ಅಪಾರ ಓದು-ತಿರುಗಾಟದ ಹಸಿವಿದ್ದ ಚೆಗುವೆರ

ಅರಣ್ ಜೋಳದಕೂಡ್ಲಿಗಿ
ಜಗತ್ತಿನಾದ್ಯಾಂತ ಯುವಜನತೆ ಸೋಷಿಯಲ್ ಮೀಡಿಯಾಗಳಲ್ಲಿ ‘ಚೆ’ ಯ ಫೋಟೋಗಳನ್ನು ಶೇರ್ ಮಾಡಿ ಆತನ ಅಭಿಮಾನವನ್ನು ಅಭಿವ್ಯಕ್ತಿಸುತ್ತಾರೆ. ದೈತ್ಯ ಅಮೇರಿಕಾವನ್ನು ಮಣಿಸಿದ ಕ್ಯೂಬಾ ಕ್ರಾಂತಿಯ ನೇತಾರರಲ್ಲಿ ಪ್ರಮುಖನಾದ ಚೇ ಗುವೇರಾ ಅರ್ಜೆಂಟೀನಾದ ಮಾರ್ಕ್ಸ್‌ವಾದಿ ಕ್ರಾಂತಿಕಾರಿ, ವೈದ್ಯ, ಲೇಖಕ, ಗೆರಿಲ್ಲಾ ನಾಯಕ, ರಾಜತಾಂತ್ರಿಕ ಮತ್ತು ಮಿಲಿಟರಿ ಸಿದ್ಧಾಂತಿ. ನಿಜಕ್ಕೂ ‘ಚೇ’ ಅಪಾರ ಓದಿನ ಹಸಿವುಳ್ಳವನಾಗಿದ್ದ. ಆತನ ಮನೆಯಲ್ಲಿ 3000ಕ್ಕಿಂತ ಹೆಚ್ಚಿನ ಪುಸ್ತಕಗಳಿದ್ದವು.

ಇದೇ ಆತನ ಚೈತನ್ಯದ ಗುಟ್ಟು. ಹಾಗಾಗಿ ಆತನ ದೃಷ್ಠಿಕೋನ ಮೊನಚಾಗಿತ್ತು. ಕಾರ್ಲ್ ಮಾರ್ಕ್ಸ್, ವಿಲಿಯಂ ಫಾಲ್ಕ್ನರ್, ಆಂಡ್ರೆ ಗೈಡ್, ಎಮಿಲಿಯೊ ಸಲ್ಗಾರಿ ಮತ್ತು ಜೂಲ್ಸ್ ವರ್ನೆ ಜೊತೆಗೆ ಜವಾಹರಲಾಲ್ ನೆಹರು, ಫ್ರ್ಯಾನ್ಝ್ ಕಾಫ್ಕ, ಆಲ್ಬರ್ಟ್ ಕ್ಯಾಮಸ್, ವ್ಲಾಡಿಮಿರ್ ಲೆನಿನ್, ಮತ್ತು ಜೀನ್ ಪಾಲ್ ಸಾರ್ತ್ರೆ; ಹಾಗೆಯೇ ಅನಾಟೊಲೆ ಫ್ರಾನ್ಸ್, ಫ್ರೆಡ್ರಿಕ್ ಎಂಗೆಲ್ಸ್, ಎಚ್.ಜಿ. ವೆಲ್ಸ್, ಮತ್ತು ರಾಬರ್ಟ್ ಫ್ರಾಸ್ಟ್ ಅವರ ಕೃತಿಗಳ ಓದಿನ ವಿಸ್ತಾರವಿತ್ತು.

ಬೆಳೆದಂತೆಲ್ಲಾ ಲ್ಯಾಟಿನ್ ಅಮೆರಿಕನ್ ಬರಹಗಾರರಾದ ಹೊರಾಸಿಯೊ ಕ್ವಿರೋಗಾ, ಸಿರೊ ಅಲ್ಜಿರಿಯಾ, ಜೋರ್ಜ್ ಇಖಾಜಾ, ರುಬೆನ್ ಡರಿಯೊ ಮತ್ತು ಮಿಗುಯೆಲ್ ಆಸ್ಟೂರಿಯಸ್ ರವರ ಬರಹಗಳ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡ. ಈ ಲೇಖಕರ ಪರಿಕಲ್ಪನೆಗಳನ್ನು ಮತ್ತು ಸಿದ್ಧಾಂತಗಳನ್ನು ತನ್ನ ಕೈ ಬರಹದ ಪುಸ್ತಕದಲ್ಲಿ ನೋಟ್ಸ್ ಮಾಡತೊಡಗಿದ.

