ಡಾ.ಪುರುಷೋತ್ತಮ ಬಿಳಿಮಲೆ
ಸಾಹಿತ್ಯ, ಅದರಲ್ಲೂ ಕವಿತೆ ತಂದುಕೊಡಬಹುದಾದ ಉದಾತ್ತ ವ್ಯಕ್ತಿತ್ವಕ್ಕೆ ಚೆನ್ನವೀರ ಕಣವಿಯವರು ಒಳ್ಳೆಯ ಉದಾಹರಣೆಯಾಗಿದ್ದರು. ಅವರ ಮುಗ್ಧ ವ್ಯಕ್ತಿತ್ವದೊಳಗೊಂದು ಕವಿತೆ ಸದಾ ಸುಳಿದಾಡುತ್ತಿತ್ತು. ಕಾರಣಾಂತರಗಳಿಂದ ಸಿಟ್ಟುಮಾಡಿಕೊಂಡು ಬೈದರೂ ಅದು ಪಾರಿಜಾತದ ಹೂವು ಅರಳಿದಂತಿರುತ್ತಿತ್ತು. ಅವರ ಹತ್ತಿರ ಕುಳಿತು ಹರಟಿದರೆ ನಮ್ಮ ಶಕ್ತಿ ಹೆಚ್ಚುತ್ತಿತ್ತು. ಕನ್ನಡ ವಿವಿಯ ಆರಂಭದ ದಿನಗಳಲ್ಲಿ ಸಿಂಡಿಕೇಟ್ ಸದಸ್ಯರಾಗಿದ್ದ ಅವರೊಡನೆ ಕಳೆದ ಮೂರು ವರ್ಷಗಳು (೧೯೯೨-೯೫) ನನ್ನ ಬದುಕಿನ ಭಾಗ್ಯಗಳಲ್ಲೊಂದು.
೧೯೮೦ರ ದಶಕದಲ್ಲಿ ಕಣವಿಯರ ʼಚಿರಂತನ ದಾಹʼ ( ಅವರ ಆಯ್ದ ಕವಿತೆಗಳ ಸಂಕಲನ) ಪದವಿ ತರಗತಿಗಳಿಗೆ ಪಠ್ಯ ಪುಸ್ತಕವಾಗಿತ್ತು. ಪಾಠ ಮಾಡುತ್ತಾ ಮಾಡುತ್ತಾ ಅವರ ಹೆಚ್ಚಿನ ಕವಿತೆಗಳು ಬಾಯಿಪಾಠ ಆಗಿದ್ದವು. ಅವರು ಸಿಕ್ಕಾಗಲೆಲ್ಲ ಯಾವುದಾದರೂ ಕವಿತೆಯ ಒಂದೆರಡು ಸಾಲುಗಳನ್ನು ಹೇಳುತ್ತಿದ್ದೆ. ಅದನ್ನು ಮಕ್ಕಳ ಹಾಗೆ ಕೇಳಿಸಿಕೊಳ್ಳುತ್ತಿದ್ದರು, ಮತ್ತು ಆ ಕವಿತೆಯ ಹಿಂದಿನ ಕತೆ ಹೇಳುತ್ತಿದ್ದರು. ನವೋದಯ, ನವ್ಯ ಮತ್ತು ದಲಿತ -ಬಂಡಾಯ ಸಾಹಿತ್ಯ ಚಳುವಳಿಗಳ ಕಾಲದಲ್ಲಿ ಎಲ್ಲವನ್ನೂ ನೋಡುತ್ತಾ, ಅತ್ಯುತ್ತಮವಾದದ್ದನ್ನು ಕೊಂಡಾಡುತ್ತಾ, ಆದರೆ ತನ್ನ ಹಾದಿ ಬಿಡದೆ ಮುಂದೆ ಸಾಗಿದ ಕಣವಿಯವರು ತನ್ನದೇ ಆದ ಕಾವ್ಯಮಾರ್ಗವನ್ನು ಕಂಡುಕೊಂಡರು. ೧೬ ಕವನ ಸಂಕಲನಗಳನ್ನು ಪ್ರಕಟಿಸಿದರು. ಅವರ ವಿಮರ್ಶೆಯೂ ಕೂಡಾ ಕಾವ್ಯದ ಹಾದಿಯನ್ನೇ ಹಿಡಿದಿತ್ತು. ಅದನ್ನು ʼಸಮನ್ವಯ ಮಾರ್ಗʼ ಎಂದು ವಿಮರ್ಶಕರು ಕರೆದದ್ದುಂಟು, ಆದರೆ ಕಣವಿಯವರಿಗೆ ಅದು ಸಮ್ಮತವಾಗಿರಲಿಲ್ಲ. ʼನಾನು ಕವಿ ಅಷ್ಟೇʼ ಎಂದು ಹೇಳುತ್ತಾ ಅವರು ನಕ್ಕುಬಿಡುತ್ತಿದ್ದರು.
