ದೇವದಾಸಿ ಅನಿಷ್ಟ ಪದ್ದತಿಯಿಂದ ಹೊರ ಬಂದು ಚೆಂದದ ಬದುಕು ಕಟ್ಟಿಕೊಂಡ ಮಂಜುಳ ಮಾಳ್ಗಿ

ಜ್ಯೋತಿ ಶಾಂತರಾಜು

ಮಹಿಳೆಯರನ್ನು ಕಾಲಕಾಲಕ್ಕೆ ಹಂತಹಂತವಾಗಿ ತುಳಿಯುವ ಭೋಗದ ವಸ್ತುವಾಗಿ ಕಾಣುವ ಪ್ರಕ್ರಿಯೆ ಈ ಹಿಂದೆ ಹೆಚ್ಚಾಗಿತ್ತು. ಅದರ ಭಾಗವಾಗಿ ದೇವದಾಸಿ ಪದ್ಧತಿಯಂತಹ ಅನಿಷ್ಟ ಪದ್ಧತಿಗಳು ಇದ್ದವು. ಸಾಕಷ್ಟು ಹೋರಾಟ, ದೇವದಾಸಿ ನಿಷೇಧ ಪದ್ಧತಿ ಕಾನೂನು, ಅರಿವಿನ ಕಾರ್ಯಕ್ರಮಗಳ ಪರಿಣಾಮವಾಗಿ ಇವು ನಶಿಸಿ ಹೋಗುತ್ತಿರುವುದು ಖುಷಿಯ ವಿಚಾರ. ಆದರೆ ಇಂತಹ ಪದ್ಧತಿಗಳಿಗೆ ಒಳಗಾದವರನ್ನು ಸಮಾಜಮುಖಿಯಾಗಿ ಬದುಕುವಂತೆ ಮಾಡಲು ಇನ್ನಷ್ಟು ತಿಳುವಳಿಕೆಯ ಅಗತ್ಯವಿದೆ. ಈ ಪದ್ಧತಿಯಿಂದ ಹೊರಬಂದು ಚೆಂದದ ಬದುಕು ಕಟ್ಟಿಕೊಂಡ ಮಂಜುಳ ಮಾಳ್ಗಿಯವರ ಕುರಿತ ಅಂಕಣ ನಿಮ್ಮ ಓದಿಗೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ ಗ್ರಾಮದವರಾದ ಮೂವತ್ತೊಂಭತ್ತು ವರ್ಷದ ಮಂಜುಳ ಮಾಳ್ಗಿ ಅವರು ಸುಮಾರು ಏಳೆಂಟು ತಲೆಮಾರುಗಳಿಂದಲೂ ದೇವದಾಸಿಯರಾಗಿ ಬದುಕುತ್ತಿದ್ದ ತಮ್ಮ ಕುಟುಂಬವನ್ನು ಕಷ್ಟ ಸಂಕೋಲೆಗಳನ್ನು ಮೆಟ್ಟಿ ನಿಂತು ಘನತೆಯಿಂದ, ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಅವರ ಇಲ್ಲಿಯವರೆಗಿನ ಹಾದಿಯನ್ನು ಅವರ ಮಾತುಗಳಲ್ಲಿ ಓದಿಕೊಳ್ಳಿ.

‘ನಮ್ಮದು ಕೃಷಿ ಕುಟುಂಬ. ಮಾಳ್ಗೆ ಎನ್ನುವುದು ನಮ್ಮ ಮನೆತನದ ಹೆಸರು. ಆಗ ನಮ್ಮ ಕೇರಿಯಲ್ಲಿ ಯಾರಿಗೂ ಮಾಳಿಗೆ ಮನೆ ಇರಲಿಲ್ಲ. ಗೋಡೆಮನೆ ಇದ್ದವು. ನಾವೊಬ್ಬರು ಮಾಳಿಗೆ ಹಾಕಿಸಿಕೊಂಡಿದ್ವಿ. ಹಾಗಾಗಿ ನಮ್ಮನ್ನು ಮಾಳ್ಗೆಯವರು ಎಂದು ಕರೆಯುತ್ತಿದ್ದರು. ನಮ್ಮ ಮುತ್ತಜ್ಜಿ ಶಾರೆಮ್ಮ ಹಾಗೂ ಹನುಮಂತವ್ವ, ಅಜ್ಜಿ ನಾಗಮ್ಮ. ನಮ್ಮ ಅಮ್ಮ ಲಲಿತಮ್ಮನಿಗೆ ನಾವು ನಾಲ್ಕು ಜನ ಮಕ್ಕಳು. ನಮ್ಮದು ಸುಮಾರು ಏಳೆಂಟು ತಲೆಮಾರುಗಳಿಂದಲೂ ದೇವದಾಸಿ ಕುಟುಂಬ. ದೇವದಾಸಿ ಎಂದರೆ, ದೇವರ ಹೆಸರಲ್ಲಿ ಸೇವೆ ಮಾಡುವುದು. ಮದುವೆಯಾಗಬೇಕು, ಇಲ್ಲ ದೇವದಾಸಿಯರಾಗಬೇಕು ಆಗಲೇ ಮೋಕ್ಷ ಸಿಗುವುದು ಎಂಬ ಬಲವಾದ ನಂಬಿಕೆ ನಮ್ಮಲ್ಲಿದೆ.  ಹಾಗಾಗಿ ಮದುವೆಯಾಗಿರಬೇಕು ಇಲ್ಲವೇ ದೇವದಾಸಿಯಾರಾಗಬೇಕು ಆಗ ಮಾತ್ರ ನಮ್ಮಲ್ಲಿ ಯಾವುದೇ ಕಾರ್ಯಕ್ರಮಗಳಲ್ಲಿ ಶಾಸ್ತ್ರ ಮಾಡಲು ಬಿಟ್ಟುಕೊಳ್ಳುವುದು ರೂಢಿಯಲ್ಲಿತ್ತು.’

‘ನಮ್ಮ ಕಾಲದಲ್ಲಿ ದೇವದಾಸಿ ಹೆಣ್ಣುಮಕ್ಕಳು ಹೆಚ್ಚಿಗೆ ಇದ್ದರು. ಮದುವೆಯಾಗದಿದ್ದ ಹೆಣ್ಣುಮಕ್ಕಳನ್ನು ದೇವದಾಸಿಯಾರನ್ನಾಗಿ ಮಾಡುತ್ತಿದ್ದರು.

ಆಂಜನೇಯನ ದೇವಸ್ಥಾನದಲ್ಲಿ ಕರೆದುಕೊಂಡು ಹೋಗಿ ಅರಿಶಿನ ಹಚ್ಚಿ ಸ್ನಾನ ಮಾಡಿಸಿ, ಹಸಿರು ಸೀರೆ, ಬಳೆ ಎಲ್ಲ ತೊಡಿಸುತ್ತಿದ್ದರು. ವಯಸ್ಸಾಗಿರುವ ಒಬ್ಬ ಜೋಗತಿ ಇರುತ್ತಿದ್ದಳು. ಕರಿಯ ಕಂಬಳಿ ಹಾಸಿ, ಹಣೆಗೆ ವಿಭೂತಿ ಹಚ್ಚಿ, ಜಡೆಗೆ ಮಲ್ಲಿಗೆ ದಂಡೆ ಮುಡಿಸಿ ಮದುಮಗಳಂತೆ ಸಿಂಗರಿಸಿರುತ್ತಾರೆ. ಇಲ್ಲಿ ಯಾರೂ ಗಂಡುಮಕ್ಕಳು ಇರುವುದಿಲ್ಲ. ಜೋಗತಿಯವರೇ ಇರುತ್ತಾರೆ.

