ಕೋವಿಡ್: ಬೆಂಗಳೂರಿನ ಚಿತಾಗಾರ ಹಾಗು ರುದ್ರಭೂಮಿ ಕಾರ್ಮಿಕರಲ್ಲಿ ತೀವ್ರಗೊಂಡ ದುಸ್ಥಿತಿ

‘ಕಸಿದ ಘನತೆ’, ಬೆಂಗಳೂರು ನಗರದ ಸ್ಮಶಾನದಲ್ಲಿ ಕೆಲಸ ಮಾಡುವ ಕಾರ್ಮಿಕರ ಕುರಿತು ಎಐಸಿಸಿಟಿಯು ಸಂಘಟನೆಯ ಕರ್ನಾಟಕ ರಾಜ್ಯ ಸಮಿತಿಯು ಬಿಡುಗಡೆ ಮಾಡಿದ ವರದಿ.

  • ಎಐಸಿಸಿಟಿಯುವಿನ ತಂಡ (ಇಬ್ಬರು ಸದಸ್ಯರು ಹಾಗು ಒಬ್ಬರು ಸ್ವಯಂಸೇವಕರು), ಮೇ 4 – 8 ರ ಮಧ್ಯೆ 26 ಸ್ಮಶಾನಗಳಿಗೆ ಭೇಟಿ  ನೀಡಿ, ಅಲ್ಲಿನ ಕಾರ್ಮಿಕರನ್ನು ಮಾತನಾಡಿಸಿ ಅವರ ಕೆಲಸದ ವಾತಾವರಣ ಹಾಗು ಅವರ ಜೀವನದ ಬಗ್ಗೆ ವಿವರಗಳನ್ನು ಪಡೆದರು.

ಬೆಂಗಳೂರು ನಗರದ ಎಲ್ಲಾ ನಾಗರಿಕರಿಗೂ ಅಂತಿಮ ಸಂಸ್ಕಾರಕ್ಕೆ ಶ್ರಮಿಸುವ  (ಬಹುತೇಕ ಎಲ್ಲ) ದಲಿತ ಕಾರ್ಮಿಕರು  ಹೇಗೆ ತಲೆಮಾರುಗಳಿಂದ ಸ್ಮಶಾನಗಳಲ್ಲಿ ಗುಲಾಮಗಿರಿಯ ಪರಿಸ್ಥಿತಿಗಳಲ್ಲಿ ಕೆಲಸ ಮಾಡುವಂತೆ ಒತ್ತಾಯಕ್ಕೆ ಒಳಗಾಗಿದ್ದಾರೆ ಎಂದು ಈ ವರದಿ ದಾಖಲಿಸುತ್ತದೆ.  ಬಿ.ಬಿ.ಎಂ.ಪಿ. ನಡೆಸುವ ಸ್ಮಶಾನವಾಗಿರಬಹುದು ಅಥವಾ ಧಾರ್ಮಿಕ ಸಂಸ್ಥೆಗಳು ನಡೆಸುವ ಸ್ಮಶಾನವಾಗಿರಬಹುದು, ಕಾರ್ಮಿಕರ ಕಲ್ಯಾಣದ ಸಂಪೂರ್ಣ ನಿರ್ಲಕ್ಷ್ಯವು ಎದ್ದು ಕಾಣುತ್ತಿದೆ. ಕೋವಿಡ್ ಸೋಂಕಿನಿಂದ ಅವರ ಕೆಲಸದ ವಾತಾವರಣ ಹಾಗು ಆರೋಗ್ಯ ಇನ್ನು ಹದಗೆಟ್ಟಿದೆ. ಕಾರ್ಮಿಕರು ದಿವಸಕ್ಕೆ ೧೪ ಘಂಟೆ ಕೆಲಸ ಮಾಡಿಕೊಂಡು, ಹಲವು ದಿವಸಗಳ ಕಾಲ ಸ್ಮಶಾನದಲ್ಲೇ ಉಳಿದಿಕೊಂಡು, ಗೋಣಿಚೀಲಗಳ ಮೇಲೆ ಮಲುಗುತ್ತಾ ಬಳಲುತ್ತಿದ್ದಾರೆ.

