಬಾಕೆಯನ್ನು ವಸ್ತ್ರ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕಾಗಿ ನೈತಿಕ ಪೊಲೀಸರು ಬಂಧಿಸಿದ್ದೂ ಇದೇ ಕಾರಣಕ್ಕಾಗಿ. ಇಂತಹ ಸಮತೂಕವಿಲ್ಲದ ಲಿಂಗತ್ವ ಸಂಕಥನಗಳನ್ನು ಧಾರ್ಮಿಕ ಪರದೆಯ ಹಿಂದೆ ಮರೆಮಾಚುವುದು ಬಹಳ ಸುಲಭವೂ ಆಗುತ್ತದೆ. ಶತಮಾನಗಳಿಂದಲೂ ವಿಭಿನ್ನ ನಾಗರಿಕತೆಗಳಲ್ಲಿ, ಪುರುಷರು ಆಜ್ಞಾಪಿಸುವ ಮಹಿಳೆಯರು ಸಮ್ಮತಿಸುವ ಇದೇ ಮಾದರಿಯನ್ನು ಅನುಸರಿಸಲಾಗಿದೆ.

ಭಾರತದಲ್ಲಿ ಬಲಪಂಥೀಯ ರಾಜಕಾರಣಿಗಳು ಶಾಲಾ ಹೆಣ್ಣುಮಕ್ಕಳಿಗೆ ಹಿಜಾಬ್‌ ಧರಿಸುವ ಹಕ್ಕನ್ನು ನಿರಾಕರಿಸುತ್ತಿರುವ ಸಂದರ್ಭದಲ್ಲೇ ಇರಾನ್‌ನಲ್ಲಿ ತದ್ವಿರುದ್ಧವಾದ ಬೆಳವಣಿಗೆಗಳು ನಡೆಯುತ್ತಿವೆ. ಪ್ರಭುತ್ವದ ಅಧಿಕಾರದ ಮೂಲಕ ಪುರುಷರು ಮಹಿಳೆಯರನ್ನು ಅಡಿಯಿಂದ ಮುಡಿಯವರೆಗೂ ಪರದೆಯ ಹಿಂದೆ ಇರಿಸುವ ಪ್ರಯತ್ನ ಮಾಡುತ್ತಿದ್ದು ಮಹಿಳೆಯರಿಗೆ ಆಯ್ಕೆಯ ಸ್ವಾತಂತ್ರ್ಯವನ್ನು ನಿರಾಕರಿಸುತ್ತಿದ್ದಾರೆ. ಅಮಿನಿ ಮಾಡಿದ ಅಪರಾಧವೆಂದರೆ, ಆಕೆ ಪುರುಷಾಧಿಪತ್ಯವನ್ನು ಧಿಕ್ಕರಿಸಿದ್ದು. ಈ ಪರಮಾಧಿತ್ಯ ಎಷ್ಟು ಸೂಕ್ಷ್ಮವಾದದ್ದೆಂದರೆ ಹಿಜಾಬ್‌ ಸರಿಯಾಗಿ ಧರಿಸದೆ ಹೋದರೆ ಅಥವಾ ಹಿಜಾಬ್‌ ತ್ಯಜಿಸಿದರೆ ಸಾಕು, ಅದು ಕಾನೂನು ಭಂಗವಾಗುತ್ತದೆ.

