ಚಿಲಿಯಲ್ಲಿ ಎಡ ಜಯಭೇರಿ: ಲ್ಯಾಟಿನ್ ಅಮೆರಿಕದಲ್ಲಿ ಜೋರಾದ ಎಳೆಗೆಂಪು ಅಲೆ

ವಸಂತರಾಜ ಎನ್.ಕೆ

ಚಿಲಿಯಲ್ಲಿ ಎಡಶಕ್ತಿಗಳು ಜಯಭೇರಿ ಬಾರಿಸಿವೆ. ಗಾಬ್ರಿಯೆಲ್ ಬೋರಿಕ್, 35 ವರ್ಷದ ಮಾಜಿ ವಿದ್ಯಾರ್ಥಿ ನಾಯಕ ತಮ್ಮ ಉಗ್ರ ಬಲಪಂಥೀಯ ಪ್ರತಿಸ್ಪರ್ಧಿ ಜೋಸ್ ಅಂಟೊನಿಯೊ ಕಾಸ್ಟ್ ಅವರನ್ನು ಭಾರಿ ಬಹುಮತದಿಂದ ಸೋಲಿಸಿದ್ದಾರೆ. ಲ್ಯಾಟಿನ್ ಅಮೆರಿಕದಲ್ಲಿ 1970ರ ದಶಕದಲ್ಲಿ ನವ-ಉದಾರವಾದಿ ನೀತಿಗಳು ಮತ್ತು ಅವುಗಳನ್ನು ಜಾರಿ ಮಾಡಲು, ಜನಪರ ಸರಕಾರಗಳನ್ನು ಉರುಳಿಸಲು, ಸರ್ವಾಧಿಕಾರವನ್ನು ಹೇರಲು ಹೇಸದ ಯು.ಎಸ್ ರಾಜಕೀಯ-ಮಿಲಿಟರಿ ಹಸ್ತಕ್ಷೇಪ ಆರಂಭವಾದ ಚಿಲಿಯಲ್ಲಿ ನ ಈ ಎಡವಿಜಯ ಮಹತ್ವಪೂರ್ಣ ಮತ್ತು ಗಮನಾರ್ಹ. ಒಂದು ಸಕಾರಾತ್ಮಕ ಜಾಗತಿಕ ರಾಜಕೀಯ ಬೆಳವಣಿಗೆ. ಚಿಲಿಯ ವಿಜಯದೊಂದಿಗೆ ಇತ್ತೀಚೆಗೆ ಅರ್ಜೆಂಟಿನಾ, ಬೊಲಿವಿಯ, ನಿಕರಾಗುವ, ಹೊಂಡುರಸ್, ಪೆರು ಗಳಲ್ಲಿ ಎಡಶಕ್ತಿಗಳ ವಿಜಯದೊಂದಿಗೆ ಆರಂಭವಾಗಿರುವ ಎಳೆಗೆಂಪು ಅಲೆ (ಕೆಂಪು ಯಾಕಲ್ಲ, ಎಳೆಗೆಂಪು ಯಾಕೆಂದರೆ ಕೆಲವು ಕಡೆ ನಡು-ಎಡ ಶಕ್ತಿಗಳ ಜತೆ ಕೂಟದಲ್ಲಿ ಅಧಿಕಾರದಲ್ಲಿವೆ) ರಭಸ ಪಡೆದುಕೊಂಡಿದೆ. ಇದೇ ರೀತಿಯ ‘ಎಳೆಗೆಂಪು ಅಲೆ’ ಬ್ರೆಜಿಲ್ ನ್ನೂ ಅಪ್ಪಳಿಸಲಿದೆ.

ಚಿಲಿಯಲ್ಲಿ ಎಡಶಕ್ತಿಗಳು ಜಯಭೇರಿ ಬಾರಿಸಿವೆ. ಗಾಬ್ರಿಯೆಲ್ ಬೋರಿಕ್, 35 ವರ್ಷದ ಮಾಜಿ ವಿದ್ಯಾರ್ಥಿ ನಾಯಕ ತಮ್ಮ ಉಗ್ರ ಬಲಪಂಥೀಯ ಪ್ರತಿಸ್ಪರ್ಧಿ ಜೋಸ್ ಅಂಟೊನಿಯೊ ಕಾಸ್ಟ್ ಅವರನ್ನು ಭಾರಿ ಬಹುಮತದಿಂದ ಸೋಲಿಸಿದ್ದಾರೆ. ಬೊರಿಕ್ ಅವರು ಶೇ.56 ಮತಗಳಿಸಿದರೆ, ಕಾಸ್ಟ್ ಶೇ.44 ಮತ ಗಳಿಸಿ 10 ಲಕ್ಷದಷ್ಟು ಭಾರೀ ಅಂತರದಿಂದ ಜಯ ಗಳಿಸಿದ್ದಾರೆ. ಮೊದಲ ಸುತ್ತಿನಲ್ಲಿ ಕಾಸ್ಟ್ ಶೇ.27.9 ಮತ ಗಳಿಸಿ ಮೊದಲ ಸ್ಥಾನದಲ್ಲಿದ್ದರು, ಬೊರಿಕ್ ಎರಡನೆಯ ಸ್ಥಾನದಲ್ಲಿದ್ದು ಶೇ. 25.8 ಮತ ಗಳಿಸಿದ್ದರು ಎಂದು ಗಮನಿಸಬಹುದು. ಎರಡನೆಯ ಸುತ್ತಿನಲ್ಲಿ 12 ಲಕ್ಷದಷ್ಟು ಹೆಚ್ಚಾಗಿ ಶೇ. 56 ಮತದಾನ ಆಗಿತ್ತು. ಪಿನೋಶೆ ಸರ್ವಾಧಿಕಾರ 1990ರಲ್ಲಿ ಕೊನೆಗೊಂಡ ನಂತರ ಮೊದಲ ಬಾರಿಗೆ ಮೊದಲೆರಡು ಸ್ಥಾನ ಗಳಿಸುತ್ತಿದ್ದ ಆಳುವ ವರ್ಗಗಳ ಪಕ್ಷಗಳಾದ ನಡು-ಬಲಪಂಥೀಯ “ಸ್ವತಂತ್ರ ಡೆಮೊಕ್ರಾಟಿಕ್ ಯೂನಿಯನ್” (ಐ.ಡಿ,.ಯು) (ಶೇ. 12.8 ಮತಗಳಿಕೆ) ಮತ್ತು ನಡು-ಎಡಪಂಥೀಯ “ಸೋಶಲಿಸ್ಟ್ ಪಾರ್ಟಿ’ (ಶೇ. 11.6 ಮತಗಳಿಕೆ) ಗಳು ಮೊದಲ ಸುತ್ತಿನಲ್ಲೇ ಹೊರಕ್ಕೆ ಬಿದ್ದವು ಎಂಬುದು ಗಮನಾರ್ಹ. 1973ರಲ್ಲಿ ಎಡ ಸರಕಾರದ ನಾಯಕತ್ವ ವಹಿಸಿದ್ದ ಅಧ್ಯಕ್ಷ ಅಲೆಂದೆ ಅವರ ಕೊಲೆ ಮಾಡಿ ತೀವ್ರ ಹಿಂಸಾಚಾರ ನಡೆಸಿ ಯು.ಎಸ್ ನ ಸಕ್ರಿಯ ಬೆಂಬಲದೊಂದಿಗೆ ಮಿಲಿಟರಿ ಕ್ಷಿಪ್ರದಂಗೆ ಮೂಲಕ ಜನರಲ್ ಪಿನೊಶೆ ಅಧಿಕಾರಕ್ಕೆ ಬಂದಿದ್ದರು. ಅವರ ಸರ್ವಾಧಿಕಾರ ಸುಮಾರು ಎರಡು ದಶಕಗಳ ಕಾಲ ಚಿಲಿಯನ್ನು ಬಾಧಿಸಿತ್ತು ಎಂದು ಇಲ್ಲಿ ನೆನಪಿಸಿಕೊಳ್ಳಬಹುದು. ಮೊದಲ ಸುತ್ತಿನಲ್ಲಿ ಇತರ ಎರಡು ಎಡ ಅಭ್ಯರ್ಥಿಗಳು ಶೇ.9 ಮತ ಗಳಿಸಿದ್ದರು.

