ನೌಕರಿ ಹೆಸರಲ್ಲಿ ಮೋಸ – ವಂಚಕರ ಕೈಗೆ ಬೇಡಿ ಹಾಕುವವರು ಯಾರು?

ಗುರುರಾಜ ದೇಸಾಯಿ

ಉದ್ಯೋಗ ವಂಚನೆ ಕೇಸ್‌ಗಳು ಎಷ್ಟು ದಾಖಲಾಗಿವೆ ಎಂಬ ಅಂಶವನ್ನು ನೋಡುವುದಾದರೆ  2018 ರಲ್ಲಿ ಬಾರತದಲ್ಲಿ ದಾಖಲಾದ ವಂಚನೆ ಕೇಸ್‌ಗಳ ಸಂಖ್ಯೆ 1 , 35  812, ಕರ್ನಾಟಕದಲ್ಲಿ 6,691 ಕೇಸ್‌ಗಳು ಪತ್ತೆಯಾಗಿವೆ. 2019 ರಲ್ಲಿ ಭಾರತದಲ್ಲಿ ಉದ್ಯೋಗ ವಂಚನೆ ಪ್ರಕರಣಗಳು ದಾಖಲಾದ ಸಂಖ್ಯೆ 1, 44 , 707, ಕರ್ನಾಟಕದಲ್ಲಿ 6, 321, 2020 ರಲ್ಲಿ ದೇಶದಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 1, 28, 396, ಕರ್ನಾಟಕದಲ್ಲಿ 4699  ಕೇಸ್‌ ದಾಖಲಾಗಿವೆ.

ಮೋಸ ಹೋಗುವವರು ಎಲ್ಲಿಯವರೆಗೆ ಇರುತ್ತಾರೋ ಅಲ್ಲಿಯವರೆಗೆ ಮೋಸ  ಮಾಡುವವರೂ ಇರುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ, ವ್ಯಕ್ತಿಗತ ವಿಚಾರ, ಉದ್ಯೋಗ, ಹಣ, ಆಸ್ತಿ ಹೀಗೆ ಮೋಸಕ್ಕಾಗಿ ಬಳಸುವ ವಸ್ತುಗಳೇ ಇಲ್ಲ ಎನ್ನಬಹುದು? ಮೋಸದ ಹೆಸರಿನಲ್ಲಿ ದೌರ್ಭಲ್ಯವನ್ನು ಬಳಸಿಕೊಂಡು ವಂಚನೆ ಮಾಡುತ್ತಿರುವುದು ಎಷ್ಟು ಸರಿ? ನೌಕರಿ ಕೊಡಿಸುವ ಹೆಸರಿನಲ್ಲಿ ಮೋಸ ಮಾಡುತ್ತಿರುವುದು ಸರಕಾರದ ಗಮನಕ್ಕೆ ಬಂದಿಲ್ವಾ? ನೌಕರಿ ಆಮೀಷೆ ಒಡ್ಡಿ ವಂಚಿಸುವ ವಂಚಕರ ಕೈಗೆ ಬೇಡಿ ತೊಡಿಸುವವರು ಯಾರು? ನಾವು ಜಾಗೃತರಾಗುವುದು ಯಾವಾಗ?  ಎಂಬ ಪ್ರಶ್ನೆಗಳು ಈಗ ಮುಖ್ಯವಾಗಿವೆ.