ಇಲ್ಲಿ ಸ್ಮರಿಸಬಹುದಾದ ಸಂಗತಿ ಎಂದರೆ, ಪ್ರವಾದಿ ಮೊಹಮ್ಮದ್‌ ಶುಕ್ರವಾರದ ಪ್ರಾರ್ಥನೆಗೆ ಬರದೆ ಇದ್ದವರನ್ನೂ ಸಹ ಶಿಕ್ಷಿಸಲು ಮುಂದಾಗಿರಲಿಲ್ಲ. ಹಾಗಿರುವಾಗ ಒಬ್ಬ ಯುವತಿಯ ಸಣ್ಣ ತಪ್ಪು ನಡವಳಿಕೆ ಏಕೆ ಶಿಕ್ಷೆಗೊಳಗಾಗಬೇಕು ? ಸುರಾಹ್‌ ನೂರ್‌ ಮತ್ತು ಅಝಾಬ್‌ಗಳ ಮೂಲಕ ಪವಿತ್ರ ಕುರಾನ್‌ ಸಾಮಾಜಿಕ ನಡವಳಿಕೆಯ ಬಗ್ಗೆ ಮಾರ್ಗದರ್ಶನವನ್ನು ನೀಡುತ್ತದೆ, ಪುರುಷರು ಮತ್ತು ಮಹಿಳೆಯರು ಧರಿಸುವ ಉಡುಪುಗಳ ಬಗ್ಗೆ ಸಮ್ಮತಿಯನ್ನು ನೀಡುತ್ತದೆ. ವ್ಯಭಿಚಾರ ಇತ್ಯಾದಿಗಿಂತ ಭಿನ್ನವಾಗಿ, ಪವಿತ್ರ ಕುರಾನ್‌ ವಸ್ತ್ರ ಸಂಹಿತೆಯ ಉಲ್ಲಂಘನೆಗಾಗಿ ಯಾವುದೇ ಶಿಕ್ಷೆಯನ್ನು ವಿಧಿಸುವುದಿಲ್ಲ. ಇದನ್ನು ಅಲ್ಲಾಹುವಿನ ವಿವೇಚನೆಗೆ ಬಿಟ್ಟಿರುತ್ತಾರೆ. ಮೇಲಾಗಿ, ಸುರಾಹ್‌ ಯಾಸಿನ್‌ ಮತ್ತು ಕಾಫಿರನ್‌ ಶ್ಲೋಕಗಳ ಮೂಲಕ ಕುರಾನ್‌ ಧರ್ಮದಲ್ಲಿ ಯಾವುದೇ ಒತ್ತಾಯಗಳನ್ನು ಹೇರುವುದನ್ನು ನಿಷೇಧಿಸುತ್ತದೆ.

ಪ್ರಭುತ್ವವು ನೈತಿಕ ಪೊಲೀಸ್‌ ಮೂಲಕ ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಹೇರುವುದು ಗುಟ್ಟಿನ ಮಾತೇನಲ್ಲ. ಇರಾನ್‌ ಮಹಿಳೆಯರು ದಿಟ್ಟತನದಿಂದ ಮಾತನಾಡಲು ಆರಂಭಿಸುತ್ತಿರುವಾಗ, ವಿಶೇಷವಾಗಿ ವಸ್ತ್ರ ಸಂಹಿತೆಯ ಮೂಲಕ ಲಿಂಗ ತಾರತಮ್ಯಗಳ ವಿರುದ್ಧ ದನಿ ಎತ್ತುತ್ತಿರುವಾಗ ನೈತಿಕ ಪೊಲೀಸರು ಮಹಿಳೆಯೊಬ್ಬರನ್ನು ಬಂಧಿಸಿ ಆಕೆಗೆ ಹಿಜಾಬ್‌ ಧರಿಸುವ ಬಗ್ಗೆ ಪಾಠ ಕಲಿಸಿ, ನಿಯಮಾನುಸಾರ ಆಕೆಯನ್ನು ಪುರುಷ ಸಂಬಂಧಿಕರಿಗೇ ಒಪ್ಪಿಸುವ ಪ್ರಕ್ರಿಯೆಯ ಮೂಲಕ, ಇರಾನ್‌ನ ಪ್ರಭುತ್ವದ ಅಧಿಕಾರಿಗಳು ಅಮಿನಿ ಪ್ರಕರಣವನ್ನು ಒಂದು ನಿದರ್ಶನ ರೂಪದಲ್ಲಿ ಮುಂದಿಟ್ಟಿದ್ದಾರೆ.  ಧಿಕ್ಕಾರವನ್ನು ಮೊಳಕೆಯಲ್ಲೇ ಚಿವುಟಿಹಾಕುವ ಈ ಪ್ರಯತ್ನ ತಿರುಗುಬಾಣವಾಗಿ ಪರಿಣಮಿಸಿದೆ. ಅಮಿನಿ ಬದುಕಿದ್ದಾಗ ಆಕೆಯ ನಿಕಟವರ್ತಿಗಳನ್ನು ಹೊರತುಪಡಿಸಿದರೆ ಯಾರಿಗೂ ಪರಿಚಯವಿರಲಿಲ್ಲ.

ತನ್ನ ಸಾವಿನೊಂದಿಗೆ ಅಮಿನಿ,  ದಬ್ಬಾಳಿಕೆಯ ಮೂಲಕವೇ ಆಳ್ವಿಕೆ ನಡೆಸುವ, ಬಹಳಷ್ಟು ಸಂದರ್ಭಗಳಲ್ಲಿ ಕ್ರೂರವಾಗಿಯೂ ಇರುವ, ಆಳ್ವಿಕೆಯ ವಿರುದ್ಧ ನವ ಯುಗದ ಮುಸ್ಲಿಂ ಮಹಿಳೆಯರ ಸಂಕೇತವಾಗಿ ಹೊರಹೊಮ್ಮಿದ್ದಾಳೆ. ಇರಾನ್‌ನಲ್ಲಿ ರಸ್ತೆಗಿಳಿದು ಹಿಜಾಬ್‌ ಕಿತ್ತೊಗೆದು, ಘೋಷಣೆಗಳನ್ನು ಕೂಗುತ್ತಾ ಪ್ರತಿಭಟಿಸುತ್ತಿರುವ ಮಹಿಳೆಯರಿಗೆ ಅಮಿನಿ ಸ್ಫೂರ್ತಿಯಾಗಿದ್ದಾಳೆ. ಓರ್ವ ಮಹಿಳೆ ತನ್ನ ತಲೆಗೂದಲನ್ನೇ ತೆಗೆದು ತನ್ನ ಗುಂಗುರು ಕೂದಲನ್ನೇ ಬಾವುಟವನ್ನಾಗಿ ಮಾಡಿ ಪ್ರದರ್ಶಿಸಿದ್ದಾಳೆ. ಇರಾನ್‌ನ ಅಧಿಕಾರಿಗಳು ಕಠೋರ ಕ್ರಮ ಕೈಗೊಂಡಿರುವುದೇ ಅಲ್ಲದೆ, ಲೋಹದ ಪೆಲೆಟ್‌ಗಳನ್ನು, ಜಲಫಿರಂಗಿಯನ್ನು, ಅಶ್ರುವಾಯುವನ್ನು ಬಳಸುವ ಮೂಲಕ ಪ್ರತಿಭಟನಾಕಾರರ ವಿರುದ್ಧ ದಾಳಿ ನಡೆಸುತ್ತಿದ್ದಾರೆ. ಧರ್ಮದ ಮೇಲೆ ಪುರುಷರ ಏಕಸ್ವಾಮ್ಯತೆಯನ್ನು ಸಾಧಿಸುವ ಏಕೈಕ ಉದ್ದೇಶವನ್ನು ಇಲ್ಲಿ ಕಾಣಬಹುದಾಗಿದೆ.