ಇದನ್ನು ಓದಿ: ಕೋವಿಡ್-19 ಎರಡನೆಯ ಅಲೆ – ಹಲವು ಪ್ರಶ್ನೆಗಳು: ಭಾಗ 2

ವರದಿಯ ಬಗ್ಗೆ 

ಮಾಧ್ಯಮಗಳ  ವರದಿಗಳ ಪ್ರಕಾರ ಬೆಂಗಳೂರಿನಲ್ಲಿ 42 ಕ್ರಿಮಟೋರಿಯಂ ಹಾಗು 85 ಬರಿಯಲ್ ಗ್ರೌಂಡ್‌ಗಳಿದ್ದಾವೆ. ಇದರ ಜೊತೆಗೆ ಎರಡನೇ ಅಲೆಯಲ್ಲಿ ಸಾವಿನ ಪ್ರಕರಣಗಳು ಗಗನಕ್ಕೇರಿರುವುದರಿಂದ, ಮೃತಪಟ್ಟವರ ಮೃತದೇಹವನ್ನು ದಹಿಸಲು  ತಾತ್ಕಾಲಿಕ ಬಯಲು ಕ್ರಿಮಟೋರಿಯಂಗಳನ್ನೂ ಸಹ ತೆರೆಯಲಾಗಿದೆ. ತಂಡವು ಭೇಟಿ ಮಾಡಿ ಕಾರ್ಮಿಕರ ಜೊತೆಗಿನ ಸಂಭಾಷಣೆಗಳು, ಸರ್ಕಾರ ಕೋವಿಡ್ ಸೋಂಕಿನ ಸಮಯದಲ್ಲಿ ಅಂತಿಮ ಸಂಸ್ಕಾರಗಳ ಪ್ರೋಟೋಕಾಲ್ ಬಗ್ಗೆ ಹೊರಡಿಸಿರುವ ಆದೇಶಗಳು ಹಾಗು ಸಾರ್ವಜನಿಕವಾಗಿ ಲಭ್ಯತೆಯಿರುವ ಇತರ ಮಾಹಿತಿ – ಇವೆಲ್ಲರ ಆಧಾರದ ಮೇರೆಗೆ ಈ ವರದಿ ಬೆಳಕು ಚೆಲ್ಲುತ್ತದೆ. ಕಾರ್ಮಿಕರನ್ನು ಸಂದರ್ಶಿಸಲು ಬಳಿಸಿದ ಪ್ರಶ್ನಾವಳಿ ಹಾಗು ಭೇಟಿ ನೀಡಿದ ಪ್ರತಿ ಸ್ಮಶಾನದ ಬಗ್ಗೆ ಸಂಕ್ಷಿಪ್ತ ಸಾರಾಂಶ, ವರದಿಯ ಅನುಬಂಧಗಳಾಗಿ ಲಗತ್ತಿಸಲಾಗಿದೆ.

ಕಂಡು ಬಂದ ಮುಖ್ಯ ಅಂಶಗಳು 

ಕೋವಿಡ್ ಪ್ರಕರಣಗಳು ಹಾಗು ಅದರ ಪರಿಣಾಮವಾಗಿ ಸಾವುಗಳ ಸಂಖ್ಯೆ ಅತಿ ಹೆಚ್ಚಾಗಿದ್ದು, ಕಾರ್ಮಿಕರ ಜೀವನ ಹೇಗೆ ನರಕವಾಗಿದೆ ಎಂದು ದಾಖಲಿಸಲಾಗಿದೆ. ಕೋವಿಡ್ ಸೋಂಕಿನ ಮುಂಚೆ ಒಂದು ಸ್ಮಶಾನಕ್ಕೆ ೦-೫ ಮೃತದೇಹಗಳು ದಹಿಸುವುದಕ್ಕೆ/ಮಣ್ಣು ಮಾಡಲಿಕ್ಕೆ ತಲುಪುತ್ತಿದ್ದವು . ಈಗ ಕನಿಷ್ಠ ೫ ಹಾಗು ಗರಿಷ್ಠ ೭೫ ಜನರ ಮೃತದೇಹ ತಲುಪುತ್ತಿದೆ. ವಿದ್ಯುತ್ ಚಿತ್ತಾಗರಗಳಲ್ಲಿ ಕಾರ್ಮಿಕರು ಬೆಳಗ್ಗೆ ೬-೭ ಗಂಟೆಗೆ ಕಾರ್ಯ ಪ್ರಾರಂಭ ಮಾಡಿ ರಾತ್ರಿ ೭-೮ ಘಂಟೆಯ ತನಕ ಕಾರ್ಯನಿರ್ವಹಿಸುತ್ತಿದ್ದಾರೆ. ಮೃತದೇಹಗಳನ್ನು ದಹಿಸಲು ಮರವನ್ನು ಉಪಯೋಗಿಸುವ ಮೂರು ಚಿತಾಗಾರಗಳಲ್ಲಿ, ದಹನಕ್ಕೆ  ಇನ್ನು ಹೆಚ್ಚು ಸಮಯ ಬೇಕಾಗಿದ್ದು ಕಾರ್ಮಿಕರು ಬೆಳಗ್ಗೆ ೫ ಘಂಟೆಯಿಂದ ಪ್ರಾರಂಭಿಸಿದರೆ ಕೆಲವೊಮ್ಮೆ ರಾತ್ರಿ ೧ ಗಂಟೆಗೆ ಅಥವಾ ೨ ಘಂಟೆಗೆ ಕೆಲಸ ಮುಗಿಸುತ್ತಾರೆ. ಕೋವಿಡ್ ನಿಂದ ಮೃತಪಟ್ಟವರ ಅಂತಿಮ ಸಂಸ್ಕಾರಗಳು ಯಾವ ರೀತಿ ನಡೆಯಬೇಕು ಎಂದು ಹೊರಡಿಸಿರುವ ಅಷ್ಟು ಸರ್ಕಾರಿ ಆದೇಶ/ ಸುತ್ತೋಲೆಗಳಲ್ಲಿ ಕಾರ್ಮಿಕರ ಮೇಲೆ ಆಗುವ ಪರಿಣಾಮ ಅಥವಾ ಅವರ ಹಿತರಕ್ಷಣೆ ಬಗ್ಗೆ ಒಂದು ಅಂಶವು ಇಲ್ಲ.

ಇದನ್ನು ಓದಿ: ಮಸಣ ಕಾರ್ಮಿಕರಿಗೆ ವಿಮಾ ರಕ್ಷಣೆ ಮತ್ತು ಪರಿಹಾರಕ್ಕಾಗಿ ಮನವಿ

ಆಘಾತಕಾರಿ ವಿಷಯವೇನೆಂದರೆ, ಯಾವುದೇ ಸ್ಮಶಾನದಲ್ಲಿ ಕಾರ್ಮಿಕರಿಗೆ ಕನಿಷ್ಠ ವೇತನ ನೀಡಲಾಗುತ್ತಿಲ್ಲ ಹಾಗು ಕಾರ್ಮಿಕರಿಗೆ ಕಾನೂನು ಪ್ರಕಾರ ಸಿಗಬೇಕಾದ ಒಂದು ಸೌಲಭ್ಯ ಸಹ ನೀಡಲಾಗುತ್ತಿಲ್ಲ. ಒಮ್ಮೊಮ್ಮೆ ತಿಂಗಳಿಗೊಮ್ಮೆ ವೇತನ ನೀಡಲಾಗುತ್ತದೆ, ಕೆಲವೊಮ್ಮೆ ಮೂರೂ ತಿಂಗಳಿಗೊಮ್ಮೆ ನೀಡಲಾಗುತ್ತದೆ. ಕೆಲವರಿಗೆ ವರ್ಷಕ್ಕೊಮ್ಮೆ ನೀಡಲಾಗಿದೆ. ಅವರಿಗೆ ಸಿಗಬೇಕಾದ ವೇತನ 13,132.60/- ರೂಪಾಯಿ. ಆದರೆ ಕೆಲ ಕಾರ್ಮಿಕರಿಗೆ 2,000 ರೂಪಾಯಿ ಸಿಗುತ್ತದೆ. ಕೆಲವರಿಗೆ 10,500 ರೂಪಾಯಿ ಸಿಗುತ್ತದೆ. ಕನಿಷ್ಠ ವೇತನದ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ನಡೆಯುತ್ತಿದೆ. ಮೃತಪಟ್ಟವರ ಕುಟುಂಬದವರು ಇಷ್ಟದಂತೆ ನೀಡುವ ಅಷ್ಟೋ-ಇಷ್ಟೋ ಹಣವನ್ನು ಬಳಿಸಿ ಜೀವನ ನಡೆಸುತ್ತಾರೆ. ಕಾರ್ಮಿಕರಿಗೆ  ಸಿಗಬೇಕಾದ ಇ.ಎಸ್.ಐ, ಪಿ.ಎಫ್, ಬೋನಸ್, ರಜೆ, ಗ್ರಾಟ್ಯೂಟಿ ಇದು ಎಲ್ಲವನ್ನು, ಎಲ್ಲ ಕಾರ್ಮಿಕರಿಂದ ಕಿತ್ತುಕೊಳ್ಳಲಾಗಿದೆ. ಇದು ಕಾರ್ಮಿಕ ಕಾನೂನಿನ ಘೋರ ಉಲ್ಲಂಘನೆ.

ಅಪಾಯಕಾರಿ ಕೆಲಸ ಮಾಡುತ್ತಿರುವ ಸ್ಮಶಾನಗಳ ಈ ಕಾರ್ಮಿಕರು ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಸರ್ಕಾರ ಅಥವಾ ಖಾಸಗಿ ಧಾರ್ಮಿಕ ಸಂಸ್ಥೆಗಳು ಕಾರ್ಮಿಕರ ಕಲ್ಯಾಣಕ್ಕಾಗಿ ಯಾವುದೇ ಕ್ರಮವಹಿಸುವುದಿಲ್ಲ, ಯಾವುದೇ ಸೌಲಭ್ಯ ನೀಡುವುದಿಲ್ಲ. ಕೆಲಸದ ಸಮಯದಲ್ಲಿ ಕಾರ್ಮಿಕರಿಗೆ ಆಗಿರುವ ಕೆಲವು ಅಪಘಾತಗಳು ಹಾಗು ಅದರಿಂದ ಆದ ಗಾಯಗಳನ್ನು ವರದಿಯಲ್ಲಿ ವಿವರಿಸಲಾಗಿದೆ. ಕಾರ್ಮಿಕರಿಗೆ ಬೆನ್ನು ಮೂಳೆಯ  ಸ್ಲಿಪ್ ಡಿಸ್ಕ್ ಆಗಿದೆ, ದೇಹಗಳನ್ನು ದಹಿಸುವಾಗ ಕೈ ಸುಟ್ಟಿದೆ, ಗೊತಿಕಲ್ಲುಗಳನ್ನು ಜರಗಿಸುವಾಗ ಬೆರಳುಗಳು ನೆಗ್ಗುಹೋಗಿವೆ. ಇಷ್ಟೆಲ್ಲವಾದರೂ ಯಾವ ಕಾರ್ಮಿಕರಿಗೂ ಇ.ಎಸ್.ಐ ಇಲ್ಲ, ಯಾವುದೇ ರೀತಿಯ ಆರೋಗ್ಯ ವಿಮೆ ಎಲ್ಲ ಅಥವಾ ಕನಿಷ್ಟ ಪಕ್ಷ ಮೂಲಭೂತ ಸೌಕರ್ಯಗಳು ಸಹ ಇಲ್ಲ. ಕೆಲಸ ಮಾಡುತ್ತಾ ಗಾಯವಾದರೂ ಸ್ವಂತ ಖರ್ಚಿನಲ್ಲಿ ಅವರೇ ಚಿಕಿತ್ಸೆ ಪಡೆಯಬೇಕು. ಸೋಂಕಿನ ಮುಂಚೆಯೂ, ತಲೆಮಾರುಗಳಿಂದ ನಡೆದಿರುವ ಕಾರ್ಮಿಕರ ಆರೋಗ್ಯದ ನಿರ್ಲಕ್ಷ್ಯದ ಈ ಧೋರಣೆ ಈಗಲೂ ಮುಂದುವರೆದಿದೆ. ಚಿತಾಗಾರದಲ್ಲಾಗಲಿ, ರುದ್ರಭೂಮಿಗಳಲ್ಲಾಗಲಿ ಸರ್ಕಾರದಿಂದ ಅಥವಾ ಅವರ ಖಾಸಗಿ ಮಾಲೀಕರಿಂದ ಅವರಿಗೆ ಪಿ.ಪಿ.ಇ ಕಿಟ್ ನೀಡಲಾಗಿಲ್ಲ.  ಮೃತದೇಹಗಳನ್ನು ಮುಟ್ಟಿದ ನಂತರ ಬಳಸಲು ಸ್ಯಾನಿಟೈಜರ್ ಅಥವಾ ಸೋಪ್ ಸಹ ಅವರಿಗೆ ನೀಡಿಲ್ಲ. ಕನಿಷ್ಠ ಪಕ್ಷ ಕೋವಿಡ್ ಪರೀಕ್ಷೆ ಸಹ ಎಲ್ಲಾ ಕಾರ್ಮಿಕರಿಗೆ ಮಾಡಿಲ್ಲ. ಸ್ಮಶಾನಗಳಲ್ಲಿ ಕಾರ್ಮಿಕರ ಹಿತರಕ್ಷಣೆಗಾಗಿ ಡಬ್ಲ್ಯೂಹೆಚ್‌ಓ ಅಥವಾ ಸರ್ಕಾರದ ಯಾವುದೇ ನಿಯಮಾವಳಿಗಳನ್ನು ಇಲ್ಲಿ ಪಾಲಿಸಲಾಗುತಿಲ್ಲ.