ನಾನು ಚನ್ನಾಗಿ ಓದಿದ್ದೇನೆ ನೌಕರಿ ಸೇರಿಕೊಳ್ಳಬೇಕು, ನಂದು ಒಂದು ಸಂಸಾರ, ಮನೆ ಇರಬೇಕು ಎಂಬ ಆಸೆ ಸಹಜವಾಗಿ ಇರುವಂತದ್ದು. ಆದರೆ ಇಂದು ದೇಶದಲ್ಲಿ ಉಂಟಾಗುತ್ತಿರುವ ನಿರುದ್ಯೋಗ ಸಮಸ್ಯೆಯಿಂದ ನೌಕರಿ ಎನ್ನುವ ಪದ ಬೆಚ್ಚಿ ಬೀಳಿಸುವ ಪದವಾಗಿದೆ. ವಿದೇಶದಲ್ಲಿ ನೌಕರಿ ಕೊಡಿಸುತ್ತೇನೆ ಎಂದು ಇಲ್ಲವೆ ಸರಕಾರಿ ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇನೆ ಎಂದು, ಇಲ್ಲವೆ ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದು  ಉದ್ಯೋಗದ ಆಮೀಷೆಯನ್ನು ಹಚ್ಚಿ ಮೋಸ ಮಾಡುತ್ತಿರುವವರು ಮತ್ತು ಮೋಸಕ್ಕೆ ಒಳಗಾಗುವವರ ಸಂಖ್ಯೆ ದಿನೆ ದಿನೆ ಹೆಚ್ಚಾಗುತ್ತಿದೆ. ಮೋಸ ಹೋಗುವವರು ಯಾರು ಎಂದು ದಾಖಲೆಗಳನ್ನು ತೆಗೆದು ನೋಡಿದಾಗ ಸಿಕ್ಕ ಉತ್ತರಗಳೆಂದರೆ ಉತ್ತಮ ಜ್ಞಾನ ಹೊಂದಿರುವವರೇ ಆಗಿದ್ದಾರೆ. ಶಿಕ್ಷಕಕರು, ವಕೀಲರು, ಪೊಲೀಸರು, ಅಧಿಕಾರಿಗಳು, ಸಂಶೋಧಕರು ಹೀಗೆ ಮೋಸಕ್ಕೊಳಗಾದವರ ಪಟ್ಟಿ ಬೆಳೆಯುತ್ತಲೆ ಹೋಗುತ್ತದೆ.

ಪೊಲೀಸ್ ಮೂಲಗಳ ಪ್ರಕಾರ ನೌಕರಿ ಹೆಸರಿನಲ್ಲಿ ಪ್ರತಿನಿತ್ಯ ನೂರಾರು ವಂಚನೆ ಪ್ರಕರಣಗಳು ನಡೆಯುತ್ತಿವೆ. ದೈರ್ಯ ಇದ್ದವರು ದೂರು ಕೊಟ್ಟರೆ, ಇನ್ನೂ ಕೆಲವರು  ಪೊಲೀಸ್ ತನಿಖೆ, ಹಣ ಪಡೆದವರ ಬೆದರಿಕೆ, ಕೋರ್ಟ್​ಗೆ ಅಲೆದಾಡ ಬೇಕೆಂಬ ಭಯದಲ್ಲಿ ಮೋಸ ಹೋದವರಲ್ಲಿ ಬಹುತೇಕರು ದೂರನ್ನೇ ದಾಖಲಿಸುವುದಿಲ್ಲ. ಇದು ವಂಚಕರಿಗೆ ವರದಾನವಾಗಿರುವುದರಿಂದಲೇ ಬೆರಳೆಣಿಕೆ ಕೇಸ್​ಗಳು ವರದಿ ಯಾಗುತ್ತಿವೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪೊಲೀಸ್‌ ದಾಖಲೆಗಳ ಪ್ರಕಾರ 2020 ರಲ್ಲಿ ಕರ್ನಾಟಕದಲ್ಲಿ 4,699 ವಂಚನೆ ಅಂದರೆ 420 ಪ್ರಕರಣಗಳು ವರದಿಯಾಗಿವೆ. ಕಳೆದ ಮೂರು ವರ್ಷಗಳಲ್ಲಿ ದೇಶಾದ್ಯಂತ 4, 08, 915 ವಂಚನೆ ಕೇಸ್​ಗಳು ದಾಖಲಾಗಿವೆ. ಇವುಗಳಲ್ಲಿ ಉದ್ಯೋಗದ ಆಮಿಷಕ್ಕೊಳಗಾಗಿ ಲಕ್ಷಾಂತರ ರೂ. ಹಣ ಕಳೆದುಕೊಂಡ ಪ್ರಕರಣಗಳೇ ಅಂದಾಜು ಶೇ.18ರಷ್ಟಿದೆ ಎಂಬುದು ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗದ ಅಂಕಿ-ಅಂಶಗಳಿಂದ ದೃಢಪಟ್ಟಿದೆ ಎಂದು ಖಾಸಗಿ ಪತ್ರಿಕೆ ವರದಿ ಮಾಡಿತ್ತು.  ಉದ್ಯೋಗ ವಂಚನೆ ಕೇಸ್‌ಗಳು ಎಷ್ಟು ದಾಖಲಾಗಿವೆ ಎಂಬ ಅಂಶವನ್ನು ನೋಡುವುದಾದರೆ  2018 ರಲ್ಲಿ ಬಾರತದಲ್ಲಿ ದಾಖಲಾದ ವಂಚನೆ ಕೇಸ್‌ಗಳ ಸಂಖ್ಯೆ 1 , 35  812, ಕರ್ನಾಟಕದಲ್ಲಿ 6,691 ಕೇಸ್‌ಗಳು ಪತ್ತೆಯಾಗಿವೆ. 2019 ರಲ್ಲಿ ಭಾರತದಲ್ಲಿ ಉದ್ಯೋಗ ವಂಚನೆ ಪ್ರಕರಣಗಳು ದಾಖಲಾದ ಸಂಖ್ಯೆ 1, 44 , 707, ಕರ್ನಾಟಕದಲ್ಲಿ 6, 321, 2020 ರಲ್ಲಿ ದೇಶದಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 1, 28, 396, ಕರ್ನಾಟಕದಲ್ಲಿ 4699  ಕೇಸ್‌ ದಾಖಲಾಗಿವೆ.

