ಎಚ್.ಆರ್. ನವೀನ್ ಕುಮಾರ್, ಹಾಸನ
ಈ ಅಭಿಯಾನದ ಭಾಗವಾಗಿ ಮತ್ತೆ ಚಿರಸ್ಮರಣೆಯನ್ನು ಕೈಗೆತ್ತಿಕೊಂಡಾಗ ನನ್ನ ಪ್ರೌಢಶಾಲಾದಿನಗಳಲ್ಲಿ ನಾನು ಮೊದಲು ಓದಿದ ‘ಚಿರಸ್ಮರಣೆ’ಯನ್ನೇ ಮತ್ತೆ ಮತ್ತೆ ನೆನೆಪಿಸುವಂತಿತ್ತು. ಮಾತ್ರವಲ್ಲ ಎಲ್ಲಿಯೂ ಒಮ್ಮೆ ಓದಿದ್ದೇನಲ್ಲಾ ಎನ್ನುವ ಬೇಸರ ಬರದೆ, ಮೊದಲಿಂದ ಕೊನೆಯವರೆಗೂ ಇಡೀ ಕಯ್ಯೂರಿನ ರೈತ ಹೋರಾಟಗಾರರ ನಡುವೆ ನನ್ನನ್ನು ಕೈಹಿಡಿದು ನಡೆಸಿದ ಅನುಭವವಾಯಿತು.
ಕೇರಳದ ಕಾಸರಗೋಡು ಜಿಲ್ಲೆಯ ಕಯ್ಯೂರಿನಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಮಹತ್ತರ ರೈತ ಚಳುವಳಿಯ ಕುರಿತು ನಿರಂಜನರು ರಚಿಸಿರುವ ಕಾದಂಬರಿಯೇ ‘ಚಿರಸ್ಮರಣೆ’. ಭೂರಹಿತರು, ಗೇಣಿದಾರರು ತಮ್ಮ ಶೋಷಣೆಗೆ ಕಾರಣವಾದ ಭೂಮಾಲಿಕರ ವಿರುದ್ಧ ಮತ್ತು ಈ ಭೂಮಾಲಿಕರಿಗೆ ಬೆಂಬಲವಾಗಿ ನಿಂತಿದ್ದ ದೇಶದ ಶೋಷಣೆಗೆ ಕಾರಣವಾದ ಬ್ರಿಟೀಷ್ ಸಾಮ್ರಾಜ್ಯಶಾಹಿಗಳ ವಿರುದ್ಧ ಏಕಕಾಲದಲ್ಲಿ ಒಂದು ಹಳ್ಳಿಯಲ್ಲಿ ರೈತ ಸಂಘವನ್ನು ಕಟ್ಟುವ ಮೂಲಕ ರಾಜ್ಯದ ಮತ್ತು ದೇಶದ ಗಮನವನ್ನು ಸೆಳೆದ, ನಾಲ್ವರು ಹುತಾತ್ಮರಾದ ಕಯ್ಯೂರು ರೈತರ ವೀರಗಾಥೆಯನ್ನು ನಿರಂಜನರು ತಮ್ಮ ಸೃಜನಶೀಲ ಬರವಣೆಗೆಯಲ್ಲಿ ಹಿಡಿದಿಟ್ಟು ಅದಕ್ಕೊಂದು ಕಥನ ರೂಪವನ್ನು ನೀಡಿದ್ದಾರೆ. ಈ ಘಟನೆ ಇತಿಹಾಸವಾದರೂ ಅದು ಎಲ್ಲರ ಮನಗಳಲ್ಲಿ ಮೊಳಕೆಯೊಡೆದು ಇಂದಿಗೂ ಹೆಮ್ಮರವಾಗಿ ಬೆಳೆಯುವಂತೆ ಮಾಡುವಲ್ಲಿ ಈ ಕೃತಿ ಮಹತ್ವದ ಪಾತ್ರವನ್ನು ವಹಿಸಿದೆ. ಚಿರಸ್ಮರಣೆ
‘ಕೋಶ ಓದು – ದೇಶ ನೋಡು’ ಬಳಗದಿಂದ ಪ್ರತೀವರ್ಷ ಲೇಖಕರೋರ್ವರ ಕೃತಿಗಳನ್ನು ಆಯ್ಕೆ ಮಾಡಿಕೊಂಡು ಒಂದು ನಿರ್ಧಿಷ್ಟ ಸಮಯದಲ್ಲಿ ಎಲ್ಲರೂ ಆಂದೋಲನದ ರೂಪದಲ್ಲಿ ಓದಿ, ನಂತರ ಓದಿದ ಕೃತಿಗೆ ಸಂಬಂಧಿಸಿದ ಸ್ಥಳಕ್ಕೆ ಭೇಟಿಕೊಟ್ಟು ಅದನ್ನು ಮತ್ತಷ್ಟು ಮನನ ಮಾಡಿಕೊಳ್ಳುವ ಮತ್ತು ಅಂತಿಮವಾಗಿ ಓದು ಅಭಿಯಾನದ ಸಮಾರೋಪದಲ್ಲಿ ಓದಿದ ಕೃತಿಗಳ ಪ್ರಸ್ತುತತೆ ಮತ್ತು ಅದರ ವಿವಿಧ ಆಯಾಮಗಳ ಕುರಿತು ಚರ್ಚಿಸಿ, ನಮ್ಮ ಅರಿವನ್ನು ಹೆಚ್ಚಿಸಿಕೊಳ್ಳುವ ಮೂಲಕ ಸ್ಪಷ್ಟತೆ ಪಡೆದುಕೊಳ್ಳುವುದು ಅರಿವಿನ ಪಯಣದ ಉದ್ದೇಶ. ಈ ಪಯಣ 2017 ರಲ್ಲಿ ಆರಂಭವಾದದ್ದೇ ನಿರಂಜನರ ‘ಚಿರಸ್ಮರಣೆ ಓದೋಣ ಕಯ್ಯೂರಿಗೆ ಹೋಗೋಣ’ ಎಂಬುದರ ಮೂಲಕ. ಅಲ್ಲಿಂದ ಇಲ್ಲಿಯವರೆಗೆ ಕುಶವಂತ್‌ಸಿಂಗ್‌ರ ‘ಟ್ರೈನ್ ಟು ಪಾಕಿಸ್ತಾನ್’, ಸದತ್ ಹಸನ್ ಮಾಂಟೋನ ‘ವಿಭಜನೆಯ ಕಥೆಗಳು’, ಶಿವರಾಮ ಕಾರಂತರ ‘ಚೋಮನದುಡಿ’, ಗಿರೀಶ್ ಕಾರ್ನಾಡರ ನಾಟಕಗಳು, ತೇಜಸ್ವಿಯವರ ‘ಚಿದಂಬರ ರಹಸ್ಯ’ ‘ಕರ್ವಾಲೋ’ ಕೃತಿಗಳನ್ನು ಅಭಿಯಾನದ ಭಾಗವಾಗಿ ಓದಲಾಗಿದೆ. 2024 ನಿರಂಜನರ (ಕುಳಕುಂದ ಶಿವರಾಯ) ಜನ್ಮಶತಮಾನೋತ್ಸವ ಆಗಿರುವ ಕಾರಣ ಮತ್ತೆ ನಿರಂಜನರ ಕೃತಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಹೊಸತಲೆಮಾರಿನ ಅನೇಕರು ಜೊತೆಯಾಗಿದ್ದಾರೆ. ಇದರಲ್ಲಿ ‘ಚಿರಸ್ಮರಣೆ’, ನಿರಂಜನರು ಅನುವಾದಿಸಿದ ಮಕ್ಸೀಂ ಗೋರ್ಕಿಯವರ ‘ತಾಯಿ’, ನಿರಂಜನರ ಆಯ್ದ ಸಣ್ಣಕಥೆಗಳು, ಮೃತ್ಯಂಜಯ ಹೀಗೆ…