ಕಾಸ್ಟ್ ಉಗ್ರ ಬಲಪಂಥೀಯ ಯು.ಎಸ್ ಮಾಜಿ ಅಧ್ಯಕ್ಷ ಟ್ರಂಪ್ ಥರದ ಉಗ್ರ ನವ-ಉದಾರವಾದಿ ನೀತಿಗಳನ್ನು ಪ್ರತಿಪಾದಿಸಿದ್ದರು. ಸರ್ವಾಧಿಕಾರಿ ಪಿನೋಶೆ ಅವರ ಪ್ರಜಾಸತ್ತಾತ್ಮಕ-ವಿರೋಧಿ ಕುಕೃತ್ಯಗಳನ್ನು ಸಮರ್ಥಿಸಿಕೊಂಡದ್ದರು. ಅವರು ಮಹಿಳಾ-ವಿರೋಧಿ ಪುರುಷ ಪ್ರಾಧಾನ್ಯದ ಹಾಗೂ ಪರಿಸರ-ವಿರೋಧಿ ಧೋರಣೆಗಳನ್ನೂ ಪ್ರತಿಪಾದಿಸಿದರು. ಅವರ ಚುನಾವಣಾ ಪ್ರಣಾಳಿಕೆಯಲ್ಲಿ ಹಿಂದಿನ ನೀತಿಗಳನ್ನು ಮುಂದುವರೆಸುವುದಾಗಿ ಸಾರಿದರು. ಇದರಿಂದಾಗಿ ಚುನಾವಣಾ ಪ್ರಚಾರ ಅತ್ಯಂತ ಧ್ರುವೀಕೃತವಾಗಿತ್ತು. ಇದೇ ಅವರ ಪರಾಭವಕ್ಕೆ ಭಾರೀ ಮತಗಳ ಅಂತರಕ್ಕೆ ಕಾರಣವಾದಂತಿದೆ. ಇದಕ್ಕೆ ಪ್ರತಿಯಾಗಿ ಬೊರಿಕ್ ಅವರು ಚಿಲಿ ಆಳುವ ವರ್ಗಗಳು ಪಾಲಿಸಿಕೊಂಡು ಬರುತ್ತಿದ್ದ ನವ-ಉದಾರವಾದಿ ನೀತಿಗಳನ್ನು ಬಲವಾಗಿ ವಿರೋಧಿಸಿ ಅದನ್ನು ತೊಡೆಯುವ ಭರವಸೆ ನೀಡಿದರು. ಪಿನೋಶೆ ಜಾರಿಗೆ ತಂದ ಅತ್ಯಂತ ಅಪ್ರಜಾಸತ್ತಾತ್ಮಕ ಸಂವಿಧಾನ ಮತ್ತು ಕಾನೂನುಗಳನ್ನು ಆಮೂಲಾಗ್ರವಾಗಿ ಬದಲಾಯಿಸುವುದಾಗಿ ಸಾರಿದರು. ಪರಿಸರ ರಕ್ಷಿಸುವ ಸುಸ್ಥಿರ ಬೆಳವಣಿಗೆ ಮತ್ತು ಮಹಿಳಾ ಸಮಾನತೆಯ ನೀತಿಗಳನ್ನು ಪ್ರತಿಪಾದಿಸಿದರು.

ಬೊರಿಕ್ 2013ರಿಂದ ವಿದ್ಯಾರ್ಥಿ-ಯುವಜನರ ಮಹಿಳೆಯರ ಕಾರ್ಮಿಕರ ಚಳುವಳಿಗಳ ನಾಯಕತ್ವ ವಹಿಸಿದ್ದು, ಸ್ವತಃ ಯುವಕರಾಗಿದ್ದು ಸ್ಫೂರ್ತಿಯುತ ನಾಯಕರಾದ್ದರಿಂದ ವಿದ್ಯಾರ್ಥಿ-ಯುವಜನರನ್ನು ಮಹಿಳೆಯರನ್ನು ರೈತ ಕಾರ್ಮಿಕರನ್ನು ದೊಡ್ಡ ಸಂಖ್ಯೆಯಲ್ಲಿ ಮತಗಟ್ಟೆಗೆ ಆಕರ್ಷಿಸಿದ್ದರು. ಬೊರಿಕ್ ಅವರು Apruebo Dignidad (‘ಘನತೆಯನ್ನು ಮನ್ನಿಸಿ’) ಎಂಬ ರಾಜಕೀಯ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದರು. ಇದು ಚಿಲಿಯ ಕಮ್ಯುನಿಸ್ಟ್ ಪಕ್ಷ ಸೇರಿದಂತೆ ಎಡ-ಪ್ರಗತಿಪರ ಪಕ್ಷಗಳ ಮತ್ತು ಪ್ರಗತಿಪರ ಸಾಮಾಜಿಕ ಚಳುವಳಿಗಳ ಮೈತ್ರಿಕೂಟವಾಗಿತ್ತು. ಎರಡನೆಯ ಸುತ್ತಿನಲ್ಲಿ ಎಲ್ಲ ಎಡ ಶಕ್ತಿಗಳು, ಪ್ರಗತಿಪರ ಸಾಮಾಜಿಕ ಶಕ್ತಿಗಳ ಜತೆಗೆ ನಡು-ಎಡ ಶಕ್ತಿಗಳು ಸಹ ಬೊರಿಕ್ ಅವರಿಗೆ ಬೆಂಬಲಿಸಿದಂತೆ ಕಂಡು ಬರುತ್ತದೆ. ಅದೇ ರೀತಿಯಾಗಿ ಕಾಸ್ಟ್ ಅವರ ರಿಪಬ್ಲಿಕನ್ ಪಕ್ಷ ಮತ್ತು ಕ್ರಿಶ್ಚಿಯನ್ ಸೋಶಲಿಸ್ಟ್ ಪಕ್ಷದ ಮೈತ್ರಿಕೂಟವಾದ “ಕ್ರಿಶ್ಚಿಯನ್ ಸೋಶಲಿಸ್ಟ್ ಫ್ರಂಟ್’ ಎಂಬ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದರು. ಈ ಎರಡೂ ಮೈತ್ರಿಕೂಟಗಳು ಅಧ‍್ಯಕ್ಷೀಯ ಅಭ‍್ಯರ್ಥಿಯನ್ನು ಆರಿಸಲು ತಮ್ಮದೇ ಪ್ರಾಥಮಿಕ ಚುನಾವಣೆಗಳನ್ನು ನಡೆಸಿದ್ದವು. ‘ಘನತೆಯನ್ನು ಮನ್ನಿಸಿ’ ಮೈತ್ರಿಕೂಟದ ಪ್ರಾಥಮಿಕ ಚುನಾವಣೆಗಳಲ್ಲಿ ಮೊದಲ ಸ್ಥಾನ ಪಡೆದ Frenta Amplio (ಸಾಮಾಜಿಕ ಸಂಗಮ) ಪಕ್ಷದ ಬೊರಿಕ್ ಮತ್ತು ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯಾಗಿದ್ದ ಇನ್ನೊಬ್ಬ ಯುವನಾಯಕ ಡೇನಿಯಲ್ ಜಾಡೂ ಎರಡನೆಯ ಸ್ಥಾನ ಪಡೆದಿದ್ದರು.

‘ಘನತೆಯನ್ನು ಮನ್ನಿಸಿ’ ಮೈತ್ರಿಕೂಟ ಬರಿಯ ಚುನಾವಣೆಗೆ ಆದ ಕೂಟವಲ್ಲ. ಈ ಮೈತ್ರಿಕೂಟದ ಪಕ್ಷಗಳು ಚಳುವಳಿಗಳು ಪಿನೊಶೆ-ಪ್ರಣೀತ ಅಪ್ರಜಾಸತ್ತಾತ್ಮಕ ಸಂವಿಧಾನವನ್ನು ಬದಲಾಯಿಸಲು 2018ರಿಂದ 2020ರ ವರೆಗೆ ನಡೆದ ಚಾರಿತ್ರಿಕ ರಾಜಕೀಯ ಹೋರಾಟದಲ್ಲಿ ಅಣಿನೆರೆದವುಗಳು. ಆ ಸಂವಿಧಾನವೇ ಇಂದಿನ ಜನ-ವಿರೋಧಿ ನವ-ಉದಾರವಾದಿ ನೀತಿಗಳ ಮೂಲ ಎಂಬ ವ್ಯಾಪಕ ಪ್ರಚಾರವನ್ನು ಕೈಗೊಂಡು ಹೊಸ ಸಂವಿಧಾನ ಬರೆಯಬೇಕು ಎಂದು ಜನಾಭಿಪ್ರಾಯ ಸಂಗ್ರಹ ನಡೆಯುವಂತೆ ಮಾಡುವುದರಲ್ಲಿ ಮತ್ತು ಅದರಲ್ಲಿ ಹೊಸ ಸಂವಿಧಾನ ಬರೆಯಬೇಕು ಎಂಬ ಅಭಿಪ್ರಾಯಕ್ಕೆ ಬಹುಮತ ಗಳಿಸುವುದರಲ್ಲಿ ಯಶಸ್ವಿಯಾಗಿದ್ದವು. ಮಾತ್ರವಲ್ಲ, ಆ ಮೇಲೆ ಹೊಸ ಸಂವಿಧಾನ ಸಭೆಗೆ ನಡೆದ ಚುನಾವಣೆಗಳಲ್ಲಿ ಎಡಶಕ್ತಿಗಳಿಗೆ ಬಹುಮತ ಸಿಕ್ಕಿತ್ತು. ಬಲಪಂಥೀಯರನ್ನು ಮೂರನೆಯ ಒಂದರಷ್ಟು ಸೀಟುಗಳಿಗೆ ಸೀಮಿತಗೊಳಿಸಿತ್ತು. ಮುಂದೆ ಅಧ್ಯಕ್ಷೀಯ ಚುನಾವಣೆಗಳಿಗೂ ಒಂದೇ ಎಡ ಅಭ್ಯರ್ಥಿಗೂ ಅದು ಮುಂದುವರೆದಿತ್ತು. ಈ ಕೂಟಕ್ಕೆ ಚಿಲಿ ಸೋಶಲಿಸ್ಟ್ ಪಕ್ಷವನ್ನು ಆಹ್ವಾನಿಸಲಾಗಿತ್ತು. ಆದರೆ ಅದು ‘ಹೊಸ ಸಾಮಾಜಿಕ ಒಪ್ಪಂದ’ ಎಂಬ ಮತ್ತೊಂದು ರಂಗವನ್ನು ಸೇರಿತು.

‘ಘನತೆಯನ್ನು ಮನ್ನಿಸಿ’ ಮೈತ್ರಿಕೂಟದಲ್ಲಿದ್ದ ಶಕ್ತಿಗಳು, 2013ರಿಂದ ನವ-ಉದಾರವಾದಿ ನೀತಿಗಳ ವಿರುದ್ಧ ತೀವ್ರವಾಗಿ ಮೂಡಿಬಂದ ವಿವಿಧ ಜನವಿಭಾಗಗಳ ವ್ಯಾಪಕ ಚಳುವಳಿಗಳಲ್ಲಿ ಭಾಗವಹಿಸಿ, ಅವುಗಳಲ್ಲಿ ನಾಯಕತ್ವ ವಹಿಸಿ ಹೊಮ್ಮಿದ್ದವು. ಕಮ್ಯುನಿಸ್ಟ್ ಪಕ್ಷ ಚಿಲಿಯಲ್ಲಿ ಒಂದು ಪ್ರಮುಖ ರಾಜಕೀಯ ಶಕ್ತಿಯಾಗಿದ್ದು, 1970ರ ದಶಕದ ಆರಂಭದಲ್ಲಿ ಎಡ ಶಕ್ತಿಗಳನ್ನು ಒಗ್ಗೂಡಿಸಿ ಸ್ವಾಲ್ವಡೊರ್ ಅಲೆಂಡೆ ಅವರ ಎಡ ಸರಕಾರವನ್ನು ತರಲು ಶಕ್ತವಾಗಿತ್ತು. ಆದರೆ 1973ರ ಮಿಲಿಟರಿ ಕ್ಷಿಪ್ರದಂಗೆ ಮತ್ತು ಪಿನೊಶೆ ಸರ್ವಾಧಿಕಾರಿ ಆಡಳಿತದಲ್ಲಿ ಕಮ್ಯುನಿಸ್ಟ್ ನಾಯಕರು ಕಾರ್ಯಕರ್ತರನ್ನು ಬೇಟೆಯಾಡಿ ನರಮೇಧ ನಡೆಸಿ ಪಕ್ಷವನ್ನು ತೀವ್ರ ದಮನಕ್ಕೆ ಗುರಿ ಮಾಡಲಾಯಿತು. ಆದರೆ ಪಕ್ಷದ ಅಳಿದುಳಿದ ನಾಯಕರು ಕಾರ್ಯಕರ್ತರು ದುಡಿಯುವ ಮತ್ತಿತರ ಜನವಿಭಾಗಗಳನ್ನು (ಮುಖ್ಯವಾಗಿ ಕಾರ್ಮಿಕರು ಮತ್ತು ವಿದ್ಯಾರ್ಥಿಗಳು) ಹೋರಾಟಗಳಿಗೆ ಅಣಿನೆರೆಸುವುದನ್ನು ಮುಂದುವರೆಸಿದ್ದರು. 1990ರ ನಂತರ ಪ್ರಜಾಸತ್ತೆ ತೋರಿಕೆಗಾದರೂ ಮರುಸ್ಥಾಪಿತವಾದ ಮೇಲೆ ಇದು ತೀವ್ರಗೊಂಡಿತು. ಮುಂದಿನ ದಶಕದಲ್ಲಿ ಲ್ಯಾಟಿನ್ ಅಮೆರಿಕದಲ್ಲೆಲ್ಲ ಹೊರಿಸಲಾದ ನವ-ಉದಾರವಾದಿ ನೀತಿಗಳ ರಿಹರ್ಸಲ್ ಚಿಲಿ ಯಲ್ಲಾಗಿತ್ತು. ಚಿಲಿಯ ಮೇಲೆ ಪಿನೋಶೆ ಹೊರಿಸಿದ ನವ-ಉದಾರವಾದಿ ನೀತಿಗಳು ವಿವಿಧ ಜನವಿಭಾಗಗಳ ಮೇಲೆ ಗಂಭೀರ ಪರಿಣಾಮವುಂಟು ಮಾಡಿತ್ತು. ಲ್ಯಾಟಿನ್ ಅಮೆರಿಕದ ಇತರ ದೇಶಗಳಿಗೆ ಹೋಲಿಸಿದರೆ ಗಟ್ಟಿಯಾದ ಪ್ರಜಾಸತ್ತಾತ್ಮಕ ಪರಂಪರೆಯಿದ್ದ ಚಿಲಿ ಯಲ್ಲಿ ಇದು ಭಾರೀ ಸಾಮಾಜಿಕ ರಾಜಕೀಯ ಸಂಚಲನ ಉಂಟು ಮಾಡಿದವು.

ಕಮ್ಯುನಿಸ್ಟ್ ನಾಯಕತ್ವದಲ್ಲಿ 2007ರಲ್ಲಿ ತಾಮ್ರ ಗಣಿಗಳ 90 ಸಾವಿರ ಕಾರ್ಮಿಕರ ಚಾರಿತ್ರಿಕ ದೀರ್ಘ ಮುಷ್ಕರ ಪ್ರಮುಖ ಜಯಗಳಿಸಿ ಈ ಅಣಿನೆರೆಸುವಿಕೆಗಳಿಗೆ ನಾಂದಿಯಾಯಿತು. 2011ರ ವ್ಯಾಪಕ ವಿದ್ಯಾರ್ಥಿ ಚಳುವಳಿ ಇನ್ನೊಂದು ಪ್ರಮುಖ ಮೈಲಿಗಲ್ಲಾಯಿತು. 2011ರಲ್ಲಿ ಜಗತ್ತಿನಾದ್ಯಂತ ನಡೆದ “ವಶಪಡಿಸಿಕೊಳ್ಳಿ’ ಚಳುವಳಿಯ ಭಾಗವಾಗಿ ಚಿಲಿಯಲ್ಲಿ ವಿದ್ಯಾರ್ಥಿಗಳು ವಿ.ವಿ ಗಳನ್ನು ವಶಪಡಿಸಿಕೊಂಡು ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣದ ವಿರುದ್ಧ ತಮ್ಮ ದನಿಯೆತ್ತಿದರು. ಉತ್ತಮ ಗುಣಮಟ್ಟದ, ಉಚಿತ, ಸಾರ್ವಜನಿಕ ಶಿಕ್ಷಣಕ್ಕಾಗಿ ಒತ್ತಾಯಿಸಿದರು. ಇದಕ್ಕೆ ಅಧ‍್ಯಾಪಕರ ಸಂಘಗಳೂ ಬೆಂಬಲವಿತ್ತವು. ಇದರ ವಿರುದ್ಧ ಚಿಲಿಯ ಸರಕಾರಗಳು ಈ ಚಳುವಳಿಯನ್ನು ತೀವ್ರ ದಮನಕ್ಕೆ ಒಳಪಡಿಸಿದವು. ಈ ದಮನಗಳ ವಿರುದ್ಧ ಎಲ್ಲ ಜನವಿಭಾಗಗಳು ಬೀದಿಗಿಳಿದವು ಮತ್ತು ತಮ್ಮದೇ ಹಕ್ಕೊತ್ತಾಯಗಳನ್ನು ಮಂಡಿಸಲಾರಂಭಿಸಿದವು. ಲಕ್ಷಾಂತರ ಪಿಂಚಣಿದಾರರು ಪಿಂಚಣಿ ಖಾಸಗೀಕರಣದ ವಿರುದ್ಧ ದೀರ್ಘ ಹೋರಾಟ ನಡೆಸಿದರು. ರಾಜಧಾನಿಯಲ್ಲಿ 20 ಲಕ್ಷ ಪಿಂಚಣಿದಾರರ ಚಾರಿತ್ರಿಕ ಮೆರವಣಿಗೆ ನಡೆಯಿತು. ಲೈಂಗಿಕ ದೌರ್ಜನ್ಯ, ಹಿಂಸೆಗಳ ವಿರುದ್ಧ, ಗರ್ಭಪಾತದ ಹಕ್ಕಿಗಾಗಿ ಮಹಿಳೆಯರ ಗುಂಪುಗಳು ಕಾಲೇಜು, ವಿ.ವಿ, ವಾಸಸ‍್ಥಳ, ಉದ್ಯೋಗಸ್ಥಳಗಳಲ್ಲಿ ರಚಿತವಾಗಿ ಸಂಘಟಿತ ಹೋರಾಟ ನಡೆಸಿದವು. ಹೋರಾಟಕ್ಕೆ ಇಳಿದ ಈ ವಿವಿಧ ಜನವಿಭಾಗಗಳು, ಚಳುವಳಿಗಳು, ಸಂಘಟನೆಗಳು, ನಾಯಕತ್ವಗಳ ನಡುವೆ ಸಂಪರ್ಕ, ಸಂಯೋಜನೆ, ಜಂಟಿ ಕಾರ್ಯಾಚರಣೆ ಗಳು ಆರಂಭವಾಗಿ ಹೊಸ ರಾಜಕೀಯ ಸಾಮಾಜಿಕ ಸಂಘಟನೆಗಳು ಅಸ್ತಿತ್ವಕ್ಕೆ ಬಂದವು. ಈಗ ಅಧ್ಯಕ್ಷರಾಗಿರುವ ಬೊರಿಕ್ ವಿದ್ಯಾರ್ಥಿ ಚಳುವಳಿಯ ನಾಯಕರು ಸ್ಥಾಪಿಸಿದ Frenta Amplio (ಸಾಮಾಜಿಕ ಸಂಗಮ) ಪಕ್ಷದ ಸ್ಥಾಪಕ ನಾಯಕರಾಗಿ ಹೊಮ್ಮಿದವರು. ಬೊರಿಕ್, ಇನ್ನೊಬ್ಬ ಕಮ್ಯುನಿಸ್ಟ್ ಯುವ ನಾಯಕ ಕಾಮಿಲ್ಲಾ ವಲ್ಲೆಜೊ ಸೇರಿದಂತೆ ಈ ವಿವಿಧ ಚಳುವಳಿಗಳ ಸಂಘಟನೆಗಳ ನಾಯಕರುಗಳು 2013ರ ಚುನಾವಣೆಯಲ್ಲಿ ಪಾರ್ಲಿಮೆಂಟಿಗೆ ಆಯ್ಕೆಯಾದರು. 2013ರ ಪಾರ್ಲಿಮೆಂಟರಿ ಚುನಾವಣೆಯಲ್ಲಿ ಶೇ.20 ಮತಗಳಿಕೆ ಸಾಧ್ಯವಾಯಿತು. 2018ರ ಹೊತ್ತಿಗೆ ಈ ಎಲ್ಲ ಚಳುವಳಿಗಳು ತಾರಕಕ್ಕೆ ಏರಿದ್ದು ಮೆಟ್ರೋ ಟಿಕೆಟ್ ಬೆಲೆ ಇವೆಲ್ಲದರ ಸಂಗಮಕ್ಕೆ ಸಾಕ್ಷಿಯಾಗಿತ್ತು. ಇದರ ದಮನ ಇವರೆಲ್ಲರಿಗೂ ತಮ್ಮ ಸಮಸ್ಯೆಯ ಮೂಲ ನವ-ಉದಾರವಾದಿ ನೀತಿಗಳು. ಈ ನೀತಿಗಳನ್ನು ಕ್ರೂರದಮನದೊಂದಿಗೆ ಜಾರಿ ಮಾಡುವುದು ಸಾಧ್ಯವಾಗುತ್ತಿರುವುದು ಪಿನೋಶೆ-ಪ್ರಣೀತ ಸಂವಿಧಾನದಿಂದಾಗಿ. ಅದನ್ನು ಬದಲಾಯಿಸಲು ವ್ಯಾಪಕ ಜನಚಳುವಳಿ ಆರಂಭವಾಯಿತು.

ಹೀಗೆ ವಿವಿಧ ಜನವಿಭಾಗಗಳ ಅಣಿನೆರೆಸುವಿಕೆ, ಕಾರ್ಯಾಚರಣೆಗಳು ಹಾಗೂ ನವ-ಉದಾರವಾದಿ ನೀತಿಗಳ ವಿರುದ್ಧ ರಾಜಕೀಯ-ಸೈದ್ಧಾಂತಿಕ ಹೋರಾಟ ಅರಿವುಗಳ ಗಟ್ಟಿ ನೆಲೆಯ ಮೇಲೆ ಈ ವಿಜಯ ಸಾಧ್ಯವಾಗಿದೆ. ಇವು ಆಳುವ ವರ್ಗದ ಮತ್ತು ಸ್ಪಷ್ಟ ಜನಪರ ನವ-ಉದಾರವಾದಿ ವಿರೋಧಿ ಧೋರಣೆಯಿಲ್ಲದ ಶಕ್ತಿಗಳ ಜತೆ ಹೊಂದಾಣಿಕೆ ಮಾಡದಿರುವುದು ಕಾರಣವಾಗಿದೆ. ಇದರ ಜತೆಗೆ ನಡೆದ ರಾಷ್ಟ್ರೀಯ ಪ್ರಾದೇಶಿಕ ಮತ್ತು ನಗರಗಳ ಶಾಸನಸಭೆಗಳಿಗೆ ಮತ್ತು ಮೇಯರುಗಳಿಗೆ ನಡೆದ ಚುನಾವಣೆಗಳಲ್ಲಿಯೂ ಈ ಎಡಶಕ್ತಿಗಳು ಗಮನಾರ್ಹ ಮುನ್ನಡೆ ಸಾಧಿಸಿವೆ.