ಈ ವಂಚನೆಗಳು ಅವರು ಹೇಗೆ ಮಾಡುತ್ತಾರೆ ಎಂಬ ಸಂಗತಿ ಬಹಳಷ್ಟು ಕುತೂಹಲಕರವಾಗಿದೆ. ಉದ್ಯೋಗಾವಕಾಶ ಇರುವುದಾಗಿ ನಕಲಿ ವೆಬ್​ಸೈಟ್ ಸೃಷ್ಟಿಸಿ ಜಾಹೀರಾತು ಕೊಡುತ್ತಾರೆ. ತಾತ್ಕಾಲಿಕವಾಗಿ ಏಜೆನ್ಸಿ ಕಚೇರಿ ಸ್ಥಾಪನೆ ಮಾಡಿಕೊಂಡಿರುತ್ತಾರೆ. ಇಂಟರ್​ವ್ಯೂ ಹೆಸರಲ್ಲಿ ಅಭ್ಯರ್ಥಿ ಕರೆಸಿಕೊಂಡು, ಹಣ ಪಡೆದು ಪರಾರಿಯಾದ ಉದಾಹರಣೆಗಳಿವೆ.  ಉದ್ಯೋಗಕ್ಕೆ ಹಾಕಿದ ಅರ್ಜಿ ವಿವರ ಪಡೆಯುವ ವಂಚಕರು, ಅಭ್ಯರ್ಥಿಗಳಿಗೆ ಕರೆ ಮಾಡಿ ಆಮಿಷ ಒಡ್ಡುತ್ತಾರೆ. ಬ್ಯಾಂಕ್, ಸಾಫ್ಟ್​ವೇರ್ ಕಂಪನಿ, ಹೊರರಾಜ್ಯದ ದೊಡ್ಡ ಕಾರ್ಖಾನೆಗಳಲ್ಲಿ ಕೆಲಸಕೊಡಿಸುವ ನಕಲಿ ಭರವಸೆಗಳನ್ನು ಹೇಳಿ ವಿದೇಶದಲ್ಲಿ ಚಾಲಕ, ಹೋಟೆಲ್​ಗಳಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ದಾಖಲೆ ಪಡೆದು ಹಣಕ್ಕೆ ಬೇಡಿಕೆ ಇಡುತ್ತಾರೆ. ಇನ್ನೂ ಸರಕಾರಿ ಉದ್ಯೋಗವನ್ನು ಕೊಡಿಸುವುದಾಗಿ ಹೇಳುವವರು ಅಲ್ಲಿರುವ ವ್ಯಕ್ತಿಗಳ ಜೊತೆಗಿನ ಸೆಲ್ಫಿ ಫೋಟೊ ತೋರಿಸುವುದು, ರಾಜಕಾರಣಿ, ಶಾಸಕ, ಮಂತ್ರಿಗಳ ಜೊತಗಿನ ಸೆಲ್ಫಿ, ಅಧಿಕಾರಿಗಳ ಜೊತೆಗಿನ ಸೆಲ್ಫಿ ಫೋಟೊ ತೆಗೆಸಿಕೊಂಡು ನೌಕರಿ ಕೊಡಿಸುವ ಭರವಸೆ ನೀಡಿ ವಂಚನೆ ಮಾಡುತ್ತಾರೆ. ಅರೇ ಈ ರೀತಿ ಒರೋದಕ್ಕೆ ಸಾಧ್ಯಾನಾ ಅಂತೀರಾ ಇಲ್ಲೊಂದಿಷ್ಟು ಘಟನೆಗಳ ಮಾಹಿತಿ ಕೊಡ್ತಾ ಹೋಗ್ತೇನೆ ನೋಡಿ.

ಘಟನೆ 1,  ದಿನಾಂಕ : ಜೂನ್‌ 19, 2020.  ಸ್ಥಳ :  ಬೆಂಗಳೂರು, ಘಟನೆ ಏನು ಅಂದ್ರೆ , ಸರ್ಕಾರಿ ಉದ್ಯೋಗ ನೀಡುವುದಾಗಿ ಹೇಳಿ ಭರವಸೆ ನೀಡಿದ್ದ ವ್ಯಕ್ತಿಯೊಬ್ಬ ಖಾಸಗಿ ಶಾಲಾ ಶಿಕ್ಷಕರಿಂದ ತಲೆಗೆ 2.5 ಲಕ್ಷ ರೂ. ನಂತೆ ಪಡೆದು ಬದಲಿಯಾಗಿ ಅವರುಗಳಿಗೆ ನಕಲಿ ನೇಮಕಾತಿ ಆದೇಶ ಪತ್ರ ನೀಡಿ ವಂಚಿಸಿದ್ದಾನೆ. 80 ಕ್ಕೂ ಹೆಚ್ಚು ಖಾಸಗಿ ಶಾಲಾ ಶಿಕ್ಷಕರು ಆ ವ್ಯಕ್ತಿಗೆ ಒಟ್ಟೂ ಸುಮಾರು 98 ಲಕ್ಷ ರೂಪಾಯಿ ನೀಡಿದ್ದಾರೆ.ಅದಕ್ಕೆ ಬದಲಾಗಿ ಆ ವ್ಯಕ್ತಿ ವಿವಿಧ ಶಿಕ್ಷಕರಿಗೆ ವಿವಿಧೆಡೆಯ ಜಿಲ್ಲೆಗಳಿಂದ 10 ಕ್ಕೂ ಹೆಚ್ಚು ಇಲಾಖೆಗಳಲ್ಲಿ ವಿವಿಧ ಉದ್ಯೋಗದ ನಕಲಿ ನೇಮಕಾತಿ ಆದೇಶಪತ್ರ ನೀಡಿದ್ದಾನೆ. ಈ ಆದೇಶ ಪತ್ರ ಕೈಸೇರಿದ ಬೆನ್ನಲ್ಲೇ ಆ ಎಲ್ಲಾ ಶಿಕ್ಷಕರು ತಮ್ಮ ನೌಕರಿಗಳಿಗೆ ರಾಜೀನಾಮೆ ಸಲ್ಲಿಸಿದ್ದರು. ಆದರೆ ತಾವು ನೇಮಕಾತಿ ಆದೇಶವನ್ನು ಹಿಡಿದು ನೌಕರಿಗೆ ಸೇರಲು ಹೋದಾಗಲೇ ಅವರುಗಳು ವಂಚನೆಗೆ ಒಳಗಾಗಿರುವುದು ಪತ್ತೆಯಾಗಿದೆ.