 

ದಬ್ಬಾಳಿಕೆಯ ಆಳ್ವಿಕೆ

ಇರಾನ್‌ ಬಂಧಿತ ಮಹಿಳೆಯರನ್ನು ಬಿಡುಗಡೆ ಮಾಡುವಾಗ ಆಕೆಯ ಕುಟುಂಬದ ಪುರುಷರಿಗೇ ಒಪ್ಪಿಸುವ ನಿಯಮವನ್ನು ಹೊಂದಿರುವಂತೆಯೇ, ಸೌದಿ ಅರೇಬಿಯಾದಲ್ಲಿ ದಶಕಗಳ ಕಾಲ ಮಹಿಳೆಯರಿಗೆ ವಾಹನ ಚಾಲನೆಯನ್ನು ನಿಷೇಧಿಸಲಾಗಿತ್ತು. ವಿಡಂಬನೆ ಎಂದರೆ ಇದೇ ಸಮಯದಲ್ಲೇ ಮಹಿಳೆಯರಿಗೆ ಪ್ರವಾದಿ ಮೊಹಮ್ಮದರ ಮೊದಲ ಪತ್ನಿ ಹಝರತ್‌ ಖದೀಜಾ ಅವರ ಉದಾಹರಣೆಯನ್ನು ನೀಡಲಾಗುತ್ತಿತ್ತು. ಖದೀಜಾ 7ನೆಯ ಶತಮಾನದ ಶ್ರೀಮಂತ ವ್ಯಾಪಾರಿಯಾಗಿದ್ದರು. ಆಕೆಯ ವ್ಯಾಪಾರದ ಸಾಮ್ರಾಜ್ಯದ ವಿಸ್ತಾರ ಎಷ್ಟಿತ್ತೆಂದರೆ ಆಕೆ ಮೊಹಮ್ಮದ್ದರನ್ನೇ ( ಅವರು ಪ್ರವಾದಿಯಾಗುವುದಕ್ಕೂ ಮುನ್ನ) ನಿರ್ವಹಣಾಧಿಕಾರಿಯಾಗಿ ನೇಮಿಸಿದ್ದರು. ಇಂದು ಧಾರ್ಮಿಕ ನಾಯಕರು ಮಹಿಳೆಯರಿಗೆ ಖದೀಜಾ ಅವರಂತೆ ಬದುಕಲು ಪ್ರೇರೇಪಿಸುತ್ತಾರೆ ಆದರೆ ಇದೇ ಪುರುಷರೇ ಅವರನ್ನು ನಾಲ್ಕು ಗೋಡೆಗಳ ನಡುವೆ ಮನೆಯೊಳಗೇ ಇರುವಂತೆಯೂ ಒತ್ತಾಯಿಸುತ್ತಾರೆ. ಒಂದು ವೇಳೆ ಅವರು ಎದುರು ಮಾತನಾಡಿದರೆ, ಇರಾನ್‌ನಲ್ಲಿ ಆದಂತೆ, ಪರಿಣಾಮ ಏನಾಗುತ್ತದೆ ಎನ್ನುವುದು ಈಗ ಜಗಜ್ಜಾಹೀರಾಗಿದೆ. ಪ್ರಾಸಂಗಿಕವಾಗಿ ಇರಾನ್‌ನಲ್ಲಿ ಎಲ್ಲ ಮಹಿಳೆಯರೂ ಕಡ್ಡಾಯವಾಗಿ ಹಿಜಾಬ್‌ ಧರಿಸುವ ಕಾನೂನನ್ನು 1983ರಲ್ಲಿ ಜಾರಿಗೊಳಿಸಲಾಯಿತು. ಈ ಕಾಯ್ದೆಯ ಉಲ್ಲಂಘನೆ ಮಾಡಿದವರಿಗೆ ಚಡಿ ಏಟಿನ ಶಿಕ್ಷೆ ವಿಧಿಸಲಾಗಿತ್ತು.

