`ಜಗತ್ತಿನ ಎಲ್ಲೆ ಆಗಲಿ ಅನ್ಯಾಯದ ವಿರುದ್ದ ನೀನು ಸಿಡಿದು ನಿಂತರೆ ಆಗ ನೀನು ನನ್ನ ಸಂಗಾತಿ’ ಚೆಗುವಾರ. ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ… ಹೌದಲ್ಲವೆ ಇಂತಹ ಘೋಷವಾಕ್ಯಗಳು ಸದಾಕಾಲ ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತೇ ಇರಬೇಕು. ಹೌದು ಇದು ಅಕ್ಷರಶಃ ಯುವ ಕ್ರಾಂತಿಕಾರಿ ಚೆಗುವಾರ ಎಂಬ ಯುವ ಶಕ್ತಿಗೆ ಸ್ಪೂರ್ತಿಯನ್ನು ತುಂಬಿದ ಮಿಂಚಿನ ಶಕ್ತಿಯನ್ನು ನೆನಪಿ ಮಾಡಿಕೊಳ್ಳು ದಿನ ಇಂದಾಗಿದೆ.
ಚೆ ಎಂದರೆ ಬರಿ ವ್ಯಕ್ತಿಯಲ್ಲ ಅದೊಂದು ಶಕ್ತಿಯೂ ಹೌದು, ಪ್ರೇರಣೆಯೂ ಹೌದು. ಚೆಗುವಾರ ಹುಟ್ಟಿದ್ದು ಜೂನ್ 14, 1928ರಂದು ಅರ್ನೆಸ್ಟೊ ಚೆಗುವಾರ ಲಿಂಚ್ ಮತ್ತು ಸೀಲಿಯಾ ಡ ಲಾ ಸೆರ್ನ್ ಎಂಬ ಸ್ಪ್ಯಾನಿಷ್ ಮತ್ತು ಐರಿಷ್ ತಂದೆ ತಾಯಿಗಳ ಮೊದಲ ಮಗನಾಗಿ ಅರ್ಜೆಂಟೀನಾದ ರೊಸಾರಿಯೋ ಪಟ್ಟಣದಲ್ಲಿ.
ಚೆ ಅವರ ಕ್ರಾಂತಿಕಾರಿ ಬದುಕು ಮತ್ತು ಹೋರಾಟ ಮತ್ತು ಸಮಾಜ ಬದಲಾವಣೆಯ ಸಿದ್ದಾಂತಕ್ಕಾಗಿ ತಮ್ಮ ಬದುಕನ್ನೇ ಅರ್ಪಿಸಿಕೊಂಡವರು, ಅವರು ಯುವಜನರಿಗೆ ಒಂದು ದೊಡ್ಡ ಸ್ಪರ್ತಿಯೂ ಆಗಿದ್ದಾರೆ. ಚೆ ಅವರ ಬದುಕು ನಾವು ಇಂದು ನಮ್ಮ ಸಮಾಜದಲ್ಲಿನ ಅನ್ಯಾಯದ ವಿರುದ್ದ ಹೋರಾಡುವುದಕ್ಕೆ ಪ್ರೇರಣೆಯಾಗಿದೆ.
`ಚೇ’ ಎಂದೇ ಖ್ಯಾತನಾದ ಅರ್ನಸ್ಟೋ ಚೆಗುವಾರ ಕ್ಯೂಬಾ ಕ್ರಾಂತಿಯ ಜೊತೆಗಾರ. ಅವರೊಬ್ಬ ಒಬ್ಬ ವೈದ್ಯಕೀಯ ವಿದ್ಯಾರ್ಥಿಯೂ ಆಗಿದ್ದರು. ಚೆಗುವಾರ ತನ್ನ 19ನೇ ವಯಸ್ಸಿನಲ್ಲಿ (1948) ವೈದ್ಯಕೀಯ ಕಲಿಕೆಗಾಗಿ ಬ್ಯೂನಸ್ ಐರ್ಸ್ ವಿಶ್ವವಿದ್ಯಾನಿಲಯಕ್ಕೆ ಸೇರುತ್ತಾನೆ. ಅವರು ಮನುಷ್ಯನ ದೇಹದ ರೋಗ ರುಜಿನಗಳು, ದೇಹ ಕೆಲಸ ಮಾಡುವ ಬಗೆಯನ್ನು ಅಧ್ಯಯನ ಮಾಡುತ್ತಿರುವಾಗಲೇ, ಸಮಾಜಕ್ಕೆ ಅಂಟಿರುವ ರೋಗಗಳು, ಸಮಾಜ, ವ್ಯವಸ್ಥೆ ನಿಂತಿರುವ, ನಡೆಯುತ್ತಿರುವ ರೀತಿಯನ್ನೂ ಗಮನಿಸತೊಡಗಿದ. ಆಮೇಲೆ ಮೋಟಾರು ಸೈಕಲ್ಲನ್ನೇರಿ ದಕ್ಷಿಣ ಅಮೆರಿಕದ ದೇಶಗಳನ್ನೆಲ್ಲಾ ಸುತ್ತಿದ. ಎಲ್ಲೆಲ್ಲೂ ರೋಗಿಗಳು. ಕುಷ್ಠ ರೋಗಿಗಳು. ದಾರುಣ ಬದುಕು. `ವೈದ್ಯನ ಮನ ಕಲಕಿತು. ರೋಗಗಳನ್ನು, ಕುಷ್ಠರೋಗವನ್ನು ನಿರ್ಮೂಲ ಮಾಡುವ ನಿರ್ಧಾರರ ಮನದಲ್ಲಿ ಮೊಳೆತು ಬಿಟ್ಟಿತು.