ಘಟನೆ ಎರಡು, ದಿನಾಂಕ 11 ಜನೆವರಿ 2021, ಸ್ಥಳ : ಹುಬ್ಬಳ್ಳಿ ,ಹುಬ್ಬಳ್ಳಿ ನಗರದ ಎಎಸ್‌ಐ ಪುತ್ರನಿಗೆ ರೈಲ್ವೆ ಇಲಾಖೆಯಲ್ಲಿ ‘ಡಿ’ ದರ್ಜೆ ನೌಕರಿ ಕೊಡಿಸುವುದಾಗಿ ಹೇಳಿ ಅವರಿಂದ ₹2ಲಕ್ಷ ಪಡೆದು ವಂಚಿಸಿರುವ ವ್ಯಕ್ತಿಯ ವಿರುದ್ಧ ಉಪನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರು ರೈಲ್ವೆ ವಿಭಾಗದಲ್ಲಿ ಡಿಪಿಒ (ಡಿವಿಷನಲ್‌ ಪರ್ಸನಲ್‌ ಆಫೀಸರ್‌) ಆಗಿದ್ದ ಸಹದೇವ ಎಸ್‌.ಎಂ. ವಂಚಿಸಿದ ಆರೋಪಿ. ಹುಬ್ಬಳ್ಳಿ ಸಶಸ್ತ್ರ ಮೀಸಲು ಪಡೆಯಲ್ಲಿ ಎಎಸ್‌ಐ ಆಗಿರುವ ರಮೇಶ ಮಾನೆ ವಂಚನೆಗೊಳಗಾದ ವ್ಯಕ್ತಿ. 2019ರ ನ. 22ರಂದು ನಗರದ ನ್ಯೂ ಕಾಟನ್‌ ಮಾರ್ಕೆಟ್‌ ಬಳಿಯಿರುವ ಪಿಕಾಕ್‌ ಹೋಟೆಲ್‌ನ ಕೊಠಡಿಯೊಂದರಲ್ಲಿ ರಮೇಶ ಅವರು ಸಹದೇವ ಅವರೊಂದಿಗೆ ಮಗನಿಗೆ ಉದ್ಯೋಗ ದೊರಕಿಸಿಕೊಡುವ ಕುರಿತು ವ್ಯವಹಾರ ನಡೆಸಿದ್ದರು. ನಂತರ ₹2 ಲಕ್ಷದ ಜೊತೆಗೆ ದಾಖಲೆಗಳನ್ನು ನೀಡಿದ್ದರು. ಕೊನೆಗೆ ಉದ್ಯೋಗವೂ ನೀಡದೆ, ಹಣವೂ ಮರಳಿಸದೆ ಸಹದೇವ ವಂಚಿಸಿದ್ದಾರೆ.

ಘಟನೆ ಮೂರು, ಫೆಬ್ರವರಿ 6, 2019 ಸ್ಥಳ ಬೆಂಗಳೂರು,  ಬಿ,ಇ.ಎಲ್‌ ನಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ತಲಾ 1ಲಕ್ಷದ 50 ಸಾವಿರ ರೂ ನಂತೆ 14 ಮಂದಿಯಿಂದ ಹಣವನ್ನು ಪಡೆದು ನಕಲಿ ನೇಮಕಾತಿಯನ್ನು ನೀಡಲಾಗಿದೆ ಎಂದು ಜಾಲಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಚಿವ ಶ್ರೀರಾಮುಲು ಹೆಸರು ಹೇಳಿಕೊಂಡು ವಿಧಾನಸೌಧದಲ್ಲಿ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಸ್ನೇಹಿತನಿಂದಲೇ ಲಕ್ಷಾಂತರ ರೂ. ಪಡೆದು ವಂಚಿಸಿದ್ದ ಪ್ರಕರಣ ಬೆಂಗಳೂರಿನಲ್ಲಿ ವರದಿಯಾಗಿತ್ತು.