ಕಾವ್ಯಾಕ್ಷಿ (1949), ಭಾವಜೀವಿ (1950), ಆಕಾಶಬುಟ್ಟಿ (1953), ಮಧುಚಂದ್ರ (1954), ದೀಪಧಾರಿ (1956), ಮಣ್ಣಿನ ಮೆರವಣಿಗೆ (1960), ಎರಡು ದಡ, ನೆಲಮುಗಿಲು (1965), ನಗರದಲ್ಲಿನೆರಳು (1974), ಜೀವಧ್ವನಿ (1980), ಕಾರ್ತಿಕಮೋಡ (1986), ಜೀನಿಯಾ (1989), ಹೊಂಬೆಳಕು, ಶಿಶಿರದಲ್ಲಿ ಬಂದ ಸ್ನೇಹಿತ (1994), ಹಕ್ಕೀಪುಚ್ಚ (1985), ಹೂವು ಹೊರಳುವವು ಹೂವಿನ ಕಡೆಗೆ ಇವರ ಮುಖ್ಯ ಕವಿತಾ ಸಂಕಲನಗಳು. ಸಾಹಿತ್ಯ ಚಿಂತನ, ಕಾವ್ಯಾನುಸಂಧಾನ, ಸಮಾಹಿತ, ಸಮತೋಲನ, ಮಧುರಚೆನ್ನ, ಶುಭನುಡಿಯೆ ಹಕ್ಕಿ ಮುಖ್ಯ ವಿಮರ್ಶಾ ಕೃತಿಗಳು.
ಸುಮಧುರವಾದ ಸಾನೆಟ್ ಅಥವಾ ಸುನೀತಗಳ ವ್ಯಾಪಕ ಬಳಕೆ, ಬೆಳಕಿಗಾಗಿ ನಿರಂತರ ತುಡಿತ, ಮೃದು ಮಾತಿನಲ್ಲಿ ಬರೆಯುವುದು- ಕಣವಿಯರ ಕಾವ್ಯ ವಿಶೇಷತೆಗಳಲ್ಲಿ ಕೆಲವು. ಕಳೆದ ವರ್ಷದ ಕೊರೋನಾದಲ್ಲಿ ಸ್ವಲ್ಪ ಕಷ್ಟ ಆಗಿತ್ತು ಅವರಿಗೆ. ಈಗ ಆ ತುಂಬಿದ ಜೀವ ಕೊನೆಯ ಹಾಡ ಹೇಳಿ ಹೊರಟುಬಿಟ್ಟಿದೆ. ಧಾರವಾಡದ ಇನ್ನೊಂದು ಬೆಳಕು ನಂದಿತು.
“ಮಾಡಿ ಉಂಡಿದ್ದೇವೆ ನಮ ನಮಗೆ ಸೇರಿದ ಅಡಿಗೆ
ಇರಬಹುದು ಇದರಲ್ಲಿ ಕೆಲಭಾಗ ಜೀವನ ಸತ್ವ ಕಡಿಮೆ
ಇದ್ದ ಶಕ್ತಿಯಲ್ಲಿ ತುಸುದೂರ ನಡೆದಿದ್ದೇವೆ
ರೂಢಿಯಾಗಿದೆ ಒಬ್ಬೊಬ್ಬರಿಗೂ ಒಂದೊಂದು ಬಗೆಯ ನಡಿಗೆ
ಮುಖ್ಯ ಬೇಕಾದದ್ದು ಜೀವಂತ ಗತಿ, ಹೊಸ ನೆತ್ತರಿನ ಕೊಡುಗೆ”
ನಿಮ್ಮೊಡನೆ ಒಡನಾಡಿದ ನಾವು ಭಾಗ್ಯವಂತರು ಸಾರ್.