ಈಗ ಕಂಡುಬರುತ್ತಿರುವ ದಬ್ಬಾಳಿಕೆಯ ಆಳ್ವಿಕೆಗೆ ಸುದೀರ್ಘ ಚರಿತ್ರೆಯೇ ಇದೆ. ಇರಾನ್‌ನ ಪ್ರಭುತ್ವದ ಕಠೋರ ದಂಡನೆಯ ಕ್ರಮಗಳ ಪರಿಣಾಮ ಅನೇಕ ಚಲನಚಿತ್ರ ನಿರ್ಮಾಪಕ-ನಿರ್ದೇ಼ಶಕರು, ಕಲಾವಿದರು, ಬರಹಗಾರರು ಮತ್ತು ಕ್ರೀಡಾಪಟುಗಳು, ಪುರುಷರನ್ನೂ ಒಳಗೊಂಡಂತೆ, ಹೊರದೇಶಗಳಲ್ಲಿ ಸುರಕ್ಷಿತ ನೆಲೆ ಬಯಸುತ್ತಿದ್ದಾರೆ. ಹೆಸರಾಂತ ಚಿತ್ರ ನಿರ್ಮಾಪಕ ಮೊಹ್ಸೆನ್‌ ಮಖ್ಮಲ್‌ಬಾಫ್ ಅವರ ಏಳುಬೀಳಿನ ಪಯಣವನ್ನು ಬಹಳಷ್ಟು ಜನರು ಮರೆತಿರಲಿಕ್ಕಿಲ್ಲ.

ಸಕ್ರಿಯ ಕ್ರಾಂತಿಕಾರಿಯಾಗಿದ್ದ ಮೊಹ್ಸೆನ್‌ ಅವರನ್ನು 1979ರ ಕ್ರಾಂತಿಯ ಮುನ್ನ ಬಂಧಿಸಿ ಚಿತ್ರಹಿಂಸೆಗೊಳಪಡಿಸಲಾಗಿತ್ತು. ಆನಂತರ ಮೊಹ್ಸೆನ್‌ ಆಡಳಿತಾರೂಢ ಪಕ್ಷದಿಂದ ದೂರವಾಗಿ ʼಮ್ಯಾರೇಜ್‌ ಆಫ್‌ ದ ಬ್ಲೆಸ್ಡ್‌ʼ ಮತ್ತು ʼದ ಸೈಕ್ಲಿಸ್ಟ್‌ʼ ಚಿತ್ರಗಳನ್ನು ನಿರ್ಮಿಸಿ ಅದನ್ನು ಜೆರುಸೆಲಂನ ಚಿತ್ರೋತ್ಸವದಲ್ಲಿ ಪ್ರದರ್ಶಿಸಿದಾಗ, ಒತ್ತಾಯಪೂರ್ವಕವಾಗಿ ಅವರು ವಲಸೆ ಹೋಗಬೇಕಾಯಿತು. ಮೊಹ್ಸೆನ್‌ ಅವರ ಅಪ್ರತಿಮ ಪ್ರತಿಭೆಯ ಹೊರತಾಗಿಯೂ ಇರಾನ್‌ನಲ್ಲಿ ಅವರು ಒಂದೇ ಒಂದು ಚಿತ್ರವನ್ನೂ ನಿರ್ಮಿಸಲಾಗಲಿಲ್ಲ. ಅಭಿಪ್ರಾಯಭೇದ ಒತ್ತಟ್ಟಿಗಿರಲಿ, ಭಿನ್ನ ದೃಷ್ಟಿಕೋನ ಹೊಂದಿರುವುದೂ ಸಹ                                                                                                                     ದಾಳಿಗೊಳಗಾಗುತ್ತಿತ್ತು.