ಈ ಅಭಿಯಾನದ ಭಾಗವಾಗಿ ಮತ್ತೆ ಚಿರಸ್ಮರಣೆಯನ್ನು ಕೈಗೆತ್ತಿಕೊಂಡಾಗ ನನ್ನ ಪ್ರೌಢಶಾಲಾದಿನಗಳಲ್ಲಿ ನಾನು ಮೊದಲು ಓದಿದ ‘ಚಿರಸ್ಮರಣೆ’ಯನ್ನೇ ಮತ್ತೆ ಮತ್ತೆ ನೆನೆಪಿಸುವಂತಿತ್ತು. ಮಾತ್ರವಲ್ಲ ಎಲ್ಲಿಯೂ ಒಮ್ಮೆ ಓದಿದ್ದೇನಲ್ಲಾ ಎನ್ನುವ ಬೇಸರ ಬರದೆ, ಮೊದಲಿಂದ ಕೊನೆಯವರೆಗೂ ಇಡೀ ಕಯ್ಯೂರಿನ ರೈತ ಹೋರಾಟಗಾರರ ನಡುವೆ ನನ್ನನ್ನು ಕೈಹಿಡಿದು ನಡೆಸಿದ ಅನುಭವವಾಯಿತು. 1943 ರ ಸುತ್ತಮುತ್ತ ನಡೆದ ಘಟನೆಯಾದರೂ ಈ ಕೃತಿ ಇಂದಿಗೂ ಓದಿದ ಎಲ್ಲರನ್ನೂ ತಲ್ಲಣಗೊಳಿಸುತ್ತಿರುವ, ಸಮಾಜದ ಕುರಿತು, ಶೋಷಣೆಯ ಕುರಿತು ಚಿಂತನೆಗೆ ಹಚ್ಚುತ್ತಿರಲು ಪ್ರಮುಖ ಕಾರಣವೇನೆಂದರೆ, ಅಂದು ಕಯ್ಯೂರಿನ ರೈತರು ತಮ್ಮ ರೈತ ಸಂಘದ ಮೂಲಕ ಎತ್ತಿದ ಪ್ರಶ್ನೆಗಳು ಇಂದಿಗೂ ನಮ್ಮೆಲ್ಲರ ನಡುವೆ ಜೀವಂತವಾಗಿರುವುದಕ್ಕಾಗಿ. ಅಂದು ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಹಳ್ಳಿಗಳಲ್ಲಿ ನಂಬೂದರಿ, ನಂಬಿಯಾರ್ ಅಂತಹ ಪಾಳೆಗಾರಿ ಜಮೀನ್ದಾರರುಗಳು ಇದ್ದು ಜನರನ್ನು ಶೋಷಣೆ ಮಾಡುತ್ತಿದ್ದರು. ಆದರೆ ಈಗ ಒಂದು ಕಂಪನಿಯ ಜಾಗದಲ್ಲಿ ನೂರಾರು ಕಾರ್ಪೋರೇಟ್ ಕಂಪನಿಗಳು, ದೇಶೀಯ ಆಳುವವರ್ಗ ದುಡಿಯುವ ಜನರನ್ನು ಕಿತ್ತುತಿನ್ನುತ್ತಿವೆ. ಹಾಗಾಗಿ ಈ ಕೃತಿ ಎಲ್ಲರಿಗೂ ಹೆಚ್ಚು ಆಪ್ತವಾಗಿ ನಮ್ಮದೇ ಬದುಕಿನ ಬವಣೆಗಳನ್ನು ಕಯ್ಯೂರು ರೈತರ ಮೂಲಕ ನೋಡಲಾಗುತ್ತಿದೆ ಎಂದು ಬಾಸವಾಗಿತ್ತದೆ.
ಪಾಳೆಗಾರಿ ವ್ಯವಸ್ಥೆಯ ಅಡಿಯಲ್ಲಿದ್ದ ಕಯ್ಯೂರು ಎಂಬ ಒಂದು ಕುಗ್ರಾಮದಲ್ಲಿ ಅಲ್ಲಿನ ಶಾಲೆಗೆ ಕಲಿಸಲು ಬರುವ ಮಾಸ್ತರು, ಮಕ್ಕಳಿಗೆ ಅಕ್ಷರಾಭ್ಯಾಸದ ಜೊತೆಗೆ ಅವರ ಬದುಕು ಮತ್ತು ಸಮಾಜದ ಅಭ್ಯಾಸವನ್ನೂ ನಡೆಸಿ ರೈತರ ಇಂದಿನ ಸ್ಥಿತಿಗೆ ಕಾರಣಗಳೇನು? ಮತ್ತು ಈ ಎಲ್ಲಾ ಸಂಕಷ್ಟಕ್ಕೆ ಯಾರು ಹೊಣೆ? ಈ ಸಂಕಷ್ಟಗಳ ಸಂಕೋಲೆಗಳನ್ನು ಕಳಚಲು ನಮಗಿರುವ ದಾರಿ ಯಾವುದು? ಎಂಬುದನ್ನು ಅರ್ಥ ಮಾಡಿಸಲು ಪ್ರಯತ್ನಿಸುತ್ತಾರೆ. ಇದು ಕೇವಲ ತಿಳುವಳಿಕೆ ಪಡೆಯುವ ಹಂತಕ್ಕೆ ಮಾತ್ರ ನಿಲ್ಲದೆ, ಅದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ಊರಿನಲ್ಲಿ ರಾತ್ರಿ ಶಾಲೆಯನ್ನು ಆರಂಭಿಸಿ ಎಲ್ಲರಿಗೂ ಜಾಗೃತಿ ಮೂಡಿಸಿ, ರೈತ ಸಂಘವನ್ನು ಕಟ್ಟಿ, ಆ ಮೂಲಕ ತಮ್ಮ ಹಕ್ಕುಗಳನ್ನು ಪಡೆಯುವ ಪಯಣದಲ್ಲಿ ಬರುವ ಎಲ್ಲ ಕಷ್ಟ, ನಷ್ಟ, ಸುಖ-ದುಃಖ, ಸಂಬಂಧಗಳು, ಅದರ ಜೊತೆಗೆ ಹೆಣೆದುಕೊಂಡ ಭಾವನೆಗಳು ಇವೆಲ್ಲವನ್ನು ಅಚ್ಚುಕಟ್ಟಾಗಿ ಪೋಣಿಸಿ ನಿರಂಜನರು ‘ಚಿರಸ್ಮರಣೆ’ಯನ್ನಾಗಿಸಿ ನಮಗೆ ಬಿಟ್ಟುಹೋಗಿದ್ದಾರೆ.
ಮಾಸ್ತರರ ಮಾರ್ಗದರ್ಶನದಲ್ಲಿ ಅಪ್ಪು, ಚಿರುಕಂಡರ ಮೂಲಕ ಆರಂಭವಾದ ಈ ಐತಿಹಾಸಿಕ ಕಥನ ನಮ್ಮನ್ನು ಸಂಪೂರ್ಣ ಹಿಡಿದಿಡುತ್ತದೆ. ಇಡೀ ಕಾದಂಬರಿ ಕಯ್ಯೂರಿನ ವಾಸ್ತವ ಸ್ಥಿತಿ, ಆಳುವ ವರ್ಗದ ಆಲೋಚನೆ, ರೈತ ಚಳುವಳಿ, ಅದಕ್ಕೆದುರಾಗಿ ಜಮೀನ್ದಾರರ ಕುತಂತ್ರ, ಇವೆಲ್ಲವಕ್ಕೂ ಒಂದು ಸೈದ್ಧಾಂತಿಕ ತಳಹದಿಯನ್ನು ರೂಪಿಸಿಕೊಳ್ಳುತ್ತಾ ಮುಂದುವರೆಯುವ ಕೆಂಬಾವುಟದ ಚಳುವಳಿ ಓದುಗರ ಎದೆಯಲ್ಲಿ ಕ್ರಾಂತಿಯ ಕಿಡಿಯನ್ನು ಹೊತ್ತಿಸುತ್ತದೆ. ನಿರಂಜನರ ಬರಹದ ಶಕ್ತಿ ಅಡಗಿರುವುದು ಇಲ್ಲಿಯೇ ಅವರು ಎಲ್ಲವನ್ನು ಹೇಳುತ್ತಾ ಇಡೀ ಸಮಾಜಕ್ಕೆ ಅಂಟಿರುವ ಅನಿಷ್ಟಗಳ ಬಗ್ಗೆಯೂ ಕಾದಂಬರಿಯ ಪಾತ್ರಗಳ ಮೂಲಕ ಮಾತನಾಡಿಸುತ್ತಾರೆ. ಅವುಗಳಲ್ಲಿ ಕೆಲವನ್ನು ನೋಡಿದರೆ ನಮಗೆ ಸ್ಪಷ್ಟವಾಗುತ್ತದೆ.