ಬುದ್ಧ ಬಸವಣ್ಣನ ವಿಚಾರಗಳನ್ನು ಆಧಾರವಾಗಿಟ್ಟು ಕೊಂಡು ಕೆಲವೊಂದು ಮಂತ್ರಗಳಂತೆ ಹೇಳಿಸುತ್ತಿದ್ದರು. ಅದು ಜವಾಬ್ದಾರಿ ಇದ್ದ ಹಾಗೆ. ಈಗ ಹಿಂದೂ ಸಂಪ್ರದಾಯಗಳಲ್ಲಿ ಮಾಂಗಲ್ಯಂ ತಂತು ನಾನೇನ… ಹೇಳುವ ಪದ್ಧತಿ ಇರುವ ಹಾಗೆ ನಮ್ಮಲ್ಲಿ ಹೀಗಿತ್ತು. ಹವಳ, ಮುತ್ತು ಅದಕ್ಕೆ ಹೆಣ್ಣು ದೇವರ ಒಂದು ಪದಕ ಹಾಕಿ ಮೊದಲು ಒಂದು ಗೂಟಕ್ಕೆ ಕಟ್ಟಿ ಪೂಜೆ ಮಾಡಿ ನಂತರ ವಯಸ್ಸಾದ ಜೋಗತಿಯರು ದೇವದಾಸಿಯಾಗುತ್ತಿರುವ ಹೆಣ್ಣುಮಕ್ಕಳಿಗೆ ಕಟ್ಟುತ್ತಿದ್ದರು. ಒಂದೆರಡು ಮೂರು ತಾಸುಗಳಲ್ಲಿ ಕಾರ್ಯಗಳೆಲ್ಲವನ್ನು ಮುಗಿಸಿ ಎದೆಯ ಮೇಲೆ ಆಂಜನೇಯನ ಸಿಂಬಲ್ ಅನ್ನು ಕಾಯಿಸಿ ಮುದ್ರೆ ಹಾಕುತ್ತಾರೆ. ಮುದ್ರೆ ಹಾಕಿಸಿದರೆ ಮಾತ್ರ ಮೋಕ್ಷ ಸಿಗುತ್ತದೆ ಎನ್ನುವ ವಾಡಿಕೆಯೂ ರೂಢಿಯಲ್ಲಿತ್ತು. ಹಾಗಾಗಿ ದೇವದಾಸಿಯರನ್ನು ನಿತ್ಯ ಸುಮಂಗಲಿ ಎನ್ನುತ್ತಿದ್ದರು’ ಎಂದು ಹಿರಿಯ ಜೀವ ಶಾರೆಮ್ಮ ಈ ಪದ್ಧತಿಯನ್ನು ಪರಿಚಯಿಸಿದರು. ಈಗ ಅದು ಅಸ್ತಿತ್ವದಲ್ಲಿಲ್ಲ ಎನ್ನುತ್ತಾರೆ.

