ಕಾನ್ಪುರ: ಉತ್ತರ ಪ್ರದೇಶದ ಲಾಲಾ ಲಜಪತ್ ರಾಯ್ (ಎಲ್‌ಎಲ್‌ಆರ್) ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ವರ್ಗಾವಣೆಗೆ ಒಳಗಾಗುತ್ತಿದ್ದ 6 ರಿಂದ 16 ವರ್ಷದೊಳಗಿನ ಹದಿನಾಲ್ಕು ಮಕ್ಕಳು ಹೆಪಟೈಟಿಸ್ ಬಿ, ಸಿ ಮತ್ತು ಎಚ್ಐವಿಯಂತಹ ಸೋಂಕುಗಳಿಗೆ ಒಳಗಾಗಿದ್ದಾರೆ ಎಂದು ಅಕ್ಟೋಬರ್ 23ರ ಸೋಮವಾರ ವರದಿಯಾಗಿದೆ.
ಸಾಕಷ್ಟು ಹಿಮೋಗ್ಲೋಬಿನ್ ಉತ್ಪಾದಿಸದ ಆನುವಂಶಿಕ ರೋಗವಾದ ಥಲಸ್ಸೆಮಿಯಾ ಕಾರಣಕ್ಕೆ ಮಕ್ಕಳಿಗೆ ರಕ್ತವನ್ನು ನೀಡಲಾಗಿತ್ತು. ದಾನ ಮಾಡಿದ ರಕ್ತದ ಮೇಲೆ ಪರಿಣಾಮಕಾರಿ ಪರೀಕ್ಷೆಗಳು ನಡೆಸದೆ ಇರುವ ಕಾರಣ ಮಕ್ಕಳಿಗೆ ಸೋಂಕು ತಗಲಿದೆ ಎಂದು ವರದಿಯಾಗಿದೆ. ಸೋಂಕಿನ ಮೂಲವನ್ನು ಗುರುತಿಸುವುದು ಕಷ್ಟ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಹೇಳಿದೆ.
ಇದನ್ನೂ ಓದಿ: ಅಕ್ರಮ ಮರಳು ದಂಧೆ ವಿರೋಧಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ
14 ಮಕ್ಕಳಲ್ಲಿ ಏಳು ಮಂದಿ ಹೆಪಟೈಟಿಸ್ ಬಿ, ಐವರು ಹೆಪಟೈಟಿಸ್ ಸಿ ಮತ್ತು ಇಬ್ಬರಿಗೆ ಎಚ್‌ಐವಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಪೀಡಿತ ಮಕ್ಕಳು ಈಗ ತಲಸ್ಸೆಮಿಯಾ ಸ್ಥಿತಿಯ ಜೊತೆಗೆ ಹೆಚ್ಚಿನ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
“ಇದು ತೀವ್ರ ಕಳವಳಕ್ಕೆ ಕಾರಣವಾಗಿದೆ. ನಾವು ಈಗಾಗಲೆ ಹೆಪಟೈಟಿಸ್ ರೋಗಿಗಳನ್ನು ಗ್ಯಾಸ್ಟ್ರೋಎಂಟರಾಲಜಿ ವಿಭಾಗಕ್ಕೆ ಮತ್ತು ಎಚ್‌ಐವಿ ರೋಗಿಗಳನ್ನು ಕಾನ್ಪುರದ ರೆಫರಲ್ ಸೆಂಟರ್‌ಗೆ ಉಲ್ಲೇಖಿಸಿದ್ದೇವೆ” ಎಂದು ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ, ಕೇಂದ್ರದ ನೋಡಲ್ ಅಧಿಕಾರಿಯು ಆಗಿರುವ ಅರುಣ್ ಆರ್ಯ ಅವರು ಹೇಳಿದ್ದಾರೆ.
ಇದನ್ನೂ ಓದಿ: ಮಿಜೋರಾಂ ವಿಧಾನಸಭೆ ಚುನಾವಣೆ-2023 | ರಾಜ್ಯದ ರಾಜಕೀಯ ಸ್ಥಿತಿಗತಿ ಹೀಗಿದೆ!
ಕೇಂದ್ರದಲ್ಲಿ ಸುಮಾರು 180 ಥಲಸ್ಸೆಮಿಯಾ ರೋಗಿಗಳು ರಕ್ತ ವರ್ಗಾವಣೆ ಮಾಡಿದ್ದು, ಇದರಲ್ಲಿ ಸೋಂಕಿತ 14 ಸೇರಿದ್ದಾರೆ. ಇಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ವೈರಲ್ ಕಾಯಿಲೆಗಳಿಗೆ ತಪಾಸಣೆ ನಡೆಯುತ್ತದೆ. ಸೋಂಕಿತ ಮಕ್ಕಳು ಕಾನ್ಪುರ ನಗರ, ದೇಹತ್, ಫರೂಕಾಬಾದ್, ಔರೈಯಾ, ಇಟಾವಾ ಮತ್ತು ಕನೌಜ್ ಸೇರಿದಂತೆ ಉತ್ತರ ಪ್ರದೇಶದ ವಿವಿಧ ಪ್ರದೇಶದವರಾಗಿದ್ದಾರೆ ಎಂದು ವರದಿ ಹೇಳಿದೆ.
ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಬಿಜೆಪಿ ಪಕ್ಷದ ಅಕ್ಷಮ್ಯ ಅಪರಾಧಕ್ಕಾಗಿ ಮಕ್ಕಳು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
“ಡಬಲ್ ಇಂಜಿನ್ ಸರ್ಕಾರವು ನಮ್ಮ ಆರೋಗ್ಯ ವ್ಯವಸ್ಥೆಯನ್ನು ದುಪ್ಪಟ್ಟು ಅನಾರೋಗ್ಯಕ್ಕೆ ಒಳಪಡಿಸಿದೆ. ಯುಪಿಯ ಕಾನ್ಪುರದ ಸರ್ಕಾರಿ ಆಸ್ಪತ್ರೆಯಲ್ಲಿ, ಥಲಸ್ಸೆಮಿಯಾದಿಂದ ಬಳಲುತ್ತಿರುವ 14 ಮಕ್ಕಳಿಗೆ ಸೋಂಕಿತ ರಕ್ತವನ್ನು ನೀಡಲಾಗಿದೆ. ಇದರಿಂದಾಗಿ ಈ ಮಕ್ಕಳು ಎಚ್‌ಐವಿ ಏಡ್ಸ್ ಮತ್ತು ಹೆಪಟೈಟಿಸ್ ಬಿ, ಸಿ ಯಂತಹ ಗಂಭೀರ ಕಾಯಿಲೆ ಪೀಡಿತರಾಗಿದ್ದಾರೆ. ಈ ಗಂಭೀರ ನಿರ್ಲಕ್ಷ್ಯವು ನಾಚಿಕೆಗೇಡಿನ ಸಂಗತಿಯಾಗಿದೆ” ಎಂದು ಮಲ್ಲಿಕಾರ್ಜುನ ಖರ್ಗೆ ಎಕ್ಸ್(ಟ್ವಿಟರ್)ನಲ್ಲಿ ಬರೆದಿದ್ದಾರೆ.
ವಿಡಿಯೊ ನೋಡಿ: ಮುಂಬಡ್ತಿ ಗೊಂದಲ ನಿವಾರಣೆಗೆ ಆಗ್ರಹಿಸಿ ಶಿಕ್ಷಕ – ಉಪನ್ಯಾಸಕರ ಪ್ರತಿಭಟನೆ