ಇದನ್ನು ಓದಿ: “ಬದುಕಿನ ಹಕ್ಕು” ಆದ್ಯತೆಯಾಗಬೇಕು

ಬಹಳಷ್ಟು ಜನ ಕಾರ್ಮಿಕರು, ಅದರಲ್ಲೂ ರುದ್ರಭೂಮಿ ಕಾರ್ಮಿಕರು ಅಲ್ಲಿಯೇ ವಾಸಿಸುತ್ತಾರೆ. ಅವರ ವಸತಿ ಸೌಕರ್ಯ ಬಹಳ ಅಮಾನವೀಯವಾಗಿದೆ. ಈಗ ಕೋವಿಡ್ ಸಾವುಗಳು ಅತಿ ಹೆಚ್ಚಾಗಿದ್ದು ವಿದ್ಯುತ್ ಚಿತಾಗಾರದಲ್ಲಿ ಕೆಲಸ ಮಾಡುವ ಕಾರ್ಮಿಕರು ಸಹ ಹಲವು ದಿವಸಗಳ ಕಾಲ  ಚಿತಾಗಾರದಲ್ಲಿಯೇ ವಾಸಿಸುತ್ತಿದ್ದಾರೆ. ಕೆಲವು ರುದ್ರಭೂಮಿಗಳಲ್ಲಿ ಕಾರ್ಮಿಕರಿಗೆ ಶೌಚಾಲಯ ಸಹ ಇಲ್ಲ. ಮಹಿಳೆಯರು ಸಹ ಬಯಲಿಗೆ ಹೋಗಬೇಕಾಗಿದೆ. ನೀರು ಸಹ ಅವರೇ ಹಣ ನೀಡಿ ಕೊಳ್ಳಬೇಕಾಗಿದೆ. ಚಿತಾಗಾರಗಳಲ್ಲಿ ಗೋಣಿಚೀಲಗಳ ಮೇಲೆ ಮಲುಗುತಿದ್ದಾರೆ. ರುದ್ರಭೂಮಿಯೊಂದರಲ್ಲಿ ಕಾರ್ಮಿಕರ ಮನೆ, ಮೃತದೇಹಗಳನ್ನು ಆಗ ತಾನೇ ಮಣ್ಣು ಮಾಡಿರುವ ದೇಹಗಳನ್ನು ಇಡುವ ಸ್ಥಳದ ಪಕ್ಕದಲ್ಲಿಯೇ ಇದೆ. ಅವರ ಆರೋಗ್ಯಕ್ಕೆ ತೀವ್ರ ಅಪಾಯಾಕಾರಿಯಾಗಿದೆ. ಸ್ಮಶಾನದ ಗೋಡೆಗಳ ಒಳಗೆ ವಾಸಿಸುವ ಈ ಕಾರ್ಮಿಕರ ಸಂಕಷ್ಟ ನಗರದ ಯಾರಿಗೂ ಕಾಣದಂತಾಗಿದೆ.