‘ನನ್ನ ಅಕ್ಕ, ನಾನು, ತಂಗಿ, ತಮ್ಮ ಹುಟ್ಟಿದ ಮೇಲೆ ಭಿಕ್ಷೆ ಬೇಡಿಯಾದರೂ ಮಕ್ಕಳನ್ನು ಚೆನ್ನಾಗಿ ಓದಿಸಬೇಕು ನನ್ನ ತರ ಕಷ್ಟ ಪಡುವುದು ಬೇಡ ಎನ್ನುವ ಛಲ ಅಮ್ಮನಿಗಿತ್ತು. ನಮ್ಮಕ್ಕನಿಗೆ ಓದುವುದರಲ್ಲಿ ಆಸಕ್ತಿ ಇರಲಿಲ್ಲ. ನಾನು ಓದಿನಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿದ್ದೆ. ಹಾಗಾಗಿ ಓದಲು ನನಗೆ ಹೆಚ್ಚಿನ ಆದ್ಯತೆ ಕೊಟ್ಟರು. ಬಾಲ್ಯದಲ್ಲಿ, ಯೌವ್ವನದಲ್ಲಿ ಒಂದಾದರೊಂದರಂತೆ ಬರೀ ಜವಾಬ್ದಾರಿಗಳನ್ನು ಹೊತ್ತಿದ್ದೆ ಆಯ್ತು. ಬಾಲ್ಯದಲ್ಲಿ ಆಟ ಆಡೋಕೆ ಸಮಯವೇ ಇರುತ್ತಿರಲಿಲ್ಲ. ಶಾಲೆಗೆ ಸಮವಸ್ತ್ರ ಹೊಲೆಸಲು ಅಮ್ಮನ ಹತ್ತಿರ ಹಣವಿರಲಿಲ್ಲ. ಶೂ ಹಾಕಿಕೊಂಡು ಹೋಗಿಲ್ಲ ಅಂತ ಎಷ್ಟೋ ಸಲ ಹೊರಗಡೆ ನಿಂತಿದ್ದೇನೆ. ಕೊನೆಯ ಬೆಂಚಿನಲ್ಲಿ ಕೂರಿಸುತ್ತಿದ್ದರು. ಎಸ್.ಎಸ್.ಎಲ್.ಸಿ.ಯಲ್ಲಿ ಮೂರು ಸಲ ಫೇಲ್ ಆಗಿ ನಂತರ ಪಾಸ್ ಮಾಡಿಕೊಂಡೆ. ಪಿ.ಯು.ಸಿ.ಯನ್ನು ಒಂದೇ ಸಲಕ್ಕೆ ಪಾಸ್ ಆಗಿದ್ದು ನನ್ನಲ್ಲಿ ಶಿಕ್ಷಣದ ಬಗ್ಗೆ ಭರವಸೆಯನ್ನು ಮೂಡಿಸಿತು. ಅದಾಗಿಯೂ ಕಾಲೇಜು ಮುಗಿಸಿ ಬಂದ ಮೇಲೆ ಹೊಲದ ಕೆಲಸ. ರಜೆ ಇರುವಾಗ ಕಡ್ಲೆಕಾಯಿ ಕೀಳಲು ಹೋಗುವುದು, ಬೇವಿನ ಬೀಜ ಆರಿಸುವುದು, ರಂಗೋಲಿ ಮಾರುವುದು ಈ ತರದ ಕೆಲಸಗಳನ್ನು ಮಾಡುತ್ತಿದ್ದೆ. ವಯಸ್ಸಿಗೆ ಬಂದ ನಂತರ ಗಂಡು ಮಗನಂತೆ ದುಡಿದಿದ್ದೇನೆ. ಆಗ ನನಗೆ ಬಂದ ಕಷ್ಟಗಳು ಬದುಕಿನ ಪಾಠಗಳಾದವು. ನಾನು ಮುಂದೆ ಬೆಳೆಯಲು ಮೆಟ್ಟಿಲುಗಳಾದವು. ಡಿಗ್ರಿ ತನಕ ಓದಿದ ಮೇಲೆ ಎಲ್ಲರೂ ಒಂದು ಊರು ಬಿಟ್ಟು ಇನ್ನೊಂದು ಊರಿಗೆ ಯಾಕೆ ಹಾಸ್ಟೆಲ್, ಅಲ್ಲಿ ಇಲ್ಲಿ ಅಂತ ಕಳುಹಿಸುತ್ತೀಯ… ಅವಳಿಗೆ ಮದುವೆ ಮಾಡು ಎಂದು ಅವ್ವನಿಗೆ ಹೇಳುತ್ತಿದ್ದರು. ಆಗ ಅವ್ವ ಉಳಿದವರಂತೂ ಚೆನ್ನಾಗಿ ಓದಲಿಲ್ಲ, ಆಕೆ ಚೆನ್ನಾಗಿ ಓದುತ್ತಿದ್ದಾಳೆ ಓದಲಿ ಎಂದು ಮಾಸ್ಟರ್ ಡಿಗ್ರಿ ಮಾಡಲು ಸೇರಿಸಿದಳು. ನಾನು ಪ್ರತಿದಿನ ಬಸ್ಸಿನಲ್ಲಿ ಹೋಗಿ ಬರುತ್ತಿದ್ದೆ. ನನಗೆ ಉನ್ನತ ಶಿಕ್ಷಣ ಮಾಡಬೇಕು, ಒಳ್ಳೆ ಉದ್ಯೋಗಕ್ಕೆ ಸೇರಬೇಕು ಎನ್ನುವ ಆಲೋಚನೆ ಇತ್ತು. ನಮ್ಮ ಸಮುದಾಯದಲ್ಲಿ ವಿದ್ಯಾಭ್ಯಾಸಕ್ಕೆ ಹೋದರೆ ಅದೇ ಸಾಧನೆ. ನಮ್ಮ ಕೇರಿಯಲ್ಲಿ, ನಮ್ಮ ಸಮುದಾಯದ ಹೆಣ್ಣುಮಕ್ಕಳಲ್ಲಿ ಮಾಸ್ಟರ್ ಡಿಗ್ರಿ ಕಂಪ್ಲೀಟ್ ಮಾಡಿದವರಲ್ಲಿ ನಾನೇ ಮೊದಲಿಗಳು. ನನಗೆ ಮೂವತ್ತೊಂದು ವರ್ಷವಾದಾಗ ಮಲ್ಲಿಕಾರ್ಜುನ್ ಎಂಬುವರನ್ನು ಪ್ರೀತಿಸಿ ವಿವಾಹ ಮಾಡಿಕೊಂಡೆವು. ʻಸಖಿʼ ನಿರ್ದೇಶಕರಾದ ಎಂ. ಭಾಗ್ಯಲಕ್ಷ್ಮಿ ಮೇಡಂ ಅವರು ಅವರ ಕಚೇರಿಯಲ್ಲಿಯೇ ಸರಳವಾಗಿ ಮದುವೆ ಮಾಡಿಸಿದರು. ಮಲ್ಲಿಕಾರ್ಜುನ್ ಅವರು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ನಮಗೆ ಒಬ್ಬಳು ಮಗಳಿದ್ದಾಳೆ. ತುಂಬ ಸಂತೋಷವಾಗಿ ಬದುಕುತ್ತಿದ್ದೇವೆ.’

