ಚಿಹ್ನೆ ಅದಲು ಬದಲು : ಅಭ್ಯರ್ಥಿಗಳು ಕಂಗಾಲು

ಬೆಂಗಳೂರು : ಕೋರೋನಾ ಸೋಂಕಿನ ನಡುವೆಯೂ ಇಂದು ಗ್ರಾಮ ಪಂಚಾಯಿತಿಯ ಮೊದಲನೇ ಹಂತದ ಮತದಾನ ನಡೆದಿದೆ. ಬೆಳಗ್ಗೆ 7 ಗಂಟೆಯಿಂದಲೇ ಮತ ಚಲಾಯಿಸಲು ಮತದಾರರು ಮತಗಟ್ಟೆಗಳಿಗೆ ಬಂದು ಹೋಗುತ್ತಿದ್ದಾರೆ. ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇದರ ನಡುವೆಯೇ ಕೆಲ ಭಾಗದ ಗ್ರಾಮ ಪಂಚಾಯಿತಿಗಳಲ್ಲಿ ಎಡವಟ್ಟುಗಳು ನಡೆದು ಹೋಗಿವೆ.

ಕಲುಬುರ್ಗಿ ಜಿಲ್ಲೆಯಲ್ಲಿ ಕಮಲಾಪುರ ತಾಲೂಕಿನ ಕಿಣ್ಣಿ ಸಡಕ್ ಗ್ರಾಮ ಪಂಚಾಯ್ತಿಯ 7ನೇ ವಾರ್ಡ್ ಮತಗಟ್ಟೆಯಲ್ಲಿ ಅಭ್ಯರ್ಥಿಗೆ ನೀಡಿದ್ದ ಚಿನ್ಹೆಯೇ ಬದಲಾಗಿದೆ. ಪರಿಶಿಷ್ಟ ಜಾತಿ ಸಾಮಾನ್ಯ ಸ್ಥಾನಕ್ಕೆ ಜಯರಾಜ ಎ ಹಲಗಿ ಎಂಬ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದರು. ಇವರಿಗೆ 145 ತುತ್ತೂರಿ ಚಿನ್ಹೆ ನೀಡಲಾಗಿತ್ತು. ಆದರೆ ತುತ್ತೂರಿ ಚಿನ್ಹೆ ಬದಲು 181 ಕಹಳೆ ಊದುತ್ತಿರುವ ಮನುಷ್ಯನ ಚಿನ್ಹೆ ಮುದ್ರಣವಾಗಿದೆ.

ಇದು ಮತದಾರರ ಗಮನಕ್ಕೆ ಬಂದಿರಲಿಲ್ಲ, ಅಭ್ಯರ್ಥಿ ಮತ ಹಾಕಲು ಹೋದಾಗ ಗಮನಿಸಿದ್ದು, ತಕ್ಷಣವೇ ಮತಗಟ್ಟೆ ಅಧಿಕಾರಿಯ ಗಮನಕ್ಕೆ ತಂದಿದ್ದಾರೆ. ತಕ್ಷಣಕ್ಕೆ  ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಚುನಾವಣಾಧಿಕಾರಿಗಳು ಮತದಾನವನ್ನು ಸ್ಥಗಿತಗೊಳಿಸಿದ್ದಾರೆ. ಅಷ್ಟೆ ಅಲ್ಲ ಚುನಾವಣಾಧಿಕಾರಿಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಬಳ್ಳಾರಿ ತಾಲ್ಲೂಕಿನ ಶಂಕರಬಂಡೆ ಗ್ರಾಮ ಪಂಚಾಯತಿ ಯ 7ನೇ ವಾರ್ಡ್ ನ ತೊಲಮಾಮಿಡಿ ಗ್ರಾಮದ ಅಭ್ಯರ್ಥಿ ಪದ್ಮಾವತಿ ಅವರಿಗೆ ನೀಡಲಾಗಿದ್ದ ಮಡಿಕೆ‌ ಚಿಹ್ನೆಯ‌ ಬದಲಿಗೆ ಮತಪತ್ರದಲ್ಲಿ ಸಿಲಿಂಡರ್ ಚಿಹ್ನೆ ಬಂದಿದ್ದು‌ ಅಭ್ಯರ್ಥಿ ಆಗ್ರಹದ ಮೇರೆಗೆ ಮತದಾನ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಚಿಹ್ನೆ ಬದಲಾದ ಬಗ್ಗೆ ಅಭ್ಯರ್ಥಿ ದೂರಿದ ಬಳಿಕ ತಹಶಿಲ್ದಾರ್ ರೆಹಾನ್ ಪಾಷಾ ಸ್ಥಳಕ್ಕೆ ಭೇಟಿ ನೀಡಿದರು.

ಇದೇ ರೀತಿಯ ಘಟನೆಯೊಂದು ರಾಯಚೂರು ಜಿಲ್ಲೆಯ ಸಿರಿವಾರ ತಾಲೂಕಿನ ಗಣದನ್ನಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತಪತ್ರದಲ್ಲಿ ಅಭ್ಯಾರ್ಥಿಗಳ ಚಿಹ್ನೆಗಳು ಬದಲಾವಣೆಯಾಗಿದೆ. ಅಭ್ಯರ್ಥಿ ಸಿದ್ದಮ್ಮಗೆ ಮಡಕೆ ಬದಲಾಗಿ ಆಟೋ ಹಾಗೂ ಅಭ್ಯರ್ತಿ ದೇವಮ್ಮಗೆ ಟ್ರ್ಯಾಕ್ಟರ್ ಬದಲಾಗಿ ಗ್ಯಾಸ್​ ಸ್ಟೋವ್​ ಗುರುತು ಮುದ್ರಿತವಾಗಿತ್ತು. ಈ ಕಾರಣದಿಂದ  ಉಂಟಾದ ಗೊಂದಲದಿಂದ ಮತದಾನ ವಿಳಂಬವಾಗಿದೆ. ಸಹಾಯಕ ಆಯುಕ್ತ ಸಂತೋಷ್ ಕಾಮಗೌಡ ಅವರು ಕೂಡಲೆ ಹೊಸದಾಗಿ ಮತಪತ್ರ ಮುದ್ರಿಸುವುದಕ್ಕೆ ಕ್ರಮ ತೆಗೆದುಕೊಂಡರು. ಇಲ್ಲಿಯೂ ಕೂಡ ಮತದಾನ ವಿಳಂಭವಾಗಿದೆ.

ಅದೇ ರೀತಿ ದಾವಣೆಗೆರೆ ತಾಲೂಕಿನ ಹೆಬ್ಬಾಳು ಗ್ರಾಮದ ಹೆಬ್ಬಾಳು 1 ಮತ್ತು ಹೆಬ್ಬಾಳು 2 ಎರಡು ಕ್ಷೇತ್ರಗಳ ಮತದಾರರ ಪಟ್ಟಿ ಅದಲು ಬದಲಾಗಿ ಗೊಂದಲ ಉಂಟಾಗಿದ್ದು, ಮತದಾನವನ್ನು ಮುಂದೂಡಲಾಗಿದೆ. 2 ಎರಡು ಕ್ಷೇತ್ರಗಳ ಮತದಾನ ಮುಂದೂಡಿ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದರು.

Donate Janashakthi Media

Leave a Reply

Your email address will not be published. Required fields are marked *