ಕಾರ್ಮಿಕರು ತಮ್ಮ ಮಕ್ಕಳನ್ನಾದರೂ ಓದಿಸಿ ಈ ಜಾತಿ ವ್ಯವಸ್ಥೆಯಿಂದ ಬಂದಿರುವ ಅವರ ಈ ಕೆಲಸದಿಂದ ಪಾರು ಮಾಡಿಸಬೇಕೆಂದು ಕಾರ್ಮಿಕರು ಆಶಿಸುತ್ತಾರೆ. ಕಾರ್ಮಿಕರಿಂದ ಕಿತ್ತುಕೊಳ್ಳಲಾದ ಘನತೆ, ವೇತನ, ಕನಸು-ಇವೆಲ್ಲವಕ್ಕೂ ಪರಿಹರಿಸಬೇಕಾಗಿದೆ. ಇದು ಸರ್ಕಾರ, ಧಾರ್ಮಿಕ ಸಂಸ್ಥೆಗಳು ಹಾಗು ನಗರದ ಎಲ್ಲರ ಜವಾಬ್ದಾರಿಯಾಗಿದೆ. ಇವರ ಕೆಲಸಗಳ ಬಗ್ಗೆ, ಅವರ ವಾಸಸ್ಥಿತಿಯ ಬಗ್ಗೆ ತನಿಖೆಯಾಗಿ, ಅವರ ಕಲ್ಯಾಣಕ್ಕಾಗಿ ತಕ್ಷಣದ ಕ್ರಮಗಳು ತೆಗೆದುಕೊಳ್ಳಬೇಕಾಗಿದೆ.

ಸಮಿತಿಯು ಸೂಚಿಸಿದ ಶಿಫಾರಸ್ಸುಗಳು

1) ಎಲ್ಲಾ ಕಾರ್ಮಿಕರಿಗೂ ಪಿಪಿಇ ಕಿಟ್ (ಒಂದೊಂದು ದಹನ / ಗೋರಿ ಅಗಿಯುವುದಕ್ಕೆ ಪ್ರತ್ಯೇಕ ಪಿಪಿಇ ಕಿಟ್), ಮಾಸ್ಕ್, ಗ್ಲೌವ್ಸ್, ಸ್ಯಾನಿಟೈಜರ್, ಬ್ಲೀಚಿಂಗ್ ಪೌಡರ್/ಹೈಪೋಕ್ಲೋರೇಟ್ ಸೊಲ್ಯೂಶನ್ ನೀಡಬೇಕು.

2) ಎಲ್ಲಾ ಕಾರ್ಮಿಕರಿಗೆ ನಿಯಮಾವಳಿಗಳ ಪ್ರಕಾರ ಉಚಿತ ಕೋವಿಡ್ ಪರೀಕ್ಷೆ ಆಗಬೇಕು. ಇದು ಬಿಬಿಎಂಪಿ ಅಥವಾ ಖಾಸಗಿ ಧಾರ್ಮಿಕ ಸಂಸ್ಥೆಗಳಿಂದ ಆಗಬೇಕು

3) ಎಲ್ಲಾ ಕಾರ್ಮಿಕರಿಗೂ ಹಾಗು ಅವರ ಕುಟುಂಬಸ್ಥರಿಗೂ ಆದ್ಯತೆ ಮೇರೆಗೆ ಉಚಿತ ಲಸಿಕೆ ಕೂಡಲೇ ನೀಡಬೇಕು.