‘ನಾನು ಸಖಿ ಸಂಸ್ಥೆಯಲ್ಲಿ ಸಮುದಾಯ ಸಂಘಟಕಳಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಹೆತ್ತ ತಾಯಿ ಒಬ್ಬಳಾದರೆ ಬದುಕಿಗೆ ಸ್ಫೂರ್ತಿಯಾಗಿದ್ದು ತಾಯಿಯಂತೆ ಜೊತೆಗೆ ನಿಂತದ್ದು ಭಾಗ್ಯಲಕ್ಷ್ಮಿ ಮೇಡಂ. ನಾನು ಸಖಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಗಳ ಮುಖಾಂತರ ಹಳ್ಳಿ ಹಳ್ಳಿಗೆ ನಡೆದುಕೊಂಡು ಹೋಗಿ ನೂರು ದಿನಗಳ ಕೆಲಸ ಕೊಡಿಸುತ್ತಿದ್ದೆ. ಆಗ ಕೆಲವರು ಹೊಲಗಳಲ್ಲಿ ಬದು ನಿರ್ಮಾಣ ಮಾಡಿಕೊಂಡರು. ಈ ರೀತಿಯ ಕೆಲಸಗಳಿಂದಾಗಿ ಜನರು ನನ್ನನ್ನು ಗೌರವದಿಂದ ಕಾಣುತ್ತಾರೆ. ನನಗೆ ಸಿಗದಿರುವ ಅವಕಾಶಗಳು ನನ್ನ ಮಗಳಿಗೆ ಸಿಗಬೇಕು. ಹಾಗಾಗಿ ನಮಗೆ ಒಬ್ಬಳೇ ಮಗಳು ಸಾಕೆಂದು ನಿರ್ಧಾರ ಮಾಡಿ ಅವಳನ್ನು ಚೆನ್ನಾಗಿ ಓದಿಸುತ್ತಿದ್ದೇವೆ. ನಮ್ಮ ಉತ್ತರ ಕರ್ನಾಟಕದಲ್ಲಿ ತಳ ಸಮುದಾಯದಲ್ಲಿ ಶೈಕ್ಷಣಿಕ ತಿಳುವಳಿಕೆ ಕಡಿಮೆ ಇದೆ. ನಮ್ಮ ಸಮುದಾಯದವರು ವಿದ್ಯಾವಂತರಾಗಿ ಮುಂದೆ ಬರಬೇಕು. ಘನತೆಯಿಂದ ಬದುಕಬೇಕು ಎನ್ನುವುದು ನನ್ನ ಬಹುದೊಡ್ಡ ಕನಸು ಎನ್ನುತ್ತಾರೆ. ಉತ್ತರ ಕರ್ನಾಟಕದಲ್ಲಿ ಮೊದಲಿನಿಂದಲೂ ಹೆಣ್ಣುಮಕ್ಕಳು ಶಿಕ್ಷಣಕ್ಕೆ ಬರುತ್ತಿರಲಿಲ್ಲ.

