ಮಮತಾ ಜಿ
ಸಿನಿಮಾ ಮತ್ತು ಟಿವಿಯಂತಹ ಮನರಂಜನ ಕ್ಷೇತ್ರಗಳಲ್ಲಿ ನಟಿಸುವ ಮಕ್ಕಳು ಅಗತ್ಯಕ್ಕಿಂತ ಹೆಚ್ಚು ಸಮಯ ಅಂದರೆ ದಿನಕ್ಕೆ 12 ತಾಸುಗಳ ಕಾಲ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಎಂದು ಚೈಲ್ಡ್ ರೈಟ್ಸ್ ಅಂಡ್ ಯು ಅಧ್ಯಯನದ ವರದಿಯಿಂದ ತಿಳಿದು ಬಂದಿದೆ.
ಹೆಚ್ಚು ಜನಪ್ರಿಯತೆ ಮತ್ತು ಶೀಘ್ರ ಹೆಸರು ಮಾಡಬೇಕು ಎಂಬ ಹಂಬಲದಿಂದ ತಮ್ಮ ಶಾಲೆಗಳ ಕಡೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಮಕ್ಕಳಲ್ಲಿ ಕಲಿಕೆಯ ಆಸಕ್ತಿ ನಿಧಾನಕ್ಕೆ ಕಡಿಮೆಯಾಗುತ್ತಿದೆ. ಮಕ್ಕಳಷ್ಟೆ ಅಲ್ಲದೆ, ಪೋಷಕರು ಸಹ ತಮ್ಮ ಮಕ್ಕಳ ವಿದ್ಯಭ್ಯಾಸದ ಬಗ್ಗೆ ಅಲಕ್ಷ್ಯ ತೋರುತ್ತಿರುವುದು ವಿಪರ್ಯಾಸವೇ ಸರಿ. ಮನರಂಜನಾ ಕ್ಷೇತ್ರದಲ್ಲಿ ಮಕ್ಕಳನ್ನು ಬಾಲಕಾರ್ಮಿಕರನ್ನಾಗಿ ಯಾವುದೇ ವಿಶ್ರಾಂತಿ ಇಲ್ಲದೇ ದುಡಿಸಿಕೊಳ್ಳಲಾಗುತ್ತಿದೆ ಎಂದು ಸಿಆರ್‌ವೈ ಹೇಳಿದೆ. ಮುಂಬೈನ ಮನರಂಜನಾ ಕ್ಷೇತ್ರದಲ್ಲಿಆಯ್ದ ಕೆಲವು ಸಂಸ್ಥೆಗಳಲ್ಲಿ ಈ ಕುರಿತು ಅಧ್ಯಯನ ನಡೆಸಲಾಗಿದೆ.
ಪಶ್ಚಿಮ ವಿಭಾಗದ ಸಿಆರ್‌ವೈನ ಪ್ರಾದೇಶಿಕ ನಿರ್ದೇಶಕಿ ಕರಿನ್ನಾ ರಬಾಡಿಯವರ ಪ್ರಕಾರ ಮನರಂಜನಾ ಕ್ಷೇತ್ರದಲ್ಲಿ ದುಡಿಯುವ ಮಕ್ಕಳು ಕಣ್ಣಿಗೆ ಕಾಣದ ರೀತಿಯಲ್ಲಿ ಬಾಲ ಕಾರ್ಮಿಕ ಪದ್ದತಿಗೆ ಬಲಿಪಶುಗಳಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ಕ್ಷೇತ್ರದಲ್ಲಿ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಗಂಭೀರವಾಗಿ ಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.
ಬಾಲ ಕಾರ್ಮಿಕ ವಿರೋಧಿ ಕಾಯ್ದೆ ಪ್ರಕಾರ ಯಾವುದೇ ಮಗು ದಿನಕ್ಕೆ 5 ಗಂಟೆಗಿಂತ ಹೆಚ್ಚಿಗೆ ಕೆಲಸ ಮಾಡುವ ಹಾಗಿಲ್ಲ. ಆದರೆ, ಮನರಂಜನಾ ಕ್ಷೇತ್ರದಲ್ಲಿ ಮಕ್ಕಳು ವಾರದಲ್ಲಿ ಆರೂ ದಿನವೂ ಸಹ 12 ರಿಂದ 13 ತಾಸು ಕೆಲಸ ಮಾಡುತ್ತಾರೆ ಎಂದು ಸಿಆರ್‌ವೈ ತಿಳಿಸಿದೆ.
ಸಿಆರ್‌ವೈ ನೀಡಿರುವ ಅಂಕಿ ಅಂಶದ ಪ್ರಕಾರ 7 ಕಲಾವಿದ(ಕಾಸ್ಟಿಂಗ್) ಸಂಸ್ಥೆಗಳಲ್ಲಿ 41,392 ಜನ ದುಡಿಯಲು ಲಭ್ಯರಿದ್ದಾರೆ ಎಂದು ಹೇಳಲಾಗಿದೆ. ಇದರಲ್ಲಿ ಶೇ 24.9 ರಷ್ಟು ಬಾಲ ಕಾರ್ಮಿಕರಿದ್ದಾರೆ ಎಂದು ಸಿಆರ್‌ವೈ ಹೇಳಿದೆ. ಈ ಏಳೂ ಕಲಾವಿದ (ಕಾಸ್ಟಿಂಗ್) ಸಂಸ್ಥೆಗಳಲ್ಲಿ 3,792 ಜನ ಬಾಲಕಿಯರು ಮನರಂಜನಾ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ ಎಂದು ಚೈಲ್ಡ್ ರೈಟ್ಸ್ ಅಂಡ್ ಯು ಅಧ್ಯಯನದ ಮೂಲಕ ತಿಳಿಸಿದೆ.
ಮಗುವು ಚಿತ್ರದ ಪ್ರಮುಖ ಪಾತ್ರಧಾರಿಯಾಗಿದ್ದರೆ 30 ದಿನಗಳ ಕಾಲ ಚಿತ್ರೀಕರಣದ ವೇಳಾಪಟ್ಟಿಯಲ್ಲಿ 25 ದಿನಗಳ ಕಾಲ ಶೂಟ್ ಮಾಡಬೇಕು. “ಪೋಷಕರು ಮತ್ತು ನಿರ್ಮಾಪಕರ ನಡುವೆ ಮಾಡಲಾದ ಒಪ್ಪಂದಗಳು” ಇಂತಹ ಅಪರಾಧಕ್ಕೆ ಕಾರಣವಾಗುತ್ತಿವೆ. ಪಾಲಕರು ಕೂಡ ತಮ್ಮ ಮಕ್ಕಳನ್ನು ಅಧಿಕಾವಧಿ ಕೆಲಸ ಮಾಡದಂತೆ ತಡೆಯಲು ಆಗುತ್ತಿಲ್ಲ ಎಂದು ವರದಿ ಆತಂಕವನ್ನು ವ್ಯಕ್ತಪಡಿಸಿದೆ.