4) ನಿಯಮಾವಳಿಗಳ ಪ್ರಕಾರ ಪ್ರತಿ ರುದ್ರಭೂಮಿ/ಚಿತಾಗಾರವನ್ನು ದಿನವೂ ಸ್ಯಾನಿಟೈಜ್ ಮಾಡಬೇಕು ಹಾಗು ಕಾರ್ಮಿಕರು ವಾಸವಿರುವ ಮನೆಗಳನ್ನು ಸಹ ಸ್ಯಾನಿಟೈಜ್ ಮಾಡಬೇಕು.

5) ಬಿಬಿಎಂಪಿ ಹಾಗೂ ಖಾಸಗಿ ಧಾರ್ಮಿಕ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಕಾರ್ಮಿಕರನ್ನು ಖಾಯಂಗೊಳಿಸಬೇಕು. ಅವರ ಜೀವನೋಪಾಯವನ್ನು ರಕ್ಷಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

6) ಈ ತಕ್ಷಣಕ್ಕೆ ಎಲ್ಲಾ ಕಾರ್ಮಿಕರಿಗೆ ರೂ.13,132ಗಳ ತಿಂಗಳಿಗೆ ವೇತನ ನೀಡಬೇಕು, ತಿಂಗಳಿನ 7ನೇ ತಾರೀಖಿನೊಳಗೆ ನೀಡಬೇಕು, ಎಲ್ಲರಿಗೂ  ವೇತನ ಚೀಟಿ ನೀಡಬೇಕು. ಇದಲ್ಲದೆ, ಅವರ ವೇತನವನ್ನು ಪರಿಷ್ಕರಿಸಿ ಅವರಿಗೆ ನ್ಯಾಯಯುತವಾದ ವೇತನ ನೀಡಬೇಕು. ಎಲ್ಲರಿಗೂ ಗುರುತಿನ ಚೀಟಿ, ಇ.ಎಸ್.ಐ ಹಾಗು ಪಿ.ಎಫ್. ಜಾರಿ ಮಾಡಬೇಕು. ವೇತನ ನೇರ ಅವರ ಬ್ಯಾಂಕಿನ ಖಾತೆಗೆ ಪಾವತಿಸುವಂತೆಯಾಗಬೇಕು. ಯಾರಿಗೆಲ್ಲ ಬ್ಯಾಂಕ್‌ ಖಾತೆ ಇಲ್ಲವೂ ಅವರಿಗೆ ಬ್ಯಾಂಕ್‌ ಖಾತೆಯನ್ನು ತೆರೆಯಬೇಕು. ಖಾಸಗಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರಿಗೂ, ಬಿಬಿಎಂಪಿ ನೌಕರರಿಗೆ ಸಿಗುವ ಸೌಲಭ್ಯ ಹಾಗು ಕನಿಷ್ಟ ವೇತನ ಹಾಗು ಎಲ್ಲ ಸೌಲಭ್ಯಗಳು ಸಿಗುವ ಹಾಗೆ ಕ್ರಮಕೈಗೊಳ್ಳಬೇಕು.

7) ಕೆಲಸ ಅತೀ ಒತ್ತಡ ಹೆಚ್ಚಾಗಿ ಎಲ್ಲಾ ಕಾರ್ಮಿಕರು ಓವರ್ ಟೈಮ್ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ವೇತನ ಹಾಗು ಪರಿಹಾರ ನೀಡಬೇಕು.

8) ಪ್ರತಿ ದಿವಸ ಅವರ ಜೀವಕ್ಕೆ ಇರುವ ಅಪಾಯ ಲೆಕ್ಕಿಸದೆ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಹೆಚ್ಚುವತಿ ಗೌರವಧನ ನೀಡುವಂತೆ ರಾಜ್ಯ ಸರ್ಕಾರ ಹಾಗು ಬಿಬಿಎಂಪಿ ಕ್ರಮ ತೆಗೆದುಕೊಳ್ಳಬೇಕು.