ಸಖಿ ಸಂಸ್ಥೆ ಮೂಲತಃವಾಗಿ ದಲಿತ ಹೆಣ್ಣು ಮಕ್ಕಳು, ದೇವದಾಸಿ ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಕೆಲಸ ಮಾಡುತ್ತಿರುವ ಸಂಸ್ಥೆ. ಹಾಗೆಯೇ ದೇವದಾಸಿ ಕುಟುಂಬ, ದಲಿತ ಹೆಣ್ಣು ಮಕ್ಕಳು, ದಿನಕೂಲಿ ಕಾರ್ಮಿಕರು, ಒಂಟಿ ಹೆಣ್ಣು ಮಕ್ಕಳು, ಯುವಕರು, ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿಕೊಂಡವರನ್ನು ಕರೆಸಿ ಅವರಿಗೆ ತುಂಡು ಭೂಮಿ ಇದ್ದರೆ, ಸಾವಯವ ಕೃಷಿ ಬಗ್ಗೆ ತರಬೇತಿ ನೀಡುವುದು. ಅವಶ್ಯಕತೆ ಇರುವವರಿಗೆ ಕಾರ್ ಡ್ರೈವಿಂಗ್, ಟೈಲರಿಂಗ್, ಸ್ಪೋಕನ್ ಇಂಗ್ಲಿಷ್, ಉನ್ನತ ಶಿಕ್ಷಣ ಮಾಡಲು, ಎಕ್ಸಾಮ್ ಪಾಸ್ ಮಾಡಿಕೊಳ್ಳಲು ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ತರಬೇತಿಗಳನ್ನು ಕೊಡುವುದು, ಇನ್ನೂ ಅಗತ್ಯ ಇದೆ ಅಂತಾದವರಿಗೆ ಫುಡ್ ಕಿಟ್, ಮೆಡಿಸಿನ್, ಬಟ್ಟೆ, ಸರ್ಕಾರಿ ಕಾಲೇಜುಗಳಲ್ಲಿ ಓದುವವರಿಗೆ ಪುಸ್ತಕ, ಫೀಸ್ ಇನ್ನು ಹಲವಾರು ರೀತಿಯ ಸಹಾಯಗಳನ್ನು ಮಾಡುತ್ತಿದೆ. ಹಾಗೂ ಲೈಫ್ ಸ್ಕಿಲ್, ವೃತ್ತಿನೋಟ ಮತ್ತು ಅರಿವಿನ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುತ್ತಾರೆ. ಇಂಗ್ಲೀಷ್ ಬರದವರಿಗೆ ಇಂಗ್ಲೀಷ್ ಶಿಕ್ಷಕರನ್ನು ನೇಮಿಸಿ, ಟ್ಯೂಷನ್ ಫೀಸ್ ಎಲ್ಲ ಸಖಿ ಸಂಸ್ಥೆಯೇ ಕೊಟ್ಟು ಕಳುಹಿಸುತ್ತಿತ್ತು. ಪರೀಕ್ಷೆ ಇರುವಾಗ ಎಲ್ಲ ವಿಷಯಗಳ ಬಗ್ಗೆ ಟ್ಯೂಷನ್ ಮಾಡಿಸಿ ಉತ್ತೀರ್ಣವಾಗಲು ಸಹಾಯ ಮಾಡುತ್ತಿದ್ದರು. ಕೆಲವರು ಪದವಿಯಲ್ಲಿ ಅರ್ಧಕ್ಕೆ ಶಿಕ್ಷಣ ನಿಲ್ಲಿಸಿ ಹೋಗುತ್ತಾರೆ. ಅಂತಹವರನ್ನು ಬಲವಂತದಿಂದ ಕರೆಸಿ ಹಣಕಾಸಿನ ಸಹಾಯಮಾಡಿ ಉನ್ನತ ಶಿಕ್ಷಣ ಮಾಡಿಸುತ್ತಿದ್ದರು. ನಾನು ಸ್ನಾತಕೋತ್ತರ ಪದವಿ ಮಾಡುವಾಗ ಫೀಸ್ ತುಂಬಲು ಸಖಿ ಸಂಸ್ಥೆ 21,000/-ರೂ ಹಣ ಸಹಾಯ ಮಾಡಿತ್ತು. ಈ ಸಖಿ ಸಂಸ್ಥೆಯ ಒಟ್ಟಾರೆ ಉದ್ದೇಶ ವಿಶೇಷವಾಗಿ ಹಿಂದುಳಿದ, ದಲಿತ, ದೇವದಾಸಿ ಹೆಣ್ಣುಮಕ್ಕಳು, ಅಲ್ಪಸಂಖ್ಯಾತರು ಇವರನ್ನೆಲ್ಲ ಸೇರಿಸಿಕೊಂಡು ಒಂದು ಸಂಘಟನೆ ಮಾಡಿ ಉನ್ನತ ಶಿಕ್ಷಣ ಕೊಡಿಸುವುದು, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು, ಸಾವಯವ ಕೃಷಿ ಮಾಡಿಸಿ ಸ್ವಾವಲಂಬನೆಯಿಂದ ಬದುಕುವಂತೆ ಮಾಡುವುದು. ಈ ಸಂಸ್ಥೆಯ ಮುಖೇನ ದೇವದಾಸಿ ಮಹಿಳೆಯರನ್ನು ಸಮಾಜಮುಖಿಯಾಗಿ ಘನತೆಯಿಂದ ಬದುಕುವಂತೆ ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತಿದ್ದೇನೆ. ವಿದ್ಯಾಭ್ಯಾಸವೊಂದಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು’ ಎನ್ನುವುದು ಮಂಜುಳಾರವರ ಅಭಿಪ್ರಾಯ.

‘ಸಖಿ ಸಂಸ್ಥೆಯ ಮುಖೇನ ಓದಿ ಹಲವಾರು ಜನರು ದೊಡ್ಡ ದೊಡ್ಡ ನಗರಗಳಲ್ಲಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಎಂ.ಎ. ಪಿ.ಹೆಚ್‌ಡಿಗಳನ್ನು ಮಾಡಿಕೊಂಡಿದ್ದಾರೆ. ಉಪನ್ಯಾಸಕರಾಗಿ ಕೂಡ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ’ ಎಂದು ಯೂಥ್ ಫೆಸಿಲಿಟೇಟರ್ ಆಗಿ ಕೆಲಸ ಮಾಡುತ್ತಿದ್ದ ನೇತ್ರಾವತಿಯವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ದೇವದಾಸಿ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸಾಕಷ್ಟು ಹೋರಾಟಗಳಾಗಿ ಹಲವಾರು ಕಾಯ್ದೆಗಳು ಬಂದಿದ್ದರೂ ಇನ್ನೂ ಇದು ಅಲ್ಲಲ್ಲಿ ಅಸ್ತಿತ್ವದಲ್ಲಿದೆ. ಈ ಪದ್ಧತಿಗೆ ಒಳಗಾದ ಮಹಿಳೆಯರು ಸಮಾಜಮುಖಿಯಾಗಿ ಗೌರವಯುತವಾಗಿ ಬಾಳಲಿ. ಮಂಜುಳ ಮತ್ತು ಸಖಿ ಸಂಸ್ಥೆಯು ಎತ್ತರಕ್ಕೆ ಬೆಳೆಯಲಿ. ಇಂತಹ ವ್ಯಕ್ತಿ ಮತ್ತು ಸಂಘಟನೆಗಳು ಇನ್ನಷ್ಟು ಹೆಚ್ಚಾಗಲಿ ಎಂಬುದು ನಮ್ಮ ಆಶಯ.

Donate Janashakthi Media

Leave a Reply

Your email address will not be published. Required fields are marked *