ಇವು ಕೇವಲ ಸ್ಯಾಂಪಲ್‌ ಅಷ್ಟೆ ಇಂತಹ ಅನೇಕ ದೂರುಗಳು ಇವೆ. ಇದಕ್ಕೆ ಮುಖ್ಯ ಕಾರಣ ನಿರುದ್ಯೋಗ ಸಮಸ್ಯೆ,  ಈ ರೀತಿ ಮೋಸಕ್ಕೆ ಒಳಗಾಗಬೇಡಿ ನೀವು ಜಾಗೃತರಾಗಬೇಕು, ಮೋಸವನ್ನು ಅರಿಯಬೇಕು. ಮೋಸ ನಡೆಯುತ್ತಿದೆ ಎಂದು ಅರಿವಿಗೆ ಬಂದ ತಕ್ಷಣವೇ ಪೊಲೀಸ್‌ ಠಾಣೆಗೆ ದೂರು ನೀಡಬೇಕು. ಹಾಗೂ ಸರಕಾರಗಳು ಇಂತಹ ಪ್ರಕರಣ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಪೊಲೀಸ್‌ ಇಲಾಖೆ ಕೂಡ ಜಾಗೃತಿ ಮೂಡಿಸಬೇಕಿದೆ. ಹಣ ನೀಡಿ ಉದ್ಯೋಗವನ್ನು ಕೊಡಿಸಲು ಸಾಧ್ಯವಿಲ್ಲ ಎಂಬುದನ್ನು ಉದ್ಯೋಗಾಕಾಂಕ್ಷಿಗಳು ಅರಿಯಬೇಕು  ಎಂದು ನಿವೃತ್ತ ಪೊಲೀಸ್‌ ಅಧಿಕಾರಿ ಬಿ.ಕೆ. ಶಿವರಾಮ್‌ ಪ್ರತಿಕ್ರಿಯೆ ನೀಡಿದ್ದಾರೆ.‌

ಯುವಜನನತೆಗೆ ಸರಿಯಾಗಿ ಉದ್ಯೋಗ ಸೃಷ್ಟಿ ಮಾಡಿದ್ದರೆ ಇಂತಹ ವಂಚನೆ ಪ್ರಕರಣಗಳು ನಡೆಯುತ್ತಿರಲಿಲ್ಲ. ಮೋದಿ ಸರಕಾರ ಕೋಟಿ, ಕೋಟಿ ಉದ್ಯೋಗ ಸೃಷ್ಟಿಸುವ ಭರವಸಿ ನೀಡಿತ್ತು ಆದರೆ ಲಕ್ಷದಷ್ಟು ಉದ್ಯೋಗವನ್ನು ಸೃಷ್ಟಿಸಿಲ್ಲ. ನಿರುದ್ಯೋಗ ಸಮಸ್ಯೆ ಹೆಚ್ಚಾದ ಕಾರಣ ವಂಚನೆ ಮಾಡುವವರ ಮತ್ತು ವಂಚನೆಗೊಳಗಾಗುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇಂತಹ ಅಪರಾಧಗಳಿಗೆ ಸರಕಾರವೇ ಕಾರಣವಾಗಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ಕರೊನಾ ಸಂಕಷ್ಟದ ಕಾಲದಲ್ಲಿ ಉದ್ಯೋಗ ಕಳೆದುಕೊಂಡ ಲಕ್ಷಾಂತರ ಜನರು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಸಂದರ್ಭದಲ್ಲೇ ಪ್ರತಿಷ್ಠಿತ ಖಾಸಗಿ ಕಂಪನಿಗಳಲ್ಲಿ ಹಾಗೂ ಸರ್ಕಾರಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಅಮಾಯಕರಿಗೆ ಟೋಪಿ ಹಾಕುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಮಿತಿಮೀರುತ್ತಿವೆ. ಹಾಗಾಗಿ ರಾಜ್ಯ ಸರಕಾರ ಇಂತಹ ವಂಚನೆಗಳು ನಡೆಯದಂತೆ ಎಚ್ಚರಿಕೆಯನ್ನು ವಹಿಸಬೇಕಿದೆ. ಉದ್ಯೋಗಸೃಷ್ಟಿಯನ್ನು ಹೆಚ್ಚಿಸದರೆ ಇಂತಹ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂಬುದನ್ನು ಸರಕಾರ ಅರಿಯಬೇಕಿದೆ.

 

Donate Janashakthi Media

Leave a Reply

Your email address will not be published. Required fields are marked *