ಲ್ಯಾಟಿನ್ ಅಮೆರಿಕದಲ್ಲಿ 1970ರ ದಶಕದಲ್ಲಿ ನವ-ಉದಾರವಾದಿ ನೀತಿಗಳು ಮತ್ತು ಅವುಗಳನ್ನು ಜಾರಿ ಮಾಡಲು ಜನಪರ ಸರಕಾರಗಳನ್ನು ಉರುಳಿಸಲು ಸರ್ವಾಧಿಕಾರವನ್ನು ಹೇರಲು ಹೇಸದ ಯು.ಎಸ್ ರಾಜಕೀಯ-ಮಿಲಿಟರಿ ಹಸ್ತಕ್ಷೇಪ ಆರಂಭವಾದ ಚಿಲಿಯಲ್ಲಿ ನ ಈ ಎಡವಿಜಯ ಮಹತ್ವಪೂರ್ಣ ಮತ್ತು ಗಮನಾರ್ಹ ಸಕಾರಾತ್ಮಕ ಜಾಗತಿಕ ರಾಜಕೀಯ ಬೆಳವಣಿಗೆ. ಚಿಲಿಯ ವಿಜಯದೊಂದಿಗೆ ಇತ್ತೀಚೆಗೆ ಅರ್ಜೆಂಟಿನಾ, ಬೊಲಿವಿಯ, ನಿಕರಾಗುವ, ಹೊಂಡುರಸ್, ಪೆರು ಗಳಲ್ಲಿ ಎಡಶಕ್ತಿಗಳ ವಿಜಯದೊಂದಿಗೆ ಆರಂಭವಾಗಿರುವ ಎಳೆಗೆಂಪು ಅಲೆ (ಕೆಂಪು ಯಾಕಲ್ಲ, ಎಳೆಗೆಂಪು ಯಾಕೆಂದರೆ ಕೆಲವು ಕಡೆ ನಡು-ಎಡ ಶಕ್ತಿಗಳ ಜತೆ ಕೂಟದಲ್ಲಿ ಅಧಿಕಾರದಲ್ಲಿವೆ) ರಭಸ ಪಡೆದುಕೊಂಡಿದೆ. ಇದೇ ರೀತಿಯ ‘ಎಳೆಗೆಂಪು ಅಲೆ’ ಬ್ರೆಜಿಲ್ ನ್ನೂ ಅಪ್ಪಳಿಸಲಿದೆ.

ಇಂತಹ ಎಡ ಸರಕಾರಗಳು ಅಧಿಕಾರಕ್ಕೆ ಬಂದಾಗ, ಆರ್ಥಿಕ ದಿಗ್ಬಂಧನ, ರಾಜಕೀಯ ಅಪಪ್ರಚಾರ, ಹಿಂಸಾತ್ಮಕ ಬುಡಮೇಲು ಕೃತ್ಯಗಳು ಮತ್ತು ಮಿಲಿಟರಿ ದಾಳಿಗಳ ಮೂಲಕ ನೇರ ಹಸ್ತಕ್ಷೇಪ ಇವುಗಳ ಮೂಲಕ ಅವುಗಳನ್ನು ಉರುಳಿಸಲು ಯು.ಎಸ್ ಪ್ರಯತ್ನಿಸುತ್ತದೆ. ಇಂತಹ ಮಧ್ಯಪ್ರವೇಶ ಮಾಡಿ ಕ್ಷಿಪ್ರದಂಗೆ ನಡೆಸಿದ ನಾಲ್ಕು ದೇಶಗಳಲ್ಲೇ – ಬೊಲಿವಿಯ, ಪೆರು, ಹೊಂಡುರಸ್, ಚಿಲಿ – ಎಡಶಕ್ತಿಗಳು ವಿಜಯ ಸಾಧಿಸಿರುವುದು ಗಮನಾರ್ಹ. 21ನೆಯ ಶತಮಾನದ ಆರಂಭದ ದಶಕದಲ್ಲಿ ಇಡೀ ಲ್ಯಾಟಿನ್ ಅಮೆರಿಕ ವನ್ನು ವ್ಯಾಪಿಸಿದ್ದ ‘ಎಳೆಗೆಂಪು ಅಲೆ’ ಖಂಡವ್ಯಾಪಿ ಸೌಹಾರ್ದತೆ, ಸಹಕಾರಗಳ ಮೂಲಕ ಯು.ಎಸ್ ಗೆ ಪ್ರಬಲ ಪ್ರತಿರೋಧ ಒಡ್ಡುವುದು ಸಾಧ್ಯವಾಯಿತು. ಈ ದಶಕದಲ್ಲಿ ಮತ್ತೆ ಲ್ಯಾಟಿನ್ ಅಮೆರಿಕ ಅದೇ ಹಾದಿ ತಳೆಯುವಂತೆ ಕಾಣುತ್ತಿದೆ.

Donate Janashakthi Media

Leave a Reply

Your email address will not be published. Required fields are marked *