ಇರಾನ್‌ನ ಮಹಿಳೆಯರು ನಡೆಸುತ್ತಿರುವ ಪ್ರತಿಭಟನೆಗಳು ಇರಾನ್‌  ವಿರುದ್ಧ ಇರುವ ಪಶ್ಚಿಮ ರಾಷ್ಟ್ರಗಳಿಗೆ ಒಂದು ಅಸ್ತ್ರವನ್ನು ನೀಡಿರುವುದು ವಾಸ್ತವ. ಈ ಹಿಂದೆಯೂ ಸಹ ಪಶ್ಚಿಮ ರಾಷ್ಟ್ರಗಳು ಇರಾನ್‌ ಬಗ್ಗೆ ತಿರಸ್ಕಾರ ಭಾವನೆಯನ್ನೇ ತೋರಿದ್ದವು. ಮಹಿಳೆಯರ ಹಕ್ಕುಗಳನ್ನು ಸಮರ್ಥಿಸುವಲ್ಲಿ ಅಳೆದು ಸುರಿದು ಪ್ರತಿಕ್ರಯಿಸುತ್ತಿದ್ದವು.  ಹಿಜಾಬ್‌ ಧರಿಸುವ ಮುಸ್ಲಿಂ ಮಹಿಳೆಯರ ಹಕ್ಕುಗಳ ಬಗ್ಗೆ ಪಶ್ಚಿಮ ರಾಷ್ಟ್ರಗಳ ಮೌನ ಮತ್ತು ಯೂರೋಪ್‌ನಲ್ಲಿ ಜಾರಿಯಾದ ಕಾಯ್ದೆಯಡಿ ಅನುಸರಿಸಲಾಗುತ್ತಿರುವ ದಂಡನಾರ್ಹ ಕ್ರಮಗಳಿಗೂ, ಇರಾನ್‌ನಲ್ಲಿ ಮಹಿಳೆಯರಿಗೆ ತಮ್ಮ ಇಚ್ಚಾನುಸಾರ ಉಡುಪು ಧರಿಸುವುದನ್ನು ನಿರ್ಬಂಧಿಸುತ್ತಿರುವುದಕ್ಕೂ ಹೆಚ್ಚಿನ ವ್ಯತ್ಯಾಸವೇನೂ ಕಾಣುವುದಿಲ್ಲ. ಭಾರತದ ಪುರೋಹಿತಶಾಹಿ ಧಾರ್ಮಿಕ ನಾಯಕರು ಭಿನ್ನವಾಗೇನೂ ಕಾಣುವುದಿಲ್ಲ. ಸಾನಿಯಾ ಮಿರ್ಜಾ ಧರಿಸಿದ ಸ್ಕರ್ಟ್‌ ಕುರಿತು ಹುಯಿಲೆಬ್ಬಿಸಿದ್ದನ್ನು ಸ್ಮರಿಸಬಹುದು.

ಕರ್ನಾಟಕದಲ್ಲಿರುವ ಬಾಲಕಿಯರೇ ಆಗಲಿ, ಟೆಹರಾನ್‌ನ ರಸ್ತೆಗಳಲ್ಲಿರುವ ಮಹಿಳೆಯರೇ ಆಗಲೀ ಅಥವಾ ಪ್ಯಾರಿಸ್‌, ಬ್ರಸೆಲ್ಸ್‌ನ ಮಹಿಳೆಯರೇ ಆಗಲೀ, ಅಂತಿಮವಾಗಿ ನಿರ್ಣಾಯಕರು ಅವರೇ ಆಗಿರಬೇಕು. ಹಿಜಾಬ್‌ ಧರಿಸುವುದು ಅಥವಾ ಧರಿಸದೆ ಇರುವುದು ಪ್ರಭುತ್ವಕ್ಕೆ ಸವಾಲೆಸೆದಂತೆ ಎಂದು ಭಾವಿಸಬೇಕಿಲ್ಲ. ಅದು ವೈಯಕ್ತಿಕ ಆಯ್ಕೆಯ ಪ್ರಶ್ನೆಯಾಗಿದ್ದು ಇದನ್ನು ಬೇಷರತ್ತಾಗಿ ಒಪ್ಪಿಕೊಳ್ಳಬೇಕಿದೆ.

 

 

 

Donate Janashakthi Media

Leave a Reply

Your email address will not be published. Required fields are marked *