ಇದನ್ನೂ ಓದಿ: ಸಾಲ ಪಾವತಿ ವಿಳಂಬ: ಕುಟುಂಬಸ್ಥರನ್ನು ಹೊರಗೆ ಹಾಕಿದ ಖಾಸಗಿ ಫೈನಾನ್ಸ್‌

ಇವುಗಳಲ್ಲಿ ಬುದ್ಧ ಮತ್ತು ಅರಿಸ್ಟಾಟಲ್ ಕುರಿತ ವಿಶ್ಲೇಷಣಾತ್ಮಕ ರೇಖಾಚಿತ್ರಗಳು, ಬರ್ಟ್ರಾಂಡ್ ರಸ್ಸೆಲ್ ನ ಪ್ರೀತಿ ಮತ್ತು ದೇಶಭಕ್ತಿ, ಜಾಕ್ ಲಂಡನ್ ನ ಸಮಾಜದ ಬಗೆಗಿನ ಆತನ ಒಳನೋಟಗಳು, ನೀತ್ಸೆಯ ಸಾವಿನ ಕಲ್ಪನೆಯ ಸಿದ್ಧಾಂತಗಳನ್ನು ತನ್ನದೇ ಆದ ರೀತಿಯಲ್ಲಿ ಪರೀಕ್ಷಿಸಿ, ಟೀಕಿಸಿ ಅದಕ್ಕೆ ತನ್ನದೇ ಆದ ಟಿಪ್ಪಣಿಗಳನ್ನು ಬರೆದಿಡುತ್ತಿದ್ದನು. ಶಾಲೆಯಲ್ಲಿ ಈತನ ನೆಚ್ಚಿನ ವಿಷಯಗಳೆಂದರೆ ತತ್ವಶಾಸ್ತ್ರ, ಗಣಿತಶಾಸ್ತ್ರ, ರಾಜಕೀಯ ವಿಜ್ಞಾನ,ಸಮಾಜಶಾಸ್ತ್ರ,ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರಗಳಾಗಿದ್ದವು.

‘ಚೆ’ ಕಾವ್ಯದ ಕಡುಮೋಹಿಯೂ ಆಗಿದ್ದ. ಆತ ಓದಿನ ಅರಿವಿನ ಜೊತೆ ದೇಶದ ಜನರ ನಾಡಿ ಮಿಡಿತ ಅರಿಯಲು ಅಪಾರ ಸುತ್ತಾಟವನ್ನೂ ಮಾಡಿದ್ದ. ಅದಕ್ಕೆ ಆತನ ಮೋಟರ್ ಸೈಕಲ್ ಡೈರೀಸೇ ಸಾಕ್ಷಿ. 2004 ರಲ್ಲಿ ಸ್ಪೇನ್ ಭಾ‌ಷೆಯಲ್ಲಿ ಚಲನಚಿತ್ರವಾದ ‘ದ ಮೋಟರ್ ಸೈಕಲ್ ಡೈರೀಸ್’ ಅತ್ಯುತ್ತಮ ಸಿನೆಮಾಗಳಲ್ಲಿ ಒಂದೆಂದು ಜನರಿಂದ ಮೆಚ್ಚುಗೆ ಪಡೆದು ಯಶಸ್ವಿ ಚಿತ್ರವೆನಿಸಿತು. Time ನಿಯತಕಾಲಿಕವು ಈತನನ್ನು 20 ನೇ ಶತಮಾನದ 100 ಅತ್ಯಂತ ಪ್ರಭಾವಿಶಾಲಿ ವ್ಯಕ್ತಿಗಳಲ್ಲಿ ಒಬ್ಬ ಎಂದು ಪ್ರಕಟಿಸಿತ್ತು.

ಈತನ Guerrillero Heroico ಫೋಟೋಗ್ರಫಿ ವಿಶ್ವದಲ್ಲೇ ಅತ್ಯಂತ ಪ್ರಸಿದ್ಧ ಛಾಯಾಚಿತ್ರ ಎಂದು ಕರೆಯಲಾಗುತ್ತದೆ. ಹಾಗಾಗಿ ‘ಚೆ’ ಗೆ ಗೌರವ ಸಲ್ಲಿಸಿ ಆತನ ಸಂಗಾತಿ ಆಗುವುದೆಂದೆ ಅಪಾರ ಓದು ಮತ್ತು ಸುತ್ತಾಟದಿಂದ ಅರಿಯುವುದೇ ಆಗಿದೆ. ‘ಚೆ’ ಚಿತ್ರಗಳನ್ನಷ್ಟೇ ಹಿಂಬಾಲಿಸುವವರು ಆತನ ಮೂಲ ಆಶಯಕ್ಕೆ ವಿರುದ್ಧ ನಡೆದಂತೆ.

ಇದನ್ನೂ ನೋಡಿ: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ | ವಿಶ್ಲೇಷಣೆ – ಅಹಮದ್ ಹಗರೆ Janashakthi Media

Donate Janashakthi Media

Leave a Reply

Your email address will not be published. Required fields are marked *