9) ಸಾಮಾಜಿಕ ಭದ್ರತೆಗಳಾದ ವಿಮೆ, ಗ್ರಾಟ್ಯೂಟಿ, ಪಿಂಚಣಿ, ಬೋನಸ್ – ಕಾನೂನಿನ ಪ್ರಕಾರ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಬೇಕು.

10) ಕೇಂದ್ರ ಸರ್ಕಾರದ  50 ಲಕ್ಷ ವಿಮಾ ಯೋಜನೆಗೆ ಇವರನ್ನು ಸಹ ಫಲಾನುಭವಿಗಳಾಗಿ ಮಾಡಬೇಕು.

11) ಸ್ಮಶಾನದಲ್ಲಿ ವಾಸಮಾಡುತ್ತಿರುವ ಕಾರ್ಮಿಕರಿಗೆ ಬಿಬಿಎಂಪಿ ವಸತಿ ಸೌಕರ್ಯ (ಕ್ವಾರ್ಟರ್ಸ್ ) ನೀಡಬೇಕು.

12) ಸ್ಮಶಾನ ಕಾರ್ಮಿಕರ ಜೀವನ ಹಾಗು ಜೀವನೋಪಾಯದ ಕುರಿತು ಸಮಗ್ರ  ಸುಧಾರಣೆಗೆ  ಸರ್ಕಾರ ಸಮಿತಿಯೊಂದನ್ನು ರಚಿಸಬೇಕು. ಈ ಕೆಲಸವು ಜಾತಿ ಆಧಾರಿತವೆಂದು ಗುರುತಿಸಬೇಕು. ಕಾರ್ಮಿಕರಿಗೆ ಬೇಕಾದಲ್ಲಿ ಪುನರ್ವಸತಿ, ಅವರ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಹಾಗು ಉದ್ಯೋಗ – ಇವುಗಳನ್ನು ಕಲ್ಪಿಸುವುದರ ಬಗ್ಗೆ ಚಿಂತಿಸಬೇಕು. ಎಲ್ಲಾ ಕಾರ್ಮಿಕರಿಗೂ ಘನತೆ, ಆರೋಗ್ಯ ಹಾಗು ನ್ಯಾಯಯುತ ವೇತನ ನೀಡುವಂತೆ ಹಾಗು ಜಾತಿ ಆಧಾರಿತ ಪದ್ದತಿಯಿಂದ ಪಾರಾಗುವಂತೆ ಶಿಫಾರಸ್ಸುಗಳನ್ನು ನೀಡಬೇಕು.

ಇಷ್ಟು ತಲೆಮಾರುಗಳು ಅವರಿಂದ ಕಿತ್ತುಕೊಂಡ ವೇತನ, ಘನೆತೆಗೆ ಪರಿಹಾರದ ಬಗ್ಗೆ ಶಿಫಾರಸ್ಸು ನೀಡಬೇಕು. ಈ ಇಡೀ ವ್ಯವಸ್ಥೆಯ ಕೂಲಂಕುಷ ಪರೀಕ್ಷೆ ಮಾಡಿ ಇದನ್ನು, ಇಡೀ ವ್ಯವಸ್ಥೆಯನ್ನು ಮಾನವೀಯ ವ್ಯವಸ್ಥೆಯ್ನನ್ನಾಗಿಸಲು ಶಿಫಾರಸ್ಸುಗಳನ್ನು ನೀಡಬೇಕು . ಈ ಸಮಿತಿಯಲ್ಲಿ ಸಮಾಜ ಕಲ್ಯಾಣ  ಇಲಾಖೆ, ಕಾರ್ಮಿಕ ಇಲಾಖೆ, ಆರೋಗ್ಯ ಇಲಾಖೆಗಳ ಪ್ರತಿನಿಧಿಗಳು ಕಡ್ಡಾಯವಾಗಿರಬೇಕು. ಎಂದು ಅಧ್ಯಾಯನವನ್ನು ನಡೆಸಿದ ಸಮಿತಿಯು ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *