ಬೆಂಗಳೂರು : ಚೇತನ ಅಹಿಂಸ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿ ಬಂಧನ ಮಾಡಿರುವುದನ್ನು ಸಿಪಿಐ(ಎಂ) ಖಂಡಿಸಿದೆ.
ಈ ಕುರಿತು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಪತ್ರಿಕಾ ಹೇಳಿಕೆ ನೀಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹೈಕೋರ್ಟ್ ನ್ಯಾಯಾಧೀಶರ ಹೆಸರು ಉಲ್ಲೇಖಿಸಿ ಪ್ರಚೋದನಕಾರಿ ಬರಹ ಪ್ರಕಟಿಸಿದ್ದರು, ಆದ್ದರಿಂದ ಅವರ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿ ಬಂಧಿಸಲಾಗಿದೆ. ಮತ್ತು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನ್ಯಾಯಾಧೀಶರ ಹೆಸರು ಉಲ್ಲೇಕಿಸಬಾರದು ಎಂಬ ನಿಯಮಗಳಿದ್ದಾಗ್ಯೂ, ಅವರ ಮೇಲೆ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬಹುದಾಗಿತ್ತಲ್ಲದೇ, ಸ್ವಯಂ ಪ್ರೇರಿತ ದೂರು, ಬಂಧನದ ಅಗತ್ಯವಿರಲಿಲ್ಲ ಎಂದು ತಿಳಿಸಿದ್ದಾರೆ.
ನ್ಯಾಯಂಗವೂ ಕೂಡ ರಚನಾತ್ಮಕ ಟೀಕೆಗಳಿಗೆ ತೆರೆದುಕೊಳ್ಳುವ ಬದಲಾವಣೆಗೆ ಒಳಪಡುವುದಾಗಬೇಕು. ಸಧ್ಯ ಇಡೀ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳು, ಉನ್ನತ ಸ್ಥಾನಮಾನಗಳನ್ನು ಅಲಂಕರಿಸಿರುವವರು ಆಡುವ ಮಾತುಗಳು, ನಡೆದುಕೊಳ್ಳುವ ರೀತಿಗಳು, ಪ್ರಚೋದಿತ ಯುವಕರಿಂದ ನಡೆಯುತ್ತಿರುವ ಘಾತಕ ಕೃತ್ಯಗಳಿಂದ ತಲ್ಲಣಿಸಿಯೂ ಇಂಥಹ ಪ್ರತಿಕ್ರಿಯೆಗಳು ಬರುವ ಸಾಧ್ಯತೆಗಳೂ ಇವೆ. ಆದರೆ ರಾಜ್ಯ ಬಿಜೆಪಿ ಸಕಾ೯ರವು ಭಿನ್ನ ಅಭಿಪ್ರಾಯಗಳನ್ನು ಧಮನಿಸುವ ನಿಟ್ಟಿನಲ್ಲಿ ಸೇಡಿನ ಕ್ರಮವಾಗಿ ತೆಗೆದು ಕೊಳ್ಳುತ್ತಿರುವ ಕ್ರಮಗಳ ಭಾಗವಾಗಿ ಈ ಬೆಳವಣಿಗೆ ನಡೆದಿದೆ ಎಂದರು.
ಆಡಳಿತ ಪಕ್ಷದ ಶಾಸಕರು ಮತ್ತು ಸಚಿವರು ಮಾಡುವ ಪ್ರಚೋದನಾಕಾರಿ ಹೇಳಿಕೆಗಳ ಮೇಲೆ ಕ್ರಮ ಕೈಗೊಳ್ಳದ ತಾರತಮ್ಯವು ನಡೆದಿದೆ . ಬಿಜೆಪಿಯ ಕೇಂದ್ರ ಸರ್ಕಾರವು ಕೂಡ ವಿವಿದೆಡೆ ಸಾಹಿತಿಗಳು , ಸಾಮಾಜಿಕ ಕಾಯ೯ಕತ೯ರು ಮತ್ತು ಹೋರಾಟಗಾರರ ಮೇಲೆ ಜಾಮೀನು ರಹಿತ ಬಂಧನ ದಂತಹ ಕ್ರಮಗಳನ್ನು ಕೈಗೊಂಡು ಈಗಲೂ ಹಲವರನ್ನು ಬಂಧನದಲ್ಲಿ ಇರಿಸಿದೆ. ಅದೇ ಪ್ರವೃತ್ತಿಯನ್ನು ರಾಜ್ಯ ಬಿಜೆಪಿ ಸಕಾ೯ರವು ವಹಿಸುತ್ತಿರುವುದು ಖಂಡನೀಯ ಎಂದು ಸಿಪಿಐಎಂ ಆರೋಪಿಸಿದೆ.
ಈ ಮೊದಲೂ ಕೂಡ ದತ್ತಪೀಠಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿಯ ವರದಿಯ ಕುರಿತು ಆಡಳಿತ ಪಕ್ಷಗಳ ನಾಯಕರೇ ನ್ಯಾಯಾಧೀಶರ ಹೆಸರು ಬಳಸಿ ಕೇವಲವಾಗಿ ಮಾತಾಡಿದ್ದೂ ಇದೆ. ಅಲ್ಲದೆಯೆ ಸಾಮಾಜಿಕ ಕ್ಷೋಭೆ ಉಂಟು ಮಾಡುವ,ಜನರ ಬದುಕಿಗೇ ಮಾರಕವಾಗುವ ಎಷ್ಟೊಂದು ಪ್ರಕರಣಗಳು ನಡೆಯುವಾಗ ಅಗತ್ಯವಿರುವ ಸ್ವಯಂ ಪ್ರೇರಿತ ದೂರು ದಾಖಲೆಗೆ ಮುಂದಾಗದ ಪೋಲೀಸ್ ಇಲಾಖೆ ಈ ಪ್ರಕರಣದಲ್ಲಿ ದಾಖಲಿಸಿಕೊಂಡಿದ್ದು ಸರಿಯೇ ಎಂದು ಸಿಪಿಐಎಂ ಪ್ರಶ್ನಸಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನ ಅಭಿಪ್ರಾಯ ಗಳನ್ನು ಗೌರವಿಸಬೇಕು ಎನ್ನುವ ಸಂವಿಧಾನವನ್ನು ಒಪ್ಪಿಕೊಂಡ ನಾವು ಅದಕ್ಕೆ ಬದ್ದವಾಗಿ ನಡೆದುಕೊಳ್ಳುವ ಪರಿಪಾಟ ಬೆಳೆಯಬೇಕು. ಚೇತನ್ ರವರೊಬ್ಬ ಸಾಮಾಜಿಕ ಕಾಳಜಿ ಹೊಂದಿರುವ ವ್ಯಕ್ತಿಯಾಗಿದ್ದು ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದೆ.