ಬೆಂಗಳೂರು | ಇಂದಿನಿಂದ ಕುಮಾರಕೃಪಾ ರಸ್ತೆಯಲ್ಲಿ ಚಿತ್ರಸಂತೆ ಪ್ರಾರಂಭ

ಬೆಂಗಳೂರು: ಕುಮಾರಕೃಪಾ ರಸ್ತೆಯಲ್ಲಿ  ಇದೇ ಭಾನುವಾರ (ಜ.4) ಕರ್ನಾಟಕ ಚಿತ್ರಕಲಾ ಪರಿಷತ್ತು 23ನೇ ‘ಚಿತ್ರಸಂತೆ’ಯನ್ನು ಹಮ್ಮಿಕೊಂಡಿದ್ದು, ಈ ಸಂತೆಯು ಸಾವಿರಾರು ಕಲಾವಿದರ ಪ್ರತಿಭೆ ಅನಾವರಣಕ್ಕೆ ಹಾಗೂ ಅವರು ರಚಿಸಿದ ಕಲಾಕೃತಿಗಳ ಮಾರಾಟಕ್ಕೆ ವೇದಿಕೆ ಕಲ್ಪಿಸಲಿದೆ.

ಸಂತೆಗೆ ಪರಿಷತ್ತು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಉದ್ಘಾಟನಾ ಕಾರ್ಯಕ್ರಮದ ವೇದಿಕೆ ಹಾಗೂ ವಿವಿಧ ಕಲಾಕೃತಿಗಳಿಗೆ ಕಲಾವಿದರು ಶನಿವಾರ ಅಂತಿಮ ಸ್ಪರ್ಶ ನೀಡಿದರು.  ಈ ಬಾರಿಯ ಚಿತ್ರಸಂತೆಯನ್ನು ‘ಪರಿಸರ’ಕ್ಕೆ ಸಮರ್ಪಣೆ ಮಾಡಲಾಗಿದೆ. ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.

ಇದನ್ನೂ ಓದಿ : ಬೆಂಗಳೂರು| ನಿಧಿಗಾಗಿ 8 ತಿಂಗಳ ಮಗುವಿನ ನರಬಲಿಗೆ ಯತ್ನ; ರಕ್ಷಣೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಬೆಳಿಗ್ಗೆ 10.30ಕ್ಕೆ ಪರಿಷತ್ತಿನ ಆವರಣದಲ್ಲಿ ಚಿತ್ರಸಂತೆ ಉದ್ಘಾಟಿಸುತ್ತಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ‘ಕಲಾ ಪ್ರದರ್ಶನ’ಕ್ಕೆ ಚಾಲನೆ ನೀಡುತ್ತಾರೆ.

ದೇಶದ ವಿವಿಧ ಭಾಗಗಳಿಂದ 1,500 ಕಲಾವಿದರು ಚಿತ್ರಸಂತೆಯಲ್ಲಿ ಭಾಗವಹಿಸಿ, ಕಲಾಕೃತಿಗಳನ್ನು ಪ್ರದರ್ಶಿಸಲಿದ್ದಾರೆ. ಕರ್ನಾಟಕದ ಜತೆಗೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಳ, ಒಡಿಶಾ ಸೇರಿದಂತೆ ವಿವಿಧ ರಾಜ್ಯಗಳ ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ. ಪರಿಷತ್ತಿನ ಗ್ಯಾಲರಿಗಳಲ್ಲಿ ಹಿರಿಯ ಹಾಗೂ ಹೆಸರಾಂತ ಕಲಾವಿದರು ರಚಿಸಿದ ಕಲಾಕೃತಿಗಳ ಪ್ರದರ್ಶನ ನಡೆಯಲಿವೆ.

ಚಿತ್ರಸಂತೆಯಲ್ಲಿ ವ್ಯಂಗ್ಯಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಕುಂಚ ಅಥವಾ ಪೆನ್ಸಿಲ್‌ಗಳಿಂದ ಕಲಾರಸಿಕರ ಭಾವಚಿತ್ರಗಳನ್ನು ಸ್ಥಳದಲ್ಲಿಯೇ ರಚಿಸಿಕೊಡುವ ಕಲಾವಿದರು ಇರುತ್ತಾರೆ.

‘ಹಿರಿಯ ಕಲಾವಿದರು ಹಾಗೂ ಅಂಗವಿಕಲರಿಗೆ ಆಯ್ದ ಸ್ಥಳದಲ್ಲಿ ಅಗತ್ಯ ಸೌಲಭ್ಯ ಒದಗಿಸಿಕೊಡಲಾಗುತ್ತಿದೆ. ಪರಿಷತ್ತಿನ ಆವರಣದ ಹೊರಗೆ ಸಂಚಾರಿ ಎಟಿಎಂ ಇರಲಿವೆ. ಈ ಚಿತ್ರಸಂತೆಯಲ್ಲಿ ₹100 ರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕಲಾಕೃತಿಗಳು ಲಭ್ಯ. ಈ ಬಾರಿಯ ಚಿತ್ರಸಂತೆಗೆ ಐದು ಲಕ್ಷ ಮಂದಿ ಭೇಟಿ ನೀಡುವ ನಿರೀಕ್ಷೆಯಿದೆ’ ಎಂದು ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್ ತಿಳಿಸಿದರು.

ಇದನ್ನೂ ನೋಡಿ : ಬಿಗ್ ಡಿಬೇಟ್ : ಕೋಗಿಲು ಪ್ರಕರಣ | ವಾಸವಿದ್ದವರು ಯಾರು? ಹೊರ ರಾಜ್ಯದವರೇ? ಹೊರ ದೇಶದವರೇ?Janashakthi Media

Donate Janashakthi Media

Leave a Reply

Your email address will not be published. Required fields are marked *