ಕೋವಿಡ್-19 ಮತ್ತು ಅದರೊಂದಿಗೆ ಹೇರಲ್ಪಟ್ಟ ಲಾಕ್‌ಡೌನ್‌ನಿಂದ ಬೆಂಗಳೂರಿನ ಅಸಂಘಟಿತ ವಲಯದ ಕಾರ್ಮಿಕರು ಇನ್ನೂ ಚೇತರಿಸಿಕೊಂಡಿಲ್ಲ ಎಂದು ಇತ್ತೀಚೆಗೆ ನಡೆಸಲಾದ ಒಂದು ಅಧ್ಯಯನದಿಂದ ತಿಳಿದು ಬಂದಿದೆ. ಈ ಮಾರಣಾಂತಿಕ ಕಾಯಿಲೆಯಿಂದಾಗಿ ಅಸ್ತವ್ಯಸ್ತಗೊಂಡ ಅವರ ಬದುಕು ಇದುವರೆಗೂ ಹಳಿಯ ಮೇಲೆ ಬಂದಿಲ್ಲ. ಅವರು ಅನುಭವಿಸಿದ ಕಷ್ಟನಷ್ಟಗಳು ಇಲ್ಲಿಯವರೆಗೂ ಪರಿಹಾರ ಕಂಡಿಲ್ಲ.
ಅಜಿತ್ ಪ್ರೇಮ್‌ಜಿ ವಿಶ್ವವಿದ್ಯಾಲಯ ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ಅಸಂಘಟಿತ ವಲಯದ 15% ಮಂದಿ ಕಾರ್ಮಿಕರು ತಮ್ಮ ಕೆಲಸ ಕಳೆದುಕೊಂಡ ದಿನದಿಂದ ಇದುವರೆಗೂ ನಿರುದ್ಯೋಗಿಗಳಾಗಿದ್ದಾರೆ. ಸಾಂಕ್ರಾಮಿಕ ಹಾವಳಿಯ ಪರಿಣಾಮವಾಗಿ 23% ರಷ್ಟು ಕಾರ್ಮಿಕರು ಕೆಲಸ ಕಳೆದುಕೊಂಡು ಬೀದಿಪಾಲಾಗಿದ್ದರು. ಸುಮಾರು ಅರ್ಧದಷ್ಟು ಕಾರ್ಮಿಕರು (46%) ಕಡಿಮೆ ಸಂಬಳಕ್ಕೆ ಅದೇ ಕೆಲಸವನ್ನು ಮಾಡುತ್ತಿದ್ದಾರೆ.
ಸಮೀಕ್ಷೆ ನಡೆಸಲಾದ ಸುಮಾರು 75% ರಷ್ಟು ಅಸಂಘಟಿತ ಕಾರ್ಮಿಕರು ಕೋವಿಡ್-19 ಆವರಿಸುವ ಮೊದಲು ಮಾಡುತ್ತಿದ್ದ ಕೆಲಸಗಳನ್ನೇ ಮಾಡುತ್ತಿದ್ದಾರೆ; ಆದರೆ ಕಡಿಮೆ ಸಂಬಳ ಪಡೆಯುತ್ತಿದ್ದಾರೆ. ಅಸಂಘಟಿತ ವಲಯದ 2500 ಕಾರ್ಮಿಕರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಅವರು ಮುಖ್ಯವಾಗಿ ಸ್ವಯಂ ಉದ್ಯೋಗಿಗಳಾದ ಬಿದಿ ಬದಿಯ ವ್ಯಾಪಾರಸ್ಥರು, ಕಸ ಎತ್ತುವವರು, ಆಟೋರಿಕ್ಷಾ ಚಾಲಕರು, ಮೆಕ್ಯಾನಿಕ್ ಕೆಲಸಗಾರರು, ಅಗಸರು, ಸಣ್ಣ ಕಾರ್ಖಾನೆಗಳ ಮಾಲೀಕರು ಮತ್ತು ಕಾಯಂ ಸಂಬಳವಿಲ್ಲದ ಮನೆಕೆಲಸಗಾರರು, ಲೈಂಗಿಕ ಕಾರ್ಯಕರ್ತರು ಹಾಗೂ ಕಟ್ಟಡ ನಿರ್ಮಾಣ ಕೆಲಸಗಾರರು ಆಗಿದ್ದರು.
ಹೆಚ್ಚು ಭಾಧೆಗೊಳಗಾಗುವ ಗಾರ್ಮೆಂಟ್ ಕೆಲಸಗಾರರು, ಕಾವಲು ಸಿಬ್ಬಂದಿಗಳು, ಚಿಲ್ಲರೆ ವ್ಯಾಪಾರ ಮಾಡುವ ಅಂಗಡಿಗಳಲ್ಲಿ ದುಡಿಯುವವರು ಸಹ ಸಮೀಕ್ಷೆಗೆ ಒಳಪಟ್ಟಿದ್ದರು. ಅವರ ಪ್ರಸ್ತುತ ಮಾಸಿಕ ಸಂಬಳ ಸರಾಸರಿ ರೂ. 6000. ಕೊರೊನಾ ಹಾವಳಿಗಿಂತ ಮೊದಲು ಇವರು ತಿಂಗಳಿಗೆ ರೂ. 8000 ದಿಂದ ರೂ. 12,000 ವರೆಗೆ ಸಂಬಳ ಪಡೆಯುತ್ತಿದ್ದರು.
ಮಹಿಳೆಯರು ಮತ್ತು ವೃದ್ಧರು ಹೆಚ್ಚು ಬಾಧೆಗೊಳಗಾದವರು ಮತ್ತು ಹೆಚ್ಚು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿದ್ದರು. ಪ್ರಸಕ್ತ ಅಧ್ಯಯನದ ಪ್ರಕಾರ ಇವರಿಗೆ ಬದುಕಿನ ನಿರ್ವಹಣೆ ಒಂದು ಸವಾಲಾಗಿದ್ದರೆ ಉದ್ಯೋಗವನ್ನು ದೊರಕಿಸಿಕೊಳ್ಳುವುದು ಇನ್ನೂ ದೊಡ್ಡ ಸಂಕಷ್ಟವಾಗಿತ್ತು. ಸಂಘಟಿತ ವಲಯಕ್ಕೆ ದೊರೆತ ಸೌರ್ಕರ್ಯಗಳೂ ಸಹ ಅಸಂಘಟಿತ ವಲಯದ ಕಾರ್ಮಿಕರಿಗೆ ಸಿಗುತ್ತಿರಲಿಲ್ಲ. ಕೋವಿಡ್ ಸಾಂಕ್ರಾಮಿಕದಿಂದ ಅತಿ ಹೆಚ್ಚು ಬಾಧೆಗೆ ಒಳಗಾದವರು ರಾಜ್ಯದೊಳಗೆ ಹಾಗೂ ಪರರಾಜ್ಯಗಳಿಂದ ವಲಸೆ ಬಂದ ಅಸಂಘಟಿತ ಕಾರ್ಮಿಕರು, ಮನೆಗಳಲ್ಲಿ ಕನಿಷ್ಟ ಖರ್ಚು ವೆಚ್ಚಗಳನ್ನು ನೀಗಿಸುವುದು, ಆರೋಗ್ಯ ರಕ್ಷಣೆಗಾಗಿ ಗಮನ ಕೊಡುವುದು, ಮಕ್ಕಳಿಗೆ ಕನಿಷ್ಠ ಆಹಾರವನ್ನು ಒದಗಿಸುವುದು ಬೆಂಗಳೂರಿನಂತಹ ನಗರ ಪ್ರದೇಶಗಳಿಗೆ ವಲಸೆ ಬಂದ ಅಸಂಘಟಿತ ಕಾರ್ಮಿಕರು ಅನುಭವಿಸಿದ ಯಾತನೆ ವಿವರಿಸಲಸಾಧ್ಯವಾದದ್ದು. ಸರ್ಕಾರ ಕೈಗೊಂಡ ಪರಿಹಾರ ಕ್ರಮಗಳು ಭಾಧಿತರಿಗೆ ತಲಪಲೇ ಇಲ್ಲ. ಉಚಿತವಾಗಿ ಬಡವರಿಗೆ ಕೊಡಬೇಕಾದ ಆಹಾರ ಧಾನ್ಯಗಳ ಕಿಟ್‌ಗಳು ಯರ್ಯಾರ ಪಾಲಾದವು. ಉಚಿತ ರೇಷನ್ ವ್ಯವಸ್ಥೆ ಸರ್ಕಾರ ಜಾರಿಗೆ ತರಲೇಇಲ್ಲ. ಅಗತ್ಯ ವಸ್ತುಗಳ ಬೆಲೆಗಳು ಏರುತ್ತಿದ್ದರೂ ಸರ್ಕಾ ಕೈಕಟ್ಟಿ ಕುಳಿತಿತ್ತು. ಎಲ್ಲಾ ಬಡ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ಮಾಸಿಕ ರೂ. 7,500 ಗಳನ್ನು ಕನಿಷ್ಠ 6 ತಿಂಗಳವರೆಗೆ ಜಮಾಮಾಡಬೇಕೆಂಬ ಬೇಡಿಕೆಯನ್ನು ಸರ್ಕಾರ ಕಿವಿಯ ಮೇಲೆ ಹಾಕಿಕೊಳ್ಳಲೇ ಇಲ್ಲ. ಮುಖಕ್ಕೆ ಮಾಸ್ಕ ಕಟ್ಟಿ, ಮನೆಯಿಂದ ಹೊರ ಬರಬೇಡಿ ಎಂಬುದೊಂದೇ ಸರ್ಕಾರ ಘೊಷಿಸಿದ ಪರಿಹಾರ. ಪೌಷ್ಠಿಕತೆಯ ಅಭಾವದಿಂದ ನರಳುತ್ತಿರುವವರಿಗೆ ಉಚಿತ, ಒಳ್ಳೆಯ ಗುಣಮಟ್ಟದ ಆಹಾರ ಸಿಗುವಂತೆ ಮಾಡದೆ, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉಚಿತ ಔಷದೋಪಚಾರ, ಗುಣಮಟ್ಟದ ಆರೈಖೆ ದೊರಕಿಸದೆ ಬಡವರು ತಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯವೇ? ಕೇಂದ್ರ ರಾಜ್ಯ ಸರ್ಕಾರಗಳ ವೈಫಲ್ಯದಿಂದ ದೇಶದಲ್ಲಿ ಒಟ್ಟು 2 ಲಕ್ಷ ಅಮಾಯಕರು ಸಾವನ್ನು ಅಪ್ಪಿದ್ದಾರೆ.
ಈಗಲಾದರು ಯಡಿಯೂರಪ್ಪನವರ ಸರ್ಕಾರ ನಿದ್ದೆಯಿಂದ ಎಚ್ಚೆತ್ತುಕೊಳ್ಳಬೇಕು. ಜನಚಳುವಳಿಯ ಮೂಲಕ ಈ ಕುಂಬಕರ್ಣ ಸರ್ಕಾರವನ್ನು ಎಬ್ಬಿಸಬೇಕು. ಹಿಂದಿನ ಅನಾಹುತದಿಂದ ಪಾಠ ಕಲಿತು ಎಲ್ಲಾ ಬಡವರಿಗೂ ಲಸಿಕೆಗಳನ್ನು ಉಚಿತವಾಗಿ ನೀಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಒಳ್ಳೆಯ ಗುಣಮಟ್ಟದ ವೈಧ್ಯಕೀಯ ಸೇವೆಯನ್ನು ಒದಗಿಸಬೇಕೆಂದು ಆಗ್ರಹಿಸೋಣ.