ಇದನ್ನೂ ಓದಿ : ನಿರಂಜನ – 99 : ಚಿರಸ್ಮರಣೆಯ ಚಿರಸ್ಮರಣೀಯ ಸಾಹಿತಿ
ಮಾಸ್ತರರು ಅಪ್ಪು ಮತ್ತು ಚಿರುಕಂಡರಿಗೆ ಪಂಡಿತರನ್ನು ಪರಿಚಯಿಸುವಾಗ “ಪಂಡಿತರು ಅಂದರೆ, ತಿಳಿದೋರು ಅಂತ ಅಲ್ವಾ? ಔಷಧಿ ಕೊಡೋರು ಅಂದರೂ ತಪ್ಪೇನೂ ಅಲ್ಲ. ಆದರೆ ಇವರು ಔಷಧಿ ಕೊಡೋದು ಮನುಷ್ಯನ ಕಾಯಿಲೆಗಲ್ಲ – ಸಮಾಜದ ಕಾಯಿಲೆಗೆ! ಅರ್ಥವಾಯ್ತೇನ್ರೋ?” ಮುಂದುವರೆದು “ಹೂನಪ್ಪಾ. ಪತ್ರಿಕೆ ಪುಸ್ತಕ ಎರಡೂ ಓದಬೇಕು. ಓದಿದಷ್ಟೂ ಜ್ಞಾನ ಹೆಚ್ಚಾಗುತ್ತದೆ; ಓದ್ತಾ ಓದ್ತಾ ವಿಚಾರಮಾಡ್ಬೇಕು. ಇದು ಸರಿಯೇ? ಅಂತ. ಸರಿಯಾಗಿದ್ದರೆ, ಯಾಕೆ ಸರಿ? ಅಥವಾ ತಪ್ಪೂಂತ ತೋರಿದರೆ ಯಾಕೆ ತಪ್ಪು? ಅನ್ನೋದನ್ನೆಲ್ಲಾ ಯೋಚಿಸ್ಬೇಕು.” ಪಂಡಿತರ ಮಾತುಗಳು ಮುಂದುವರೆದವು ಮಾತೆಲ್ಲಾ ಮುಗಿದ ಮೇಲೆ ಚಿರುಕಂಡನಿಗೆ ಸ್ಪಷ್ಟವಾದುದೊಂದೇ – “ಜನರು ಕಷ್ಟದಲ್ಲಿದ್ದಾರೆ. ಜನರಿಗೆ ಅನ್ಯಾಯವಾಗಿದೆ. ನಾವು ಗುಲಾಮರು. ಪರಕೀಯರು ನಮ್ಮನ್ನು ಆಳುತ್ತಿದ್ದಾರೆ. ನಾವು ಹೋರಾಡಿ ಗುಲಾಮಗಿರಿಯಿಂದ ಮುಕ್ತರಾಗಬೇಕು.” “ದುಡಿಯುವ ಜನರೆಲ್ಲಾ ಒಂದಾದರೆ, ಸುಲಿಯುವ ಜನರೆಲ್ಲ ಸೋತು ಹೋಗ್ತಾರೆ. ನಮ್ಮನ್ನು ಬಿಗಿದಿರುವ ಬೇಡಿಗಳು ಪುಡಿಪುಡಿಯಾಗ್ತವೆ. ನಮ್ಮ ದೇಶದಲ್ಲಿ ಜನಕ್ರಾಂತಿ ಬೇರೆಯಲ್ಲ. ನಮ್ಮ ರೈತರೆಲ್ಲ ಎಚ್ಚರವಾಗ್ಬೇಕು, ಒಟ್ಟಾಗ್ಬೇಕು…. ಹಳ್ಳಿ ಹಳ್ಳಿಗಳಲ್ಲಿ ರೈತ ಸಂಘ ಸ್ಥಾಪಿಸಬೇಕು…..”