ಚೆ 1953ರಲ್ಲಿ ತನ್ನ ವೈದ್ಯಕೀಯ ಶಿಕ್ಷಣವನ್ನು ಮುಗಿಸಿದ. ಅಲ್ಲಿಂದ ಮತ್ತೆ ಪ್ರವಾಸ ಹೊರಟು ಗ್ವಾಟಮಾಲಾ ಕ್ಕೆ ಬರುತ್ತಾನೆ. ಅಲ್ಲಿ ‘ಚೆ’ ಗೆ ಯುದ್ಧದಲ್ಲಿ ಮುಳುಗಿದ್ದ ದೇಶವೊಂದರ ಮೊದಲ ಅನುಭವ ದೊರೆಯುತ್ತೆ. ನಂತರ 1954ರಲ್ಲಿ ಅರ್ಬೆಂಜ್‍ರ ಸಮಾಜವಾದಿ ಸರ್ಕಾರದ ವಿರುದ್ಧ ಸಿ.ಐ.ಎ. ಪ್ರೇರಿತವಾದ ಕ್ಷಿಪ್ರಕ್ರಾಂತಿಯನ್ನು ಅವರು ಕಣ್ಣಾರೆ ಕಂಡರು.
ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಳನ್ನು ರೂಪಿಸಲು ಪ್ರಯತ್ನಿಸುವ ಲ್ಯಾಟಿನ್ ಅಮೆರಿಕಾದಂತಹ ಯಾವುದೇ ಸರ್ಕಾರವನ್ನು ಅಮೇರಿಕಾದಂತ ಸಾಮ್ರಾಜ್ಯಶಾಹಿ ದೇಶ ವಿರೋಧಿಸುತ್ತದೆ. ಇಂತಹ ಪರಿಸ್ಥಿತಿಯನ್ನು ಸರಿಪಡಿಸಲು ಸಶಸ್ತ್ರ ಹೋರಾಟದಿಂದ ಸಾಧಿಸುವ ಕ್ರಾಂತಿಯೊಂದೇ ಮದ್ದು ಎಂದು ಚೆ ಯೋಚಿಸುತ್ತಾನೆ. ಆನಂತರ ಹೇಗೋ ಗ್ವಾಟೆಮಾಲದಿಂದ ಹೊರಬಂದ ಚೆ ಫಿಡೆಲ್ ಕ್ಯಾಸ್ಟ್ರೋರನ್ನು ಭೇಟಿ ಮಾಡಿ ಅವರ ಧ್ಯೇಯಕ್ಕೆ ಜೊತೆಯಾಗುತ್ತಾನೆ.
ನಂತರ ಕ್ಯೂಬಾದ ಸರ್ವಾಧಿಕಾರಿ ಜನರಲ್ ‘ಪುಲ್ಗೆನ್ಸಿಯೋ ಬಟಿಸ್ಟಾ’ ವಿರುದ್ಧ ಸೇನಾ ದಂಡಯಾತ್ರೆ ಕೈಗೊಳ್ಳುವ ಯೋಜನೆ ರೂಪಿಸುತ್ತಾರೆ. 1956ರಲ್ಲಿ ಚೆ ಮತ್ತು ಕ್ಯಾಸ್ಟ್ರೋ ಹಾಗೂ ಇತರೆ 40 ಮಂದಿ ಸ್ತ್ರೀ-ಪುರುಷ ಹೋರಾಟಗಾರರು ಜನರಲ್ ಬಿಟಿಸ್ಟಾನ ಸರ್ಕಾರವನ್ನು ಕಿತ್ತೊಗೆಯಲು ಕ್ಯೂಬಾಕ್ಕೆ ಬರುತ್ತಾರೆ. ಈ ಹೋರಾಟಗಾರರ ಜನರಲ್ ಬಟಿಸ್ಟಾನ ಸರ್ಕಾರವನ್ನು ಕಿತ್ತೊಗೆಯಲು ಕ್ಯೂಬಾಕ್ಕೆ ಬರುತ್ತಾರೆ.
1958 ಮಾರ್ಚ್ ಚುನಾವಣೆಗಳನ್ನು ಸರ್ವಾಧಿಕಾರಿ ಬಟಿಸ್ಟಾ ವಿರುದ್ಧ ಕ್ಯೂಬಾ ಜನತೆ ಬಹಿಷ್ಕರಿಸಿದರು. ರಾಜಧಾನಿ ಹವಾನಗಳಲ್ಲಿ 75% ಚುನಾವಣಾ ಬಹಿಷ್ಕಾರ ಇದ್ದರೆ ಸ್ಯಾಂಟಿಯಾಗೋ ನಗರದಲ್ಲಿ ಶೇ 98% ರಷ್ಟು ಬಹಿಷ್ಕಾರಗಳು ನಡೆಯಿತು. ಇದೇ ಸಂದರ್ಭದಲ್ಲಿ ಕ್ರಾಂತಿಕಾರಿಗಳು ಬಟಿಷ್ಟಾನನ್ನು ನೇರವಾಗಿ ಸೋಲಿಸಲು ಮುಖ್ಯ ನಗರಗಳಿಗೆ ಬಂದರು. ಆದರೆ ಸರ್ವಾಧಿಕಾರಿ ಬಟಿಷ್ಟಾ ಅಮೆರಿಕಾದೊಂದಿಗೆ ಸಮಾಲೋಚಿಸಿ ದೇಶಬಿಟ್ಟು ಪಲಾಯನ ಮಾಡಿದ.
1958 ಡಿಸೆಂಬರ್ 31ರಂದು ಬಟಿಸ್ಟಾ ದುರಾಡಳಿತವನ್ನು ಪತನ ಮಾಡಲಾಯಿತು. 1959ರ ಜನವರಿಯಲ್ಲಿ ರಾಜಧಾನಿ ಹವಾನ ನಗರವನ್ನು ಪ್ರವೇಶಿಸಿ ಅಧಿಕಾರವನ್ನು ವಶಕ್ಕೆ ತೆಗೆದುಕೊಂಡ ಮೊಟ್ಟ ಮೊದಲ ಬಂಡಾಯಗಾರ ಪಿಡಲ್ ಕ್ಯಾಸ್ಟ್ರೋ ಜೊತೆ ಚೆಗೆವಾರ ಕೂಡ ಇದ್ದರು. ಚೆ ಮತ್ತು ಕ್ಯಾಸ್ಟ್ರೋ ಕ್ಯೂಬಾದ ಹೊಸ ನಾಯಕರಾದರು. ಸರ್ಕಾರದ ನೇತೃತ್ವವನ್ನು ಕ್ಯಾಸ್ಟ್ರೋ ವಹಿಸಿಕೊಂಡರು. ಮುಂದೆ ಪಿಡಲ್ ಕ್ಯಾಸ್ಟ್ರೊ ಸರ್ಕಾರದಲ್ಲಿ ಚೆ. ಕೃಷಿ ಮಂತ್ರಿಯಾಗಿ ಅನೇಕಾ ಸುಧಾರಣೆಗಳನ್ನು ತಂದರು. ಭೂಸುಧಾರಣೆಯೊಂದಿಗೆ ಚೆ ಹೊತ್ತುಕೊಟ್ಟ ಮತ್ತೊಂದು ಪ್ರಧಾನ ಕ್ಷೇತ್ರವೆಂದರೆ ‘ಶಿಕ್ಷಣಕ್ಷೇತ್ರ’ ಅವರು ರಾಷ್ಟ್ರೀಯ ಸಾಕ್ಷರತೆಗಾಗಿ ಹೆಚ್ಚು ಹೊತ್ತುಕೊಟ್ಟರು. ಅವರ ಒತ್ತಾಸೆಯಂತೆ ಕ್ಯೂಬಾ ಸಕಾರವೂ 1961ನೇ ವರ್ಷವನ್ನು ಶಿಕ್ಷಣ ವರ್ಷವೆಂದು ಘೋಷಿಸಿತು. ಇದರ ಸಲುವಾಗಿ ಹಳ್ಳಿಗಾಡುಗಳಲ್ಲಿ ಬಹುತೇಕ ಅಕ್ಷರಸ್ಥರಿಗೆ ಓದುಬರಹ ಕಲಿಸಲು ಸಾಕ್ಷರತ ಆಂದೋಲವನ್ನು ಕೈಗೊಳ್ಳಲಾಯಿತು.
ಕ್ಯೂಬಾ ದೇಶದ ಕ್ರಾಂತಿಯ ರೈಲನ್ನು ಹಳಿಯ ಮೇಲೆ ಹತ್ತಿಸಿದ್ದಾಯಿತು. ಅದು ಹಾಗೆ ಮುಂದೆ ಸಾಗುವುದನ್ನು ನೋಡಲು ಸಮರ್ಥ ಸಂಗಾತಿಗಳಿದ್ದಾರೆ. ಆದರೆ ಅಲ್ಲಿ, ಇನ್ನೂ ಎಷ್ಟೊಂದು ದೇಶಗಳಲ್ಲಿ ಜನರ ಪಾಲಿನ ಭೀಕರ ನರಕಗಳು. ಅವು ಹಾಗೇ ಉಳಿದು ಬಿಟ್ಟಿವೆಯಲ್ಲಾ !! ಎಂದುಕೊಂಡು 1965ರ ಒಂದು ದಿನ ಕ್ಯೂಬಾ ದೇಶದ ಕೈಗಾರಿಕಾ ಸಚಿವ, ಅಧಿಕಾರ ರೂಢ ಕಮ್ಯುನಿಸ್ಟ್ ಪಕ್ಷದ ಒಬ್ಬ ಅಗ್ರಗಣ್ಯ ನಾಯಕ ಚೆ ಕ್ಯೂಬಾದ ಅಧ್ಯಕ್ಷನಾದ ಫಿಡೆಲ್ ಕ್ಯಾಸ್ಟ್ರೋಗೆ ಒಂದು ಪತ್ರವನ್ನು ಬರೆದಿಟ್ಟು ಹೇಳದೇ ಕೇಳದೇ ಹೊರಟು ಬಿಡುತ್ತಾನೆ. ಕೇವಲ 37 ವರ್ಷದ ಯುವಕ ಮುದ್ದಿನ ಮಕ್ಕಳು, ಪ್ರೀತಿಯ ಹೆಂಡತಿಯನ್ನು ಬಿಟ್ಟು ಗುಡ್ಡಬೆಟ್ಟಗಳ ಕಗ್ಗಾಡಿನ ಹಾದಿಯಲ್ಲಿ ತಂಡ ಕಟ್ಟಿಕೊಂಡು ನುಗ್ಗಿ ಬಿಡುತ್ತಾನೆ. ತನ್ನ ಕ್ರಾಂತಿಯ ತುಡಿತವನ್ನು ಮುಂದುವರೆಸಲು ತೊಡಗುತ್ತಾನೆ.
ಆತ ಹೋಗಿದ್ದು ದಕ್ಷಿಣ ಅಮೆರಿಕದ ಬೊಲಿವಿಯಾ ದೇಶಕ್ಕೆ. ಬೊಲಿವಿಯಾದ ಕಾಡಿನಲ್ಲಿ ಅಕ್ಟೋಬರ್ 7, 1967 ರಂದು ಸೆರೆ ಸಿಕ್ಕ `ಚೇ’ ಯನ್ನು ಅಕ್ಟೋಬರ್ 8, 1968 ರಂದು ಅಮೆರಿಕದ ಸಿಐಎ ಬೆಂಬಲಿತ ಬೊಲಿವಿಯನ್ ಸರ್ವಾಧಿಕಾರಿಯ ಸೈನಿಕರು ನಿರ್ದಯವಾಗಿ ಕೊಂದು ಹಾಕಿದರು.
ಚೆಗುವಾರ ಹುಟ್ಟಿದ್ದು ಅರ್ಜೆಂಟೈನಾದಲ್ಲಿ. ಮೋಟಾರ್ ಬೈಕಲ್ಲಿ ಸುತ್ತಿದ್ದು ಇಡೀ ದಕ್ಷಿಣ ಅಮೆರಿಕಾ ದೇಶಗಳಲ್ಲಿ. ಯಶಸ್ವಿ ಕ್ರಾಂತಿಗೆ ಹೆಗಲು ಕೊಟ್ಟದ್ದು ಕ್ಯೂಬಾದಲ್ಲಿ. ಪ್ರಾಣ ತೆತ್ತದ್ದು ನೀಚ ಸಿಐಎ ನಿರ್ದೇಶಿತ ಬೊಲಿವಿಯ ದೇಶದ ಸರ್ವಾಧಿಕಾರಿಯ ಸೈನಿಕರ ಜೊತೆ ಸೆಣಸಿದ ರಣರಂಗದಲ್ಲಿ.
ಹೌದು ಚೆ ಎಂದರೆ ಸ್ಪೂರ್ತಿ ಅದು ಯುವ ಶಕ್ತಿಗೆ ಪ್ರೇರಣೆ.