ಮಾಸ್ತರು ಶಾಲೆಯಲ್ಲಿ ಮಕ್ಕಳಿಗೆ ಕಲಿಸುತ್ತಿದ್ದ ಪಾಠವಾದರೂ ಎಂತಹದ್ದು ಮತ್ತು ಒಬ್ಬ ಮಾಸ್ತರು ಮನಸು ಮಾಡಿದರೆ ಸಮಾಜದಲ್ಲಿ ಎಂತಹ ಬದಲಾವಣೆಯನ್ನು ಮಾಡಬಹುದು ಎಂಬದಕ್ಕೆ ಇದೂ ಕೂಡ ಒಂದು ಉದಾಹರಣೆಯಾಗಿದೆ. ಒಂದು ಕಡೆ ಮಕ್ಕಳಿಗೆ ಹೀಗೆ ಹೇಳಿಕೊಡಲಾಗುತ್ತಿತ್ತು…
ನಮ್ಮನ್ನಾಳುವವರು ಯಾರು ?
ಪರಕೀಯರು.
ಅವರ ಊರು ಎಲ್ಲಿದೆ?
ಅದು ಸಾವಿರ ಮೈಲಿಗಳ ಆಚೆ.
ಆಳುವವರಿಗೆ ಏನೆನ್ನುತ್ತಾರೆ?
ರಾಜರು.
ಆಳಲ್ಪಡುವವರಿಗೆ ಏನನ್ನುತ್ತಾರೆ?
ಪ್ರಜೆಗಳು.
ಈ ಪುಟದಲ್ಲೇ ಕೆಳಗೊಂದು ಸಾಲಿತ್ತು;
“ಪರಕೀಯ ರಾಜರ ಪ್ರಜೆಗಳು ಗುಲಾಮರು”
“ಒಬ್ಬನ ಹತ್ತಿರ 600 ಎಕರೆ ಭೂಮಿ ಇದೆ. ಅದನ್ನು ೨೦೦ ಜನರಲ್ಲಿ ಸಮನಾಗಿ ಹಂಚಿದರೆ ಪ್ರತಿಯೊಬ್ಬನಿಗೂ ಸಿಗುವ ಹೊಲದ ವಿಸ್ತಾರವೆಷ್ಟು?” ಈ ರೀತಿಯ ಪಾಠಗಳು ಮಕ್ಕಳಲ್ಲಿ ಹೊಸ ಆಲೋಚನೆಗೆ ಎಡೆಮಾಡಿಕೊಟ್ಟವು.
ಕಯ್ಯೂರಿನಲ್ಲಿ ರೈತ ಸಂಘ ಸ್ಥಾಪಿಸಿದ ಮೇಲೆ ಎಲ್ಲರ ಆಲೋಚನೆಗಳು ಬದಲಾದವು. ಇದರಲ್ಲಿ ಮಾಸ್ತರು, ಅಪ್ಪು, ಚಿರುಕಂಡನ ನೇತೃತ್ವದಲ್ಲಿ ನಡೆಯುತ್ತಿದ್ದ ರಾತ್ರಿಶಾಲೆ ಕತ್ತಲೆಯಲ್ಲಿದ್ದ ಕಯ್ಯೂರಿಗೆ ಬೆಳಗಿನ ದೀವಟಿಗೆಯಾಗಿತ್ತು. ರೈತ ಸಂಘದ ಸಮ್ಮೇಳನವನ್ನು ಕಯ್ಯೂರಿನಲ್ಲೇ ಮಾಡಬೇಕೆಂದು ತೀರ್ಮಾನಿಸಿ ಅದಕ್ಕಾಗಿ ತಯಾರಿ ಆರಂಭಿಸಿದ ಸದಸ್ಯರು ಪ್ರತಿ ದಿನ ಕೆಂಬಾವುಟದ ನೇತೃತ್ವದಲ್ಲಿ ಸ್ವಯಂಸೇವಕರ ಪಥಸಂಚಲನವನ್ನು ನಡೆಸುತ್ತಿದ್ದರು. ಎಂದಿನಂತೆ ನಂಬಿಯಾರರ ಮನೆಯ ಮುಂದಿನಿಂದಲೂ ಮೆರವಣಿಗೆ ಸಾಗಿತು. ಅಲ್ಲಿಯೂ ಘೋಷಣೆಗಳು ದಪ್ಪಗಿನ ಗೋಡೆಗಳನ್ನು ಹಾದು ಒಳಹೊಕ್ಕವು: “ಇಂಕ್ವಿಲಾಬ್ ಜಿಂದಾಬಾದ್! ಕ್ರಾಂತಿಗೆ ಜಯವಾಗಲಿ! ಜಮೀನ್ದಾರಿ ಪದ್ಧತಿ ಅಳಿಯಲಿ! ಸಾಮ್ಯಾಜ್ಯಶಾಹಿ ನಾಶವಾಗಲಿ!.” ಈ ಘೋಷಣೆಗಳೇ ಚಳುವಳಿಯ ಪ್ರಧಾನ ಆಶಯಗಳಾಗಿದ್ದವು. ಇಲ್ಲಿ ಇವರು ‘ಭೂಮಿನೂ ಬೇಕು ಮತ್ತು ಸ್ವಾತಂತ್ರವೇನೋ ಬೇಕು’ ಎಂಬ ಎರಡು ಪ್ರಧಾನ ಬೇಡಿಕೆಗಳನ್ನು ಒಮ್ಮೆಲೆ ಎತ್ತಿದ್ದರು. ಇದು ಒಂದು ಕಡೆ ಬ್ರಿಟೀಷ್ ಸಾಮ್ರಾಜ್ಯಶಾಹಿಗಳಿಗೆ ಮತ್ತು ಸ್ಥಳೀಯ ಭೂಮಾಲಿಕರ ಕೆಂಗಣ್ಣಿಗೆ ಗುರಿಯಾಯಿತು.
ಈ ಚಳುವಳಿಯನ್ನು ಹತ್ತಿಕ್ಕುವ ಉದ್ದೇಶದಿಂದ ಆಳುವವರ ಪಿತೂರಿಯ ಭಾಗವಾಗಿ ಪೊಲೀಸ್ ಪೇದೆ ಆಕಸ್ಮಿಕವಾಗಿ ತೇಜಸ್ವಿನಿ ನದಿಯ ಪಾಲಾಗುತ್ತಾನೆ. ಇದನ್ನೇ ನೆಪವಾಗಿಟ್ಟುಕೊಂಡು ಪೊಲೀಸರು ಕೈಯ್ಯೂರಿನ ರೈತರು, ಮಹಿಳೆಯರು, ಮಕ್ಕಳು, ವೃದ್ಧರ ಮೇಲೆ ನಡೆಸುವ ಪೈಶಾಚಿಕ ದಾಳಿ, ಇಂದು ಚಳುವಳಿಗಳ ಮೇಲೆ ಆಳುವ ಪ್ರಭುತ್ವ ನಡೆಸುವ ದಾಳಿಯನ್ನು ನೆನಪಿಸುತ್ತದೆ. ಪ್ರಭುತ್ವ ತನ್ನ ಎದುರು ಯಾರೇ ಧನಿ ಎತ್ತಿದರೂ ಅದನ್ನು ಸಹಿಸುವುದಿಲ್ಲ. ಇತ್ತೀಚಿಗೆ ದೆಹಲಿಯಲ್ಲಿ ನಡೆದ ರೈತ ಹೋರಾಟದ ಮೇಲೆ ಪ್ರಭುತ್ವ ನಡೆಸಿದ ದಾಳಿಯನ್ನು ನೆನೆಯಿರಿ. ಕಯ್ಯೂರಿನ ರೈತರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಹೂಡಿ ೬೦ ಜನರನ್ನು ಬಂಧಿಸಲಾಗುತ್ತದೆ. ಆನಂತರ ನಡೆಯುವ ನ್ಯಾಯಾಲಯವೆಂಬ ವಿಚಾರಣಾ ನಾಟಕ, ಜೈಲುಗಳ ಸ್ಥಿತಿ ಇವುಗಳು ಕಾದಂಬರಿಯಲ್ಲಿ ಮನಮುಟ್ಟುವಂತೆ ಚಿತ್ರಿಸಲ್ಪಟ್ಟಿವೆ.
ಅಂತಿಮವಾಗಿ ಅಪ್ಪು, ಚಿರುಕಂಡ, ಕುಂಞಂಬು, ಅಬೂಬಕರ್ ಇವರುಗಳಿಗೆ ಮರಣದಂಡನೆ ಎಂದು ನ್ಯಾಯಾಲಯ ತೀರ್ಪಿತ್ತ ನಂತರ ಇವರುಗಳ ಅಂತಿಮ ಭೇಟಿಗೆಂದು ತಂದೆ, ತಾಯಿ, ಹೆಂಡತಿ, ಮಕ್ಕಳು ಮತ್ತು ಮಾಸ್ತರು ಇವರೊಂದಿಗೆ ಜೈಲಿನಲ್ಲಿ ನಡೆಸುವ ಮಾತುಕತೆ ಎಂತಹ ಕಲ್ಲು ಹೃದಯವನ್ನೂ ಕರಗಿಸಿ ಕಣ್ಣಲ್ಲಿ ನೀರು ಹನಿ ತೊಟ್ಟಿಕ್ಕುವಂತೆ ಮಾಡುತ್ತದೆ. ಈ ನಾಲ್ವರು ಹೋರಾಟಗಾರರನ್ನು ನೇಣಿಗೇರಿಸುವ ಮುನ್ನ ಜೈಲಿನ ಅಧಿಕಾರಿ ‘ನಿಮ್ಮ ಕೊನೆಯ ಆಸೆ ಏನು? ನಡೆಸಿಕೊಡುತ್ತೇವೆ’ ಎಂದು ಕೇಳಿದಾಗ “ಸಾಮ್ರಾಜ್ಯಶಾಹಿ ನಾಶವಾಗೋದನ್ನ ನೋಡಿ ಸಾಯಬೇಕು ಅಂತ ನಮ್ಮ ಆಸೆ, ನಡೆಸಿಕೊಡ್ತಿರಾ” ಎಂಬ ಈ ಮಾತು ಅವರಲ್ಲಿದ್ದ ಹೋರಾಟದ ಕಿಚ್ಚು ಮತ್ತು ಸೈದ್ಧಾಂತಿಕ ಸ್ಪಷ್ಟತೆಯನ್ನು ತೋರಿಸುತ್ತದೆ.
ನೇಣಿನ ಕುಣಿಕೆಗೆ ಕೊರಳೊಡ್ಡಿ, ನಗುನಗುತ್ತಾ ತಮ್ಮ ಪ್ರಾಣವನ್ನು ಅರ್ಪಿಸಿದ ಈ ಹುತಾತ್ಮರು ಕೊಟ್ಟ ಕೊನೆಯ ಘೋಷಣೆ “ಇಂಕ್ವಿಲಾಬ್ ಜಿಂದಾಬಾದ್, ಸಾಮ್ರಾಜ್ಯಶಾಹಿ ನಾಶವಾಗಲಿ, ಕ್ರಾಂತಿಗೆ ಜಯವಾಗಲಿ” ಈ ಆಶಯದ ಈಡೇರಿಕೆಗಾಗಿ ಈಗಲೂ ಕೋಟ್ಯಾಂತರ ಮನಸುಗಳು ತುಡಿಯುತ್ತಿವೆ. ಅದಕ್ಕಾಗಿ ದುಡಿಯುತ್ತಿವೆ. ನಿರಂಜನರ ಜನ್ಮಶತಮಾನೋತ್ಸವವನ್ನು ಆಚರಿಸುವ ಈ ಸಂದರ್ಭದಲ್ಲಿ ಅವರ ಕಥೆ, ಕಾದಂಬರಿಗಳ ಮೂಲಕ ಮೂಡಿ ಬಂದ ಪಾತ್ರಗಳ ಕನಸುಗಳನ್ನು ನನಸು ಮಾಡುವ, ಶೋಷಣಾ ರಹಿತ ಸಮಾಜದ ನಿರ್ಮಾಣದ ಕಡೆಗೆ ಎಲ್ಲರೂ ಒಟ್ಟಾಗಿ ಹೆಜ್ಜೆ ಹಾಕಬೇಕಿದೆ.